ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವ ಜನರನ್ನು ಬಡಿದೆಬ್ಬಿಸುವ ಮಾತನಾಡಿದ ಸ್ವಾಮಿ ವಿವೇಕಾನಂದರು ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಭಾರತದ ಪರಂಪರೆಯನ್ನು, ಸಂಸ್ಕೃತಿಯನ್ನು 127 ವರ್ಷಗಳ ಹಿಂದೆಯೇ ವಿಶ್ವಕ್ಕೆ ಪರಿಚಯ ಮಾಡಿದ ವಿವೇಕಾನಂದರು ಭಾರತೀಯ ಸಮಾಜಕ್ಕೆ ಇಂದಿಗೂ ದಾರಿ ದೀಪವೇ ಆಗಿದ್ದಾರೆ. ಅವರ ತತ್ವಗಳು, ಚಿಂತನೆಗಳ ಅಡಿಯಲ್ಲಿಯೇ ಇಂದು ಭಾರತ ಸಾಗುತ್ತಿದೆ. ಅವರ ಕಲ್ಪನೆಯಂತೆ ಭಾರತವನ್ನು ವಿಶ್ವಗುರುವನ್ನಾಗಿಸುವ ಕೈಂಕರ್ಯಗಳನ್ನೂ ಇಂದಿನ ಯುವ ಸಮೂಹ ಮಾಡುವತ್ತ ಚಿತ್ತ ನೆಟ್ಟಿದೆ ಎಂದರದು ತಪ್ಪಾಗಲಾರದು. ಅವರ ತಾತ್ವಿಕ ಚಿಂತನೆಗಳು ಇಂದಿಗೂ ಜನರಿಂದ ಪಾಲಿಸಲ್ಪಡುತ್ತಿದೆ ಎಂದರೆ, ಸ್ವಾಮೀಜಿಯ ಕಾಯ ಕಾಣದೇ ಇರಬಹುದು ಆದರೆ ಅವರು ಮಾಡಿದ ಕಾಯಕ ಸಮಾಜದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದೇ ಅರ್ಥ.
ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಸೆ. 11, 1893 ರಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ ದಿನಕ್ಕೆ 127 ವರ್ಷಗಳಾಗಿವೆ. ಇಷ್ಟು ವರ್ಷಗಳ ಬಳಿಕವೂ ವಿವೇಕಾನಂದರ ಅಂದಿನ ಭಾಷಣ ಇಂದಿಗೂ ಭಾರತೀಯರ ಮನದಲ್ಲಿ ಚಿರಸ್ಥಾಯಿಯಾಗಿದೆ. ಅಂದು ವೀರ ಸನ್ಯಾಸಿ ವಿಶ್ವವನ್ನು ಉದ್ದೇಶಿಸಿ ಮಾತನಾಡಿದ ಕಂಚಿನ ನುಡಿಗಳು ಇಂದಿಗೂ ಅನುರಣಣೀಯ, ಅನುಸ್ಮರಣೀಯ ಎನ್ನಬಹುದೇನೋ. ಹಿಂದೂ ಧರ್ಮದ ಸತ್ವವನ್ನು, ಅದರ ಹಿರಿಮೆಯನ್ನು ಜಗತ್ತಿಗೆ ಸಾರಿದ, ಭಾರತದ ಅಂತಃಶಕ್ತಿಯನ್ನು, ಹಿರಿಮೆಯ ಪರಿಚಯವನ್ನು ವಿಶ್ವಕ್ಕೆ ಪರಿಚಯಿಸಿದ ವಿವೇಕಾನಂದರು ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಮೊದಲ ಹೆಜ್ಜೆ ಇಟ್ಟವರು ಎಂದೇ ಹೇಳಬಹುದಾಗಿದೆ.
