ಕಾಶ್ಮೀರದ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸಲು ಪ್ರಯತ್ನಿಸಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಸುಸ್ತಾಗಿ ಹೋಗಿದ್ದಾರೆ, ಹೀಗಾಗಿ ತಮ್ಮ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡಿದ್ದಾರೆ. ಭಾರತವು 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ ತಮ್ಮ ದೇಶದ ಕಡೆಗೆ ಕಿಂಚಿತ್ತು ಬೆಂಬಲವನ್ನು ಪಡೆಯಲು ಅವರು ವಿಫಲರಾಗಿದ್ದಾರೆ. ತಮ್ಮ ದೇಶವನ್ನು ಪ್ರತಿನಿಧಿಸಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಅವರು ಭೀಕರವಾದ, ಆಧಾರರಹಿತ ಟೀಕೆಗಳನ್ನು ಮಾಡಿದ್ದಾರೆ. ಅನಿಯಂತ್ರಿತ ಮತ್ತು ಹೆಚ್ಚು ಆಕ್ಷೇಪಾರ್ಹ ರಾಜತಾಂತ್ರಿಕ ನಡವಳಿಕೆ ಎಂದು ವಿವರಿಸಬಹುದಾದ ವರ್ತನೆಯನ್ನು ಖಾನ್ ತೋರಿಸಿದ್ದಾರೆ. ಭಾರತ ಕಾಶ್ಮೀರದಲ್ಲಿ ಕರ್ಫ್ಯೂ ಹಿಂಪಡೆಯುವ ಸಂದರ್ಭದಲ್ಲಿ ರಕ್ತದೋಕುಳಿಯೇ ನಡೆಯಲಿದೆ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ಇಮ್ರಾನ್ ಖಾನ್ ರಕ್ತದೋಕುಳಿಗಷ್ಟೇ ತಮ್ಮ ಬೆದರಿಕೆಗಳನ್ನು ಸೀಮಿತಗೊಳಿಸಲಿಲ್ಲ, ಎರಡು ಪರಮಾಣು ಸಶಸ್ತ್ರ ರಾಷ್ಟ್ರಗಳ ನಡುವಿನ ಸಂಪೂರ್ಣ ಸಂಘರ್ಷವು ಗಡಿಗಳನ್ನು ಮೀರಿ ಪ್ರತಿಧ್ವನಿಸುತ್ತದೆ ಎನ್ನುವ ಮೂಲಕ ಯುದ್ಧದ ಮಟ್ಟಿಗೂ ತಮ್ಮ ಬೆದರಿಕೆಗಳನ್ನು ವಿಸ್ತರಿಸಿದರು. “ಪಾಕಿಸ್ಥಾನಕ್ಕಿಂತ ನಾಲ್ಕು ಪಟ್ಟು ದೊಡ್ಡದಾದ ದೇಶದೊಂದಿಗೆ ಯುದ್ಧ ಪ್ರಾರಂಭವಾದರೆ, ಏನು ಆಗಬಹುದು? ಇದನ್ನೇ ನಾನು ಬಹಳಷ್ಟು ಬಾರಿ ನನ್ನನ್ನು ಕೇಳಿದ್ದೇನೆ. ಆದರೆ ನಾನು ಹೇಳ ಬಯಸುವುದೇನೆಂದರೆ, ನಾವು ಹೋರಾಡುತ್ತೇವೆ ಆದರೆ ಎರಡು ಪರಮಾಣು ರಾಷ್ಟ್ರಗಳು ಹೋರಾಡಿದಾಗ ಏನಾಗುತ್ತದೆ ಎಂದು ಯೋಚಿಸಬೇಕಾದುದು ಅಗತ್ಯ” ಎಂದಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತಕ್ಕೆ ರಫ್ತು ಮಾಡುವುದಾಗಿ ಖಾನ್ ಬಹಿರಂಗವಾಗಿಯೇ ಬೆದರಿಕೆಯನ್ನು ಹಾಕಿದ್ದಾರೆ. ಒಮ್ಮೆ ಕರ್ಫ್ಯೂ ತೆಗೆದು ಹಾಕಿದರೆ ಮತ್ತೊಂದು ದಾಳಿ ನಡೆಯುತ್ತದೆ ಎಂದು ಹೇಳುವ ಮೂಲಕ ಮುಕ್ತ ಜಿಹಾದಿ ಬೆದರಿಕೆಯನ್ನು ಅವರು ಹಾಕಿದ್ದಾರೆ.
