ದೇಶದ ರಾಜಕೀಯ ಇತಿಹಾಸದಲ್ಲಿ ಅಜಾತಶತ್ರುವಾಗಿ, ಒಬ್ಬ ಶ್ರೇಷ್ಠ ವಾಗ್ಮಿಯಾಗಿ, ಕವಿಯಾಗಿ, ಸರ್ವಶ್ರೇಷ್ಠ ಆಡಳಿತಗಾರನಾಗಿದ್ದ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರು ಅಸ್ತಂಗತವಾದ ದಿನವಿಂದು. ಆತ್ಮನಿರ್ಭರತೆಯನ್ನು 90 ರ ದಶಕದಲ್ಲೇ ಪ್ರತಿಪಾದಿಸಿದ್ದ ಆ ಮಹಾನ್ ಚೇತನಕ್ಕೆ ನಮನಗಳು.
ದೇಶವು ಪ್ರಗತಿಪಥದಲ್ಲಿ ಮುನ್ನಡೆಯಬೇಕೆಂಬುದು ಪ್ರತಿಯೊಬ್ಬ ನಿಷ್ಠಾವಂತ ಪ್ರಜೆಯ ಮನದಿಚ್ಛೆ. ಆದರೆ ಅದನ್ನು ಸಾಕಾರಗಳಿಸಲು ಪ್ರಯತ್ನ ಪಡುವ ಮನಗಳು ವಿರಳ. ವಿರಾಳಾತಿವಿರಳ ನಾಯಕರ ಸಾಲಿನಲ್ಲಿ ವಾಜಪೇಯಿ ಅಗ್ರಜನೆನಿಸಿಕೊಳ್ಳುತ್ತಾರೆ. ಸ್ವಾವಲಂಬಿ ರಾಷ್ಟ್ರ ನಿರ್ಮಾಣವೇ ತನ್ನ ಆದ್ಯ ಗುರಿ ಎಂದು ಕಾರ್ಯೋನ್ಮುಖರಾಗಿದ್ದ ಅಟಲ್ಜಿ ರಾಜಸ್ಥಾನದ ಫೋಖ್ರಾನ್ನಲ್ಲಿ ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಜಗತ್ತು ಇಂತಹದೊಂದು ದೊಡ್ಡ ಸಾಹಸಕ್ಕೆ ಭಾರತ ಇಳಿಯಲಾರದು ಎಂದು ತಿಳಿದಿತ್ತು. ಆದರೆ ಭಾರತ ಆತ್ಮನಿರ್ಭರವಾಗುತ್ತಿದೆ ಎಂಬ ಸಂದೇಶವನ್ನು ಜಗತ್ತಿಗೆ ಅವತ್ತಿನ ದಿನಗಳಲ್ಲೇ ಅಟಲ್ಜಿ ಸಾರಿ ಹೇಳಿದ್ದರು.
ದೇಶವು ಸ್ವಾವಲಂಬಿತ ದೇಶವಾಗಬೇಕೆಂದು ವಾಜಪೇಯಿ ಸರ್ಕಾರ ತಮ್ಮ ಹಲವಾರು ಯೋಜನೆಗಳ ಮೂಲಕ ಬೀಜವನ್ನು ಬಿತ್ತಿತ್ತು. ಸ್ವಾವಲಂಬಿತ ದೇಶ, ಆತ್ಮನಿರ್ಭರ ದೇಶವಾಗಬೇಕೆಂಬ ಕನಸು ಇಂದು ನಿನ್ನೆಯದಲ್ಲ. ಶತಮಾನಗಳಿಂದಲೂ ಬಾಳಿ ಬದುಕಿದ ಹಲವಾರು ವ್ಯಕ್ತಿಗಳು ಈ ಕನಸನ್ನು ಕಂಡಿದ್ದರು. ಆದರೆ ವಾಜಪೇಯಿಯವರು ತಮ್ಮ ಸರ್ಕಾರದ ಯೋಜನೆಗಳ ಮೂಲಕ ಅದನ್ನು ಸಾಬೀತುಪಡಿಸಿದ್ದರು. ಸ್ವತಃ ಲೇಖಕರಾದ ವಾಜಪೇಯಿಯವರು ತಾವು ಬರೆದ ಲೇಖನಗಳಲ್ಲಿಯು ಭಾರತವೂ ಬಲಿಷ್ಠ ರಾಷ್ಟ್ರವಾಗುವ ಕನಸನ್ನು ಬಿತ್ತಿದ್ದರು. ಬಿತ್ತಿದಂತೆ ಬೆಳೆ ಎಂಬಂತೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್ ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತಕ್ಕೆ ಕರೆ ನೀಡಿದ್ದಾರೆ. ಅಟಲ್ಜಿ ಬಿತ್ತಿದ ಬೀಜ ಮೊಳಕೆಯೊಡೆದು ಮರವಾಗಿ, ಹೆಮ್ಮರವಾಗುತ್ತಿದೆ.
ಭಾರತದ ದಿವ್ಯಚೇತನ ಅಟಲ್ಜಿ ಅವರ ಆತ್ಮನಿರ್ಭರ ಭಾರತದ ಕನಸನ್ನು ನರೇಂದ್ರ ಮೋದಿ ಸರ್ಕಾರ ನನಸಾಗಿಸುತ್ತಿದೆ. ಜಗತ್ತಿನೆದುರು ಭಾರತ ತಲೆ ಎತ್ತಿ ನಿಲ್ಲುವ ಶಕ್ತಿಯನ್ನು ಬೆಳೆಸಿಕೊಂಡಿದೆ. ವಾಜಪೇಯಿ ಅವರು ತೋರಿದ ಹಾದಿಯಲ್ಲಿ ನಡೆದ ಭಾರತ ಜಗದ್ವಂದ್ಯವಾಗುತ್ತಿದೆ. ಪೂಜ್ಯ ವಾಜಪೇಯಿ ಅವರು ನಮ್ಮೆಲ್ಲರಲ್ಲೂ ಚಿರಸ್ಮರಣೀಯರಾಗಲಿ.
✍️ ಲಿಖಿತಾ ಜಿ. ಎನ್., ಕಲ್ಲಡ್ಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.