2019ರಲ್ಲಿ ಕೇರಳ ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆಯು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಬಿರುಗಾಳಿಯನ್ನು ಸೃಷ್ಟಿಸಿತ್ತು. ಆಗಸ್ಟ್ 2019 ರಲ್ಲಿ ಬಿಡುಗಡೆಯಾದ ಗೆಜೆಟ್, ಸಹಾಯಕ ಶಸ್ತ್ರಚಿಕಿತ್ಸಕ ಮತ್ತು ಅಪಘಾತ ವೈದ್ಯಕೀಯ ಅಧಿಕಾರಿಗಳಿಗೆ ಒನ್ ಟೈಮ್ ನೋಂದಣಿ ಯೋಜನೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಅಧಿಸೂಚನೆಯಲ್ಲಿ ಗಮನ ಸೆಳೆದದ್ದು ಪರಿಶಿಷ್ಟ ಜಾತಿಯಿಂದ ಕ್ರಿಶ್ಚಿಯನ್ ಧರ್ಮಕ್ಕೆ (ಎಸ್ಸಿಸಿಸಿ) ಮತಾಂತರಗೊಂಡವರಿಗೆ ಅನ್ವಯಿಸಬಹುದಾದ ನಿರ್ದಿಷ್ಟ ಉಲ್ಲೇಖ. ಕೇರಳ ಸರ್ಕಾರವು ಹಿಂದೂ ಧರ್ಮವನ್ನು ತೊರೆದ ನಂತರ ಕ್ರೈಸ್ತರಾದವರಿಗೆ ನಿರ್ದಿಷ್ಟವಾಗಿ ಏಕೆ ಒಲವು ತೋರಿಸುತ್ತದೆ ಎಂಬ ಬಗ್ಗೆ ಹಲವರು ಆಶ್ಚರ್ಯಪಟ್ಟಿದ್ದರು.
ವಿಶೇಷವೆಂದರೆ, ಇದು ಮೂರನೇ ಎನ್ಸಿಎ ಅಧಿಸೂಚನೆಯಾಗಿದ್ದು, ಎಸ್ಸಿಸಿಸಿ ವರ್ಗದ ಅಭ್ಯರ್ಥಿಗಳ ಕೊರತೆಯಿಂದಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕೇರಳ ಸರ್ಕಾರ ವಿಫಲವಾಗಿದೆ. ಎಸ್ಸಿಸಿಸಿ ಅಂದರೆ ಮುಖ್ಯವಾಗಿ ಹಿಂದೂ ಧರ್ಮವನ್ನು ತೊರೆದು ಕ್ರೈಸ್ತರಾದ ಜನರು. ಈ ಖಾಲಿ ಹುದ್ದೆಯನ್ನು ಭರ್ತಿ ಮಾಡುವ ಮೊದಲ ಅಧಿಸೂಚನೆಯನ್ನು 2014 ರ ಡಿಸೆಂಬರ್ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದೇ ರೀತಿಯ ಖಾಲಿ ಹುದ್ದೆಗಳಿಗೆ ಎನ್ಸಿಎ ಅಧಿಸೂಚನೆಯನ್ನು ಡಿಸೆಂಬರ್ 2016 ರಲ್ಲಿ ಬಿಡುಗಡೆ ಮಾಡಲಾಯಿತು.
ಕ್ರಿಶ್ಚಿಯನ್ ಮತಾಂತರಗಳಿಗಾಗಿ ಮೀಸಲಿಡಲಾಗಿರುವ ಈ ಹುದ್ದೆಗಳಿಗೆ ಉಲ್ಲೇಖಿಸಲಾದ ವೇತನ ಶ್ರೇಣಿ ನಿರ್ದಿಷ್ಟವಾಗಿ ರೂ. 45,800 ರಿಂದ ರೂ. 89,000 ಆಗಿತ್ತು.
ಕೇರಳ ಸರ್ಕಾರವು ಧರ್ಮದ ಆಧಾರದ ಮೇಲೆ ಹೇಗೆ ತಾರತಮ್ಯವನ್ನುಂಟುಮಾಡುತ್ತದೆ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವವರಿಗೆ ಮಾತ್ರ ಅನ್ವಯಿಸಬಹುದಾದ ಅಧಿಸೂಚನೆಯನ್ನು ಪ್ರಕಟಿಸುವ ಮೂಲಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಬಗ್ಗೆ ಹಲವಾರು ಮಂದಿ ಎಚ್ಚರಿಕೆ ನೀಡಿದ್ದರು. ಆದರೆ ಕೇರಳ ಸರ್ಕಾರ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.