ಇಮ್ರಾನ್ ಖಾನ್ ಅವರ ಭಾಷಣವು ಕೋಮು, ವಿಭಜಕ ಮತ್ತು ದ್ವೇಷದ ವಾಕ್ಚಾತುರ್ಯದಿಂದ ತುಂಬಿತ್ತು. ಅವರು ವಿಶ್ವದಾದ್ಯಂತ ಮುಸ್ಲಿಮರಲ್ಲಿ ಭಾರತದ ಕಹಿ ಭಾವವನ್ನು ಮೂಡಿಸಲು ಪ್ರಯತ್ನಿಸಿದ್ದಾರೆಂಬುದು ಇಲ್ಲಿ ಸ್ಪಷ್ಟವಾಗಿ ತೋರುತ್ತದೆ. ಇಮ್ರಾನ್ ಖಾನ್ ಅವರ ಸಂಕುಚಿತ ಮನಸ್ಥಿತಿಯನ್ನು ಆಕರ್ಷಿಸಿದ ಅವರು, “ಇಸ್ಲಾಮೋಫೋಬಿಯಾ ವಿಭಜನೆಗಳನ್ನು ಸೃಷ್ಟಿಸುತ್ತಿದೆ, ಹಿಜಾಬ್ ಆಯುಧವಾಗುತ್ತಿದೆ; ಒಬ್ಬ ಮಹಿಳೆ ಬಟ್ಟೆಗಳನ್ನು ತೆಗೆಯಬಹುದು ಆದರೆ ಆಕೆಯು ಹೆಚ್ಚಿನ ಬಟ್ಟೆಗಳನ್ನು ತೊಡುವಂತಿಲ್ಲ. ಇದು 9/11 ರ ನಂತರ ಪ್ರಾರಂಭವಾಯಿತು ಮತ್ತು ಕೆಲವು ಪಾಶ್ಚಿಮಾತ್ಯ ನಾಯಕರು ಇಸ್ಲಾಂ ಧರ್ಮವನ್ನು ಭಯೋತ್ಪಾದನೆಗೆ ಸಮಾನವಾಗಿ ನೋಡಿದವರಿಂದ ಇದು ಪ್ರಾರಂಭವಾಯಿತು” ಎಂದು ಅವರು ಹೇಳಿದ್ದಾರೆ.
ಇಮ್ರಾನ್ ಖಾನ್ ವಿಶ್ವಸಂಸ್ಥೆಯ ವೇದಿಕೆಯನ್ನು ಭಾರತೀಯ ಮುಸ್ಲಿಮರಲ್ಲಿ ತಮ್ಮ ದೇಶದ ಬಗ್ಗೆ ದ್ವೇಷವನ್ನು ಉಂಟುಮಾಡಲು ಮತ್ತು ಸುಳ್ಳು ಹೇಳಿಕೆಗಳನ್ನು ನೀಡಲು ಬಳಸಿಕೊಂಡರು. “ಆರ್ ಎಸ್ ಎಸ್ ಮುಸ್ಲಿಮರ ಜನಾಂಗೀಯ ಶುದ್ಧೀಕರಣವನ್ನು ನಂಬುತ್ತದೆ. ಆರ್ಎಸ್ಎಸ್ ಗೂಂಡಾಗಳು ನೂರಾರು ಮುಸ್ಲಿಮರನ್ನು ಹತ್ಯೆ ಮಾಡಿದ್ದಾರೆ. ಇದು ದುರಹಂಕಾರ. ಇದರಿಂದ ಜನರನ್ನು ಕ್ರೂರ ಕೆಲಸಗಳನ್ನು ಮಾಡಲು ಪ್ರಚೋದಿಸುತ್ತಿದೆ. ಪ್ರಧಾನಿ ಮೋದಿ ತುಸು ಕೆಲಸ ಮಾಡಿದ್ದಾರೆ. ಈ ದುರಹಂಕಾರವು ಪ್ರಧಾನಿ ಮೋದಿಯವರನ್ನು ಕುರುಡಾಗಿಸಿದೆ.” ಎಂಬ ತಮ್ಮ ಅಸಂಬದ್ಧ ಹೇಳಿಕೆಯನ್ನು ಪುಷ್ಟೀಕರಿಸಲು ಖಾನ್ ಅವರು ವಿಶ್ವಸಂಸ್ಥೆಯಲ್ಲಿ ಕಾಂಗ್ರೆಸ್ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. “ಹಿಂದಿನ ಕಾಂಗ್ರೆಸ್ ಗೃಹ ಸಚಿವರು ಆರ್ ಎಸ್ ಎಸ್ ಶಿಬಿರಗಳಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ” ಎಂದು ಅವರು ಹೇಳಿದ್ದಾರೆ.
