ವಿಧ್ವಂಸಕ ಕೃತ್ಯಗಳ ಮೂಲಕ ದೇಶದ ಸಾರ್ವಭೌಮತೆಗೆ ಧಕ್ಕೆಯುಂಟು ಮಾಡುವ, ದೇಶದ ನಾಗರಿಕರಲ್ಲಿ ಭಯ ಹುಟ್ಟಿಸುವ ಅಪರಾಧಿಗೆ ಕಠಿಣಾತಿ ಕಠಿಣ ಶಿಕ್ಷೆಯನ್ನು ನೀಡುವ ಹಕ್ಕು ನಮ್ಮ ನ್ಯಾಯಾಂಗ ವ್ಯವಸ್ಥೆ, ಸರ್ಕಾರಕ್ಕಿದೆ. ಒಬ್ಬ ಅಪರಾಧ ಎಸಗಿ 10 ವರ್ಷವಾದರು ಸರಿ, 20 ವರ್ಷವಾದರೂ ಸರಿ, ಆತ ಅಪರಾಧಿ ಎಂದು ಶೇ.100 ರಷ್ಟು ಖಚಿತವಾದಾಗ ಮಾತ್ರ ಭಾರತದ ನ್ಯಾಯ ವ್ಯವಸ್ಥೆ ಆತನಿಗೆ ಶಿಕ್ಷೆಯನ್ನು ನೀಡುತ್ತದೆ. ಅದರಲ್ಲೂ ಮರಣದಂಡನೆಯಂತಹ ಘೋರ ಶಿಕ್ಷೆಯನ್ನು ನೀಡುವಾಗ ಹಲವಾರು ಬಾರಿ ಅದನ್ನು ಪರಾಮರ್ಶೆಗೊಳಪಡಿಸಲಾಗುತ್ತದೆ. ಒಬ್ಬ ಮುಗ್ಧನನ್ನು ಗಲ್ಲಿಗೇರಿಸುವಷ್ಟು ಕ್ರೂರ ಹೃದಯ ನಮ್ಮ ನ್ಯಾಯಾಂಗಕ್ಕಿಲ್ಲ. ಈ ಸತ್ಯ ಈ ದೇಶದ ಪ್ರತಿಯೊಬ್ಬನಿಗೂ ತಿಳಿದಿದೆ.
ಆದರೂ ನೂರಾರು ಜನರ ಜೀವ ಬಲಿತೆಗೆದ ಉಗ್ರರನ್ನು ಗಲ್ಲಿಗೇರಿಸಿದಾಗ ನಮ್ಮ ದೇಶದ ಬುದ್ಧಿಜೀವಿಗಳ ಹೃದಯಾಂತರಾಳ ಮರುಗುತ್ತದೆ. ಉಗ್ರನಿಗೆ ಸಾವಿನ ದಾರಿ ತೋರಿಸಿದ್ದಕ್ಕೆ ನ್ಯಾಯಾಂಗ, ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೇಳುತ್ತದೆ. ಜಾತಿ, ಧರ್ಮಗಳ ಮಾತುಗಳು ಬರುತ್ತವೆ. ಅವರ ಕುಟುಂಬದ ಕರುಣಾಜನಕ ಕಥೆಯನ್ನು ಮಾಧ್ಯಮಗಳು ರಸವತ್ತಾಗಿ ವಿವರಿಸುತ್ತವೆ. ಇತ್ತೀಚೆಗೆ ಗಲ್ಲಿಗೇರಿದ 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮೋನ್ನನ್ನು ಗಲ್ಲಿಗೇರಿಸುವಾಗಲೂ ಇದೇ ರೀತಿಯಾಯಿತು. ಈತನಿಗಿಂತ ಮೊದಲು ಗಲ್ಲಿಗೇರಿದ್ದ ಅಜ್ಮಲ್ ಕಸಬ್, ಅಫ್ಜಲ್ ಗುರುವಿಗೂ ನಮ್ಮ ದೇಶದ ಸಾಕಷ್ಟು ಬುದ್ಧಿಜೀವಿಗಳು ಕಂಬನಿ ಮಿಡಿದಿದ್ದರು.
