ರಾಜಕೀಯ ಅಂದರೆ ಹಾಗೆ. ಇಲ್ಲಿ ಯಾರು ಏನೇ ಎಣಿಕೆ ಲೆಕ್ಕಾಚಾರಗಳನ್ನಿಟ್ಟುಕೊಂಡು ಆಟವಾಡಲು ಹೊರಡಲಿ, ಹೆಚ್ಚಿನ ಸಂದರ್ಭಗಳಲ್ಲಿ ಆ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿ ಬಿಡುತ್ತವೆ. ರಾಜಕೀಯ ಎಂಬ ಚದುರಂಗದ ಆಟದಲ್ಲಿ ಪಕ್ಷಗಳು, ರಾಜಕಾರಣಿಗಳದ್ದು ಒಂದು ಎಣಿಕೆಯಾದರೆ, ಮತದಾರರದ್ದು ಬೇರೆ ರೀತಿಯ ಲೆಕ್ಕಾಚಾರಗಳು ನಡೆಯುತ್ತಿರುತ್ತವೆ. ಕೊನೆಗೆ ಗೆಲ್ಲುವುದು ಮತದಾರ ಹಾಕಿದ ಲೆಕ್ಕಾಚಾರ ಮಾತ್ರ.
ಇದಕ್ಕೆ ಸ್ಪಷ್ಟ ನಿದರ್ಶನ ಈ ಬಾರಿಯ ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆ ಎನ್ನಬಹುದೇನೋ. ನಮ್ಮ ರಾಜಕೀಯ ಚಿಂತನೆಗಳನ್ನು ಹೊರಗಿಟ್ಟು ಈ ಚುನಾವಣಾ ಪೂರ್ವ ಲೆಕ್ಕಾಚಾರ, ಚುನಾವಣೆಯ ಲೆಕ್ಕಾಚಾರ, ಚುನಾವಣೋತ್ತರ ಲೆಕ್ಕಾಚಾರಗಳನ್ನಿಟ್ಟುಕೊಂಡು ಗಮನಿಸುವುದಾದರೆ, ಮತದಾರ ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿದ್ದಾನೆ ಎಂಬುದು ಸ್ಪಷ್ಟ.
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಈ ಎರಡೂ ಕ್ಷೇತ್ರಗಳಲ್ಲಿನ ಗೆಲುವು ತಮ್ಮ ಪ್ರತಿಷ್ಠೆಯ ವಿಚಾರವಾಗಿತ್ತು ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಈ ಮೂರೂ ಪಕ್ಷಗಳು ಪರಸ್ಪರ ಕೆಸರೆರಚಾಟ, ದೂಷಣೆ, ದ್ವೇಷ ರಾಜಕಾರಣಗಳನ್ನು ಈ ಉಪಚುನಾವಣೆಯಲ್ಲಿಯೂ ಎಲ್ಲಾ ಚುನಾವಣೆಗಳ ಸಂದರ್ಭಗಳಂತೆಯೂ ಮಾಡಿಕೊಂಡೇ ಬಂದಿದ್ದವು. ಕಾಂಗ್ರೆಸ್ ನಿಂದ ಕಳೆದ ಬಾರಿ ಆರ್ ಆರ್ ನಗರದಲ್ಲಿ ಗೆಲುವು ಸಾಧಿಸಿದ್ದ ಮುನಿರತ್ನ ಆ ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದವರು. ಅವರನ್ನೇ ಈ ಬಾರಿ ಬಿಜೆಪಿ ಮತ್ತೆ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಇವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ದಕ್ಷ ಪೊಲೀಸ್ ಅಧಿಕಾರಿ ದಿ. ಡಿ ಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರಿಗೆ ಮಣೆ ಹಾಕಿ ‘ಸಿಂಪತಿ’ ರಾಜಕೀಯ ನಡೆಸಲು ಎಲ್ಲಾ ಸಿದ್ಧತೆ ಮಾಡಿತ್ತು. ಇನ್ನು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಷ್ಟೇ.
