ನಟೋರಿಯಸ್ ರಾಷ್ಟ್ರವಾದ ಪಾಕಿಸ್ಥಾನ ಭಾರತದ ಮೇಲೆ ಹೈಬ್ರಿಡ್ ಯುದ್ಧವನ್ನು ಸಾರಲು ದೊಡ್ಡ ಮಟ್ಟದಲ್ಲಿ ಯೋಜನೆ ಹಾಕಿಕೊಂಡಿದೆ. ಇತ್ತೀಚಿಗಷ್ಟೇ ಭಾರತದ ಮಿಲಿಟರಿ ಸಿಬ್ಬಂದಿಯನ್ನು ಅದು ಹನಿ ಟ್ರ್ಯಾಪ್ಗೆ ಒಳಪಡಿಸಲು ನಡೆಸಿದ ಪ್ರಯತ್ನವನ್ನು ಭಾರತೀಯ ಗುಪ್ತಚರ ಇಲಾಖೆ ಬಯಲು ಮಾಡಿತ್ತು. ಅದಾದ ಬೆನ್ನಲ್ಲೇ ಅದು ಕಳುಹಿಸಿದ ಡ್ರೋನ್ಗಳು ಪತ್ತೆಯಾಗಿದ್ದವು.
ಪಾಕಿಸ್ಥಾನವು ಪ್ರಸ್ತುತ ಭಾರತಕ್ಕೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಲು ಚೀನಾದ ಡ್ರೋನ್ಗಳನ್ನು ಬಳಸಲು ಆರಂಭಿಸಿದೆ. ಇತ್ತೀಚಿಗಷ್ಟೇ ಪಂಜಾಬಿನ ಅಟ್ಟಾರಿ ಗಡಿ ಸಮೀಪ ಪಾಕಿಸ್ಥಾನದಿಂದ ಕಳುಹಿಸಲ್ಪಟ್ಟ ಡ್ರೋನ್ ಅನ್ನು ಪತ್ತೆ ಮಾಡಿರುವುದು ಭಾರತೀಯ ಸೇನೆಯ ಕಣ್ಣು ತೆರೆಸಿದೆ. ಇದರಿಂದಾಗಿ ಸೇನೆಯು ಭವಿಷ್ಯದಲ್ಲಿನ ಇಂತಹ ಡ್ರೋನ್ ಬೆದರಿಕೆಯನ್ನು ಎದುರಿಸಲು ನೀಲನಕ್ಷೆಯನ್ನು ಸಿದ್ಧಪಡಿಸಲು ಆರಂಭಿಸಿದೆ.
ಡ್ರೋನ್ಗಳು ಈಗ ವಿವಿಧ ದೇಶಗಳು ಮತ್ತು ಭಯೋತ್ಪಾದಕ ಗುಂಪುಗಳು ಬಳಸುವ ಹೊಸ ಮಾದರಿಯ ಶಸ್ತ್ರಾಸ್ತ್ರವಾಗಿ ಹೊರಹೊಮ್ಮಿವೆ. ಅವುಗಳು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಗಿಂತ ಹೆಚ್ಚಿನ ಅನುಕೂಲಗಳನ್ನು ಹೊಂದಿವೆ. ಸೌದಿ ಅರಾಮ್ಕೊದ ತೈಲ ಬಾವಿಯ ಮೇಲೆ ದಾಳಿ ಮಾಡಲು ಯೆಮನ್ನ ಹೌತಿಗಳು ಇದನ್ನೇ ಬಳಕೆ ಮಾಡಿದ್ದರು, ಇದು ಜಗತ್ತಿನ ಮೇಲೆ ದೊಡ್ಡ ಮಟ್ಟದ ಪರಿಣಾಮಗಳನ್ನು ಉಂಟುಮಾಡಬಲ್ಲಂತಹ ಘಟನೆಯೂ ಆಗಿತ್ತು.
