ಬೆಂಗಳೂರು: ಸ್ವಾತಂತ್ರ್ಯ ಬಂದಾಗಿನಿಂದ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಹಲವಾರು ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. ಅಲ್ಲದೆ, ಸಂವಿಧಾನದ ದುರುಪಯೋಗ ಪಡಿಸಿಕೊಂಡು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಹೇಯ ಕೃತ್ಯಕ್ಕೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಆಗಿದೆ ಎಂಬುದನ್ನು ದೇಶ- ರಾಜ್ಯದ ಜನರು ಮರೆತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ಸಂವಿಧಾನ ದಿನಾಚರಣೆಯ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಹಿಂದೆ ಕಾನೂನು ದಿನವನ್ನಾಗಿ ಇದನ್ನು ಆಚರಿಸಲಾಗುತ್ತಿತ್ತು. ಇದನ್ನು ಸಂವಿಧಾನ ಸಮರ್ಪಣಾ ದಿನವಾಗಿ ಅರ್ಥಪೂರ್ಣವಾಗಿ ಆಚರಿಸುವ ಅಭಿಲಾಷೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರದು ಎಂದು ತಿಳಿಸಿದರು.
ನ.26ರಿಂದ ಜನವರಿ 26ರವರೆಗೆ 2 ತಿಂಗಳುಗಳ ಕಾಲ ದೇಶಾದ್ಯಂತ ಸಂವಿಧಾನ ಸನ್ಮಾನ ಅಭಿಯಾನ ಆಚರಿಸಲಾಗುತ್ತಿದೆ. ಸಂವಿಧಾನ ಒಂದು ಧರ್ಮಗ್ರಂಥ ಎಂದ ಅವರು, ಸಂವಿಧಾನಕ್ಕೆ ಅವಹೇಳನ ಮಾಡಿದ ಕಾಂಗ್ರೆಸ್ಸಿಗರು ಸಂವಿಧಾನದ ರಕ್ಷಕರು, ಸಂವಿಧಾನ ಪ್ರತಿಪಾದಕರಂತೆ ಕಪಟ ನಾಟಕವನ್ನು ಹಲವಾರು ದಶಕಗಳಿಂದ ನಿರಂತರವಾಗಿ ಮಾಡುತ್ತ ಬಂದಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದವರು ಸಂವಿಧಾನಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಸಂವಿಧಾನಕ್ಕೆ ಗೌರವ ತರುವ ನಿಟ್ಟಿನಲ್ಲಿ, ಸಂವಿಧಾನವನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡ ಗೌರವದಿಂದ ಕಾಣುವ ಮತ್ತು ಪಾಲಿಸುವ ಕಡೆ ಬಿಜೆಪಿ ಮುಂದಾಗಿದೆ. ಈ ಆಚರಣೆಯು ಕೇವಲ ನವೆಂಬರ್ 26ಕ್ಕೆ ಸೀಮಿತ ಆಗಬಾರದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರು ಇತಿಹಾಸವನ್ನು ಮರೆಮಾಚಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ಅದನ್ನು ತೊಡೆದು ಹಾಕಿ, ಡಾ. ಬಾಬಾಸಾಹೇಬ ಅಂಬೇಡ್ಕರರ ನೇತೃತ್ವದಲ್ಲಿ ರಚಿಸಿದ ಸಂವಿಧಾನಕ್ಕೆ ಸಂಪೂರ್ಣ ಗೌರವ ತಂದು ಕೊಡುವ ಪ್ರಾಮಾಣಿಕ ಕೆಲಸವನ್ನು ಈ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ.