ಪಂಡಿತ ದೀನದಯಾಳ್ ಉಪಾಧ್ಯಾಯ ದೇಶ ಕಂಡ ಉತ್ತಮ ತತ್ವಶಾಸ್ತ್ರಜ್ಞ, ರಾಷ್ಟ್ರೀಯತೆಯ ಹರಿಕಾರ ಮತ್ತು ರಾಜಕೀಯ ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ನುಡಿದಂತೆ ನಡೆದ ವ್ಯಕ್ತಿತ್ವ ಹೊಂದಿದ್ದ ದೀನದಯಾಳ್ ಉಪಾಧ್ಯಾಯರು ಹಲವು ವಿಚಾರಗಳಲ್ಲಿ ಮಾರ್ಗದರ್ಶಿ ಎನಿಸಿಕೊಂಡಿದ್ದಾರೆ. ರಾಷ್ಟ್ರದ ರಾಜಕೀಯಕ್ಕೆ ಹೊಸ ಪಥವನ್ನು ಸೂಚಿಸಿದ ಇವರು ದೇಶದ ಪ್ರಾಚೀನ ಇತಿಹಾಸ, ಧರ್ಮ ಪರಂಪರೆ, ನಾಗರಿಕತೆ ಮತ್ತು ಜೀವನ ದರ್ಶನದ ಬಗ್ಗೆ ಹೆಚ್ಚಿನ ಒಲವುಳ್ಳ ವ್ಯಕ್ತಿಯಾಗಿದ್ದರು. ಉಪಾಧ್ಯಾಯರ ಯೋಚನೆ ಹಾಗೂ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಭಾರತೀಯ ರಾಜಕಾರಣದಲ್ಲಿ ಅಳವಡಿಸಲ್ಪಟ್ಟಿದೆ. ಅವರ ದೂರದೃಷ್ಟಿ ಮತ್ತು ರಾಜಕೀಯ ಸೈದ್ಧಾಂತಿಕ ನಿಲುವುಗಳು ಭಾರತದ ರಾಜಕೀಯ ವಲಯಕ್ಕೆ ಮಾದರಿಯಾಗಿದೆ. ಸಮಕಾಲೀನ ಭಾರತದಲ್ಲಿ ಇವರ ದೂರದೃಷ್ಟಿ ಸೈದ್ಧಾಂತಿಕತೆ ಈ ಹಿಂದಿನ ರಾಜಕೀಯ ಸೈದ್ದಾಂತಿಕತೆಯ ಬದಲಿಯಾಗಿ ದೇಶದ ಆಡಳಿತ ಮತ್ತು ರಾಜಕೀಯ ದಿಶೆಯನ್ನು ಬದಲಿಸಿದೆ.
1916 ಸೆ. 25 ರಂದು ಜನಿಸಿದ ದೀನದಯಾಳ್ ತಮ್ಮ ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡರು. ಚುರುಕು ಬುದ್ದಿಯ ವಿದ್ಯಾರ್ಥಿ ಎಂದು ಕರೆಯಲ್ಪಡುತ್ತಿದ್ದ ಉಪಾಧ್ಯಾಯರು ವೃತ್ತಿ ಜೀವನವನ್ನು ಅರಸುವ ಬದಲು ಸಮಾಜದ ಉನ್ನತಿಯ ದೃಷ್ಟಿಯನ್ನು ಹೊತ್ತು ಆರ್.ಎಸ್.ಎಸ್. ನತ್ತ ಆಕರ್ಷಿತರಾದರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಸಾಮಾನ್ಯರ ದನಿಯಾದರು. ಡಾ. ಶ್ಯಾಮ ಪ್ರಸಾದ ಮುಖರ್ಜಿಯವರು ದೀನದಯಾಳರಿಂದ ಬಹಳ ಪ್ರಭಾವಿತರಾಗಿದ್ದರು. ಒಂದು ಬಾರಿ ಶ್ಯಾಮಪ್ರಸಾದರು ನನಗೆ ಈರ್ವರು ದೀನದಯಾಳರು ಸಿಕ್ಕರೆ, ನಾನು ಭಾರತ ದೇಶದ ರಾಜಕೀಯ ಚಿತ್ರಣವನ್ನೆ ಬದಲಿಸುತ್ತೇನೆ ಎಂದು ಹೇಳಿದ್ದರು.