ವಿಶ್ವದ ಅತಿದೊಡ್ಡ ಕಚ್ಛಾ ತೈಲ ಸ್ಥಿರೀಕರಣ ಘಟಕದ ಮೇಲೆ ಬಂಡುಕೋರರು 10 ಡ್ರೋನ್ಗಳ ಮೂಲಕ ದಾಳಿ ನಡೆಸಿದ್ದರು. ಇದು ದಿನಕ್ಕೆ 7 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸಬಲ್ಲ ಘಟಕವಾಗಿತ್ತು. ಹೌತಿಗಳು ಯೆಮನ್ನಲ್ಲಿ ಅಂತರ್ಯುದ್ಧ ಪ್ರಾರಂಭವಾದಾಗಿನಿಂದಲೂ ಡ್ರೋನ್ಗಳನ್ನು ಬಳಸುತ್ತಿದ್ದಾರೆ. ಮೊದ ಮೊದಲು ಆಫ್-ದಿ-ಶೆಲ್ಫ್, ಹಾಬಿ-ಕಿಟ್-ಸ್ಟೈಲ್ ಡ್ರೋನ್ಗಳನ್ನು ಬಳಸುತ್ತಿದ್ದ ಅವರು ಇಂದು ಆಧುನಿಕ ಡ್ರೋನ್ ಬಳಸುತ್ತಿದ್ದಾರೆ. ಇದೀಗ ಭಾರತದ ಮೇಲೆ ಆಕ್ರಮಣ ಮಾಡಲು ಹವಣಿಸುತ್ತಿರುವ ಪಾಕಿಸ್ಥಾನವು ಹೌತಿಗಳ ಮಾರ್ಗವನ್ನೇ ಅನುಸರಿಸಲು ಮುಂದಾಗಿದೆ.
ಭಾರತವು 6 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಅಥವಾ ಅನಿಯಂತ್ರಿತ ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಹೊಂದಿದೆ ಮತ್ತು ವೈಮಾನಿಕ ವೇದಿಕೆಗಳ ಮೂಲಕ ಒಡ್ಡಲಾಗುವ ಭಯೋತ್ಪಾದನೆಯ ನಿಗ್ರಹಕ್ಕೆ ಭದ್ರತಾ ಸಂಸ್ಥೆಗಳು ಆಧುನಿಕ ಡ್ರೋನ್ ವಿರೋಧಿ ಶಸ್ತ್ರಾಸ್ತ್ರಗಳಾದ ‘ಸ್ಕೈ-ಬೇಲಿ’ ಮತ್ತು ‘ಡ್ರೋನ್ ಗನ್’ ಗಳನ್ನು ಪರಿಶೀಲನೆಗೊಳಪಡಿಸುತ್ತಿವೆ ಮತ್ತು ಅವುಗಳನ್ನು ಅಭಿವೃದ್ಧಿಪಡಿಸುತ್ತಿವೆ. ಡ್ರೋನ್ಗಳು ಉಂಟುಮಾಡುವ ಬೆದರಿಕೆಯನ್ನು ತಡೆಯಲು ಸ್ಕೈ ಬೇಲಿ, ಡ್ರೋನ್ ಗನ್, ಅಥೆನಾ, ಡ್ರೋನ್ ಕ್ಯಾಚರ್ ಮತ್ತು ಸ್ಕೈವಾಲ್ 100 ನಂತಹ ತಂತ್ರಜ್ಞಾನಗಳನ್ನು ಬಳಕೆ ಮಾಡುವ ಬಗ್ಗೆ ಕೇಂದ್ರೀಯ ಭದ್ರತಾ ಮಂಡಳಿಗಳು ಅಧಿಕೃತ ನೀಲನಕ್ಷೆಯನ್ನು ಸಿದ್ಧಪಡಿಸುತ್ತಿವೆ.
ರೇಡಿಯೊ, ಗ್ಲೋಬಲ್ ಪೊಸಿಷನ್ ಸಿಸ್ಟಮ್ ಮತ್ತು ಡ್ರೋನ್ಗಳ ನಡುವಣ ಸಿಗ್ನಲ್ ಮತ್ತು ಪೈಲಟ್ ಅನ್ನು ಜ್ಯಾಮಿಂಗ್ ಮಾಡುವ ಸಾಮರ್ಥ್ಯವನ್ನು ಡ್ರೋನ್ ಗನ್ ಹೊಂದಿದೆ. ಸ್ಕೈ ಫೆನ್ಸ್ ವ್ಯವಸ್ಥೆಯು ಹಾರಾಟದ ಹಾದಿಯನ್ನು ಜಾಮ್ ಮಾಡಲು ವಿವಿಧ ಸಿಗ್ನಲ್ ಧ್ವಂಸಕವನ್ನು ಬಳಸುತ್ತದೆ ಮತ್ತು ಅವುಗಳು ತನ್ನ ಗುರಿ ಮತ್ತು ಮೂಲ ಮಾದರಿಗಳನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಇತ್ತೀಚೆಗೆ ಹರಿಯಾಣದ ಬಿಎಸ್ಎಫ್ ಶಿಬಿರದಲ್ಲಿ ಇದನ್ನು ಪ್ರದರ್ಶನಕ್ಕಿಡಲಾಗಿತ್ತು. ಇದಕ್ಕಿಂತಲೂ ಹೆಚ್ಚು ಕಾರ್ಯಸಾಧ್ಯವಾದ ಪರಿಹಾರಗಳನ್ನು ಹುಡುಕಲಾಗುತ್ತಿದೆ ಮತ್ತು ಸರ್ಕಾರಕ್ಕೆ ಈ ಬಗ್ಗೆ ಶಿಫಾರಸ್ಸು ಕೂಡ ಮಾಡಲಾಗಿದೆ. ಅಡ್ವಾನ್ಸ್ಡ್ ಟೆಸ್ಟ್ ಹೈ ಎನರ್ಜಿ ಅಸೆಟ್ (ಅಥೆನಾ) ಪರಿಶೀಲನೆಯಲ್ಲಿರುವ ಮತ್ತೊಂದು ಆಯುಧವಾಗಿದ್ದು, ಇದು ಡ್ರೋನ್ ಮೇಲೆ ಹೆಚ್ಚಿನ ಶಕ್ತಿಯ ಲೇಸರ್ ಕಿರಣವನ್ನು ಹಾರಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ, ಇದರ ಪರಿಣಾಮವಾಗಿ ಡ್ರೋನ್ ಗಾಳಿಯಲ್ಲಿ ನಾಶವಾಗುತ್ತದೆ.
