ಸೇವೆಗೆ ಮತ್ತೊಂದು ಹೆಸರೇ ರಾಷ್ಟ್ರೀಯ ಸ್ವಯಂಸೇವಕ ಸಂಘ. ಪ್ರವಾಹ ಬರಲಿ, ಭೂಕಂಪ ಸಂಭವಿಸಲಿ, ದುರ್ಘಟನೆಗಳು ನಡೆಯಲಿ ಮೊದಲು ಸೇವೆ ಸಲ್ಲಿಸಲು ಧಾವಿಸುವುದು ಆರ್ಎಸ್ಎಸ್ ಸ್ವಯಂಸೇವಕರು. ತಮ್ಮ ಪ್ರಾಣದ ಹಂಗು ತೊರೆದು ಸ್ವಯಂಸೇವಕರು ಅದೆಷ್ಟೋ ಘಟನೆಗಳ ಸಂದರ್ಭ ಕಾರ್ಯನಿರ್ವಹಿಸಿದ್ದಾರೆ. ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆ ಅವರದ್ದು. ಕೊರೋನಾ ಸಾಂಕ್ರಾಮಿಕದ ಈ ಸಂಕಷ್ಟದ ಸಂದರ್ಭದಲ್ಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಪ್ರಚಾರದ ಹಂಗೂ ಅವರಿಗಿಲ್ಲ. ಸಮಾಜಕ್ಕಾಗಿ ತಮ್ಮಿಂದಾದ ಸೇವೆಯನ್ನು ಸಲ್ಲಿಸುವ ಧ್ಯೇಯದೊಂದಿಗೆ ಅವರ ಸೇವೆ ನಿರಂತರವಾಗಿದೆ.
ಪ್ಲಾಸ್ಮಾ ದಾನದಿಂದ ಹಿಡಿದು ವಲಸಿಗರನ್ನು ಅವರ ತವರು ಸೇರಿಸುವವರೆಗೆ, ಮೃತರ ಅಂತ್ಯಸಂಸ್ಕಾರ ನೆರವೇರಿಸುವವರೆಗೆ ರಾಷ್ಟ್ರೀಯ ಸ್ವಯಂಸೇವಕರ ಸೇವೆ ನಡೆಯುತ್ತಲೇ ಇದೆ. ಲಾಕ್ಡೌನ್ ಸಂದರ್ಭದಲ್ಲಿ ಲಕ್ಷಾಂತರ ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟ ಹಿರಿಮೆ ಕೂಡ ಸ್ವಯಂಸೇವಕರದ್ದು.
ಕೋವಿಡ್-19ನಿಂದ ಚೇತರಿಸಿಕೊಂಡ ಸ್ವಯಂಸೇವಕರು ಯುಪಿ, ದೆಹಲಿ, ಬೆಂಗಳೂರು, ಗುವಾಹಟಿ ಮತ್ತು ಸೂರತ್ನಲ್ಲಿ ತಮ್ಮ ಪ್ಲಾಸ್ಮಾವನ್ನು ದಾನ ಮಾಡುತ್ತಿದ್ದಾರೆ, ಬಿಹಾರದಲ್ಲಿ ಹಿಂದಿರುಗಿದ ವಲಸಿಗರಿಗೆ ಆಶ್ರಯವನ್ನು ನೀಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆಹಾರ ಪ್ಯಾಕೆಟ್ಗಳನ್ನು ವಿತರಿಸುತ್ತಿದ್ದಾರೆ, ಕರ್ನಾಟಕದಲ್ಲಿ ಮುಖಗವಸುಗಳು ಮತ್ತು ಸ್ಯಾನಿಟೈಸರ್ಗಳನ್ನು ಒದಗಿಸುತ್ತಿದ್ದಾರೆ. ಕೇರಳದಲ್ಲಿ ವರ್ಚುವಲ್ ತರಗತಿಗಳನ್ನು ಪ್ರವೇಶಿಸಲು ವಿದ್ಯಾರ್ಥಿಗಳಿಗೆ ಟಿವಿ ಸೆಟ್ಗಳನ್ನು ದಾನ ಮಾಡುತ್ತಿದ್ದಾರೆ, ಛತ್ತೀಸ್ಗಢದಲ್ಲಿ ಲಾಕ್ಡೌನ್ ಸಮಯದಲ್ಲಿ ವಾಹನಗಳನ್ನು ನಿರ್ವಹಿಸುವುದು ಮತ್ತು ಮಹಾರಾಷ್ಟ್ರದಲ್ಲಿ ಕೊರೋನಾದಿಂದ ಮೃತಪಟ್ಟ ಮೃತದೇಹಗಳಿಗೆ ಅಂತಿಮ ವಿಧಿ ವಿಧಾನ ನೆರವೇರಿಸುವವರೆಗೆ ಸ್ವಯಂಸೇವಕರ ಕಾರ್ಯ ಮುಂದುವರೆದಿದೆ.