ಕಾಂಗ್ರೆಸ್ ಕಣಕ್ಕಿಳಿಸಿದ ಅಭ್ಯರ್ಥಿ ಕುಸುಮಾ ತಮ್ಮ ಯಾವುದೇ ಚುನಾವಣಾ ಭಾಷಣಗಳಲ್ಲಿಯೂ ತಾವು ಹೇಗೆಲ್ಲಾ ಅಭಿವೃದ್ಧಿ ಮಾಡುವುದು ಸಾಧ್ಯ ಎಂಬುದಕ್ಕೆ ಹೆಚ್ಚು ಒತ್ತು ನೀಡಲಿಲ್ಲ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಯಾವುದೇ ಕಾಂಗ್ರೆಸ್ ನಾಯಕರು ಗೆದ್ದರೆ ತಾವೇನು ಅಭಿವೃದ್ಧಿ ಮಾಡುತ್ತೇವೆ ಎಂಬ ಬಗ್ಗೆ ಮಾತನಾಡಿದ್ದಕ್ಕಿಂತ ಹೆಚ್ಚು, ‘ಮುನಿರತ್ನ’ ಅವರ ಬಗ್ಗೆ ಅಪಪ್ರಚಾರ ಮಾಡುವುದರಲ್ಲೇ ಸಮಯ ಹರಣ ಮಾಡಿದರು. ಮುನಿರತ್ನ ಅವರನ್ನು ಭ್ರಷ್ಟ ಎಂದರು. ಹಣ ಹಂಚಿ ಓಟು ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಸೇರಿದಂತೆ ಇನ್ನೂ ಹಲವಾರು ರೀತಿಯ ಆರೋಪ ಮಾಡುತ್ತಾ ಕೆಸರೆರಚಾಟಕ್ಕೆ ಹೆಚ್ಚು ಒತ್ತು ನೀಡಿದರು. ಜೊತೆಗೆ ಕುಸುಮಾ ಅವರ ಅತ್ತೆ ಅಂದರೆ ಡಿ ಕೆ ರವಿ ಅವರ ತಾಯಿ ಅವರ ಮೊದಲ ನಿಲುವು ಮತ್ತು ಆ ಮೇಲಿನ ಬದಲಾದ (ಬದಲಾಯಿಸಲಾದ) ನಿಲುವು ಸಹ ಕಾಂಗ್ರೆಸ್ಗೆ ಮುಳುವಾಗಿ ಪರಿಣಮಿಸಿತು. ಇನ್ನೊಂದು ಮುಖ್ಯ ವೀಚಾರವೆಂದರೆ ಡಿಕೆ ರವಿ ಅವರ ಸಾವಿನ ಬಗ್ಗೆ ಜನರಲ್ಲಿರುವ ಸಂದೇಹಗಳೂ ಸಹ ಕುಸುಮಾ ಅವರನ್ನು ಜನರ ಮನೆಗೆ ತಲುಪಿಸಿದರೂ, ಮನಸ್ಸಿಗೆ ತಲುಪುವಂತೆ ಮಾಡಲಿಲ್ಲ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿ.
ಈ ನಡುವೆ ಬಿಜೆಪಿ ಗೆಲುವು ತಮ್ಮ ಪಕ್ಷದ ಅಭ್ಯರ್ಥಿಗಾದಲ್ಲಿ ತಾವೇನು ಕೆಲಸ ಮಾಡುತ್ತೇವೆ ಎಂಬುದನ್ನು ಜನರಿಗೆ ಚುನಾವಣಾ ಸಂದರ್ಭದಲ್ಲಿ ಹೇಳುವತ್ತ ಹೆಚ್ಚು ಉತ್ಸಾಹ ತೋರಿದರು. ಜೊತೆಗೆ ನಾವಿಲ್ಲಿ ಗಮನಿಸಲೇ ಬೇಕಾದ ಒಂದು ಅಂಶವೆಂದರೆ ಆರ್ಆರ್ ನಗರದಲ್ಲಿ ಈಗಾಗಲೇ ಮುನಿರತ್ನ ಅವರು ತಮ್ಮ ಹಿಡಿತ ಸಾಧಿಸಿದ್ದಾರೆ. ಅವರು ಇತರೆಲ್ಲಾ ಅಭ್ಯರ್ಥಿಗಳಿಗಿಂತ ಹೆಚ್ಚು ಜನಪ್ರಿಯರು ಎಂಬುದು. ಅಲ್ಲದೆ ಈ ಹಿಂದೆ 2 ಬಾರಿ ಕ್ಷೇತ್ರದಲ್ಲಿ ಗೆದ್ದು ಬಂದವರು. ಜೊತೆಗೆ ಜನರನ್ನು ಹೆಚ್ಚು ಸೆಳೆಯುವ ಸ್ಟಾರ್ ಕ್ಯಾಂಪೇನರ್ ಕಮಾಲ್ ಸಹ ಆರ್ಆರ್ ನಗರದಲ್ಲಿ ಕೆಲಸ ಮಾಡಿದೆ ಎಂದರೆ ತಪ್ಪಾಗಲಾರದು.
