ಸತ್ಯವಿಚಾರವೊಂದು ಸಾಕ್ಷಾತ್ಕಾರಗೊಳ್ಳುವ ದಿನ ಹತ್ತಿರ ಬಂದಂತಿದೆ.
ಅದು ದೇಶವಿಭಜನೆಯ ಕಾಲ. ಅಂತರಾಷ್ಟ್ರೀಯ ಅಭದ್ರತೆಗಳು ತಾಂಡವವಾಡುತ್ತಿದ್ದ ದಿನಗಳವು. ಎರಡನೇಯ ವಿಶ್ವಸಮರದ ಉರಿ ರಾಷ್ಟ್ರರಾಷ್ಟ್ರಗಳನ್ನು ವ್ಯಾಪಿಸಿತ್ತು. ಆಗಲೇ ನಮ್ಮಲ್ಲಿ ದೇಶ ತುಂಡರಿಸುವ ದಳ್ಳುರಿ.
‘ವಿಭಜನೆಯು ಉತ್ತರವಲ್ಲ’`ಬಿರುಕಿನಿಂದ ಭದ್ರತೆಯಿಲ್ಲ’-ಅನೇಕ ರಾಷ್ಟ್ರರ್ಷಿಗಳು ಕಟ್ಟೆಚ್ಚರದ ನುಡಿಗಳನ್ನಾಡಿದರು. ಆದರೆ ಆ ಮಾತಿಗೆ ಅಂದು ತೂಕ ಬರಲಿಲ್ಲ.
ಅಂದಿನ ಕಮ್ಯನಿಷ್ಟರು ಈ ರಾಷ್ಟ್ರವನ್ನು ಒಂದಾಗಿ ಕಾಣಲಿಲ್ಲ. ಇಲ್ಲಿ ಹದಿನಾರು ‘ರಾಷ್ಟ್ರ’ಗಳಿವೆ, ಹದಿನಾರು ಹೋಳಾಗಿ ಸ್ವಾತಂತ್ರ್ಯ ಬರಲೆಂದು ಅವರು ಕಾರ್ಯರತರಾಗಿದ್ದರು. ಬ್ರಿಟಿಷರೋ-ಇಲ್ಲ್ಲಿಯ ಎಲ್ಲ ಸಂಸ್ಥಾನಗಳಿಗೂ ಸ್ವಾಯತ್ತೆ ನೀಡಿ ಅಕ್ಷರಶಃ ನೂರಾರು ‘ರಾಷ್ಟ್ರ’ಗಳನ್ನು ನಿರ್ಮಿಸಬಯಸಿದ್ದರು. ಚರ್ಚಿಲರು ಇಲ್ಲಿ ಹಿಂದುಸ್ಥಾನ-ಪಾಕಿಸ್ಥಾನಗಳಲ್ಲದೆ ಪ್ರಿನ್ಸ್ಸ್ಥಾನಗಳನ್ನೂ ನಿರ್ಮಿಸಲಿದ್ದಾರೆ ಎಂದು ಅಂದಿನ ವೈಸರಾಯ್ ಲಾರ್ಡ್ ವೆವೆಲ್ ನುಡಿದಿದ್ದ. ಬ್ಯಾರಿಸ್ಟರ್ ಜಿನ್ನಾ ಮಾತ್ರ ಮುಸ್ಲಿಮರಿಗಾಗಿ ‘ಒಂದೇ’ ಪ್ರತ್ಯೇಕ ಸ್ಥಾನವನ್ನು ಕೇಳಿದ. ಆದರೆ ಅದು ಹಿಂದುಸ್ಥಾನದ ಎಡಕ್ಕೂ ಬಲಕ್ಕೂ ಆಗಲೇ ಪ್ರಾದೇಶಿಕವಾಗಿ ವಿಭಜಿತವಾಗಿತ್ತು. ಆದರೆ ಇಂಥ ತನ್ನ ಬೇಡಿಕೆಯ ಪಟ್ಟಿಯಲ್ಲಿ ಜಿನ್ನಾ ಸೇರಿಸಿದ ಪ್ರಾಂತಗಳು ಮಾತ್ರ ಹಲವಾರಿದ್ದವು. ಒಂದು ಹಂತದಲ್ಲಿ ಆ ಅನೇಕ ಪ್ರಾಂತಗಳು ತನ್ನ ಕೈಗೆ ಸಿಗದೆಂದು ಗೊತ್ತಾದ ಮೇಲೆ ‘ಅವು ಭಾರತದಲ್ಲಿ ಉಳಿಯಬಾರದೆಂಬ’ ದುರಾಲೋಚನೆಯಿಂದ ಇನ್ನಷ್ಟು ಪುಟ್ಟ ‘ರಾಷ್ಟ್ರ’ಗಳ ಸ್ಥಾಪನೆಗೆ ಹೊಂಚುಹಾಕಿದ್ದ.