ಆರ್ಎಸ್ಎಸ್ ಮತ್ತು ಅದರ ರಾಷ್ಟ್ರವ್ಯಾಪಿ ನೆಟ್ವರ್ಕ್, ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್ಡೌನ್ ಕಾರ್ಯತಂತ್ರದಲ್ಲಿ ಒಂದು ನೈಜ ಬದಲಾವಣೆಯನ್ನು ತಂದಿದೆ. ತಳ ಮಟ್ಟದ ಶಾಖೆಯ ಚಟುವಟಿಕೆಗಳು ಈಗ ಸ್ಥಗಿತಗೊಂಡಿವೆ. ಆದರೆ ಅದರ ಬದಲಾಗಿ, ಇಡೀ ಸಂಘಟನೆಯನ್ನು ಜನರ ಸೇವೆಯತ್ತ ಮತ್ತು ಪರಿಹಾರ ಕಾರ್ಯಗಳತ್ತ ತಿರುಗಿಸಲಾಗಿದೆ.
“ಲಾಕ್ ಡೌನ್ ಸಮಯದಲ್ಲಿ, 5.07 ಲಕ್ಷ ಸ್ವಯಂಸೇವಕರು 4.66 ಕೋಟಿ ಆಹಾರ ಪ್ಯಾಕೆಟ್ಗಳನ್ನು ವಿತರಿಸಿದ್ದಾರೆ ಮತ್ತು 44.86 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಲಾಕ್ಡೌನ್ ಕೊನೆಗೊಂಡಾಗಿನಿಂದ, ನಾವು ಕಾರ್ಮಿಕರಿಗೆ ಅವರ ಉದ್ಯೋಗವನ್ನು ಮರಳಿ ಪಡೆಯಲು ಸಹಾಯ ಮಾಡುತ್ತಿದ್ದೇವೆ ”ಎಂದು ಆರ್ಎಸ್ಎಸ್ನ ಸೇವಾ ವಿಭಾಗ ಮುಖ್ಯಸ್ಥರಾದ ಪರಾಗ್ ಅಭ್ಯಾಂಕರ್ ಹೇಳುತ್ತಾರೆ.
ಅವರ ಪ್ರಕಾರ, ಲಾಕ್ಡೌನ್ ಹೇರಿದ ಒಂದು ತಿಂಗಳ ನಂತರ ಏಪ್ರಿಲ್ 26 ರಂದು “ನಮ್ಮ ಸೇವೆ ಪಕ್ಷಪಾತವಿಲ್ಲದೆ ಇರಬೇಕು. ಸೇವಾ ಒಂದು ಬಾಧ್ಯತೆಯಲ್ಲ ಆದರೆ ನಮ್ಮ ಕರ್ತವ್ಯ” ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಮನವಿಯ ಮೂಲಕ ಪರಿಹಾರ ಪ್ರಯತ್ನಗಳನ್ನು ಪ್ರಾರಂಭಿಸಲಾಯಿತು.
ಸಂಘಟನೆಯ ಪ್ರಕಾರ, ವಿಭಾಗ ಐದು ತಿಂಗಳಲ್ಲಿ 92,000 ಪರಿಹಾರ ಕೇಂದ್ರಗಳನ್ನು ನಡೆಸಿದೆ. 483 ಔಷಧ ವಿತರಣಾ ಕೇಂದ್ರಗಳು, 60,000 ಕ್ಕೂ ಹೆಚ್ಚುಕಾರ್ಯಕರ್ತರಿಂದ ರಕ್ತದಾನ ಮತ್ತು, 73.8 ಲಕ್ಷಕ್ಕೂ ಹೆಚ್ಚಿನ ಪಡಿತರ ಕಿಟ್ಗಳ ವಿತರಣೆಯನ್ನು ಆರ್ಎಸ್ಎಸ್ ನಿರ್ವಹಿಸಿದೆ.
ಬಂಗಾಳದಿಂದ ಕೇರಳದವರೆಗೆ, ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳಾದ ಸೇವಾ ಭಾರತಿ ಮತ್ತು ಭಾರತೀಯ ಮಜ್ದೂರ್ ಸಂಘದ ನಾಯಕರು, ಪರಿಹಾರ ಕಾರ್ಯಗಳತ್ತ ಹೆಚ್ಚಿನ ಗಮನವನ್ನು ನೀಡಿದ್ದಾರೆ.
