ತಂತ್ರಾಂಶ ಉದ್ಯಮದ ‘ಭೀಷ್ಮ ಪಿತಾಮಹ’ ಎಂದೇ ಖ್ಯಾತಿ ಪಡೆದಿದ್ದ 96 ವರ್ಷದ ಫಕೀರ ಚಂದ್ ಕೊಹ್ಲಿ (ಎಫ್ ಸಿ ಕೊಹ್ಲಿ) ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಇವರು ದೇಶದ ಉದ್ಯಮ ಕ್ಷೇತ್ರ, ಐಟಿ ಪೀಲ್ಡ್ ಬೆಳವಣಿಗೆಗೆ ನೀಡಿದ ಕೊಡುಗೆಗಳ ಕಾರಣದಿಂದಲೇ ಇಂದು ಜನಜನಿತರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಕೊಹ್ಲಿ ಅವರು ಜನಿಸಿದ್ದು ಪಾಕಿಸ್ಥಾನದ ಪೇಶಾವರದಲ್ಲಿ. 1924 ರಲ್ಲಿ ಇವರ ಜನನ. ಇವರ ಪ್ರಾಥಮಿಕ ಶಿಕ್ಷಣ ಸಹ ಅಲ್ಲಿಯೇ ನಡೆಯಿತು. ಬಳಿಕ ಕಾಲೇಜು ಶಿಕ್ಷಣವನ್ನು ಲಾಹೋರ್ನಲ್ಲಿ ಪಡೆದರು. ಇನ್ನು ಇವರು ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿದ್ದಾಗ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನೂ ಪಡೆದುಕೊಂಡರು. ಅದೇ ಸಮಯದಲ್ಲಿ ಕೆನಡಾದ ಕ್ವೀನ್ಸ್ ವಿವಿಯ ವಿದ್ಯಾರ್ಥಿ ವೇತನವೊಂದು ಇವರಿಗೆ ದೊರೆಯುತ್ತದೆ. ಅಲ್ಲಿಂದ ಬಳಿಕ ಅವರು ಉನ್ನತ ಶಿಕ್ಷಣ ಪಡೆಯಲು ತೆರಳುತ್ತಾರೆ. ಅಲ್ಲಿ ಮೆಸ್ಯಾಚುಸೆಟ್ಸ್ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದರು. ಆ ಬಳಿಕ ಅವರು ಟಾಟಾ ಸಮೂಹ ಸಂಸ್ಥೆಯಲ್ಲಿ ಉದ್ಯೋಗ ಪಡೆಯುತ್ತಾರೆ. ಕಾರ್ಯಾರಂಭ ಮಾಡುತ್ತಾರೆ.
ಭಾರತದ ಮಾರುಕಟ್ಟೆ ಬಂಡವಾಳ ಲೆಕ್ಕಾಚಾರದಲ್ಲಿ ಎರಡನೇಯ ಅತೀ ದೊಡ್ಡ ಕಂಪೆನಿ ಎಂಬ ಹೆಗ್ಗಳಿಕೆಗೆ ಪಡೆದಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಉದ್ಯಮದ ಸಂಸ್ಥಾಪಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೊಹ್ಲಿ ಕಾರ್ಯ ನಿರ್ವಹಿಸಿದ್ದರು. ಇಂದು ದೇಶದೆಲ್ಲೆಡೆ ಹಬ್ಬಿರುವ ಮಾಹಿತಿ ತಂತ್ರಜ್ಞಾನ ಎಂಬ ಉದ್ಯಮದ ಬೀಜವನ್ನು ಬಿತ್ತಿದ ವ್ಯಕ್ತಿ ಕೊಹ್ಲಿ ಎಂದು ಎಫ್ ಸಿ ಕೊಹ್ಲಿ ಅವರನ್ನು ಹಿರಿಯ ಉದ್ಯಮಿಗಳು ನೆನಪಿಸಿಕೊಳ್ಳುತ್ತಾರೆ.
ಟಾಟಾ ಸಮೂಹ ಸಂಸ್ಥೆಯ ಮಹತ್ವದ ಹುದ್ದೆಗಳನ್ನು ವಹಿಸಿಕೊಂಡು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದ ಇವರಿಗೆ ಪದ್ಮಭೂಷಣ ಪುರಸ್ಕಾರವೂ ಲಭಿಸಿದೆ. ಕೇಂದ್ರ ಸರ್ಕಾರದ ಮಾಜಿ ಸಚಿವ ಜೈರಾಂ ರಮೇಶ್ ಕೊಹ್ಲಿ ಅವರನ್ನು ‘ಭಾರತದ ತಂತ್ರಾಂಶ ಉದ್ಯಮದ ಭೀಷ್ಮ ಪಿತಾಮಹ’ ಎಂದು ಕರೆದಿದ್ದಾರೆ. ತಂತ್ರಜ್ಞಾನ ಉದ್ಯಮಕ್ಕೆ ಸಂಬಂಧಿಸಿದಂತೆ ಇವರು ನೀಡಿರುವ ಮಹತ್ವದ ಕೊಡುಗೆಯನ್ನು ಗಮನಿಸಿಕೊಂಡು ಅವರನ್ನು ಹೀಗೆ ಕರೆಯಲಾಗಿದೆ.