ಅದರ ಈ ಅಧಿಸೂಚನೆಯು ಅಚ್ಚರಿಯೆನಿಸಲಾರದು. ಯಾಕೆಂದರೆ ವಾಸ್ತವದಲ್ಲಿ, ಕೇರಳ ಸರ್ಕಾರವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಹಿಂದೂ ಧರ್ಮವನ್ನು ತೊರೆದ ಜನರ ‘ಕಲ್ಯಾಣ’ಕ್ಕೆ ಮೀಸಲಾಗಿರುವ ಸಂಪೂರ್ಣ ಇಲಾಖೆಯನ್ನೇ ಹೊಂದಿದೆ.
ಕೇರಳ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರಿಗಾಗಿನ ಕೇರಳ ರಾಜ್ಯ ಅಭಿವೃದ್ಧಿ ನಿಗಮ ಎಂಬ ವಿಭಾಗವನ್ನು ಇದು ಹೊಂದಿದೆ.
“ಕೇರಳ ಸ್ಟೇಟ್ ಡೆವಲಪ್ಮೆಂಟ್ ಕಾರ್ಪೋರೇಶನ್ ಫಾರ್ ಕ್ರಿಶ್ಚಿಯನ್ ಕನ್ವರ್ಟ್ಸ್ ಫ್ರಮ್ ಶೆಡ್ಯೂಲ್ಡ್ ಕಾಸ್ಟ್ ಆಂಡ್ ದಿ ರೆಕಮಂಡೆಡ್ ಕಮ್ಯೂನಿಟಿಸ್ ಲಿಮಿಟೆಡ್ , ಕೊಟ್ಟಾಯಂ” ಅನ್ನು 1980 ರಲ್ಲಿ ಕಂಪನಿಗಳ ಕಾಯ್ದೆ 1956 ರ ಅಡಿಯಲ್ಲಿ ಸಂಯೋಜಿಸಲಾಯಿತು, ಇದರ ಉದ್ದೇಶವೆಂದರೆ ಪರಿಶಿಷ್ಟ ಜಾತಿ ಮತ್ತು ಶಿಫಾರಸು ಮಾಡಿದ ಸಮುದಾಯಗಳಿಂದ ಕ್ರಿಶ್ಚಿಯನ್ಗೇ ಮತಾಂತರವಾದವರ ಸಮಗ್ರ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಉನ್ನತಿ ಮತ್ತು ಇತರ ಜೀವನ ಪರಿಸ್ಥಿತಿಗಳನ್ನು ಉತ್ತೇಜಿಸುವುದು.
ಇದು ಸರ್ಕಾರದ ಕೆಲಸ ಎಂದು ಸ್ಪಷ್ಟ, ಆದರೆ ಇದನ್ನು ಕಂಪೆನಿಗಳ ಕಾಯ್ದೆ 1956 ರ ಅಡಿಯಲ್ಲಿ ಸೇರಿಸಲಾಗಿದೆ ಎಂಬುದು ಅತ್ಯಂತ ಕುತೂಹಲಕಾರಿಯಾಗಿದೆ. ಸಾಮಾನ್ಯವಾಗಿ, ಈ ರೀತಿಯ ಇಲಾಖೆಯನ್ನು ಸೊಸೈಟೀಸ್ ಆಕ್ಟ್ ಅಥವಾ ವಿಶೇಷ ಕಾಯಿದೆಯಡಿ ಸೇರಿಸಬೇಕಾಗುತ್ತದೆ. ಕಂಪೆನಿ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಇದನ್ನು ಸೇರಿಸಿಕೊಳ್ಳುವುದನ್ನು ಸಮರ್ಥಿಸಬಹುದಾದರೂ, ಕೇರಳ ಸರ್ಕಾರವು ಇದನ್ನು ಕಂಪೆನಿ ಕಾಯ್ದೆಯಡಿ ಏಕೆ ಸಂಯೋಜಿಸಿತು ಮತ್ತು ಸೊಸೈಟಿ ಅಡಿಯಲ್ಲಿ ಯಾಕಲ್ಲ ಎಂಬುದು ಆಶ್ಚರ್ಯ. ಕಂಪೆನಿ ಕಾಯ್ದೆಯಡಿ ಸೇರ್ಪಡೆಗೊಳ್ಳಲು ಈ ಇಲಾಖೆಯು ಯಾವ ‘ವ್ಯವಹಾರ’ ಮಾರಾಟ ಮಾಡುತ್ತಿದೆ? ಎಂಬುದು ಅರ್ಥವಾಗದ ನಿಗೂಢ. ಕೇರಳ ಸರ್ಕಾರದ ಅಧಿಕೃತ ವೆಬ್ ಪೋರ್ಟಲ್ ಸಹ ಇಲಾಖೆಯನ್ನು ಉಲ್ಲೇಖಿಸುತ್ತದೆ.