ಯಾಕೂಬ್ ಮುಸ್ಲಿಂ ಎಂಬ ಕಾರಣಕ್ಕಾಗಿಯೇ ಗಲ್ಲಿಗೇರಿಸಲಾಗಿದೆ ಎಂದು ಮತೀಯವಾದಿ ರಾಜಕಾರಣಿ ಅಸಾವುದ್ದೀನ್ ಓವೈಸಿ ಬಾಲಿಶತನದ ಹೇಳಿಕೆ ನೀಡಿದ್ದಾನೆ. ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಮರಣದಂಡನೆಯನ್ನೇ ನಮ್ಮ ದೇಶದಿಂದ ತೊಲಗಿಸಬೇಕು ಎಂದು ಆಗ್ರಹಿಸಿದ್ದರು. ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ‘ಯಾಕುಬ್ನನ್ನು ಗಲ್ಲಿಗೇರಿಸಲಾಗಿದೆ, ಉಗ್ರ ಆರೋಪಿಯನ್ನು ಶಿಕ್ಷಿಸುವುದರಲ್ಲಿ ಅತೀವ ತುರ್ತು ಮತ್ತು ಬದ್ಧತೆಯನ್ನು ಸರ್ಕಾರ ಮತ್ತು ನ್ಯಾಯಾಂಗ ತೋರಿದೆ’ ಎಂದು ಟ್ವೀಟ್ ಮಾಡಿದ್ದರು. ಅಣ್ಣ ಮಾಡಿದ ತಪ್ಪಿಗೆ ಯಾಕೂಬ್ ಮರಣದಂಡನೆಗೀಡಾದ ಎಂದು ಹಲವಾರು ಮಂದಿ ಮರುಕಪಟ್ಟಿದ್ದಾರೆ. ಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್, ರಾಮ್ ಜೇಠ್ಮಲಾನಿ ಸೇರಿದಂತೆ ಹಲವಾರು ಮಂದಿ ಕೊನೆ ಗಳಿಗೆಯವರೆಗೂ ಯಾಕೂಬ್ ಗಲ್ಲು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಇನ್ನೊಬ್ಬ ಸಮಾಜವಾದಿಯ ಮುಖಂಡನಂತೂ ಯಾಕುಬ್ ಪತ್ನಿಯನ್ನು ರಾಜ್ಯಸಭಾ ಸದಸ್ಯತ್ವಕ್ಕೆ ನಾಮನಿರ್ದೇಶನಗೊಳಿಸಬೇಕು ಎಂದು ತನ್ನ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ಗೆ ಪತ್ರ ಬರೆದಿದ್ದಾನೆ. ಗಂಡನನ್ನು ಕಳೆದುಕೊಂಡು ಸಂತ್ರಸ್ಥರಾಗಿರುವ ನೂರಾರು ಮುಸಲ್ಮಾನರಿಗೆ ಈಕೆ ಧ್ವನಿಯಾಗುತ್ತಾಳೆ ಎಂಬ ಕಾರಣಕ್ಕಾಗಿ ಆಕೆಗೆ ರಾಜ್ಯಸಭಾ ಸದಸ್ಯತ್ವ ನೀಡಬೇಕೆಂಬುದು ಈತನ ವಾದ. ಈ ದೇಶದಲ್ಲಿ ಹಿಂದುಳಿದ ವರ್ಗ ಎನಿಸಿಕೊಂಡಿರುವ ಮುಸ್ಲಿಂರನ್ನು ಮತ್ತು ದಲಿತರನ್ನು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಮರಣದಂಡನೆಗೊಳಪಡಿಸಲಾಗುತ್ತದೆ ಎಂಬುದಾಗಿಯೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ವಿವೇಚನೆ ಇಲ್ಲದ ಯೋಚನೆಯಿಂದ ದೇಶದ ಸಾರ್ವಭೌಮತೆಗೆ, ಭದ್ರತೆಗೆ ಆತಂಕವುಂಟಾಗುತ್ತಿದೆ ಎಂಬ ಪರಿಜ್ಞಾನವೂ ಇವರಿಗಿಲ್ಲ.
ಬಾಂಬ್ ಸ್ಫೋಟದಲ್ಲಿ ಯಾಕೂಬ್ ಕೈವಾಡವಿದೆ ಎಂದು ದೇಶದ ಅತ್ಯುನ್ನತ ನ್ಯಾಯಾಲಯವೇ ತೀರ್ಪು ನೀಡಿದೆ. ಬರೋಬ್ಬರಿ 22 ವರ್ಷಗಳ ಕಾಲ ಆತನ ವಿಚಾರಣೆ ನಡೆದಿದೆ. ತಾನು ನಿರ್ದೋಷಿ ಎಂದು ಸಾಬೀತುಪಡಿಸಲು ಆತನಿಗೆ ಬೇಕಾದ ಎಲ್ಲಾ ಅವಕಾಶವನ್ನೂ ನಮ್ಮ ನ್ಯಾಯಾಂಗ ನೀಡಿದೆ. ಆದರೂ ಆತನಿಗೆ ತನ್ನನ್ನು ತಾನು ನಿರ್ದೋಷಿ ಎಂದು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಆತನ ಪರವಾಗಿ ವಾದಿಸುವುದರಲ್ಲಿ, ಆತನ ಮರಣದಂಡನೆಯನ್ನು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ.
