ನಿಜ, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಈ ಹಿಂದೆ ಪೈಸೆ ಲೆಕ್ಕದಲ್ಲಿ ಹೆಚ್ಚಾಗುತ್ತಿದ್ದ ಪೆಟ್ರೋಲ್, ಡಿಸೇಲ್ ಈಗ ದಿನೇ ದಿನೇ ರೂಪಾಯಿ ಲೆಕ್ಕದಲ್ಲಿ ಹೆಚ್ಚಾಗುತ್ತಿದೆ. ಬೆಲೆ ಏರಿಕೆಯನ್ನು ವಿರೋಧಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈಗ ಮಾಡುತ್ತಿರುವುದೇನು ಎನ್ನುವುದು ಸಾಮಾನ್ಯ ವಲಯದಿಂದ ಬರುತ್ತಿರುವ ಪ್ರಶ್ನೆಗಳ ಜೊತೆಗೆ ಈ ಏರಿಕೆಯನ್ನು ಸಮರ್ಥಿಸುವ ವಾದಗಳು ಕೂಡ ನಮ್ಮ ಸುತ್ತಲು ನಡೆಯುತ್ತಿದೆ. ಈ ಎಲ್ಲಾ ವಾದ – ಪ್ರತಿವಾದಗಳನ್ನು ಬದಿಗಿರಿಸಿ, ಪರ್ಯಾಯ ಆಯ್ಕೆಗಳನ್ನು ಹುಡುಕುವುದು ಮತ್ತು ಸೃಷ್ಟಿಸುವುದು ಈ ಕಾಲದ ಪ್ರಮುಖ ಆದ್ಯತೆಯಾಗಿದೆ.
ಭಾರತ ಪೆಟ್ರೋಲ್ ಮತ್ತು ಡಿಸೇಲ್ಗೆ ಅವಲಂಬಿತವಾಗಿರುವಂತ ದೇಶ. ಈ ಎರಡರ ಬೆಲೆ ಏರಿಕೆ ಇಳಿಕೆಗಳು ದೇಶದ ಕೈಯಲಿಲ್ಲ. ಅದು ಇರುವುದು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ. ಇಲ್ಲಿನ ಬೆಲೆಗಳಿಗುಣವಾಗಿ ಕೇಂದ್ರ ತನ್ನ ದೇಶದ ಆರ್ಥಿಕ ಸ್ಥಿತಿಗೆ ತಕ್ಕಂತೆ ತೆರಿಗೆ ವಿಧಿಸಿದ ನಂತರ ರಾಜ್ಯಗಳು ಮತ್ತೆ ತೆರಿಗೆ ವಿಧಿಸಿ ಗ್ರಾಹಕನ ಕೈಗೆ ಬಂದಾಗ ಸಹಜವಾಗಿ ಬೆಲೆ ಏರಿಕೆಯ ಬಿಸಿ ಮುಟ್ಟಿರುತ್ತದೆ. ಈ ತೈಲ ಏರಿಕೆ ಗ್ರಾಹಕನಿಗೆ ಮಾತ್ರ ಬಿಸಿ ತುಪ್ಪವಾಗಿಲ್ಲ. ಜೊತೆಗೆ ಬಿಜೆಪಿಗೂ ಬಿಸಿ ತುಪ್ಪವಾಗಿದೆ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೆರಿಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಮೇಲೆಯೂ ಈ ಬೆಲೆ ಏರಿಕೆಯ ಪರಿಣಾಮ ತಟ್ಟುವ ಸಾಧ್ಯತೆಗಳನ್ನು ನಾವು ಅಲ್ಲಗಳೆಯುವಂತಿಲ್ಲ.
ಪ್ರತಿಭಟನೆ ಬಿಟ್ಟು ಬೇರೆನು..?
