ಭಾರತ ಮತ್ತು ಪಾಕಿಸ್ಥಾನದ ನಡುವೆ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಹೊಸ ಭಾರತದ ಪರವಾದ ಅಜೆಂಡಾವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ನರೇಂದ್ರ ಮೋದಿ ಸರಕಾರದ ಮೊದಲ ಅವಧಿಯಲ್ಲಿ ಗೃಹ ಸಚಿವರಾಗಿ ಅತ್ಯಂತ ರಕ್ಷಿತ ಮತ್ತು ರಾಜತಾಂತ್ರಿಕ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದ್ದ ರಾಜನಾಥ ಸಿಂಗ್ ಅವರು, ಎರಡನೇ ಅವಧಿಯಲ್ಲಿ ರಕ್ಷಣಾ ಸಚಿವರಾಗಿ ತಮ್ಮ ಕಾರ್ಯವಿಧಾನವನ್ನು ಪರಿಸ್ಥಿತಿಗೆ ಅನುಗುಣವಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ರಾಷ್ಟ್ರದ ಹಿತಾಸಕ್ತಿಗೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅತ್ಯಂತ ಆಕ್ರಮಣಕಾರಿ ಮತ್ತು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪರಮಾಣು ದಾಳಿಯ ಬೆದರಿಕೆ ಇರಲಿ, ದುಷ್ಕೃತ್ಯಗಳ ಸಮರ್ಥನೆ ಇರಲಿ, ಭಾರತದೊಳಗೆ ಭಯೋತ್ಪಾದನೆಯನ್ನು ಹರಡುವ ಬಗೆಗಿನ ಧೋರಣೆ ಇರಲಿ, ಹೀಗೆ ಪಾಕಿಸ್ಥಾನದ ಎಲ್ಲಾ ಭಾರತ ವಿರೋಧಿ ಕೃತ್ಯಗಳನ್ನು ಕೂಡ ರಾಜನಾಥ್ ಸಿಂಗ್ ಅವರು ಮುಂಚೂಣಿಯಲ್ಲಿ ನಿಂತು ಖಂಡಿಸುತ್ತಿದ್ದಾರೆ. ಮಾತ್ರವಲ್ಲ, ಪಾಕಿಸ್ಥಾನಕ್ಕೆ ಬಲಿಷ್ಠ, ಆಕ್ರಮಣಶೀಲ ಪ್ರತ್ಯುತ್ತರಗಳನ್ನು ರವಾನೆ ಮಾಡುತ್ತಿದ್ದಾರೆ. ಪಾಕಿಸ್ಥಾನ ಆಕ್ರಮಿತ ಜಮ್ಮು ಕಾಶ್ಮೀರದ ಬಗ್ಗೆ ರಾಜನಾಥ ಸಿಂಗ್ ಅವರು ರವಾನಿಸಿರುವ ಸಂದೇಶಗಳು ಅವರ ಆಕ್ರಮಣಕಾರಿ ಮತ್ತು ಕ್ರಿಯಾಶೀಲ ಕಾರ್ಯವಿಧಾನದ ಹೊಸ ಅವತಾರಕ್ಕೆ ಹೊಸ ಉದಾಹರಣೆಯಾಗಿದೆ. ಪಂಚ ಕುಲದಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಇತ್ತೀಚಿಗೆ ಮಾತನಾಡಿದ್ದ ಅವರು, “ಒಂದು ವೇಳೆ ಪಾಕಿಸ್ಥಾನದ ಜೊತೆಗೆ ಇನ್ನು ಮುಂದೆ ಮಾತುಕತೆ ನಡೆಯುವುದಿದ್ದರೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ”ಎಂದಿದ್ದರು. ಈ ಮೂಲಕ ಕಾಶ್ಮೀರ ವಿವಾದವನ್ನು ಪಾಕಿಸ್ಥಾನ ಕೇಂದ್ರಿತ ವಿಷಯದಿಂದ ಭಾರತ ಕೇಂದ್ರಿತ ವಿಷಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅವರು ಪ್ರಯತ್ನ ಆರಂಭಿಸಿದ್ದಾರೆ ಎಂಬುದು ಖಚಿತವಾಗಿದೆ.
ಅಲ್ಲದೆ ಭಾರತದ ಪರಮಾಣು ನೀತಿಯ ಬಗೆಗಿನ ರಾಜನಾಥ್ ಸಿಂಗ್ ಅವರ ಹೇಳಿಕೆಯು ಅವರ ಬದಲಾದ ಕಾರ್ಯಶೈಲಿಯ ಮತ್ತೊಂದು ಸೂಚಕವಾಗಿದೆ. “ಇದುವರೆಗೆ ಭಾರತವು ಪರಮಾಣು ವಿಷಯದಲ್ಲಿ ಮೊದಲ ಬಳಕೆ ಇಲ್ಲ ಎಂಬ ನೀತಿಗೆ ಬದ್ಧವಾಗಿತ್ತು, ಆದರೆ ಭವಿಷ್ಯದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಭಾರತದ ನೀತಿ ಬದಲಾಗಬಹುದು” ಎಂದು ಹೇಳಿದ್ದರು. ಅವರ ಈ ಹೇಳಿಕೆ ಭಾರೀ ಸುದ್ದಿ ಮಾಡಿತ್ತು. ಬದಲಾದ ಭಾರತದ ಹೊಸ ಬದಲಾವಣೆಯ ರೂಪವನ್ನು ಜಗತ್ತಿನ ಮುಂದೆ ತೆರೆದಿಟ್ಟಿತು.