ಇವೆಲ್ಲ ಈಗ ಇತಿಹಾಸ.ಇದೀಗ ವಿಭಜನೆಯ ಕತೆ ಎಲ್ಲಿಗೆ ಬಂದಿದೆ?
‘ಒಂದು ಮತ’- ಎಂಬ ಹೆಸರಲ್ಲಿ ಪ್ರತ್ಯೇಕವಾಗಿದ್ದ ಮುಸ್ಲಿಮರು ಪೂರ್ವ ಪಶ್ಚಿಮ ಪಾಕಿಸ್ಥಾನಗಳನ್ನು ಕ್ರಮೇಣ ತುಂಡರಿಸಿದರು. ಇನ್ನೊಂದು ವಿಭಜನೆ ನಡೆಯಿತು. ಬಾಂಗ್ಲಾ ಹುಟ್ಟಿಕೊಂಡಿತು. ಬಳಿಕ ಸಿಂಧ್ ಪ್ರಾಂತ ಪ್ರತ್ಯೇಕತೆಯ ಕೂಗೆಬ್ಬಿಸಿತು. ಆದಾಗ ಪಾಕಿಸ್ಥಾನದಲ್ಲಿ ಭಯಂಕರ ಸರ್ವಾಧಿಕಾರಿಗಳ ಕಾಲ. ಒಬ್ಬ ಯಹ್ಯಾಖಾನ್, ಒಬ್ಬ ಝಡ್.ಎ ಭೂಟ್ಟೋ ನಿರ್ಮಮಕಾರದಿಂದ ಸಿಂಧ್ ಆದೋಲನವನ್ನು ಹತ್ತಿಕ್ಕಿದರು. ಭೀಕರ ಹತ್ಯಾಕಾಂಡದೊಂದಿಗೆ ವಿಭಜನೆ ಸ್ವರ ಸ್ಪಲ್ಪ ನರಳಿತು.
ಆದರೆ ವಿಭಜನೆಯ ಭಜನೆ ಅಲ್ಲಿಗೇ ನಿಲ್ಲುವುದಿಲ್ಲ.
ಇದೀಗ ಕರಾಚಿಯ ಸರದಿ. ಬೆನಜೀರೆಯು ಮೊಹಜಿರಗಳನ್ನು ಮೂದಲಿಸಿದಳೆಂದು ವರದಿ. ಅಲ್ಲಿಂದಾರಂಭಿಸಿ ದಿನಂಪ್ರತಿ ಪಾಕಿಸ್ಥಾನವು’ನಾ-ಪಾಕ್’ ಆಗುತ್ತಲೇ ಸರಿದಿದೆ. ಇನ್ನೊಂದು ಲಂಕಾದಹನ, ನಿಲ್ಲದ ಮಾರಣಹೋಮ, ಸಲ್ಲದ ಅತ್ಯಾಚಾರ, ಬರ್ಬರ ಹಿಂಸಾಕಾಂಡ…..
ವಿಭಜನೆ ಉತ್ತರ ನೀಡಿತೆ?
ವಿಭಜನೆ ನೀಡುವ ಉತ್ತರವೊಂದೇ – ಇನ್ನೊಂದು ವಿಭಜನೆ
ವಿಭಜಸಿ ಸುಖ ಪಡೆಯುವೆವೆಂಬ ಭ್ರಮೆಯ ಗುಳ್ಳೆ ಒಡೆಯಿತು.
