ನವದೆಹಲಿ : ಸೌದಿ ಅರೇಬಿಯಾ ಪ್ರವಾಸವನ್ನು ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಬೆಳಿಗ್ಗೆ ನವದೆಹಲಿಗೆ ಆಗಮಿಸಿದ್ದಾರೆ. ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲಾಝಿಜ್ ಅಲ್ ಸೌದ್ ಅವರ ಆಮಂತ್ರಣದ ಮೇರೆಗೆ ಮೋದಿ ಸೌದಿ ಪ್ರವಾಸ ಹಮ್ಮಿಕೊಂಡಿದ್ದರು.
ಮಂಗಳವಾರ ಸೌದಿಯಲ್ಲಿ ಫ್ಯೂಚರ್ ಇನ್ವೆಸ್ಟ್ಮೆಂಟ್ ಇನಿಶಿಯೇಟಿವ್ (ಎಫ್ಐಐ) ನಲ್ಲಿ ಭಾಗಿಯಾದ ಮೋದಿ, ವಿಶ್ವದಲ್ಲೇ ಮೂರನೇ ಅತೀ ದೊಡ್ಡ ಅದ್ಭುತ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಹೂಡಿಕೆ ಮಾಡುವಂತೆ ಜಾಗತಿಕ ಹೂಡಿಕೆದಾರರಿಗೆ ಕರೆ ನೀಡಿದ್ದಾರೆ. ಭಾರತದ ಯಾವುದೇ ನಾವೀನ್ಯ ವಲಯದಲ್ಲಿ ಹೂಡಿಕೆ ಮಾಡಿದರೂ ಅಪಾರ ಗಳಿಕೆ ಸಿಗುತ್ತದೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ.
“ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯಾಗಿದೆ. ಭಾರತದ ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿಯೂ ಸಹ ಸ್ಟಾರ್ಟ್ ಅಪ್ಗಳು ಬಂದಿವೆ. ನಮ್ಮ ಸ್ಟಾರ್ಟ್ಅಪ್ಗಳು ಜಾಗತಿಕ ಮಟ್ಟದಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿವೆ. ನಮ್ಮ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯಿಂದ ಲಾಭ ಪಡೆಯುವಂತೆ ನಾನು ಜಾಗತಿಕ ಹೂಡಿಕೆದಾರರಿಗೆ ಆಹ್ವಾನಿಸುತ್ತೇನೆ. ಯಾವುದೇ ನಾವೀನ್ಯತಾ ವಲಯದ ಹೂಡಿಕೆಯು ಹೆಚ್ಚಿನ ಲಾಭವನ್ನು ನೀಡುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ “ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಭಾರತದ ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳು ಬೆಳವಣಿಗೆಯ ಎಂಜಿನ್ಗಳಾಗಿ ಹೊರಹೊಮ್ಮಿವೆ ಮತ್ತು ಭಾರತದಲ್ಲಿ ಹೂಡಿಕೆ ಮಾಡುವ ಜಾಗತಿಕ ಕಂಪನಿಗಳಿಗೆ ನುರಿತ ಮಾನವಶಕ್ತಿಯ ಭರವಸೆ ಕೊಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಭಾವ, ಜಾಗತಿಕ ಬೆಳವಣಿಗೆಗೆ ಮೂಲಸೌಕರ್ಯದ ಮಹತ್ವ, ಮಾನವ ಸಂಪನ್ಮೂಲ ಮತ್ತು ಭವಿಷ್ಯದ ಕೆಲಸದ ಬದಲಾವಣೆ, ಪರಿಸರದ ಬಗ್ಗೆ ಸಹಾನುಭೂತಿ ಮತ್ತು ವ್ಯಾಪಾರಸ್ನೇಹಿ ಆಡಳಿತಗಳು ವಿಶ್ವದಾದ್ಯಂತ ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತವೆ ಎಂದಿದ್ದಾರೆ.
ಎಫ್ಐಐ ಅನ್ನು ಜಾಣ್ಮೆಯ ಉಪಕ್ರಮ ಎಂದು ಕರೆದ ಪ್ರಧಾನಿ, ಆರ್ಥಿಕ ವ್ಯವಸ್ಥೆಯ ಬಗ್ಗೆ ಚರ್ಚಿಸುವುದಷ್ಟೇ ಅಲ್ಲ, ವಿಶ್ವದ ಏರುತ್ತಿರುವ ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಜಾಗತಿಕ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ದಾರಿಗಳನ್ನು ಹುಡುಕುವುದು ವೇದಿಕೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. 2024 ರ ವೇಳೆಗೆ ಸಂಸ್ಕರಣೆ, ಪೈಪ್ಲೈನ್ಗಳು ಮತ್ತು ಗ್ಯಾಸ್ ಟರ್ಮಿನಲ್ಗಳಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಭಾರತ ಉದ್ದೇಶಿಸಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.