ಆದರೆ ಭಾರತದ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯಲ್ಲಿ, ಪರಿಸರವನ್ನು ರಕ್ಷಿಸುವತ್ತ ಭಾರತದ ಪ್ರಯತ್ನಗಳು, ಭಯೋತ್ಪಾದನೆ ವಿರುದ್ಧ ವಿಶ್ವವನ್ನು ಒಗ್ಗೂಡಿಸುವ ಅಗತ್ಯತೆಯ ಬಗ್ಗೆ ಮಾತನಾಡಿದರು. ಆದರೆ ತಮ್ಮ ಭಾಷಣದಲ್ಲಿ ಪಾಕಿಸ್ಥಾನ ಅಥವಾ ಕಾಶ್ಮೀರವನ್ನು ಅವರು ಉಲ್ಲೇಖ ಮಾಡಲೇ ಇಲ್ಲ. ಮೋದಿ ನಿಜವಾದ ವಿಶ್ವ ನಾಯಕನಂತೆ ಮಾತನಾಡಿದ್ದಾರೆ. ಆದರೆ ಇಮ್ರಾನ್ ಖಾನ್ ಅವರ ಭಾಷಣವು ಮುಸ್ಲಿಮರ ಕೋಮು ಭಾವವನ್ನು ಪ್ರಚೋದಿಸುವ ಬಗ್ಗೆ, ವಿಶ್ವ ಮತ್ತು ವಿಶೇಷವಾಗಿ ಭಾರತಕ್ಕೆ ಯುದ್ಧ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಮುಕ್ತ ಬೆದರಿಕೆಗಳನ್ನು ಹಾಕುವ ಬಗ್ಗೆ, ಸುಳ್ಳು ಆರೋಪಗಳ ಬಗ್ಗೆಯೇ ಹೆಚ್ಚು ಕೇಂದ್ರಿತವಾಗಿತ್ತು. ವಿಶ್ವ ವೇದಿಕೆಯನ್ನು ಪೊಳ್ಳುತನಕ್ಕೆ ಬಳಸಿಕೊಂಡಿದ್ದು ನಿಜಕ್ಕೂ ವಿಷಾದನೀಯ. 15-20 ನಿಮಿಷಗಳ ನಿಗದಿತ ಸಮಯವನ್ನು ಅನುಸರಿಸಿ ಪ್ರಧಾನಿ ಮೋದಿ 17 ನಿಮಿಷಗಳ ಕಾಲ ಮಾತನಾಡಿದ್ದರೆ, ಇಮ್ರಾನ್ ಖಾನ್ ಸುಮಾರು ಒಂದು ಗಂಟೆ ಭಾಷಣ ಮಾಡಿದ್ದಾರೆ. ಆದರೆ ಅವರ ಭಾಷಣ ಪರಮಾಣು ಯುದ್ಧ ಮತ್ತು ರಕ್ತಪಾತದ ಬೆದರಿಕೆಗಳನ್ನು ಮೀರಿ ಆಚೆಗೆ ಹೋಗಿಯೇ ಇಲ್ಲ.