ಮತೇತರರಾಷ್ಟ್ರ ಕಟ್ಟಬೇಕೆಂದು ನಾಸ್ತಿಕ ಜಿನ್ನಾ ಹಂಬಲಿಸಿದ್ದ. ಆದರೆ ಅದು ಮತಾಂಧರಾಷ್ಟ್ರವಾಯ್ತು. ಲಿಯಾಕತ್ ಆಲಿ ಖಾನನ ತಮಾಷೆಗೆ ಜಿನ್ನಾ ಆಹಾರವಾದ. ಮತೀಯವಾಗಿ ‘ಒಂದು ರಾಷ್ಟ್ರ’ ಕಟ್ಟಿದ್ದೇವೆಂದುಕೊಂಡು ೨೫ ವರ್ಷ ಕಳೆಯುವಷ್ಟರಲ್ಲಿ ಬಾಂಗ್ಲಾ ಬೇರಾಯ್ತು. ‘ಮತೀಯತೆ’ಯ ಗೋಪುರ ನುಚ್ಚು ನೂರಾಯ್ತು. ‘ಪಾಕಿಸ್ಥಾನ ಪಡೆದದ್ದರಿಂದ ಆರ್ಥಿಕವಾಗಿ ಎಲ್ಲ್ಲವನ್ನೂ ಕಳೆದುಕೊಂಡೆವು’ ಎಂದೀಗ ಮೊಹಜಿರ್ ಕ್ವಾಮಿ ನಾಯಕ ಆಲ್ತಾಫ್ ಹುಸೈನ್ ನಿಡುಸುಯ್ಯುತ್ತಾನೆ. ಅದೇ ಹುಸೈನ್ ‘ಒಂದು ಮತಕ್ಕಾಗಿ ಪ್ರತ್ಯೇಕ ರಾಷ್ಟ್ರ ಕಟ್ಟಿದಾಗಿ’ ಅಭಿಮಾನ ಪಡುತ್ತಾನೆ. ಮರುಕ್ಷಣದಲ್ಲಿ ಮೊಹಜಿರರ ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಾನೆ. ಕರಾಚಿಯನ್ನೇ ಕೇಂದ್ರವಾಗಿರಿಸಿಕೊಂಡು ದೇಶವಿಭಜನೆಗೆ ಬುನಾದಿ ಹಾಕುತ್ತಿದ್ದಾನೆ.
ಇಷ್ಟೇ ಅಲ್ಲ, ವಿಭಜನೆಯ ಹೇಯಕಲ್ಪನೆ ಮಾಡಿದ ಪಾಪ ಇಲ್ಲಿಗೆ ನಿಲ್ಲದು. ಅದು ಹುಟ್ಟುಹಾಕಿದ ಪ್ರತಿಯೊಂದು ವಿಷಫಲವೂ ಈಗ ಕಾಲ ಪಕ್ವವಾಗಿ ಉದುರುತ್ತಿದೆಯಷ್ಟೇ. ಬಹುಶಃ ಈ ಕಾರಣಗಳಿಗಾಗಿಯೇ ಈಗ ಅನೇಕರು ಪುನರಪಿ ಭಾರತ-ಪಾಕಿಸ್ಥಾನ ಒಂದಾಗುವ ವಿಚಾರಗಳನ್ನು ಗಾಳಿಯಲ್ಲಿ ಹರಿಯಬಿಟ್ಟಿದ್ದಾರೆ. ಆಶ್ಚರ್ಯವೆಂದರೆ ಈ ವಿಭಜನೆ ಒಪ್ಪದೆ`ಎಂದಾದರೊಂದು ದಿನ’ಒಂದಾಗಿಯೇ ಸಿದ್ಧವೆಂಬ ಮಾತಾಡಿದ ಹಿರಿಯರೆಲ್ಲ ಆಗಿ ಹೋಗಿದ್ದರೆ. ಅವರನ್ನು ಅಪಹಾಸ್ಯಮಾಡಿ ,ಆರೆಸ್ಸೆಸ್ಸಿಗರೆಂದು ‘ತೆಗಳಿ’,`ಕಾಮನ್ ಸೆನ್ಸ್’ ಇಲ್ಲದ ವರ್ಗಕ್ಕೆ ಇಲ್ಲವೇ ‘ಕೋಮುವಾದಿ’ ವರ್ಗಕ್ಕೆ ಸೇರಿಸಿಬಿಟ್ಟಿದ್ದರು. ಈಗ ಅವರೆಲ್ಲ ಒಬ್ಬೊಬ್ಬರಾಗಿ ಪಾಕಿಸ್ಥಾನದ ಉಜ್ವಲ ಭವಿಷ್ಯ ಭಾರತದೊಡನೆ ಬೆರೆಯುದರಲ್ಲಿದೆ’ ಯೆಂಬ ನಿರ್ಣಯವನ್ನು ತಲುಪುತ್ತಿದ್ದಾರೆ. ಆ ಕುರಿತು ವ್ಯಾವಹಾರಿಕ ಚರ್ಚೆ – ಸಲಹೆಗಳನ್ನು ನೀಡಿ ಹೊತ್ತಿಗೆಗಳೇ ಹೊರಬರುತ್ತಿವೆ.