ಪಂಡಿತ ದೀನದಯಾಳ್ ಉಪಾಧ್ಯಾಯರು ಎಲ್ಲರನ್ನೂ ಒಳಗೊಂಡ ಏಕತ್ಮಾ ಮಾನವತೆಯನ್ನು ಸಾರಿದ ತತ್ವಜ್ಞಾನಿ. ದೇಶವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಇಲ್ಲವಾಗಿಸಲು ಅಡ್ಡ ದಾರಿಯನ್ನು ಹಿಡಿಯಲಿಲ್ಲ, ಬದಲಾಗಿ ಎಲ್ಲರನ್ನೂ ಒಳಗೊಂಡ ಸಮುಷ್ಠಿ ಏಳಿಗೆ ಬಯಸಿದ ತತ್ವವನ್ನು ಪ್ರಚರಿಸಿದರು. ಶರೀರ, ಮನಸ್ಸು, ಬುದ್ಧಿ ಹಾಗೂ ಆತ್ಮ ಕೇಂದ್ರೀತವಾದ ಮನುಷ್ಯನ ಏಳಿಗೆಗೆ ಶ್ರಮಿಸಿದರು. ಆಧ್ಯಾತ್ಮಿಕ ದೃಷ್ಟಿಕೋನದ ಮುಖಾಂತರ ರಾಜಕೀಯವನ್ನು ಶುದ್ಧೀಕರಣಗೊಳಿಸಲು ಯತ್ನಿಸಿದ ಇವರು ರಾಷ್ಟ್ರೀಯವಾದ ಮತ್ತು ದೇಶದ ಪ್ರಾಚೀನ ಸಂಸ್ಕೃತಿ ಪರಿಚ್ಛಾಯೆಗೆ ಒತ್ತು ನೀಡಿದರು. ದೇಶದ ರಾಷ್ಟ್ರೀಯತೆಯಲ್ಲಿ ಪಾಶ್ಚಿಮಾತ್ಯ ಚಿಂತನೆ ಅವಲಂಬನೆಯನ್ನು ಬಯಸದ ಉಪಾಧ್ಯಾಯರು ಬಂಡವಾಳಶಾಹಿ ನೀತಿ ಮತ್ತು ಕಮ್ಯೂನಿಸಂ ಚಿಂತನೆಗಳು ಸಮಾಜದಲ್ಲಿ ಬದಲಾವಣೆ ಅಥವಾ ಸುಧಾರಣೆ ತರುತ್ತವೆ ಎಂಬುದನ್ನು ನಂಬಲಿಲ್ಲ. ಸಮಾಜವಾದವು ಪೂರಕವಲ್ಲ ಎಂಬ ಭಾವ ಇವರದಾಗಿತ್ತು.