ಇನ್ನು ಬಿಜೆಪಿ ಈ ಚುನಾವಣಾ ಸಂದರ್ಭದಲ್ಲಿ ಇನ್ನೊಂದು ಪಕ್ಷವನ್ನು ದೂಷಿಸುವ ರಾಜಕೀಯದತ್ತ ಹೆಚ್ಚು ಮುಖ ಮಾಡಿಲ್ಲ ಎಂಬುದು ಸತ್ಯ. ಕಾಂಗ್ರೆಸ್ , ಜೆಡಿಎಸ್ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಾ ಬಿಜೆಪಿ ಬಗ್ಗೆ ಜನರಲ್ಲಿ ತಿರಸ್ಕಾರ ಮನೋಭಾವ ಮೂಡುವಂತೆ ಪ್ರಯತ್ನ ನಡೆಸಿದ್ದು, ಮತದಾನದ ಸಂದರ್ಭದಲ್ಲಿ ಅವರಿಗೇ ಮುಳುವಾಯಿತು ಎಂದರೂ ತಪ್ಪಲ್ಲ. ವಿರೋಧ ಪಕ್ಷಗಳ ಟೀಕೆಗೆ ಬಿಜೆಪಿ ಹೇಳುತ್ತಿದ್ದಿದ್ದು ಒಂದೇ, ಫಲಿತಾಂಶ ಬರಲಿ, ಮತದಾರರೇ ಉತ್ತರ ನೀಡುತ್ತಾರೆ ಎಂದು. ಅವರೆಲ್ಲೂ ತಾವು ಗೆದ್ದೇ ಗೆಲ್ಲುತ್ತೇವೆ ಎಂಬ ಅತಿಯಾದ ವಿಶ್ವಾಸದಲ್ಲಿ ಬೇಕಾಬಿಟ್ಟಿ ಮಾತನಾಡಲಿಲ್ಲ. ಬದಲಾಗಿ ಕ್ಷೇತ್ರದ ಜನರನ್ನು ಗೆಲ್ಲುವ ಬಗೆ ಹೇಗೆ ಎಂಬುದರತ್ತಲೇ ಹೆಚ್ಚು ಕಾರ್ಯ ಪ್ರವೃತ್ತರಾಗಿದ್ದವರು. ಜೊತೆಗೆ ಬಿಜೆಪಿಯ ಕಾರ್ಯಕರ್ತರು ಸಹ ತಮ್ಮ ಅಭ್ಯರ್ಥಿಯನ್ನು ಜನರಿಗೆ ತಲುಪಿಸುವಲ್ಲಿ ಕಂಕಣ ಕಟ್ಟಿಕೊಂಡು ಶ್ರಮಿಸಿದ ಫಲವೇ ಬಿಜೆಪಿಯ ಗೆಲುವಿಗೆ ಕಾರಣವಾಯಿತು ಎನ್ನಬಹುದು.
ಇನ್ನು ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರ ಗೆಲುವು ಸುಲಭದ ಮಾತಾಗಿರಲಿಲ್ಲ. ಏಕೆಂದರೆ ಜೆಡಿಎಸ್ ಪಾರುಪತ್ಯದ ಕ್ಷೇತ್ರ ಅದು. ಆರ್ಆರ್ ನಗರದಲ್ಲಿ ಕಾಂಗ್ರೆಸ್ ಮಾಡಿದ ಸಿಂಪತಿ ರಾಜಕಾರಣದ ತಪ್ಪನ್ನೇ ಜೆಡಿಎಸ್ ಶಿರಾದಲ್ಲಿ ಮಾಡಿತು. ಪತಿಯ ಹೆಸರು ಹೇಳಿಕೊಂಡು ಅಮ್ಮಾಜಮ್ಮ ಅವರನ್ನು ಗೆಲ್ಲಿಸಬಹುದು ಎಂಬ ಲೆಕ್ಕಾಚಾರ ಕೊನೆಗೂ ಜೆಡಿಎಸ್ ಕೈ ಹಿಡಿಯಲಿಲ್ಲ ಎಂಬುದು ಅಷ್ಟೇ ಸತ್ಯ.