ಒಪೆಕ್ (ಪೆಟ್ರೋಲಿಯಂ ಉತ್ಪನ್ನಗಳ ರಫ್ತು ರಾಷ್ಟ್ರಗಳ ಒಕ್ಕೂಟ) ಸದಸ್ಯ ರಾಷ್ಟ್ರಗಳು ಅತಿಯಾದ ಲಾಭದ ಆಸೆಯಿಂದ ಪೆಟ್ರೋಲ್, ಡೀಸೆಲ್ ಉತ್ಪಾದನೆಯನ್ನು ತಗ್ಗಿಸಿ ಕೃತಕ ಅಭಾವ ಸೃಷ್ಟಿಸಿ ಅವರ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸುವ ಹುನ್ನಾರದಿಂದಲೇ ಈ ಬೆಲೆ ಏರಿಕೆಯ ತಾಪವನ್ನು ಅನುಭವಿಸಬೇಕಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಮತ್ತು ಇಂಧನಗಳ ಬೆಲೆ ಏರಿಕೆಗೆ ಸಂಬಂಧ ಕಲ್ಪಿಸುತ್ತಿರುವವರು ಈ ಅಂಶವನ್ನು ಮುಖ್ಯವಾಗಿ ಗಮನಿಸಬೇಕಾಗಿದೆ. ಬೆಲೆ ಏರಿಕೆಯ ಬಿಸಿಯನ್ನು ಕಡಿಮೆ ಮಾಡುವ ಪರ್ಯಾಯ ವ್ಯವಸ್ಥೆಯನ್ನು ಆಶ್ರಯಿಸಿ ದೇಶದ ಆರ್ಥಿಕ ಸ್ಥಿತಿಯನ್ನು ಬಲಗೊಳಿಸುವ ಪ್ರಯತ್ನ ನಮ್ಮಿಂದಾಗಬೇಕಿರುವುದು ಸದ್ಯದ ಅನಿವಾರ್ಯತೆಯೇ ಸರಿ.
ಬೆಲೆಯೇರಿಕೆಗೆ ತಕ್ಷಣ ಪ್ರತಿಭಟಿಸುವ, ಸರ್ಕಾರವನ್ನು ದೂಷಿಸುವ ನಮ್ಮ ಮನಸ್ಥಿತಿ ಇಂದು ಅಗತ್ಯವಾಗಿ ಬದಲಾಗಬೇಕಾಗಿದೆ. ಇಂದು ಪೆಟ್ರೋಲ್ ಅನ್ನು ಬಳಸದೆ ದ್ವಿಚಕ್ರ ವಾಹನವನ್ನು ಓಡಿಸುವುದು ಸಾಧ್ಯವಿದೆ. ಪರ್ಯಾಯ ಇಂಧನಗಳ ಆವಿಷ್ಕಾರದತ್ತಲೂ ನಾವು ಕೊಂಚ ಹೆಚ್ಚು ಗಮನ ಹರಿಸಬೇಕಿದೆ. ಜೊತೆಗೆ ಎಲೆಕ್ಟ್ರಿಕ್ ಮೂಲಕವೂ ವಾಹನಗಳನ್ನು ಚಲಾಯಿಸುವುದು ಸಾಧ್ಯ. ಈಗಾಗಲೇ ದೇಶದಲ್ಲಿ ಸಣ್ಣ ಮಟ್ಟದ ಎಲೆಕ್ಟ್ರಿಕ್ ವಾಹನಗಳ ಮೇಲಿನ ಒಲವು ಆರಂಭವಾಗಿರುವುದನ್ನೂ ನಾವೂ ಈ ಸಂದರ್ಭದಲ್ಲಿ ಗಮನಿಸಿಕೊಳ್ಳಬಹುದಾಗಿದೆ. ಈ ಒಲವು ನಮ್ಮಲ್ಲೂ ಕಂಡು ಬಂದಾಗ ಪೆಟ್ರೋಲ್ ಅವಲಂಬಿತ ದೇಶಗಳ ಪಟ್ಟಿಯಿಂದ ಭಾರತ ಹೊರಬರುವುದು ಸುಲಭ ಸಾಧ್ಯವಾಗಲಿದೆ.
