ಸುಬ್ರಹ್ಮಣ್ಯ : ಪ್ರಕೃತಿಯ ಸೃಷ್ಟಿ ಮಾನವ ಸೃಷ್ಟಿಗಿಂತಲೂ ಮುನ್ನವೇ ಆಗಿದೆ.ಆದರೆ ಇಂದು ಹಸಿರಿನ ನಾಶವಾಗುತ್ತಿದೆ.ಇದರಿಂದ ನಗರ ಪ್ರದೇಶದಲ್ಲಿ ವಿಪರೀತ ಸಮಸ್ಯೆ ಕಾಣುತ್ತಿದೆ.ಹೀಗಾಗಿ ನಮ್ಮ ಪರಿಸರ ಹಸಿರಾಗಿದ್ದರೆ , ಸಂರಕ್ಷಣೆಯಾದರೆ ಮಾತ್ರವೇ ನಮಗೆ ಉಸಿರು ಸಾಧ್ಯ ಎಂಬುದನ್ನು ಮನಗಾಣಬೇಕಾಗಿದೆ ಎಂದು ಗೌರವ ವನ್ಯಜೀವಿ ಪರಿಪಾಲಕ ಕಿರಣ್ ಬುಡ್ಲೆಗುತ್ತು ಹೇಳಿದರು.
ಅವರು ಬುಧವಾರ ಗುತ್ತಿಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಯುವಕ ಮಂಡಲ ಗುತ್ತಿಗಾರು ಇವರ ವತಿಯಿಂದ ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ ನಡೆದ ಗುತ್ತಿಗಾರು ವಲಯ ಮಟ್ಟದ ಪರಿಸರ ಸಂರಕ್ಷಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಕೃತಿಯ ಮೇಲೆ ಮನುಷ್ಯನ ಅವಲಂಬನೆ ಹೆಚ್ಚಾಗಿದೆ. ಆದರೆ ಇದೇ ಅವಲಂಬನೆಯು ಪರಿಸರವನ್ನು ನಾಶ ಮಾಡುವ ಸ್ಥಿತಿಗೂ ಹೋಗುತ್ತಿದೆ.ಆಮ್ಲಜನಕ ನೀಡುವ ಗಿಡಮರಗಳ ನಾಶ ಭವಿಷ್ಯದಲ್ಲಿ ಭಾರೀ ಸಮಸ್ಯೆ ತರಲಿದೆ.ಈಗಾಗಲೇ ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣುತ್ತಿದೆ.ಇದಕ್ಕಾಗಿ ಮಕ್ಕಳಿಂದಲೇ ಪರಿಸರ ಪ್ರೀತಿ ಬೆಳೆಸಬೇಕಾಗಿದೆ.ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಅರಣ್ಯ ಇಲಾಖೆ ಮೂಲಕ ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮವನ್ನು ಗಿಡನೆಡುವ ಮೂಲಕ ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಉದ್ಘಾಟಿಸಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯಅತಿಥಿಗಳಾಗಿ ಆಗಮಿಸಿದ ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯುವರಾಜ ಜೈನ್ ಮಾತನಾಡಿ,ಕಳೆದ ಹಲವಾರು ಸಮಯಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನಜಾಗೃತಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.ಇದೀಗ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸಬೇಕು ಎಂಬ ಉದ್ದೇಶದಿಂದ ಪರಿಸರ ಕಾಳಜಿಯ ಕಾರ್ಯಕ್ರಮ ನಡೆಸಲಾಗುತ್ತಿದೆ, ಪರಿಸರ ಉಳಿದರೆ ಮಾತ್ರವೇ ಮನುಷ್ಯರು ಉಳಿಯಲು ಸಾಧ್ಯ ಎಂದರು.ವನಪಾಲಕ ಅಶೋಕ್ ಮಾತನಾಡಿ, ಅರಣ್ಯ ಇಲಾಖೆ ಮೂಲಕ ಪರಿಸರ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.ಇದಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ಗುತ್ತಿಗಾರು ವಲಯದ ಪ್ರಾಥಮಿಕ ಶಾಲೆಗಳಲ್ಲಿ ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿದ್ಯಾರ್ಥಿಗಳಿಗೆ ನಡೆಸಿದ ಪರಿಸರ ಸ್ಫರ್ಧೆಗಳಾದ ಭಾಷಣ, ಗಿಡದ ಎಲೆಗುರುತಿಸುವಿಕೆ ಮೊದಲಾದ ಸ್ಫರ್ಧೆಗಳ ಬಹುಮಾನ ವಿತರಿಸಲಾಯಿತು.ಯುವಕ ಮಂಡಲ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಸಭಾಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಗುತ್ತಿಗಾರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ಶಿವರಾಮ ಕರುವಜೆ,ಬಳ್ಪ ವಲಯ ವನಪಾಲಕ ಅಶೋಕ್ ,ಯುವಜನಸಂಯುಕ್ತ ಮಂಡಳಿ ಅಧ್ಯಕ್ಷ ಶಿವಪ್ರಕಾಶ್ ಅಡ್ಡನಪಾರೆ,ನಾಲ್ಕೂರು ಗ್ರಾಮ ಅರಣ್ಯ ಸಮಿತಿ ಸದಸ್ಯ ದಿನೇಶ್ ಹಾಲೆಮಜಲು,ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಿಸಿ ವಸಂತ್,ಶಾಲಾ ಮುಖ್ಯೋಪಾಧ್ಯಾಯಿನಿ ಕಮಲಾಕ್ಷಿ ಉಪಸ್ಥಿತರಿದ್ದರು.
ಯುವಕ ಮಂಡಲ ಕೋಶಾಧಿಕಾರಿ ಲೋಕೇಶ್ವರ ಡಿಆರ್ ಸ್ವಾಗತಿಸಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ಮುತ್ಲಾಜೆ ವಂದಿಸಿದರು. ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರಿ ಶಾಲೆಯ ವಠಾರದಲ್ಲಿ ೧೭ ಬಗೆಯ ಹಣ್ಣಿನ ಗಿಡ. . !
ಪರಿಸರ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಶಾಲಾ ಆವರಣದಲ್ಲಿ ನೆಡಲು ಬಾದಾಮಿ, ಮಹಾಗನಿ, ನೇರಳೆ, ಕುಂಕುಮ ಸೇರಿದಂತೆ ಇತರ ಗಿಡಗಳು ಹಾಗೂ ಶಾಲಾ ಮುಂಭಾಗದಲ್ಲಿ ವಿಶೇಷವಾಗಿ ೧೭ ಬಗೆಯ ಹಣ್ಣಿನ ಗಿಡಗಳನ್ನು ನೆಡಲಾಯಿತು.ಇದರಲ್ಲಿ ರಂಬುಟಾನ್, ಮ್ಯಾಂಗೋಸ್ಟಿನ್,ಜಂಬುನೇರಳೆ, ಲಕ್ಷ್ಮಣ ಫಲ, ಚಿಕ್ಕು, ಮಾವು, ಪೇರಳೆ, ಎಗ್ಫ್ರುಟ್,ಬ್ಯಾಂಕಾಂಗ್ ರೆಡ್,ಪನ್ನೇರಳೆ ಮೊದಲಾದ ಗಿಡಗಳನ್ನು ಕಬಕದ ನಿನ್ನಿಕಲ್ಲು ನರ್ಸರಿಯಿಂದ ತಂದು ನೆಡಲಾಯಿತು.ಈ ಎಲಾ ಗಿಡಗಳ ಸಂರಕ್ಷಣೆಯನ್ನು ಶಾಲಾಭಿವೃದ್ಧಿ ಸಮಿತಿ , ಶಿಕ್ಷಕರು,ಯುವಕ ಮಂಡಲದ ಸದಸ್ಯರು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಗೆ ಪರಿಸರ ಕಾಳಜಿಯ ದೃಷ್ಟಿಯಿಂದ ಒಂದು ಗಿಡದ ರಕ್ಷಣೆಯ ಜವಾಬ್ದಾರಿ ವಹಿಸಲಾಯಿತು.ಇದೇ ವೇಳೆ ಸ್ಥಳಿಯ ಹಲವಾರು ಮಂದಿ ಗಿಡ ದತ್ತು ಪಡೆಯಲು ಮುಂದಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.