ಪಾಕಿಸ್ಥಾನದ ಪ್ರಧಾನ ಮಂತ್ರಿಯ ಭಾಷಣದಲ್ಲಿ ಕೆಲವು ಕೀವರ್ಡ್ಗಳು ಎಷ್ಟು ಬಾರಿ ಕಾಣಿಸಿಕೊಂಡಿವೆ ಎಂಬುದು ಅವರ ಭಾಷಣದ ಒಟ್ಟು ವಿಷಯದ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ನೀಡುತ್ತದೆ. ಅವರ ಭಾಷಣದಲ್ಲಿ ‘ಇಸ್ಲಾಂ’ ಅತ್ಯಂತ ಪ್ರಮುಖವಾಗಿ 70 ಬಾರಿ ಉಲ್ಲೇಖಿತಗೊಂಡಿದೆ. ಅವರು ಭಾಷಣದಲ್ಲಿ ಹೆಚ್ಚಾಗಿ ಬಳಸಿದ ಇತರ ಪದಗಳು ಕಾಶ್ಮೀರ ಮತ್ತು ಭಯೋತ್ಪಾದನೆ. ಕೊನೆಯವರೆಗೂ ಅವರ ಭಾಷಣವು ದ್ವೇಷ ಮತ್ತು ಕೋಮುವಾದಿ ದೃಷ್ಟಿಕೋನವನ್ನು ಹೊಂದಿತ್ತು. ಭಯೋತ್ಪಾದಕ ಬೆದರಿಕೆಗಳನ್ನು ನೀಡುವ ಮೂಲಕ ಕಾಶ್ಮೀರವನ್ನು ಗುರಿಯಾಗಿಸುವುದು ಅವರ ಭಾಷಣದ ಆಶಯವಾಗಿತ್ತು.
ಆದರೆ, ಪರಮಾಣು ಯುದ್ಧ, ಜಿಹಾದ್, ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದು, ಯುದ್ಧದ ಮಾತುಗಳನ್ನಾಡುವುದು, ಸುಳ್ಳು ಹೇಳುವುದು, ಮೋಸ ಮಾಡುವುದು ಮತ್ತು ಅತ್ಯುನ್ನತ ಜಾಗತಿಕ ವೇದಿಕೆಯ ದುರುಪಯೋಗದ ಆಚೆಗೂ ಜೀವನವಿದೆ ಎಂದು ಪಾಕಿಸ್ಥಾನಿಯರು ಭಾವಿಸಿದಂತಿಲ್ಲ ಎಂಬುದು ಅವರ ಭಾಷಣದಿಂದ ತಿಳಿದು ಬರುತ್ತದೆ.
ತನ್ನ ದೇಶವನ್ನು ಪ್ರತಿನಿಧಿಸುವ ಸರ್ಕಾರದ ಮುಖ್ಯಸ್ಥನೊಬ್ಬ ತನ್ನ ಹತ್ತಿರದ ನೆರೆಹೊರೆಯವರಿಗೆ ಯುದ್ಧ ಮತ್ತು ಭಯೋತ್ಪಾದನೆಯ ಬೆದರಿಕೆಯನ್ನು ಹಾಕಲು ಅತ್ಯುನ್ನತ ಜಾಗತಿಕ ವೇದಿಕೆಯನ್ನು ಬಳಸಿದ್ದಾನೆ ಎಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅಷ್ಟೇ ಅಲ್ಲ, ಇಮ್ರಾನ್ ಖಾನ್ ಅವರು ಭಾರತದಲ್ಲಿ ಮುಸ್ಲಿಮರ ವಿರುದ್ಧ ಸುಳ್ಳುಗಳನ್ನು ಹೇಳುವ ಮೂಲಕ ಮತ್ತು ಹಿಂಸಾಚಾರದ ವಿಲಕ್ಷಣ ಆರೋಪಗಳನ್ನು ಮಾಡುವ ಮೂಲಕ ಭಾರತೀಯ ಸಮಾಜದಲ್ಲಿ ಬಿರುಕುಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಇಸ್ಲಾಂ ಧರ್ಮವನ್ನು ತನ್ನ ನಿರೂಪಣೆಯ ಭಾಗವಾಗಿ ಬಳಸಿಕೊಳ್ಳುವ ಮೂಲಕ, ಖಾನ್ ಭಾರತದ ಮುಸ್ಲಿಂ ಸಮುದಾಯದಲ್ಲಿ ಭ್ರಮೆಯನ್ನು ಉಂಟುಮಾಡಲು ಪ್ರಯತ್ನಿಸಿದ್ದಾರೆ. ಇದನ್ನು ಎಂದಿಗೂ ಒಪ್ಪಿಕೊಳ್ಳಲಾಗುವುದಿಲ್ಲ.