ದೀನದಯಾಳ್ ಉಪಾಧ್ಯಾಯರ ಪ್ರಥಮ ಚಿಂತನೆ ಭಾರತೀಯತೆಗೆ ಒತ್ತು ನೀಡುವುದಾಗಿತ್ತು. ಧರ್ಮ, ಧರ್ಮರಾಜ್ಯ ಸಹಿತ ಅಂತ್ಯೋದಯದ ಕನಸು ಅವರದಾಗಿತ್ತು. ಭಾರತೀಯತೆ ಎಂದರೆ ಭಾರತೀಯ ಸಂಸ್ಕೃತಿ ಎಲ್ಲವನ್ನು ಒಳಗೊಳ್ಳುವಂತಹದ್ದು, ಭಾರತೀಯತೆಯ ಉದ್ದೀಪನವು ನಮ್ಮ ಸಂಸ್ಕೃತಿಯಿಂದಲೇ ಆಗಬೇಕು ಎಂದು ಅವರು ನಂಬಿದ್ದರು. ದೇಶ ವಿಶ್ವಕ್ಕೆ ಏನು ನೀಡಬೇಕಿದೆ ಎಂದರೆ ಸಾಂಸ್ಕೃತಿಕ ಸಹಿಷ್ಣುತೆ ಮತ್ತು ಕರ್ಮ ಮಾರ್ಗದ ಪಾಠ. ಸ್ವಾತಂತ್ರ್ಯ ಎಂಬುದು ಸಂಸ್ಕೃತಿಯ ಮೂಲ ಸ್ವರೂಪ. ಸ್ವಾತಂತ್ರ್ಯಕ್ಕೆ ಹೆಚ್ಚಿನ ಅರ್ಥ ಬರುವುದು ಯಾವಾಗ ಎಂದರೆ ಅದು ನಮ್ಮ ಸಂಸ್ಕೃತಿಯ ದ್ಯೋತಕವಾದಾಗ. ಇಂತಹ ಅಭಿವ್ಯಕ್ತಿಯು ನಮ್ಮ ಏಳಿಗೆ ಮತ್ತು ನಮ್ಮ ಒಳಿತಿಗೆ ಕಾರಣವಾಗಲಿದೆ. ಭಾರತ ದೇಶದ ʼಧರ್ಮʼ ಎಂಬ ಪದವನ್ನು ಪಶ್ಚಿಮದ ರಿಲಿಜನ್ ಎಂಬ ಪದಕ್ಕೆ ಸಮೀಕರಿಸಲಾಗದು. ಅಭೂತಪೂರ್ವ ಅಂಶಗಳನ್ನು ಹೊಂದಿರುವ ಧರ್ಮ ದೊಡ್ಡ ಚಿಂತನಾ ವಿಷಯಗಳಲ್ಲಿ ಒಂದಾಗಿದೆ. ರಿಲಿಜನ್ಎಂಬ ವಿಚಾರವು ಜನರನ್ನು ಜಾತಿ, ಪಂಥಗಳಲ್ಲಿ ವಿಂಗಡಿಸಿಬಿಡುತ್ತದೆ. ಭಾರತ ದೇಶದ ಉದಾತ್ತತೆಯನ್ನು ಧರ್ಮದಲ್ಲಿ ಕಾಣಬೇಕಿದೆ ಎಂಬುದು ದೀನದಯಾಳರ ವಾಣಿಯೂ ಹೌದು. ದೇಶದ ಆಧುನಿಕತೆಯೊಂದಿಗೆ ಧರ್ಮರಾಜ್ಯದ ಪರಿಕಲ್ಪನೆಯನ್ನು ಹೊಂದಿದ್ದ ದೀನದಯಾಳ್ ಉಪಾಧ್ಯಾಯರು, ಭಾರತೀಯ ಮೂಲ ಸಂಸ್ಕೃತಿ ಆಧಾರದಲ್ಲಿಯೇ ದೇಶವನ್ನು ಶಕ್ತಿಯಾಲಿ ಮತ್ತು ಶ್ರೀಮಂತವಾಗಿಸಬೇಕು, ದೇಶವನ್ನು ಸ್ವಾತಂತ್ರ್ಯ, ಸಮಾನತೆ, ನ್ಯಾಯ ನೀಡುವ ಧರ್ಮರಾಜ್ಯವಾಗಿಸಬೇಕು, ಸರ್ವೋದಯ ಮತ್ತು ಅಂತ್ಯೋದಯ ಎಲ್ಲರಿಗೂ ತಲುಪಬೇಕು, ಅದರ ಜೊತೆಯಲ್ಲಿ ಸಮನ್ವಯತೆ ಸಾಧ್ಯವಾಗಬೇಕು ಎಂಬ ದೂರದೃಷ್ಟಿ ಹೊಂದಿದ್ದರು.
✍️ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.