ಅಧಿಕೃತ ಕೇರಳ ಸರ್ಕಾರದ ವೆಬ್ಸೈಟ್ ಪ್ರಕಾರ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಎಸ್ಸಿ ಹಿಂದೂಗಳ ಬಗ್ಗೆ ಕಾಳಜಿ ವಹಿಸಲು ಇಲಾಖೆ ವಿಶೇಷವಾಗಿ ಹಲವಾರು ಯೋಜನೆಗಳನ್ನು ನೀಡುತ್ತದೆ. ಕೃಷಿ ಭೂ ಖರೀದಿ ಯೋಜನೆಯಿಂದ ಹಿಡಿದು ವಿದೇಶಿ ಉದ್ಯೋಗ ಯೋಜನೆ, ಮದುವೆ ಸಾಲದಿಂದ ವೈಯಕ್ತಿಕ ಸಾಲ ಇತ್ಯಾದಿ ಯೋಜನೆ ಅವರಿಗಾಗಿ ಇದೆ.
2010 ರಲ್ಲಿ, ಎಸ್ಸಿಸಿಸಿ ವರ್ಗಕ್ಕೆ ಸೇರಿದ ಜನರ 159 ಕೋಟಿ ರೂ.ಗಳ ಸಾಲ ಮನ್ನಾವನ್ನು ಸಹ ಮಾಡಲಾಯಿತು.
ಕೇರಳದ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್ಸೈಟ್ನ ಪ್ರಕಾರ, ಹಿಂದೂ ಧರ್ಮವನ್ನು ತೊರೆದ ನಂತರ ಕ್ರಿಶ್ಚಿಯನ್ನರಾದ ಜನರು ಹಿಂದುಳಿದ ವರ್ಗವೆಂದು ಗುರುತಿಸಲ್ಪಟ್ಟ ಪ್ರತ್ಯೇಕ ವರ್ಗವಾಗಿದ್ದು, ಅವರಿಗೆ ರಾಜ್ಯ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿ ಲ್ಯಾಟಿನ್ ಕ್ಯಾಥೊಲಿಕರು ಮತ್ತು ಆಂಗ್ಲೋ ಇಂಡಿಯನ್ನರಿಗೆ ನೀಡಲಾಗಿರುವ ಮೀಸಲಾತಿಗೆ ಹೆಚ್ಚುವರಿಯಾಗಿರುತ್ತದೆ.
ಹಿಂದೂ ಧರ್ಮವನ್ನು ತೊರೆದು ಕ್ರೈಸ್ತರಾಗುವವರ ‘ಯೋಗಕ್ಷೇಮ’ ವನ್ನು ಖಚಿತಪಡಿಸಿಕೊಳ್ಳಲು ಕೇರಳ ಸರ್ಕಾರ ಎಷ್ಟು ಬದ್ಧವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಇವರಿಗೆ ಇಷ್ಟೆಲ್ಲಾ ಸವಲತ್ತುಗಳನ್ನು ಮತಾಂತರವಾದ ಬಳಿಕವೇ ನೀಡಬೇಕು ಯಾಕೆ? ಅದಕ್ಕೂ ಮೊದಲೇ ನೀಡಬಹುದಲ್ಲವೇ? ಮತಾಂತರ ಪ್ರೇರೇಪಿಸುವುದರಿಂದ ಸರ್ಕಾರಕ್ಕೆ ಆಗುವ ಲಾಭವೇನು? ಎಂಬುದೇ ಇಲ್ಲಿ ಯಕ್ಷಪ್ರಶ್ನೆಯಾಗಿದೆ.
ಮೂಲ: opindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.