ಇಂದಿನ ಕರಾಳ ಕರಾಚಿಯ ವಾರ್ತೆಗಳ ಹಿನ್ನಲೆಯಲ್ಲಿ ಈ ಎಲ್ಲ ವಿಚಾರಗಳೂ ತುಂಬಾ ಸ್ಮರಣೀಯವೆನಿಸುತ್ತವೆ. ಇವೆಲ್ಲವುಗಳ ಅವಲೋಕನದಿಂದ ಒಂದು ಹೊಸ ದೃಢನಿರ್ಧಾರ ರೂಪುಗೊಳ್ಳಬೇಕಾಗಿದೆ. ಆದರೆ ಅದು ವಿಭಜನೆಯ ನಿರ್ಧಾರವಲ್ಲ. ಆಗಬಾರದು ಕುಡಾ.
ಭಾರತ ಪಾಕಿಸ್ಥಾನ ಒಂದಾಗುವುದಕ್ಕೆ ಮಾರ್ಗೋಪಾಯಗಳನ್ನು ತೆರೆದಿಡಲಾಗುತ್ತಿದೆ. `ನಮಗೀರ್ವರಿಗೂ ಒಂದೇ ಸೈನ್ಯ ಬಲ ನಿರ್ಮಿತಿಯಾಗಲಿ’-ನಮ್ಮ ಗಡಿ ಸಮಸ್ಯೆ ಕಳೆಯುತ್ತದೆ,ಉತ್ತರದ ಗಡಿಗಳು ಭದ್ರಗೊಳ್ಳುತ್ತವೆ-ಹೀಗೆ ನಮ್ಮ ಸುರಕ್ಷೆಯ ಸೂತ್ರವಿದು. ‘ಒಂದೇ ನಾಣ್ಯದ ಚಲಾವಣೆ’-ಎರಡನೇಯ ಘಟ್ಟದಲ್ಲಿ ನಮ್ಮ ವ್ಯವಹಾರಗಳು ಸುಗಮಗೊಳ್ಳುವ ವ್ಯವಸ್ಥೆಯಿದು. ಕೊನೆಯದಾಗಿ`ಒಂದೇ ಸಂವಿದಾನವಿರಲಿ’-ಬಹುಶಃ ಅಲ್ಲಿಗೆ ಎಂದೋ ಕಳೆದು ಹೋಗಿದ್ದ ಸೋದರಮನೆ ಸೇರಿದಂತೆ, ಎಂದೋ ಒಡೆದಿದ್ದ ದೇಶ ಒಂದಾಗುವ ಕಾರ್ಯ ಕೈಗೂಡಿದಂತೆ.
