ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ. ದೇಶದ ಹೆಮ್ಮೆಯ ಹಾಕಿ ಮಾಂತ್ರಿಕ, ಅಪ್ಪಟ ದೇಶಭಕ್ತ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಭಾರತ ಸ್ವಾತಂತ್ರ್ಯವನ್ನು ಕಾಣುವ ಮೊದಲೇ ಅವರು ನಮ್ಮ ದೇಶಕ್ಕೆ ಮೂರು ಒಲಿಂಪಿಕ್ಸ್ ಪದಕಗಳನ್ನು ತಂದು ಕೊಟ್ಟಿದ್ದಾರೆ.
ಧ್ಯಾನ್ ಚಂದ್ ಜನಿಸಿದ್ದು ಆಗಸ್ಟ್ 29, 1905ರಲ್ಲಿ. ಸ್ಥಳ ಉತ್ತರ ಪ್ರದೇಶದ ಪ್ರಯಾಗ್. ಅವರ ತಂದೆ ಭಾರತೀಯ ಬ್ರಿಟಿಷ್ ಸೈನ್ಯದಲ್ಲಿ ಹವಾಲ್ದಾರರಾಗಿದ್ದರು. ಶಾಲೆಯಿಂದ ಬಹು ಬೇಗ ಹೊರ ನಡೆದ ಧ್ಯಾನ್ ಚಂದ್ ತಮ್ಮ ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು. ಕೇವಲ ಹದಿನಾರು ವರ್ಷ ಇದ್ದಾಗಲೇ ಅಂದರೆ 1922ರಲ್ಲಿ ಸೇನೆಗೆ ಸೇರಿದ ಇವರು, ಸೇನೆಗಳ ವಿವಿಧ ರೆಜಿಮೆಂಟ್ಗಳ ನಡುವೆ ಆಯೋಜನೆಗೊಳ್ಳುತ್ತಿದ್ದ ಸ್ನೇಹಪರ ಹಾಕಿ ಟೂರ್ನಮೆಂಟ್ಗಳಲ್ಲಿ ಭಾಗಿಯಾಗುತ್ತಿದ್ದರು. ಅದುವೇ ಅವರು ಅಗ್ರಗಣ್ಯ ಹಾಕಿಪಟು ಆಗಲು ಕಾರಣವಾಯಿತು.
1926ರಲ್ಲಿ ಇವರು ಭಾರತೀಯ ಹಾಕಿ ತಂಡಕ್ಕೆ ಆಯ್ಕೆ ಆಗುತ್ತಾರೆ. ಅಲ್ಲಿಂದ ಅವರು ಹಿಂದಿರುಗಿ ನೋಡಲೇ ಇಲ್ಲ.
ಹಾಕಿ ಕ್ರೀಡೆಯಲ್ಲಿ ಅವರು ಯಶಸ್ಸಿನ ಉತ್ತುಂಗವನ್ನೇ ಏರಿದ್ದಾರೆ. 1928ರಲ್ಲಿ ನೆದರ್ಲ್ಯಾಂಡ್ ಆಮ್ಸ್ಟರ್ಡ್ಯಾಮ್ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ನಲ್ಲಿ ಇವರು ಭಾರತಕ್ಕೆ ಮೊದಲ ಬಂಗಾರದ ಪದಕ ಜಯಿಸಿಕೊಟ್ಟರು. 1932 ರಲ್ಲಿ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಎರಡನೇ ಬಂಗಾರದ ಪದಕವನ್ನು ತಂದುಕೊಟ್ಟರು. ಬಳಿಕ 1936 ರಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಇವರು ಭಾರತಕ್ಕೆ 3ನೇ ಪದಕವನ್ನು ಜಯಿಸಿಕೊಟ್ಟರು.
ಧ್ಯಾನ್ ಚಂದ್ ಅವರ ಆಟದ ಮೋಡಿಗೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಕೂಡ ಮನಸೋತಿದ್ದ. ಜರ್ಮನಿಯ ಪರವಾಗಿ ಆಟವಾಡುವುದಾದರೆ ಎಲ್ಲಾ ಸವಲತ್ತುಗಳನ್ನು ಒದಗಿಸಿ ಕೊಡುವ ಭರವಸೆಯನ್ನು ಅವರಿಗೆ ನೀಡಿದ್ದ. ಆದರೆ ಅಪ್ಪಟ ದೇಶಪ್ರೇಮಿಯಾಗಿದ್ದ ಧ್ಯಾನ್ ಚಂದ್ ಅವರು ಆತನ ಮನವಿಯನ್ನು ತಿರಸ್ಕರಿಸಿ, ನಾನು ಭಾರತೀಯನಾಗಿರುವುದೇ ನನ್ನ ಹೆಮ್ಮೆ ಎಂದಿದ್ದರು.
ದೆಹಲಿಯಲ್ಲಿ ಇವರ ಹೆಸರಿನಲ್ಲಿ ರಾಜಕೀಯ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಇವರ ಗೌರವಾರ್ಥವಾಗಿ ಅಂಚೆಚೀಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಇವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಕ್ರೀಡಾದಿನವಾಗಿ ಆಚರಣೆ ಮಾಡಲಾಗುತ್ತದೆ. ಇವರ ಹೆಸರಿನಲ್ಲಿ ಪ್ರಶಸ್ತಿ ಕೂಡ ಇದೆ. ಭಾರತಕ್ಕಾಗಿ ಅಮೋಘ ಕೊಡುಗೆಯನ್ನು ನೀಡಿರುವ ಮಹಾನ್ ನಾಯಕನಿಗೆ ಎಲ್ಲಾ ರೀತಿಯ ಗೌರವಗಳನ್ನು ಭಾರತ ನೀಡಿದೆ.
ಆದರೆ ಭಾರತದಲ್ಲಿ ಪ್ರಸ್ತುತ ಹಾಕಿ ಕ್ರೀಡೆಯ ಪರಿಸ್ಥಿತಿ ಉತ್ತಮವಾಗಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಹಾಕಿ ತಂಡ ಮತ್ತೊಮ್ಮೆ ಮಿಂಚುವಂತೆ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರ ಮೇಲೂ ಇದೆ. ಹಾಕಿ ಕ್ರೀಡೆಯನ್ನು ಪುನಃಶ್ಚೇತನಗೊಳಿಸುವುದು ಮೇಜರ್ ಧ್ಯಾನಚಂದ್ ಅವರಿಗೆ ನಾವು ನೀಡುವ ಅತ್ಯುನ್ನತ ಗೌರವವಾಗಲಿದೆ. ಅಷ್ಟು ಮಾತ್ರವಲ್ಲದೆ ಭಾರತದ ಇತರ ಎಲ್ಲ ಕ್ರೀಡೆಗಳಿಗೂ ಕ್ರಿಕೆಟ್ಗೆ ಸಮಾನವಾದ ಗೌರವಾದರಗಳು ಸಿಗಬೇಕು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಮಹತ್ವದ ಸಾಧನೆಯನ್ನು ಮಾಡಬೇಕು. ಇದಕ್ಕಾಗಿ ದೇಶದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಕಾರ್ಯ ನಿರಂತರವಾಗಿ ಸಾಗಬೇಕು.
✍️ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.