ಟ್ವೀಟ್ ಮಾಡಿದ್ದ ರಾಜನಾಥ್ ಸಿಂಗ್ ಅವರು, “ಅಟಲ್ ಬಿಹಾರಿ ವಾಜಪೇಯಿ ಅವರ ಭಾರತವನ್ನು ಪರಮಾಣು ರಾಷ್ಟ್ರವನ್ನಾಗಿಸುವ ಕನಸಿಗೆ ಸಾಕಾರ ರೂಪವನ್ನು ನೀಡಿದ ಪ್ರದೇಶ ಪೋಕ್ರಾನ್. ಆದರೆ ಭಾರತ ಪರಮಾಣು ನೀತಿ ವಿಷಯದಲ್ಲಿ ಮೊದಲ ಬಳಕೆ ಇಲ್ಲ ಎಂಬ ನೀತಿಗೆ ಬದ್ಧವಾಗಿ ನಿಂತಿದೆ. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದು ಸನ್ನಿವೇಶದ ಮೇಲೆ ಅವಲಂಬಿಸಿರುತ್ತದೆ” ಎಂದಿದ್ದರು.
ರಾಜನಾಥ್ ಸಿಂಗ್ ಅವರು ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಕ್ಷಣಾ ಉತ್ಪಾದನೆಯ ದೇಶೀಕರಣಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದ್ದಾರೆ. ಇತ್ತೀಚಿಗೆ ನಡೆದ ಇಂಡಿಯಾ ಇಂಟರ್ ನ್ಯಾಷನಲ್ ಸೆಕ್ಯೂರಿಟಿ ಎಕ್ಸ್ಪೋದಲ್ಲಿ ರಾಜನಾಥ್ ಸಿಂಗ್ ಅವರು, ಭಾರತವು ರಕ್ಷಣಾ ಪರಿಕರಗಳಿಗಾಗಿ ವಿದೇಶವನ್ನು ಅವಲಂಬಿಸುವುದನ್ನು ತಗ್ಗಿಸಬೇಕು ಎಂಬುದನ್ನು ಒತ್ತಿ ಹೇಳಿದ್ದರು. ರಕ್ಷಣಾ ಪರಿಕರಗಳನ್ನು ದೇಶಿಯವಾಗಿ ಉತ್ಪಾದಿಸಿದಾಗ ಮಾತ್ರ ಭಾರತ ಜಾಗತಿಕ ಶಕ್ತಿಯಾಗಿ ಸಾಧ್ಯ ಎಂಬುದನ್ನು ಅವರು ಪ್ರತಿಪಾದಿಸಿದ್ದರು.
“ವ್ಯವಹಾರ ಸಂಬಂಧಿತ ಪ್ರಸ್ತಾವನೆಗಳು ಸಾಕಷ್ಟಿವೆ, ರಫ್ತು ಮತ್ತು ಆಮದಿಗೆ ಸಂಬಂಧಿಸಿದ ವಿಷಯಗಳು ಸಾಕಷ್ಟಿವೆ. ಆದರೆ ಸಚಿವರುಗಳು ಇವುಗಳನ್ನು ಆಯ್ಕೆಮಾಡುವಾಗ ಅತ್ಯಂತ ಜಾಗೃತವಾಗಿರಬೇಕು ಇಲ್ಲವಾದರೆ ಕೆಲವರು ಟಾರ್ಗೆಟ್ ಮಾಡುತ್ತಾರೆ” ಎಂದಿದ್ದರು.
“ಭ್ರಷ್ಟಾಚಾರ ಆರೋಪಕ್ಕೆ ಹೆದರುವ ಸಚಿವರುಗಳು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಆದರೆ ನಾನು ಈ ಬಗ್ಗೆ ಚಿಂತೆ ಮಾಡುವುದಿಲ್ಲ. ಈ ದೇಶದ ಜನರು ಮತ್ತು ದೊಡ್ಡ ಕೈಗಾರಿಕಾ ಸಂಸ್ಥೆಗಳು ಯಾರು ಹೇಗೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ನಾನು ಯಾವ ವಿಷಯದ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ನನ್ನ ಬಾಗಿಲು ಸದಾ ತೆರೆದಿರುತ್ತದೆ. ಇದು ನಾನು ನಿಮಗೆ ನೀಡುವ ಭರವಸೆ” ಎಂದಿದ್ದರು.