1945ರ ಹೊತ್ತಿಗೆ ಪ್ರತ್ಯೇಕತೆಯ ಬೇಡಿಕೆ ಬಲಗೊಳ್ಳುತ್ತಿದ್ದಾಗ ಗಾಂಧೀಜಿ ಒಂದು ಪರಿಹಾರ ಸೂಚಿಸಿದರು . 1. ಮುಸ್ಲಿಮರು ಪ್ರತ್ಯೇಕ ರಾಷ್ಟ್ರವೆಂದು ಹೇಳುವುದು ಸರಿಯಲ್ಲ. 2. ರಕ್ಷಣೆ- ವಿದೇಶ ವ್ಯವಹಾರಗಳನ್ನು ನೋಡಿಕೊಳ್ಳಲು ಹಿಂದುಸ್ಥಾನ-ಪಾಕಿಸ್ಥಾನಗಳ ಒಂದು ಒಕ್ಕೂಟವಿರಬೇಕು. 3.ಪಾಕಿಸ್ಥಾನವು ಸಿಂಧ, ಬಲೂಚಿಸ್ಥಾನ, ವಾಯುವ್ಯ ಗಡಿಪ್ರಾಂತ ಮತ್ತು ಪಂಜಾಬ್, ಬಂಗಾಳ, ಅಸ್ಸಾಂಗಳಲ್ಲಿಯ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಿಗೆ ಸೀಮಿತವಾಗಿರಬೇಕು. 4. ವಿಭಜನೆಯ ಮಾತೇನಿದ್ದರೂ ಸ್ವಾತಂತ್ರ್ಯಾನಂತರ.
ಈ ನಾಲ್ಕು ನಿಲವುಗಳಲ್ಲೀಗ ಮೊದಲೆರಡನ್ನು ಜಾರಿಗೊಳಸಬಹುದಾದ ಕಾಲ ಸನ್ನಿಹಿತವಾಗಿಲ್ಲವೆ? ಇವ್ವೆಲ್ಲವೂ ಇಷ್ಟು ಸುಲಭವೆಂದೇನಲ್ಲ. ನಮ್ಮ ಆಳಸರ ಜಡತ್ವ ನಮ್ಮ ಕಣ್ಣಿಗೆ ಢಾಳಾಗಿ ಹೊಡೆಯುತ್ತಿದೆ. ಹತ್ತು ಸಾರಿ ಮೂಗಿಗೆ ಪೆಟ್ಟುತಿಂದರೂ ಮತ್ತೆ `ಮಾತುಕತೆ’ಯ ಜೊಲ್ಲನ್ನೇ ಸುರಿಸುತ್ತಿದ್ದರೆ, ಪಾಕಿಸ್ಥಾನದ ಈ ದುರಂತ ದಿನಗಳಲ್ಲೂ ಕಾಶ್ಮೀರವನ್ನು ಕೈಗೆಳೆದುಕೊಳ್ಳುತ್ತಲೇ ಇದ್ದರೆ, ಅದು ಇದ್ದಂತಲ್ಲ. ಇಂಥ ಪರ್ವ ಘಳಗೆಗಳಲ್ಲಿ ಪೌರುಷಭರಿತ ರಾಷ್ಟ್ರಭಕ್ತ, ನಿಸ್ಪೃಹ ನಾಯಕರು ಆಡಳಿತದ ಸೂತ್ರ ಹಿಡಿದಿದ್ದರೇ ಸತ್ಯದ ಸಾಕ್ಷಾತ್ಕಾರ ಸುಗಮ-ಇದರಲ್ಲಿ ಉದ್ವಿಗ್ನತೆಯೇನಿಲ್ಲ.
ರಾಜಕಾರಣಿಗಳು ಸಹಸ್ರಾರು.
ರಾಜನೀತಿಜ್ಞರು ನೂರಾರು?-ಬಹಳಿಲ್ಲ
`ರಾಷ್ಟ್ರ’ನಿರ್ಮಾಣದ ಪ್ರಶ್ನೆ ಎದುರಾದಾಗಲೆಲ್ಲ ದ್ರಷ್ಟಾರರ ನುಡಿಯ ದೀಪ ದಾರಿತೋರಬೇಕು. ನಡೆಯುವವರಿಗೆ ಆ ನುಡಿದೀಪದ ದಾರಿಯಲ್ಲಿ ನಡೆಯುವ ಇಚ್ಛಾಶಕ್ತಿಬೇಕು. ಆ ದಾರಿ ತೋರುವ ಗುರಿಗೆ ತಲುಪುಲು ಕ್ರೀಯಾಶಕ್ತಿ ಬೇಕು.
ವೀರಭೋಗ್ಯಾ,ವಸುಂಧರಾ|
ಕೃಪೆ: ಅಕ್ಷಿಪಥ
ಲೇಖಕರು: ಡಾ|ಸೋಂದಾ ನಾರಾಯಣ ಭಟ್ಟ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.