ಇನ್ನು ಇವರು ಸಂಸ್ಥಾಪಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಕಂಪೆನಿಯ ಈಗಿನ ಅಂದಾಜು ಮಾರುಕಟ್ಟೆ ಮೌಲ್ಯದ ಬಗ್ಗೆ ಹೇಳುವುದಾದರೆ, ಆ ಸಂಸ್ಥೆ ಸದ್ಯ 10 ಲಕ್ಷ. ಕೋಟಿ ರೂ. ಬೆಲೆ ಬಾಳುತ್ತದೆ. ಇವರು ಟಾಟಾ ಸಂಸ್ಥೆಗೆ ಸೇರಿದ್ದು ಉದ್ಯಮ ಕ್ಷೇತ್ರದಲ್ಲಿ ಹೆಸರು ಗಳಿಸಿದ ಟಾಟಾ ಸಂಸ್ಥೆಯ ಜೆ ಆರ್ ಡಿ ಟಾಟಾ ಅವರ ಒತ್ತಾಯದ ಮೇರೆಗೆ. ಸಂಸ್ಥೆಯನ್ನು ಸೇರಿದ್ದು ಒತ್ತಾಯದ ಮೇರೆಗಾದರೂ, ಆ ಮೇಲೆ ಕೊಹ್ಲಿ ಅವರದ್ದು ಉದ್ಯಮ ಕ್ಷೇತ್ರದಲ್ಲಿ ನಾಗಾಲೋಟ ಎಂದೇ ಹೇಳಬಹುದು.
ಕೊಹ್ಲಿ ಅವರ ಸಾಧನೆಯ ಬಗ್ಗೆ ಟಾಟಾ ಸನ್ಸ್ನ ಈಗಿನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಮಾತಿನಲ್ಲಿ ಹೇಳುವುದಾದರೆ, ಉದ್ಯಮ ಕ್ಷೇತ್ರದಲ್ಲಿ ಎಫ್ಸಿ ಕೊಹ್ಲಿ ಅವರು ನಿಜವಾದ ದಿಗ್ಗಜ. ದೇಶದಲ್ಲಿ ಐಟಿ ವಲಯ ದೊಡ್ಡ ಮಟ್ಟದ ಅಭಿವೃದ್ಧಿ ಸಾಧಿಸಿದ್ದು, ಇದರ ಹಿಂದೆ ಕೊಹ್ಲಿ ಅವರ ಹೆಜ್ಜೆ ಗುರುತುಗಳನ್ನು, ಕೊಡುಗೆಗಳನ್ನು ನಾವು ಗಮನಿಸಬಹುದಾಗಿದೆ. ಅವರು ಹಾಕಿ ಕೊಟ್ಟ ಪಥದಲ್ಲಿಯೇ ಟಾಟಾ ಸಂಸ್ಥೆ ಸಾಗುತ್ತಿದೆ. ಅವರು ದೇಶಕ್ಕೆ ನೀಡಿದ ಅಭೂತಪೂರ್ವ ಕೊಡುಗೆಗಳನ್ನು ಮರೆಯಲು, ಅಳೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಹೀಗಾಗಿಯೇ ಅವರನ್ನು ಉದ್ಯಮ ಕ್ಷೇತ್ರದ ಭೀಷ್ಮ ಪಿತಾಮಹ ಎಂದು ಕರೆಯುವುದೇನೋ.
1951 ರಲ್ಲಿ ಟಾಟಾ ಎಲೆಕ್ಟ್ರಿಕ್ ಕಂಪೆನಿಗೆ ಸೇರಿದ ಇವರು ಸಂಸ್ಥೆಯಲ್ಲಿ ಆ ನಂತರದ ದಿನಗಳಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು. 1969 ರಲ್ಲಿ ಟಿಸಿಎಸ್ನ ಜನರಲ್ ಮ್ಯಾನೇಜರ್ ಆಗಿ, ಬಳಿಕ ಸಂಸ್ಥೆಯ ಸಿಇಒ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. 1996 ರ ವರೆಗೂ ಸಿಇಒ ಆಗಿ ಟಿಸಿಎಸ್ ಅನ್ನು ಮುನ್ನಡೆಸಿದ ಕೀರ್ತಿ ಇವರದ್ದು.
ಐಟಿ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ದ್ರುವತಾರೆ ಕೊಹ್ಲಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಹಾಕಿ ಕೊಟ್ಟ ದಾರಿ ದೇಶದ ಉದ್ಯಮಿಗಳ ಮುಂದಿದೆ. ಕೊಹ್ಲಿ ಹಾಕಿಕೊಟ್ಟ ದಾರಿ ಎಲ್ಲ ಉದ್ಯಮಿಗಳಿಗೂ ಮಾದರಿಯಾಗಲಿ ಎಂಬ ಆಶಯದೊಂದಿಗೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.