ಪಾಕಿಸ್ಥಾನ ಪ್ರಧಾನಮಂತ್ರಿಗೆ ಪ್ರತಿಕ್ರಿಯಿಸಲು ಪ್ರತ್ಯುತ್ತರದ ಹಕ್ಕನ್ನು ಬಳಸಿಕೊಳ್ಳುವ ಮೂಲಕ ಭಾರತ ಸರಿಯಾಗಿಯೇ ಪ್ರತಿಕ್ರಿಯೆ ನೀಡಿದೆ. ಖಾನ್ ಅವರ ಸುಳ್ಳು, ಬೂಟಾಟಿಕೆಗಳನ್ನು ಭಾರತೀಯರು ಜಗತ್ತಿನ ಮುಂಧೆ ಬಹಿರಂಗಪಡಿಸಿದ್ದಾರೆ ಮತ್ತು ಅವರ ವಿಶ್ವಸಂಸ್ಥೆಯ ಭಾಷಣದಲ್ಲಿ ಬಳಸಲಾದ ಕೆಟ್ಟ ಪರಿಭಾಷೆಗಳು ಮತ್ತು ಪ್ರಚೋದನೆಗಳನ್ನು ದಿಟ್ಟವಾಗಿ ತಿರಸ್ಕರಿಸಿದರು.
ವಿಶ್ವಸಂಸ್ಥೆಯ ಭಾರತದ ಕಾರ್ಯದರ್ಶಿ ವಿದಿಶಾ ಮೈತ್ರಾ ಅವರು ಇಮ್ರಾನ್ ಖಾನ್ ಅವರಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದು, “ಪರಮಾಣು ಬೆದರಿಕೆಯನ್ನು ಹಾಕುವ ಮೂಲಕ ಇಮ್ರಾನ್ ಖಾನ್ ಅವರು ಆತಂಕವಾದದ ರಾಜಕಾರಣಿಯಾಗಿ ಅರ್ಹತೆ ಗಿಟ್ಟಿಸಿದ್ದಾರೆಯೇ ಹೊರತು ಉತ್ತಮ ರಾಜಕಾರಣಿಯಾಗಿ ಅಲ್ಲ” ಎಂದು ಮೈತ್ರಾ ಟೀಕಿಸಿದ್ದಾರೆ. ಲೆಫ್ಟಿನೆಂಟ್ ಬಗ್ಗೆ ಪ್ರಸ್ತಾಪಿಸಿದಾಗ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ. ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಕಗ್ಗೋಲೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಒಸಮಾ ಬಿನ್ ಲಾಡೆನ್ ನಿಮ್ಮ ನೆಲದಲ್ಲಿ ಇರಲಿಲ್ಲ ಎಂಬುದಾಗಿ ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.
“ಮುಖ್ಯವಾಹಿನಿಯ ಭಯೋತ್ಪಾದನೆ ಮತ್ತು ದ್ವೇಷದ ಭಾಷಣವನ್ನು ಮೈಗೂಡಿಸಿಕೊಂಡಿರುವ ಪಾಕಿಸ್ಥಾನ ಮಾನವ ಹಕ್ಕುಗಳ ಹೊಸ ಚಾಂಪಿಯನ್ ಆಗಲು ಪ್ರಯತ್ನಿಸುತ್ತಿದೆ. ಆ ದೇಶ 1947ರಲ್ಲಿ ಶೇ.23ರಷ್ಟಿದ್ದ ತನ್ನ ಅಲ್ಪಸಂಖ್ಯಾತ ಜನಸಂಖ್ಯೆಯನ್ನು ಇಂದು ಶೇ.3ಕ್ಕೆ ಇಳಿಸಿದೆ” ಮೈತ್ರಾ ಪಾಕಿಸ್ಥಾನವನ್ನು ಕೆಣಕಿದ್ದಾರೆ.
ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿರುವ 130 ಭಯೋತ್ಪಾದಕರು ಹಾಗೂ 25 ಭಯೋತ್ಪಾದಕ ಸಂಘಟನೆಗಳು ಪಾಕಿಸ್ಥಾನದಲ್ಲಿರುವ ಸತ್ಯವನ್ನು ಒಪ್ಪಿಕೊಳ್ಳುತ್ತೀರಾ? ನ್ಯೂಯಾರ್ಕ್ನಲ್ಲಿದ್ದ ಪಾಕಿಸ್ಥಾನದ ಪ್ರತಿಷ್ಠಿತ ಹಬೀಬ್ ಬ್ಯಾಂಕ್ ಮುಚ್ಚಲು ಕಾರಣವೇನೆಂಬುದನ್ನು ತಿಳಿಸುತ್ತೀರಾ? ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿರುವ ಅಲ್ ಖೈದಾ ಮತ್ತು ಐಎಸ್ಐಎಸ್ ಭಯೋತ್ಪಾದಕರಿಗೆ ಪಿಂಚಣಿ ನೀಡುತ್ತಿರುವುದನ್ನು ಪಾಕ್ ಅಂಗೀಕರಿಸುತ್ತದೆಯೇ? ಎಫ್ಎಟಿಎಫ್ ವಿಧಿಸಿದ್ದ 27 ಷರತ್ತುಗಳ ಪೈಕಿ 20 ಷರತ್ತುಗಳನ್ನು ಉಲ್ಲಂಘಿಸಿರುವುದನ್ನು ಪಾಕಿಸ್ಥಾನ ನಿರಾಕರಿಸುತ್ತದೆಯೇ? ಎಂಬ ತೀಕ್ಷ್ಣ ಪ್ರಶ್ನೆಗಳನ್ನು ವಿದಿಶಾ ಮೈತ್ರಾ ಪಾಕಿಸ್ಥಾನಕ್ಕೆ ಕೇಳಿದ್ದಾರೆ.
ಇಂತಹ ಪ್ರಚೋದನಕಾರಿ, ದ್ವೇಷ ಮತ್ತು ಕೋಮುವಾದಿ ಹೇಳಿಕೆಗಳನ್ನು ನೀಡಲು ಅತ್ಯುನ್ನತ ಜಾಗತಿಕ ವೇದಿಕೆಯಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಬಳಸಿದ್ದು ಪಾಕಿಸ್ಥಾನ ಎಂತಹ ಕೆಳಮಟ್ಟಕ್ಕೆ ಇಳಿದಿದೆ ಎಂಬುದನ್ನು ತೋರಿಸಿಕೊಟ್ಟಿದೆ. ವಿಶ್ವಸಂಸ್ಥೆಯ ಉದ್ದೇಶವು ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುವುದು. ಆದರೆ ಶಾಂತಿಗೆ ಬೆದರಿಕೆಗಳನ್ನು ಒಡ್ಡುವ ಅಂಶಗಳನ್ನು ಪರಿಣಾಮಕಾರಿಯಾಗಿ ಸಾಮೂಹಿಕ ಕ್ರಮಗಳ ಮೂಲಕ ತೆಗೆದುಹಾಕುವುದು. ಆದರೆ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಮುಂಚೂಣಿ ಸಭೆಯನ್ನು ಹಿಂದೂಗಳ ವಿರುದ್ಧ ಯುದ್ಧ, ಭಯೋತ್ಪಾದನೆ ಮತ್ತು ದ್ವೇಷದ ವಿಚಾರಗಳನ್ನು ಉತ್ತೇಜಿಸಲು ಬಳಸಿದ್ದಾರೆ. ಇದು ವಿಶ್ವಸಂಸ್ಥೆ ಪ್ರತಿಪಾದಿಸುವ ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಬೆದರಿಕೆಯಾಗಿದೆ. ಪಾಕಿಸ್ಥಾನವು ಸ್ಪಷ್ಟವಾಗಿ ಇಲ್ಲಿ ತನ್ನ ಮಿತಿಯನ್ನು ದಾಟಿದೆ. ಅದರ ಈ ಧೋರಣೆಯನ್ನು ವಿಶ್ವ ಸಮುದಾಯ ಬಲವಾಗಿ ಖಂಡಿಸಲೇ ಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.