ಸೇನಾಪಡೆಗಳನ್ನು ಮತ್ತು ಯೋಧರನ್ನು ಸದಾ ಪ್ರೇರೇಪಿಸುವಲ್ಲಿಯೂ ರಾಜನಾಥ್ ಸಿಂಗ್ ಮುಂಚೂಣಿಯಲ್ಲಿದ್ದಾರೆ. ಕ್ಯಾಲಿಬ್ರೆ ಮೆಷಿನ್ ಗನ್ಗಳ ಮೂಲಕ ಫೈರಿಂಗ್ ಮಾಡುವುದರಿಂದ ಹಿಡಿದು ಯುದ್ಧ ವಿಮಾನಗಳಲ್ಲಿ ಹಾರಾಡುವವರೆಗೆ ಅವರು ತಮ್ಮ ಕರ್ತವ್ಯವನ್ನು ಮರು ವಿಶ್ಲೇಷಿಸಿದ್ದಾರೆ. ಈ ಮೂಲಕ ರಕ್ಷಣಾ ಸಚಿವರುಗಳು ಕೇವಲ ಆಡಳಿತಕ್ಕೆ ಮಾತ್ರ ಸೀಮಿತವಾದವರಲ್ಲ, ಯೋಧರು ಮತ್ತು ಆಡಳಿತದ ನಡುವೆ ಸಮನ್ವಯ ಸಾಧಿಸಲು ಕೊಡುಗೆಯನ್ನು ನೀಡುವವರು ಕೂಡ ಆಗಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ರಾಜನಾಥ್ ಸಿಂಗ್ ಅವರು ಶತ್ರುಗಳಿಗೆ ಸಂದೇಶ ರವಾನಿಸುವ ರೀತಿ ಕೂಡ ನಮ್ಮ ಸೇನಾಪಡೆಯನ್ನು ಸದಾ ಪ್ರೇರೇಪಣೆ ಮಾಡುವ ಮಾದರಿಯಲ್ಲಿರುತ್ತದೆ. ಭಾರತ ವಿರೋಧಿ ಕುತಂತ್ರಗಳನ್ನು ಉತ್ತೇಜಿಸುವ ಪಾಕಿಸ್ಥಾನಕ್ಕೆ ರಾಜನಾಥ್ ಸಿಂಗ್ ಅವರು ಈಗಾಗಲೇ ಹಲವು ರೀತಿಯಲ್ಲಿ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್ ಪ್ರಾಂತ್ಯದ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಪಾಕಿಸ್ಥಾನಕ್ಕೆ ಕೌಂಟರ್ ನೀಡುವ ಉತ್ಸಾಹವನ್ನು ಅವರು ಈಗಾಗಲೇ ತೋರ್ಪಡಿಸಿದ್ದಾರೆ.
ವಿಜಯದಶಮಿಯಂದು ಫ್ರಾನ್ಸಿನಲ್ಲಿ ಅವರು ರಫೆಲ್ ಯುದ್ಧವಿಮಾನವನ್ನು ಸ್ವೀಕರಿಸಿ ಭಾರತೀಯ ಸೇನೆಗೆ ಅದನ್ನು ಸೇರ್ಪಡೆ ಮಾಡಿದ್ದಾರೆ. ಈ ವೇಳೆ ಅಪ್ಪಟ ಭಾರತೀಯ ಸಂಸ್ಕೃತಿಯಂತೆ ಶಸ್ತ್ರ ಪೂಜೆಯನ್ನು ಅದಕ್ಕೆ ನೆರವೇರಿಸಿದ್ದಾರೆ. ಮಾತ್ರವಲ್ಲ, ವಿಮಾನದಲ್ಲಿ ಕುಳಿತು ಹಾರಾಟ ನಡೆಸಿದ್ದಾರೆ. ಈ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ.
ರಾಜನಾಥ್ ಸಿಂಗ್ ಅವರ ಈ ಹೊಸ ಅವತಾರ ಸುದೀರ್ಘ ಸಮಯದಿಂದ ಭಾರತೀಯ ರಕ್ಷಣಾ ಪಡೆಗಳ ಪ್ರಗತಿಗೆ ಅಡೆತಡೆ ಉಂಟುಮಾಡುತ್ತಿದ್ದ ತೊಡಕುಗಳನ್ನು ನಿವಾರಿಸುತ್ತಿದೆ. ಕುತಂತ್ರ ನೆರೆಹೊರೆಯ ರಾಷ್ಟ್ರ ಅತ್ಯಂತ ಆಕ್ರಮ ಶೀಲ ವರ್ತನೆಯನ್ನು ತೋರಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ನೈತಿಕ ಸ್ಥೈರ್ಯವನ್ನು ಗಟ್ಟಿಗೊಳಿಸಲು ರಾಜನಾಥ ಸಿಂಗ್ ಅವರು ತೋರಿಸುತ್ತಿರುವ ಆಕ್ರಮಣಶೀಲತೆ ಮತ್ತು ಕ್ರಿಯಾತ್ಮಕತೆ ನಿಜಕ್ಕೂ ಅನಿವಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.