ಕಳೆದ ವಾರ ಪಂಜಾಬ್ನಲ್ಲಿ ಎರಡನೇ ಡ್ರೋನ್ ವಶಪಡಿಸಿಕೊಳ್ಳಲಾಗಿದೆ. ರಾಜ್ಯ ಪೊಲೀಸರು ಬಂಧಿಸಿರುವ ನಾಲ್ವರಲ್ಲಿ ಒಬ್ಬರು ನೀಡಿದ ಮಾಹಿತಿಯ ಆಧಾರದ ಮೇಲೆ ಹಾನಿಗೊಳಗಾಗಿದ್ದ ಡ್ರೋನ್ ಅನ್ನು ಮಹಾವಾ ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಪಾಕಿಸ್ಥಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ನೊಂದಿಗೆ ಕೈಜೋಡಿಸಿರುವ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (KZF) ನ ಭಯೋತ್ಪಾದಕ ಘಟಕದವರು ಎಂದು ಆರೋಪಿಸಲಾಗಿದೆ. ಪಂಜಾಬ್ ಪೊಲೀಸರು ಐದು ಎಕೆ -47 ರೈಫಲ್ಗಳು, 16 ನಿಯತಕಾಲಿಕೆಗಳು ಮತ್ತು 472 ಮದ್ದುಗುಂಡುಗಳು, ನಾಲ್ಕು ಚೀನೀ ನಿರ್ಮಿತ 30 ಬೋರ್ ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿದ್ದರಿಂದ ಈ ಡ್ರೋನ್ಗಳೂ ಹೆಚ್ಚು ಸಾಮರ್ಥ್ಯವುಳ್ಳದ್ದು ಮತ್ತು ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ಸಾಗಿಸಬಲ್ಲದ್ದು ಎಂಬುದು ತಿಳಿದು ಬಂದಿದೆ. ಒಂಬತ್ತು ಕೈ ಗ್ರೆನೇಡ್ಗಳು, ಅವುಗಳ ಪೂರಕ ಸಾಧನಗಳು, ಐದು ಉಪಗ್ರಹ ಫೋನ್ಗಳು, ಎರಡು ಮೊಬೈಲ್ ಫೋನ್ಗಳು, ಎರಡು ವೈರ್ಲೆಸ್ ಸೆಟ್ಗಳು ಮತ್ತು 10 ಲಕ್ಷ ರೂ.ಗಳ ಮುಖಬೆಲೆಯ ನಕಲಿ ಕರೆನ್ಸಿಯನ್ನು ಕೂಡ ಡ್ರೋನ್ನಿಂದ ವಶಪಡಿಸಿಕೊಳ್ಳಲಾಗಿದೆ.
ಪಾಕಿಸ್ಥಾನವು ಭಾರತದ ವಿರುದ್ಧ ಹೈಬ್ರಿಡ್ ಯುದ್ಧವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವುದರಿಂದ ಡ್ರೋನ್ಗಳ ಮೂಲಕ ಎದುರಾಗುವ ವೈಮಾನಿಕ ಬೆದರಿಕೆಯನ್ನು ಎದುರಿಸುವುದು ಭಾರತಕ್ಕೆ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನೀಲನಕ್ಷೆಯ ಸಿದ್ಧತೆ ಒಂದು ಪ್ರಮುಖ ಹೆಜ್ಜೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.