ಅವರು ತಮ್ಮ ಭಾಷಣದಲ್ಲಿ, ಅಮೆರಿಕಾದಲ್ಲಿರುವ ನನ್ನ ಸಹೋದರ, ಸಹೋದರಿಯರೇ ಎಂದು ಮಾತು ಆರಂಭಿಸುವ ಮೂಲಕ ಭಾರತದ ಭ್ರಾತೃತ್ವದ ಶಕ್ತಿಯನ್ನು ಅಲ್ಲಿ ನೆರೆದಿದ್ದವರಿಗೂ ಅರ್ಥ ಮಾಡಿಸಿದವರು. ಆ ಮೂಲಕ ಸಹೋದರತ್ವದ ಶಕ್ತಿಯ ಅರಿವು ಮೂಡಿಸಿ ಎಲ್ಲರೊಳಗೂ ಒಂದು ರೀತಿಯ ಸಂಚಲನವನ್ನು ಮೂಡಿಸಿದವರು ಅವರು ಎಂದರೂ ತಪ್ಪಾಗಲಾರದು. ಜೊತೆಗೆ ಭಾರತದ ಸನಾತನ ಹಿಂದೂ ಧರ್ಮದ ಬಗ್ಗೆ ತಾತ್ಸಾರ ಮನೋಭಾವ ತಾಳಿದ್ದ ಜನರಿಗೂ, ಹಿಂದೂ ಧರ್ಮದ ಸತ್ಯ, ಸತ್ವ, ಸಾರ, ಆಳದ ಅರಿವು ಮೂಡಿಸಿ ಎಲ್ಲರೊಳಗಿನ ಅಜ್ಞಾನವನ್ನು ದೂರ ಮಾಡುವಲ್ಲಿಯೂ ವಿವೇಕಾನಂದರ ಅಂದಿನ ಮಾತುಗಳು ಕಾಲಾತೀತವಾಗಿ ಪ್ರಾಮುಖ್ಯತೆ ಪಡೆದಿದೆ ಎನ್ನಬಹುದು. ಅವರು ಅಂದು ಆಡಿದ ನುಡಿಗಳು ಇಂದಿಗೂ ಅಷ್ಟೇ ಪ್ರಸ್ತುತ ಎಂದರದು ಅತಿಶಯವಲ್ಲ.
ಹಿಂದೂ ಧರ್ಮ ಸರ್ವ ಧರ್ಮ ಸಹಿಷ್ಣುತೆ, ಎಲ್ಲರನ್ನೊಳಗೊಳ್ಳುವ ಮನೋಭಾವವನ್ನು ಹೊಂದಿರುವಂತಹದ್ದು. ಅಂತಹ ಸರ್ವಶ್ರೇಷ್ಠ ಧರ್ಮದಲ್ಲಿ ಜನ್ಮ ಪಡೆದದ್ದಕ್ಕೆ ಹೆಮ್ಮೆಯಾಗುತ್ತದೆ. ಭಾರತ ದೇಶ ವಿಶ್ವದ ಅನೇಕ ರಾಷ್ಟ್ರಗಳಿಂದ ನೋವನ್ನನುಭವಿಸಿ ಬಂದವರಿಗೆ ಆಶ್ರಯ ನೀಡಿದ ಪುಣ್ಯ ಭೂಮಿ. ಅಂತಹ ಮಣ್ಣಿನಲ್ಲಿ, ಎಲ್ಲರನ್ನೂ ಪೋಷಿಸುವ ಮನಸ್ಸುಳ್ಳ ಧರ್ಮದ ನನ್ನದೆಂದು ಹೇಳಲು ಹೆಮ್ಮೆಯಾಗುತ್ತದೆ ಎನ್ನುವ ಮೂಲಕ ದೇಶದ ಹಿರಿಮೆ, ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ ಮತ್ತು ಧರ್ಮದ ಗರಿಮೆಯನ್ನು ವಿಶ್ವದುದ್ದಗಲ ಪರಿಮಳ ಬೀರುವಂತೆ ಮಾಡಿದವರು ಸ್ವಾಮೀಜಿ ಎನ್ನಬಹುದೇನೋ.
ಇಂದಿಗೂ ನಡೆಯುತ್ತಿರುವ ಧರ್ಮಗಳ ಯುದ್ಧದ ಘೋರ ಪರಿಣಾಮವನ್ನು ಆ ಕಾಲದಲ್ಲಿಯೇ ಮನಗಂಡಿದ್ದ ವೀರ ಸನ್ಯಾಸಿ ಅಂದು ನುಡಿದ ಮಾತುಗಳು ಇಂದಿನ ಸಮಾಜಕ್ಕೂ ಕನ್ನಡಿಯಂತೆಯೇ ಹೌದು. ಈ ಭೂಮಿ ಸುಂದರವಾಗಿದೆ. ಆದರೆ ಅದರ ಸೌಂದರ್ಯದ ಮೇಲೆ ಮತಾಂಧತೆ, ಗುಂಪುಗಾರಿಕೆ, ಹಿಂಸೆ ಸೇರಿದಂತೆ ಇನ್ನೂ ಅನೇಕ ನಕಾರಾತ್ಮಕ ವಿಚಾರಗಳು ದಾಳಿ ಮಾಡಿ ಅಂದಗೆಡಿಸಿವೆ. ಇಂತಹ ರಾಕ್ಷಸತನದ ಅಂತ್ಯವಾಗಬೇಕಿದೆ. ಮಾನವತೆ ತುಂಬಬೇಕಿದೆ. ಖಡ್ಗ, ಲೇಖನಿಗಳ ಮೂಲಕ ಹರಡುತ್ತಿರುವ ಹಿಂಸೆ ದ್ವೇಷಗಳಿಗೆ, ವೈಮನಸ್ಸುಗಳಿಗೆ ಮೃತ್ಯುವಾಗಬೇಕಿದೆ. ಈ ಸಮ್ಮೇಳನದ ಮೂಲಕ ಇಂತಹ ನಕಾರಾತ್ಮಕ ವಿಚಾರಗಳಿಗೆ ಸಾವಾಗುತ್ತದೆ ಎಂದು ನಾನು ಆಶಯವನ್ನು ವ್ಯಕ್ತಪಡಿಸುತ್ತೇನೆ ಎಂಬ ಅವರ ಚಿಕಾಗೋ ಭಾಷಣದ ನುಡಿಗಳು, ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ವಿಘಟನಾ ಮನೋಭಾವಗಳಿಗೂ ಅನ್ವಯವಾಗುತ್ತದೆ. ಎಂದು ಇಂತಹ ವಿಕಾರಗಳು ಮರೆಯಾಗುವವೋ, ಅಂದು ಈ ನಾಡು ಹೆಚ್ಚು ಶಾಂತಿಯುತ, ಸತ್ವಪೂರ್ಣವಾಗುವುದು ಎಂಬುದೇ ಸ್ವಾಮೀಜಿ ಅವರ ಮಾತಿನ ತಾತ್ಪರ್ಯ.