ಶಿರಾದಲ್ಲಿ ಕಾಂಗ್ರೆಸ್ ತನ್ನ ಘಟಾನುಘಟಿ ನಾಯಕರಲ್ಲೊಬ್ಬರಾದ ಜಯಚಂದ್ರ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತು. ಆದರೆ ಅಲ್ಲಿಯೂ ಆರ್ಆರ್ ನಗರದಲ್ಲಿ ಮಾಡಿದ ಹಾಗೆಯೇ ಬಿಜೆಪಿ, ಜೆಡಿಎಸ್ ದೂಷಣೆಯನ್ನೇ ಮುಖ್ಯ ಅಸ್ತ್ರವನ್ನಾಗಿ ಮಾಡಿಕೊಂಡಿತು. ಆದರೆ ಬಿಜೆಪಿಯ ಇಲ್ಲಿಯೂ ತನ್ನ ಚಾಣಾಕ್ಷತನ ಪ್ರದರ್ಶನ ಮಾಡಿತು. ಅಭಿವೃದ್ಧಿಯ ಪರಮ ಗುರಿಯೊಂದಿಗೆ ಕ್ಷೇತ್ರದ ಜನರ ಮೂಲಭೂತ ಅವಶ್ಯಕತೆಗಳನ್ನು ನೆರವೇರಿಸಿಕೊಡುವ ಭರವಸೆಯನ್ನು ನೀಡಿತು. ಅಲ್ಲಿನ ಕಾರ್ಯಕರ್ತರು ಸಹ ರಾಜೇಶ್ ಗೌಡ ಅವರನ್ನು ಗೆಲ್ಲಿಸಲೇ ಬೇಕು ಎಂದು ಹಠಕ್ಕೆ ಬಿದ್ದವರಂತೆ ಶ್ರಮ ವಹಿಸಿದರು. ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ಜನ ಮನ, ಮನೆ ಮನೆಗಳಿಗೆ ತಲುಪಿಸಲು ಬೇಕಾದ ಎಲ್ಲಾ ಕೆಲಸಗಳನ್ನು ನಿರಂತರವಾಗಿ ಮಾಡಿತು. ಇವೆಲ್ಲದರ ಫಲ ಮತ್ತು ವಿಪಕ್ಷಗಳ ವೈಫಲ್ಯ, ದ್ವೇಷ ರಾಜಕಾರಣ ಬಿಜೆಪಿಯ ಅಭಿವೃದ್ಧಿಯ ಭರವಸೆಗಳ ಮುಂದೆ ಕೊಚ್ಚಿಕೊಂಡು ಹೋಯಿತು. ಕೊನೆಗೆ ಮತದಾರ ಬಿಜೆಪಿಯ ರಾಜೇಶ್ ಗೌಡ ಅವರನ್ನು ಹತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿ, ವಿಪಕ್ಷಗಳೆರಚಿದ ಕೆಸರಲ್ಲಿ ‘ಕೇಸರಿ ಕಮಲ’ ಅರಳುವಂತೆ ಮಾಡಿತು ಎಂಬುದು ಸತ್ಯ.
ಇನ್ನೂ ಹೇಳುವುದಾದರೆ ಇದೆಲ್ಲದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮತ್ವದ ದೃಷ್ಟಿಕೋನ, ಗೆಲುವಿಗೆ ಬೇಕಾದ ಕಾರ್ಯತಂತ್ರ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿವೃದ್ಧಿಯ ಆಡಳಿತ ವೈಖರಿ, ಶಿರಾ ದಲ್ಲಿ ಬಿಜೆಪಿ ನಾಯಕ ವಿಜಯೇಂದ್ರ ಅವರ ಕಮಾಲ್, ಬಿಜೆಪಿ ನಾಯಕರೆಲ್ಲರ ಒಗ್ಗಟ್ಟು, ಹೆಚ್ಚಾಗಿ ಈ ಎರಡೂ ಕ್ಷೇತ್ರಗಳಲ್ಲಿ ಯಾವುದೇ ಆಮಿಷಗಳಿಲ್ಲದೇ ದುಡಿದ ನಿಷ್ಠಾವಂತ ಕಾರಾಯಕರ್ತರ ಪ್ರಯತ್ನದ ಫಲವಾಗಿ ಬಿಜೆಪಿ ಗೆದ್ದು ಕಿಲ ಕಿಲ ನಕ್ಕಿದೆ ಎನ್ನಬಹುದು.