ಇತ್ತೀಚೆಗೆ ಆತ್ಮೀಯರೊಬ್ಬರು ಮಾತಾನಾಡಲು ಸಿಕ್ಕಾಗ ಸಹಜವಾಗಿ ಪೆಟ್ರೋಲ್ ದರ ಏರಿಕೆ ಸಂಬಂಧವೂ ಚರ್ಚೆ ನಡೆಯಿತು. ಆ ಸಂದರ್ಭದಲ್ಲಿ ಅವರು, ʼನಮ್ಮ ದೇಶದಲ್ಲಿ ಪೆಟ್ರೋಲ್ ವಾಹನಗಳ ಬಳಕೆ ನಿಯಂತ್ರಣ ಬರಬೇಕು. ಎಲೆಕ್ಟ್ರಾನಿಕ್ ವಾಹನಗಳ ಟ್ರೆಂಡ್ ಆರಂಭವಾಗಬೇಕುʼ ಎಂದರು. ಇದನ್ನು ಜನ ಅಷ್ಟು ಬೇಗ ಒಪ್ಪಿಕೊಳ್ಳುವುದು ಕಷ್ಟ ಸಾಧ್ಯ. ಆದರೂ, ಐದು ವರ್ಷಗಳ ಹಿಂದೆ ಹೆಚ್ಚಿನವರಲ್ಲಿ ಸ್ಮಾರ್ಟ್ ಫೋನ್ಗಳು ಇರಲಿಲ್ಲ. ಆದರೆ ಈಗ ಎಲ್ಲರ ಬಳಿಯೂ ಸ್ಮಾರ್ಟ್ಫೋನ್ ಇವೆ. ಎಲೆಕ್ಟ್ರಿಕ್ ವಾಹನಗಳು ಈ ಪೆಟ್ರೋಲ್ ದರ ಏರಿಕೆಯ ಅಬ್ಬರದ ನಡುವೆ ನಮ್ಮ ನಡುವಿನ ಪರ್ಯಾಯ ವ್ಯವಸ್ಥೆ. ಅತ್ತ ಕಡೆಗೆ ಗಮನಹರಿಸುವ, ಈ ಬಗ್ಗೆ ಜನರಲ್ಲಿ ಹೊಸ ಜಾಗೃತಿ ಸೃಷ್ಟಿಸುವ ಕೆಲಸ ನಮ್ಮಿಂದಾಗಬೇಕಿದೆ.
ಇಂಧನಕ್ಕೆ ಪರ್ಯಾಯವಾದ ಮತ್ತು ಕಡಿಮೆ ಖರ್ಚಿನಲ್ಲಾಗುವ, ಬಹಳ ಮುಖ್ಯವಾಗಿ ಹೇಳುವುದಾದರೆ ಇಂಧನದ ಹಾಗೆ ಆಗಾಗ್ಗೆ ಬೆಲೆ ಏರಿಕೆಯಾಗದ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಬಗ್ಗೆ ಜನ ಜಾಗೃತಿ ಮೂಡಿಸುವುದು ನಮ್ಮ ಇಂದಿನ ಆದ್ಯತೆಯಾಗಬೇಕಿದೆ. ಎಲೆಕ್ಟ್ರಿಕ್ ವಾಹನಗಳ ಲಾಭವನ್ನು ಜನರಿಗೆ ತಿಳಿಸಿ ಅದರತ್ತ ಹೆಚ್ಚು ಒಲವು ಮೂಡುವಂತೆಯೂ ಮಾಡಬೇಕಾಗಿದೆ. ಇದು ಸದ್ಯದ ಅನಿವಾರ್ಯತೆಯೂ ಹೌದು. ದೇಶದ ಅಭಿವೃದ್ಧಿಯ ದೃಷ್ಟಿಯಿಂದಲೂ ಹೆಚ್ಚು ಪರಿಣಾಮಕಾರಿಯೇ ಸರಿ.
✍️ ವಿಶ್ವಾಸ್ ಅಡ್ಯಾರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.