ಜಗತ್ತು ಕೊರೋನಾವೈರಸ್ ಸಂಕಷ್ಟದಿಂದ ನಲುಗುತ್ತಿದೆ. ನಿಯಂತ್ರಣಾ ಕ್ರಮಗಳನ್ನು ಜಾರಿಗೆ ತಂದಿದ್ದರೂ ಅಗತ್ಯಕ್ಕೆ ಬೇಕಾದಷ್ಟು ಪಿಪಿಇ ಸಾಮಗ್ರಿಗಳಿಲ್ಲದ ಕಾರಣ ಜನರು ಹೊರ ಹೋಗುವುದಕ್ಕೂ ಭಯ ಪಡಬೇಕಾದ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗ ಭಾರತದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಗತ್ಯ ಪಿಪಿಇಗಳಿಲ್ಲದೆ ವೈದ್ಯಕೀಯ ಸಿಬ್ಬಂದಿಗಳೂ ಪರದಾಡುತ್ತಿದ್ದಾರೆ. ಇನ್ನು ಕೆಲವು ಸಮಾಜ ಸೇವಕರು ಈ ಕೊರತೆ ನೀಗಿಸಲು ಹೋಂ ಮೇಡ್ ಮಾಸ್ಕ್ ತಯಾರಿಸಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ಗೊತ್ತಿರುವ ವಿಚಾರವೇ.
ಆದರೆ ಈ ವಿಚಾರದಲ್ಲಿ ಒರಿಸ್ಸಾದ ಹಳ್ಳಿಗಳಾದ ಕಂದಮಾಳ್, ಮುಂಡಿಗ, ಚಂಡೀಘರದ ಗ್ರಾಮಗಳು ಕೊರೋನಾದಿಂದ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಸಾಗುವಾನಿ ಎಲೆಗಳನ್ನು ಬಳಕೆ ಮಾಡುತ್ತಿದ್ದಾರೆ. ಸಾಗುವಾನಿ ಮರದ ಎಲೆಗಳನ್ನು ಮಾಸ್ಕ್ ಮಾಡಿ ಧರಿಸುವ ಮೂಲಕ ಪರಿಸರ ಸ್ನೇಹಿ ಮುಖಗವಸು ತಯಾರಿಸುವುದರೊಂದಿಗೆ ದೇಶದೆಲ್ಲೆಡೆ ಗ್ರಾಮಗಳ ಜನರು ಹೀಗೂ ಮಾಡುವುದು ಸಾಧ್ಯ. ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಸಮಾಜಕ್ಕೆ ಸಾಧಿಸಿ ತೋರಿಸಿದ್ದಾರೆ.
ಜಮ್ಶೆಡ್ಪುರದ ಮಹಿಳೆಯರು ಸಾಗುವಾನಿ ಮರದ ಎಲೆಗಳನ್ನು ಬಳಸಿ ಮಾಸ್ಕ್ ತಯಾರಿಸುತ್ತಾರೆ. ಈ ಮಾಸ್ಕ್ಗಳನ್ನು ಬಳಕೆ ಮಾಡುವುದರಿಂದ ಪರಿಸರದ ಮೇಲೂ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಇಲ್ಲಿನ ಜನತೆ ಮನಗಂಡಿದ್ದಾರೆ. ಈ ಹಳ್ಳಿಯ ಜನರ ಇನ್ನೊಂದು ದಿಟ್ಟ ಹೆಜ್ಜೆ ಎಂದರೆ, ಇಲ್ಲಿನ ಜನರು ಕೊರೋನಾ ಸೋಂಕಿನ ಕುರಿತಂತೆ ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಊರಿನ ತುಂಬಾ ಹಚ್ಚಿದ್ದು, ಆ ಮೂಲಕ ಜನರಲ್ಲಿ ಎಚ್ಚರ ಮೂಡಿಸುವ ಕೆಲಸ ಮಾಡಿದ್ದಾರೆ.
ಇನ್ನು ಈ ಗ್ರಾಮದ ಪ್ರತಿಯೊಬ್ಬರೂ ಲಾಕ್ಡೌನ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿದ್ದಾರೆ. ಮುಖಗವಸುಗಳನ್ನು ಬಳಕೆ ಮಾಡಿಯೇ ಅಗತ್ಯ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಮಾತ್ರವಲ್ಲದೆ ಇನ್ನೂ ಒಂದು ಹೆಜ್ಜೆ ಮುಂದಿರಿಸಿರುವ ಹಳ್ಳಿಗರು ಗ್ರಾಮದ ಹೊರ ವಲಯದಲ್ಲಿ ನೀರು, ಸೋಪು ಮತ್ತು ಒಂದು ಮಗ್ ಇಟ್ಟಿದ್ದು ಶುಚಿತ್ವಕ್ಕೂ ಮಹತ್ವ ನೀಡಿದ್ದಾರೆ. ಆ ಮೂಲಕ ಅನುಕರಣೀಯ ಕ್ರಮದ ಮೂಲಕ ಜನರು ಮೂಗಿಗೆ ಬೆರಳೇರಿಸುವಂತೆ ಮಾಡಿದ್ದಾರೆ ಎಂದರೂ ತಪ್ಪಾಗಲಾರದು.
ಭಾರತ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವದ ಎರಡನೇ ರಾಷ್ಟ್ರ. ಇಲ್ಲಿ ಇಂತಹ ಕಠಿಣ ಸಮಸ್ಯೆಗಳು ಉದ್ಭವಿಸಿದರೆ, ಅಥವಾ ಇದಕ್ಕೆ ಹೆಚ್ಚು ಮಂದಿ ಬಲಿಯಾದರೆ ಅದನ್ನು ನಿಯಂತ್ರಣ ಮಾಡುವುದು ಸುಲಭದ ಮಾತಲ್ಲ. ಇನ್ನು ಇಂತಹ ಸಂದರ್ಭಗಳಲ್ಲಿ ಸರ್ಕಾರ ನೀಡುವ ಆದೇಶಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಬದುಕುವವರೂ ಇರುತ್ತಾರೆ. ಟೀಕೆ ಮಾಡುವವರೂ ಇರುತ್ತಾರೆ. ಆದರೆ ಸಮಸ್ಯೆಯನ್ನು ಪರಿಹರಿಸಲು ನಾವೇನು ಮಾಡಬಹುದು ಎಂದು ಯೋಚಿಸುವವರು ಮತ್ತು ಅದಕ್ಕಾಗಿ ಶ್ರಮಿಸುವವರ ಸಂಖ್ಯೆ ಕಡಿಮೆ. ಇಂತಹ ಸಂದರ್ಭದಲ್ಲಿ ಒರಿಸ್ಸಾದ ಈ ಹಳ್ಳಿಗರ ನಡೆ, ತೆಗೆದುಕೊಂಡ ಮುಂಜಾಗ್ರತಾ ಕ್ರಮಕ್ಕೆ ತಲೆಬಾಗಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.