ಕಾಂಗ್ರೆಸ್ ಸೋಲಿಗೆ ಮತ್ತೊಂದು ಅಂಶವನ್ನು ಹೇಳುವುದಾದರೆ ಇತ್ತೀಚೆಗೆ ನಡೆದ ಬೆಂಗಳೂರು ಗಲಭೆ. ಇದಕ್ಕೂ, ಚುನಾವಣೆಗೂ ಏನು ಸಂಬಂಧ ಎಂದು ಪ್ರಶ್ನಿಸಿದರೆ, ಅದಕ್ಕೆ ಉತ್ತರ ಸರಳ. ಅವರದ್ದೇ ಪಕ್ಷದ ನಾಯಕರನ್ನು, ಅವರದ್ದೇ ಪಕ್ಷದ ಮತ್ತೊಬ್ಬ ನಾಯಕ ಸಮಾಜ ವಿರೋಧಿ ಶಕ್ತಿಗಳ ಜೊತೆಗೆ ‘ಕೈ’ ಜೋಡಿಸಿ, ಸಂಚು ನಡೆಸಿ ಮನೆ ಸುಡುತ್ತಾನೆ, ದೊಡ್ಡ ಮಟ್ಟದ ಗಲಭೆ ಸೃಷ್ಟಿಸಿ ಜನರನ್ನು ಭಯಭೀತರನ್ನಾಗಿ ಮಾಡುತ್ತಾನೆ ಎಂದರೂ ತಪ್ಪಿತಸ್ಥರ ವಿರುದ್ಧ ಸಾಕ್ಷಿಗಳಿದ್ದರೂ ಕ್ರಮ ಕೈಗೊಳ್ಳದ ಕಾಂಗ್ರೆಸ್ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಲು ಹೇಗೆ ಸಾಧ್ಯ?. ಒಮ್ಮೆ ಯೋಚಿಸಿ.
ಬಿಜೆಪಿ ಗೆಲುವಿಗೆ ಎಲ್ಲಾ ಚುನಾವಣೆಗಳಂತೆ ಈ ಬಾರಿಯೂ ಪ್ರಧಾನಿ ಮೋದಿ ಅವರ ಮೋಡಿ, ಅಮಿತ್ ಶಾ ಅವರ ರಣತಂತ್ರ ಸಹ ಬಿಜೆಪಿ ಗೆಲುವಿಗೆ ಮೆಟ್ಟಿಲಾಗಿವೆ. ಅದರ ಜೊತೆಗೆ ಕೊರೋನಾ ಸಂಕಷ್ಟದಿಂದ ಆರ್ಥಿಕ ಪರಿಸ್ಥಿತಿ ಕಂಗೆಟ್ಟಾಗಲೂ, ರಾಜ್ಯ ಎದುರಿಸಿದ ಪ್ರವಾಹ ಪರಿಸ್ಥಿತಿ, ಅನಾವೃಷ್ಟಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸಿದ ರೀತಿಯೂ ಈ ಉಪಚುನಾವಣೆಯ ಗೆಲುವಿಗೆ ಕಾರಣವಾಗಿದೆ ಎಂಬುದು ನಿಸ್ಸಂಶಯ.
ಈ ಬಾರಿಯ ಉಪಚುನಾವಣೆಯಲ್ಲಿ ಅತಿಯಾದ ವಿಶ್ವಾಸ ಇಟ್ಟುಕೊಂಡು ಲೆಕ್ಕಾಚಾರ ಹಾಕುತ್ತಿದ್ದ ಎಲ್ಲಾ ಪಕ್ಷಗಳ ಲೆಕ್ಕಾಚಾರ, ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಬಹುದು ಎಂಬುದಾಗಿ ನಡೆದ ಚುನಾವಣಾ ಸಮೀಕ್ಷೆಯ ಲೆಕ್ಕಾಚಾರ, ತಜ್ಞರ ಲೆಕ್ಕಾಚಾರ ಎಲ್ಲವೂ ಬುಡಮೇಲಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಇಲ್ಲಿ ಗೆದ್ದಿದ್ದು ಪ್ರಜಾ ಮತ, ಜನರ ಲೆಕ್ಕಾಚಾರ ಅಷ್ಟೇ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.