ಮಹಾರಾಷ್ಟ್ರ: 6,277 ಸ್ಥಳಗಳಲ್ಲಿ 26,000 ಕ್ಕೂ ಹೆಚ್ಚು ಸ್ವಯಂಸೇವಕರಿಂದ ಸೇವೆ. 10 ಲಕ್ಷಕ್ಕೂ ಹೆಚ್ಚು ಪಡಿತರ ಕಿಟ್ಗಳು, 87 ಲಕ್ಷಕ್ಕೂ ಹೆಚ್ಚು ಊಟ ಮತ್ತು 5 ಲಕ್ಷಕ್ಕೂ ಹೆಚ್ಚು ಮುಖಗವಸುಗಳು ಮತ್ತು ಸ್ಯಾನಿಟೈಸರ್ಗಳನ್ನು ಒದಗಿಸಲಾಯಿತು. 1 ಲಕ್ಷಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿಗೆ ನೆರವು. ಶಿಬಿರಗಳಲ್ಲಿ 24,000 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಪಿಪಿಇ ಕಿಟ್ಗಳನ್ನು ಬಳಸುವ ಬಗ್ಗೆ 4,000 ಕ್ಕೂ ಹೆಚ್ಚು ಸ್ವಯಂಸೇವಕರು ಪುರಸಭೆ ಸಂಸ್ಥೆಗಳಿಂದ ತರಬೇತಿ ಪಡೆದರು. 2 ಲಕ್ಷ ಜನರಿಗೆ 1,000 ಕ್ಕೂ ಹೆಚ್ಚು ತಾತ್ಕಾಲಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸಿದರು. ಕುಟುಂಬ ಬೆಂಬಲವಿಲ್ಲದವರ ಅಂತಿಮ ವಿಧಿಗಳನ್ನು ನಡೆಸಲು 100 ಕ್ಕೂ ಹೆಚ್ಚು ಸ್ವಯಂಸೇವಕರು ಸಹಾಯ ಮಾಡಿದರು ಎಂದು ಅಲ್ಲಿನ ಆರ್ಎಸ್ಎಸ್ ಮುಖ್ಯಸ್ಥ ಉಪೇಂದ್ರ ಕುಲಕರ್ಣಿ ಹೇಳಿದರು.
ಪಶ್ಚಿಮ ಬಂಗಾಳ: 2.5 ಲಕ್ಷ ಕುಟುಂಬಗಳಿಗೆ ಆಹಾರ ಪದಾರ್ಥಗಳು, ಬೇಯಿಸಿದ ಆಹಾರ, ಮುಖಗವಸುಗಳು, ಸ್ಯಾನಿಟೈಸರ್ ಹಂಚಿಕೆ ಮಾಡಲಾಗಿದೆ. ವೈದ್ಯಕೀಯ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಆಹಾರ ಪ್ಯಾಕೆಟ್ಗಳು, ಪ್ರತಿಯೊಂದರಲ್ಲೂ 5 ಕೆಜಿ ಅಕ್ಕಿ, 1 ಕೆಜಿ ದ್ವಿದಳ ಧಾನ್ಯಗಳು, 3 ಕೆಜಿ ಆಲೂಗಡ್ಡೆ ಮತ್ತು 250-300 ಗ್ರಾಂ ಉಪ್ಪು ಮತ್ತು ಅಡುಗೆ ಎಣ್ಣೆಯನ್ನು ವಾರಕ್ಕೊಮ್ಮೆ ವಿತರಿಸಲಾಗಿದೆ. ಈ ಗುಂಪು ವಲಸೆ ಕಾರ್ಮಿಕರಿಗಾಗಿ 80 ಕ್ಕೂ ಹೆಚ್ಚು ಶಿಬಿರಗಳನ್ನು ಮತ್ತು ವೈದ್ಯಕೀಯ ಸಹಾಯವಾಣಿಗಳನ್ನು ತೆರೆಯಿತು ಎಂದು ದಕ್ಷಿಣ ಬಂಗಾಳದ ಕಾರ್ಯದರ್ಶಿ ಜಿಷ್ಣು ಬಸು ಹೇಳಿದರು.
ಬಿಹಾರ: ವಿಶೇಷ ರೈಲುಗಳಲ್ಲಿ ಹಿಂದಿರುಗಿದ ವಲಸಿಗರಿಗೆ ನಾವು ಆಹಾರ ಪ್ಯಾಕೆಟ್ಗಳು ಮತ್ತು ಬಾಟಲಿ ನೀರನ್ನು ಒದಗಿಸಿದ್ದೇವೆ. ನಮ್ಮ ಸ್ವಯಂಸೇವಕರು ಮುಖಗವಸುಗಳು, ಸ್ಯಾನಿಟೈಸರ್ಗಳು ಮತ್ತು ಆಹಾರ ಧಾನ್ಯಗಳನ್ನು ಸಹ ವಿತರಿಸಿದ್ದಾರೆ.