ಅಂಬೇಡ್ಕರರ ಪರಿಶ್ರಮ, ಬೆವರಿನ ಫಲಶ್ರುತಿಯ ಫಲವಾಗಿ ಸಮಾನತೆ, ಸ್ವಾವಲಂಬನೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನದ ಮೂಲಕ ಕೊಡಲಾಗಿದೆ. ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಪಾಲಿಗೆ ಒಂದು ಧರ್ಮಗ್ರಂಥ ಎಂದು ವಿಶ್ಲೇಷಿಸಿದರು. ನಮ್ಮೆಲ್ಲರ ನೇತೃತ್ವದಲ್ಲಿ ಸಂವಿಧಾನಕ್ಕೆ ಗೌರವ ಕೊಡುವ ಕೆಲಸ ಆಗಬೇಕಿದೆ ಎಂದು ಅವರು ತಿಳಿಸಿದರು. ಸಂವಿಧಾನವನ್ನು ರಕ್ಷಿಸುವ ಕರ್ತವ್ಯ ಪ್ರತಿಯೊಬ್ಬ ಭಾರತೀಯರದು ಎಂದು ಅವರು ನುಡಿದರು.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ಸಂವಿಧಾನ ರಚನೆ ದೊಡ್ಡ ಸವಾಲಾಗಿತ್ತು. ಆಗ ಸಂವಿಧಾನ ಸಮಿತಿಯು ಸುದೀರ್ಘ- ಎಲ್ಲ ಆಯಾಮಗಳಲ್ಲಿ ಚರ್ಚೆ ಮಾಡಿ, ಬಾಬಾಸಾಹೇಬ ಅಂಬೇಡ್ಕರರ ಮಾನವೀಯ ತತ್ವಗಳನ್ನು ಸೇರಿಸಿದ್ದರಿಂದ ನಮ್ಮ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎನಿಸಿದೆ ಎಂದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸರ್ವರಿಗೂ ಸಮಾನ ಅವಕಾಶ ನೀಡುವ ಸಂವಿಧಾನವನ್ನು ಡಾ.ಅಂಬೇಡ್ಕರರು ನೀಡಿದ್ದು, ಅದು ಸಾರ್ವಕಾಲಿಕ; ಸದಾ ಪ್ರಸ್ತುತ ಎಂದು ವಿವರಿಸಿದರು. ಸಂವಿಧಾನದ ಕುರಿತು ಅಪಸ್ವರ ಬರಬಾರದು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಸಂವಿಧಾನದ ಪೀಠಿಕೆಯ ಪಠಣ ಮಾಡಿಸಿದರು. ನವೆಂಬರ್ 26 ಅನ್ನು ಕಡೆಗಣಿಸಿದ ಷಡ್ಯಂತ್ರದ ಕುರಿತು ಅವರು ವಿವರಿಸಿದರು. ಮೋದಿಯವರು ಪ್ರಧಾನಿಗಳಾದ ಬಳಿಕ ಈ ದಿನವನ್ನು ಸಂವಿಧಾನ ದಿನವನ್ನಾಗಿ ಘೋಷಿಸಿದ್ದಾರೆ ಎಂದು ತಿಳಿಸಿದರು. ಡಾ. ಅಂಬೇಡ್ಕರರ ಸಂವಿಧಾನವು ಇಡೀ ದೇಶದ ಮುನ್ನೋಟವನ್ನು ನೀಡಿದೆ ಎಂದು ವಿವರಿಸಿದರು.
ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ ಅವರು ಮಾತನಾಡಿ, ನವೆಂಬರ್ 26 ನಮ್ಮೆಲ್ಲರಿಗೂ ವೈಭವದ, ಸಂಭ್ರಮದ ದಿನ. ಸಂವಿಧಾನ ರಚನೆಯ ಜವಾಬ್ದಾರಿಯನ್ನು ಡಾ. ಅಂಬೇಡ್ಕರರಿಗೆ ನೀಡಿದ್ದು, ವಿಶ್ವದಲ್ಲೇ ಅತ್ಯಂತ ದೊಡ್ಡ ಸಂವಿಧಾನ ರಚಿಸಿ ನೀಡಿದ್ದಾರೆ ಎಂದು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.