ನಾವು ಅರ್ಥೈಸಬೇಕಾದ ಸಂಗತಿ ಎಂದರೆ ಉಗ್ರರ ಗಲ್ಲನ್ನು ವಿರೋಧಿಸುವವರು ಯಾರೂ ಉಗ್ರರ ಕೃತ್ಯದಲ್ಲಿ ಸಂತ್ರಸ್ಥರಾದವರಲ್ಲ, ಭಯೋತ್ಪಾದನೆಯಿಂದ ನರಳಾಡಿದವರಲ್ಲ, ಸ್ಫೋಟದಲ್ಲಿ ತಮ್ಮವರನ್ನು ಕಳೆದುಕೊಂಡವರಲ್ಲ. ತಮ್ಮವರನ್ನು ವಿನಾ ಕಾರಣ ಬಲಿಪಡೆದುಕೊಂಡ ನೋವು ಇರುವವರು ಯಾರೂ ಉಗ್ರರು ಜೈಲಿನಲ್ಲಿ ತಿಂದುಂಡು ಆರಾಮವಾಗಿರಲಿ ಎಂದು ಬಯಸುವುದಿಲ್ಲ. ಇವರಿಗೆ ಉಗ್ರರು ಯಾವ ಜಾತಿ, ಧರ್ಮಕ್ಕೆ ಸೇರಿದವರು ಎಂಬುದು ಮುಖ್ಯವಲ್ಲ. ನಮ್ಮವರಿಗೆ ನ್ಯಾಯ ದೊರಕಲಿ ಎಂಬುದಷ್ಟೇ ಇವರ ಪ್ರಾರ್ಥನೆಯಾಗಿರುತ್ತದೆ. ಆದರೆ ಇದ್ಯಾವ ನೋವು ಇಲ್ಲದೇ ಭಯೋತ್ಪಾದನೆಯ ಕ್ರೂರತೆಯನ್ನು ಹೊರಗಿನಿಂದ ನೋಡಿದವರಷ್ಟೇ ಉಗ್ರರಿಗಾಗಿ ಮರುಕು ಪಡುತ್ತಾರೆ.
ಸ್ಫೋಟದಲ್ಲಿ ಸತ್ತ, ಅಂಗಾಂಗ ಕಳೆದುಕೊಂಡು ಒದ್ದಾಡುತ್ತಿರುವವರ ಬಗ್ಗೆ ಎರಡು ಹನಿ ಕಣ್ಣೀರು ಸುರಿಸದೇ ಇರುವವರು ಉಗ್ರರ ಮರಣದಂಡನೆ ವಿರೋಧಿಸುತ್ತಿದ್ದಾರೆ. ರಾಜಕಾರಣಿಗಳು, ಹೋರಾಟಗಾರರು ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಯಾಕುಬ್ಗೆ ಮರಣದಂಡನೆ ನೀಡದೆ ಆತನನ್ನು ಇನ್ನಷ್ಟು ದಿನ ಜೈಲಿನಲ್ಲಿಟ್ಟು ಸಾಕಬೇಕಿತ್ತು ಎನ್ನುವ ಇವರಿಗೆ ಈ ದೇಶದ ಜನಸಾಮಾನ್ಯನ ಭಾವನೆಗಳು ಅರ್ಥವಾಗುವುದಿಲ್ಲ. ವಿವೇಚನೆ ಇಲ್ಲದೆ ಯೋಚಿಸಿ ಉಗ್ರರನ್ನು ಸಮರ್ಥಿಸಿಕೊಳ್ಳುವ ಮುನ್ನ ಇವರು ಭಯೋತ್ಪಾದನೆ ಸಂತ್ರಸ್ಥರ ಭಾವನೆಗಳನ್ನು, ನೋವುಗಳನ್ನು ಅರ್ಥ ಮಾಡಿಕೊಳ್ಳಬೇಕು. ಭಯೋತ್ಪಾದನೆಯಂತಹ ವಿಷಯದಲ್ಲಿ ದೇಶದಲ್ಲಿ ಎಂದಿಗೂ ಒಡಕು ಮೂಡಬಾರದು. ಒಡಕು ಮೂಡಿದರೆ ನಾವು ಉಗ್ರರ ಮುಂದೆ ದುರ್ಬಲರಾಗುತ್ತೇವೆ ಎಂಬ ಅರಿವು ಇವರಿಗಿರಬೇಕಿತ್ತು.
ಈ ದೇಶ ಯಾವತ್ತೂ ಧರ್ಮದ ಆಧಾರದಲ್ಲಿ ಒಬ್ಬನಿಗೆ ಶಿಕ್ಷೆ ನೀಡುವುದಿಲ್ಲ. ಅಂತೆಯೇ ನಿರಪರಾಧಿಯನ್ನು ಗಲ್ಲಿಗೇರಿಸುವ ಪಾಪ ಕಾರ್ಯ ಮಾಡುವುದಿಲ್ಲ. ಅತ್ಯಾಚಾರಿಯ ಬಗ್ಗೆ, ಕೊಲೆಗಡುಕನ ಬಗ್ಗೆ, ಭಯೋತ್ಪಾದಕನ ಬಗ್ಗೆ ಮರುಕುಪಟ್ಟರೆ ಅದು ನಮ್ಮ ದೇಶಕ್ಕೆ ನಾವು ಮಾಡುತ್ತಿರುವ ದ್ರೋಹ. ಈ ದೇಶದಲ್ಲಿ ನಿತ್ಯ ತಮ್ಮದಲ್ಲದ ತಪ್ಪಿಗೆ ಸಾಯುತ್ತಿರುವ ಅದೆಷ್ಟೋ ಬಡಜೀವಗಳಿವೆ ಅವರಿಗಾಗಿ ಮರುಕಪಡೋಣ. ಅವರ ಪರ ಹೋರಾಡೋಣ. ವಿವೇಚನಾಯುತವಾಗಿ ಯೋಚಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.