ರಾಜಸ್ಥಾನ: ಪಡಿತರ ಮತ್ತು ಆಹಾರ ಪ್ಯಾಕೆಟ್ಗಳ ವಿತರಣೆ, ಮುಖಗವಸುಗಳನ್ನು ಸಿದ್ಧಪಡಿಸುವುದು, ವಲಸಿಗರಿಗೆ ಆಶ್ರಯ ಮತ್ತು ರಕ್ತದಾನ ಶಿಬಿರಗಳು ಅಯೋಜಿಸಲಾಗಿದೆ. ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಸಣ್ಣ ಉದ್ಯಮಗಳು ಮತ್ತು ರೈತರ ಗುಂಪುಗಳ ಮಳಿಗೆಗಳನ್ನು ಸ್ಥಾಪಿಸಲು ಸಹಾಯ ಮಾಡಲಾಗಿದೆ. ಜೈಪುರದಲ್ಲಿ, 12,600 ಕ್ಕೂ ಹೆಚ್ಚು ಕಾರ್ಮಿಕರು 22 ಲಕ್ಷಕ್ಕೂ ಹೆಚ್ಚು ಆಹಾರ ಪ್ಯಾಕೆಟ್ಗಳು, 2 ಲಕ್ಷ ಕುಟುಂಬ ಪಡಿತರ ಕಿಟ್ಗಳು ಮತ್ತು ಹೋಮಿಯೋಪತಿ ಔಷಧಿಗಳನ್ನು 52,000 ಕ್ಕೂ ಹೆಚ್ಚು ಜನರಿಗೆ ವಿತರಿಸಿದ್ದಾರೆ.
ಕರ್ನಾಟಕ: 3.17 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 8,400 ಕ್ಕೂ ಹೆಚ್ಚು ಸ್ವಯಂಸೇವಕರು 71,667 ಪಡಿತರ ಕಿಟ್ಗಳು, 1,04,377 ಆಹಾರ ಪ್ಯಾಕೆಟ್ಗಳು ಮತ್ತು 51,920 ಮುಖಗವಸುಗಳನ್ನು ವಿತರಿಸಿದ್ದಾರೆ. ಬೆಂಗಳೂರು, ಬಾಗಲಕೋಟೆ, ಮೈಸೂರು, ಮಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗಗಳಲ್ಲಿ ಆಹಾರ ಮತ್ತು ಪಡಿತರ ವಿತರಣೆಯನ್ನು ನಡೆಸಲಾಯಿತು ಮತ್ತು ರಕ್ತದಾನ ಶಿಬಿರಗಳನ್ನು ನಡೆಸಲಾಗಿದೆ.
ಕೇರಳ: ಸೇವಾ ಭಾರತಿಯ 42,000 ಸ್ವಯಂಸೇವಕರು ಆಹಾರ ಪ್ಯಾಕೆಟ್ಗಳು, ಪಡಿತರ ಕಿಟ್ಗಳು ಮತ್ತು ಔಷಧಿಗಳನ್ನು ವಿತರಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಕೋವಿಡ್ ಕೇಂದ್ರಗಳನ್ನು ರಚಿಸಲು ಸಹಾಯ ಮಾಡಿದ್ದಾರೆ ಮತ್ತು ನೈರ್ಮಲ್ಯ ಅಭಿಯಾನಗಳಲ್ಲಿ ಭಾಗವಹಿಸಿದ್ದಾರೆ. ಸೇವಾ ಭಾರತಿ ವಿದ್ಯಾರ್ಥಿಗಳಿಗೆ ವರ್ಚುವಲ್ ತರಗತಿಗಳನ್ನು ಪಡೆಯಲು ಟಿವಿ ಸೆಟ್ಗಳನ್ನು ವಿತರಿಸಿದ್ದಾರೆ. “ಇಲ್ಲಿಯವರೆಗೆ, ಕೇರಳದ 42 ಲಕ್ಷ ಕುಟುಂಬಗಳು ನಮ್ಮ ಸ್ವಯಂಪ್ರೇರಿತ ಕೆಲಸದಿಂದ ಲಾಭ ಪಡೆದಿವೆʼ ಎಂದು ಅಲ್ಲಿನ ಆರ್ಎಸ್ಎಸ್ ಮುಖಂಡ ಗೋಪಾಲಂಕುಟ್ಟಿ ಮಾಸ್ಟರ್ ಹೇಳಿದ್ದಾರೆ.
ಪ್ರಸ್ತುತ ಕೂಡ ಸ್ವಯಂಸೇವಕರ ಸೇವೆ ಮುಂದುವರೆಯುತ್ತಲೇ ಇದೆ. ಕೊರೋನಾದಿಂದ ಉದ್ಭವವಾದ ಸಮಸ್ಯೆಗಳನ್ನು ದೂರ ಮಾಡಲು ಅವಿರತವಾಗಿ ಶ್ರಮಿಸುತ್ತಲೇ ಇದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.