ಭಾರತ ಅನೇಕ ಸಂತರ ಜ್ಞಾನದ ದೀಪದಿಂದ ಬೆಳಗಿದ ನಾಡು. ಆಧ್ಯಾತ್ಮಿಕ ಲೋಕದಲ್ಲಿ ಅಜರಾಮರರಾದ ಅನೇಕ ಸಂತರಲ್ಲಿ ಸಂತ ಜ್ಞಾನೇಶ್ವರ ಅವರು ಕೂಡ ಒಬ್ಬರು. ಇವರನ್ನು ಜ್ಞಾನದೇವ ಎಂದೂ ಕರೆಯಲಾಗುತ್ತದೆ. ಹದಿಮೂರನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮೊದಲು ಭಕ್ತಿ ಚಳುವಳಿಯನ್ನು ಪ್ರಾರಂಭ ಮಾಡಿದ ಸಂತ ಕವಿ. ಸಮಾಜದಿಂದ ಬಹಿಷ್ಕೃತವಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಜ್ಞಾನೇಶ್ವರ ಭಕ್ತಿಮಾರ್ಗದ ಭಾಗವತ ಸಂಪ್ರದಾಯದ ಪ್ರತಿಪಾದಕರಲ್ಲಿ ಪ್ರಮುಖರಾಗಿದ್ದಾರೆ.
ವಿಠ್ಠಲಪಂತ ಮತ್ತು ರುಕ್ಮಿಣಿಬಾಯಿ ಕುಲಕರ್ಣಿ ಎಂಬ ಧರ್ಮನಿಷ್ಠ ದಂಪತಿಗಳ ನಾಲ್ಕು ಮಕ್ಕಳಲ್ಲಿ ಎರಡನೆಯವರಾಗಿ ಇವರು ಜನಿಸಿದರು. ಸಾಮಾಜಿಕ ಬಹಿಷ್ಕಾರದ ಕಾರಣ ಬಾಕಿ ಬ್ರಾಹ್ಮಣ ಮಕ್ಕಳೊಂದಿಗೆ ಪಾಠಶಾಲೆಗಳಲ್ಲಿ ಕಲಿಯುವ ಅವಕಾಶದಿಂದ ವಂಚಿತರಾದರು ಜ್ಞಾನೇಶ್ವರರು ಮತ್ತು ಅವರ ಒಡಹುಟ್ಟಿದವರು. ಆದರೂ ಜ್ಞಾನ ಸಂಪಾದನೆಯಲ್ಲಿ ಅವರು ಹಿಂದುಳಿಯಲಿಲ್ಲ. ಆಧ್ಯಾತ್ಮಿಕತೆಯಲ್ಲಿ ಅವರು ಮೇರು ಪರ್ವತ ಎನಿಸಿಕೊಂಡರು.
ಜ್ಞಾನೇಶ್ವರನ ಜೀವನ ಮತ್ತು ಕೃತಿಗಳ ಬಗೆಗಿನ ಕಥೆಗಳು ಇಂದಿಗೂ ಮಹಾರಾಷ್ಟ್ರದಲ್ಲಿ ಮನೆಮಾತಾಗಿವೆ. ಶ್ರೀಕೃಷ್ಣನ ದಿವ್ಯಜ್ಞಾನವನ್ನು (ಭಗವದ್ಗೀತೆ)ಸರಳೀಕೃತ ರೂಪದಲ್ಲಿ ಜ್ಞಾನೇಶ್ವರಿಯ ಮೂಲಕ ಜನಸಾಮಾನ್ಯರಿಗೆ ಅವರದೇ ಭಾಷೆಯಾದ ಮರಾಠಿಯಲ್ಲಿ ತಿಳಿದುಕೊಳ್ಳಲು ಅನುವು ಮಾಡಿದ ಜ್ಞಾನೇಶ್ವರನನ್ನು ಸಾಕ್ಷಾತ್ ದೇವರಂತೆ ಪೂಜಿಸುವವರೂ ಅನೇಕರಿದ್ದಾರೆ. ಜ್ಞಾನೇಶ್ವರರ ಕೃತಿಗಳ ಭಾಗಗಳನ್ನು ಮಹಾರಾಷ್ಟ್ರದ ಮಕ್ಕಳು ಪಠ್ಯಪುಸ್ತಕಗಳಲ್ಲಿ ಅಭ್ಯಾಸ ಮಾಡುತ್ತಾರೆ. ಜ್ಞಾನೇಶ್ವರ ಮತ್ತು ಅವರ ತಂಗಿ ಮುಕ್ತಾ ರಚಿಸಿದ ಗೀತೆಗಳು ಮಹಾರಾಷ್ಟ್ರದಲ್ಲಿ ಜನಪ್ರಿಯವಾಗಿವೆ.
ಸಂತ ಜ್ಞಾನೇಶ್ವರನ ಕೃತಿಗಳಲ್ಲಿ ವಿದ್ವತ್ತೂ , ಕಾವ್ಯ ಸೌಂದರ್ಯವೂ ಕಾಣಬರುತ್ತದೆ. ಅವರು ರಚಿಸಿದ ಮಹತ್ವದ ಕೃತಿಗಳೆಂದರೆ ಭಾವಾರ್ಥ ದೀಪಿಕಾ ಅಥವಾ ಜ್ಞಾನೇಶ್ವರಿ. ಭಗವದ್ಗೀತೆಯ ಮೇಲಿನ ಭಾಷ್ಯ. ಮರಾಠಿಯಲ್ಲಿದೆ. ಭಾಗವತ ಪಂಥದವರ (ಅಥವಾ ವಾರಕರಿ ಪಂಥದವರ) ಮೂರು ಮುಖ್ಯ ಗ್ರಂಥಗಳಲ್ಲಿ ಇದು ಒಂದು. ಸರಿಸುಮಾರು ಒಂದು ಸಾವಿರ ಅಭಂಗಗಳನ್ನು (ಮರಾಠೀ ಭಕ್ತಿಗೀತೆಗಳು) ಇವರು ರಚಿಸಿದ್ದಾರೆ. ಇವುಗಳಲ್ಲಿ 28 ಹರಿಪಥವೆಂದು ಪ್ರಸಿದ್ಧವಾಗಿವೆ. ಅಮೃತಾನುಭವ (ಆಥವಾ ಚಿದ್ವಿಲಾಸವಾದ) ಗ್ರಂಥದಲ್ಲಿ ಅವರು ತನ್ನ ತತ್ವವನ್ನು ವಿವರಿಸಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಪಾವನ ಪರ್ವದಂದು ಸಂತ ಜ್ಞಾನೇಶ್ವರರ ಜಯಂತಿಯನ್ನು ಆಚರಿಸಲಾಗುತ್ತದೆ. ನಾಡಿಗೆ ಜ್ಞಾನದ ದೀಪ ಬೆಳಗಿಸಿದ ಅವರು, ತನ್ನ 21ನೇಯ ವಯಸ್ಸಿನಲ್ಲಿ ಸಜೀವ ಸಮಾಧಿಯ ಮೂಲಕ ದೇಹತ್ಯಾಗ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.