ಅವರ ಅನಿಸಿಕೆಯಂತೆ ಭಿನ್ನ ಭಿನ್ನ ಪ್ರದೇಶಗಳಲ್ಲಿ ಜನ್ಮ ತಾಳಿದ ನದಿಗಳು, ಸೇರುವ ಕಡಲು ಒಂದೇ. ಅದರಂತೆಯೇ ಭಿನ್ನ ಅಭಿರುಚಿಗಳನ್ನು ಹೊಂದಿರುವ ಜನರು, ಬೇರೆ ಬೇರೆ ದಾರಿಯ ಪಯಣಿಗರಾದರೂ ಕೊನೆಗೆ ಸೇರುವ ಅಂತ್ಯ ಒಂದೇ. ಆದ್ದರಿಂದ ಮನುಷ್ಯನ ತಾತ್ವಿಕತೆಗಳು ಏನೇ ಇದ್ದರೂ, ಕೊನೆಗೆ ಸೇರುವುದು ಒಂದೇ ಗುರಿಯನ್ನು. ಹಾಗಾಗಿ ಬದುಕಿನುದ್ದಕ್ಕೂ ವಿಚಾರಬೇಧಗಳೇನೇ ಇದ್ದರೂ ಎಲ್ಲರನ್ನೊಳಗೊಳ್ಳುವ ಮನಸ್ಸು ನಮ್ಮಲ್ಲಿರಬೇಕು. ಎಲ್ಲರಲ್ಲಿಯೂ ಭ್ರಾತೃತ್ವದ ಬೆಸುಗೆ ಜೋಡಿಸುವ ನಿಟ್ಟಿನಲ್ಲಿ ನಮ್ಮ ಬದುಕು ಸಾಗಬೇಕು. ವಿಘಟನೆಯಿಂದ ಸಂಘಟನೆ ಅಂದರೆ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂಬುದೇ ವಿವೇಕಾನಂದರ ಆಶಯ.
ಅಂದಿನಿಂದ ಇಂದಿನವರೆಗೂ ಪ್ರಸ್ತುತ ಎನಿಸಿರುವ ವಿವೇಕಾನಂದ ಚಿಕಾಗೋ ಭಾಷಣ ಆ ಕಾಲದಲ್ಲಿ ಅತ್ಯಂತ ತೀಕ್ಷ್ಣ, ಪರಿಣಾಮಕಾರಿ ಮತ್ತು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದ ಭಾಷಣ ಎಂದರೂ ಅತಿಶಯವಲ್ಲ. ಅವರ ಮಾತಿನ ವೈಖರಿ, ಪ್ರಖರತೆ ಭಾರತವನ್ನು ವಿಶ್ವಗುರುವಾಗಿಸುವಲ್ಲಿ, ಹಿಂದೂ ಧರ್ಮದ ತಾತ್ಪರ್ಯ, ಶಕ್ತಿಯನ್ನು ಜಗತ್ತಿಗೆ ಮುಟ್ಟಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿತ್ತು. ಜೊತೆಗೆ ಒಂದು ಹೊಸ ಭಾವ ಪ್ರಪಂಚಕ್ಕೆ ಅಲ್ಲಿ ನೆರೆದಿದ್ದವರನ್ನು ತಲುಪಿಸಿತ್ತು ಎಂದು ಸಂದೇಹ ರಹಿತವಾಗಿ ಹೇಳಬಹುದು.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.