ಕಡಿಮೆ ಆದಾಯವಿರುವ ಕುಟುಂಬಗಳು ಆರೋಗ್ಯ ಸಮಸ್ಯೆಯನ್ನು ಎದುರಿಸಲು ಹೆಣಗಾಡಬೇಕಾಗುತ್ತದೆ. ಕೆಲವೊಮ್ಮೆ ಚಿಕಿತ್ಸೆಗಳು ಕುಟುಂಬದ ಜೀವನ ಪರ್ಯಂತದ ಉಳಿತಾಯವನ್ನೇ ಕಿತ್ತು ತಿನ್ನುತ್ತವೆ. ಇಂತಹ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಭಾರತದ ಬಡ, ಮಧ್ಯಮವರ್ಗದ ಕುಟುಂಬಗಳ ಪಾಲಿಗೆ ಸಂಜೀವಿನಿಯಾಗಿ ಪರಿಣಮಿಸಿದೆ. ಗರಿಷ್ಠ ವೆಚ್ಚದ ಚಿಕಿತ್ಸೆಗಳು ಈ ಯೋಜನೆಯಡಿ ಫಲಾನುಭವಿಗಳಿಗೆ ಉಚಿತವಾಗಿ ದೊರೆಯುತ್ತಿದೆ.
ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಸಾಧಿಸುವ ಸಲುವಾಗಿ ಭಾರತ ಸರ್ಕಾರ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆ ಆಯುಷ್ಮಾನ್ ಭಾರತ್. ಪ್ರಧಾನಿ ನರೇಂದ್ರ ಮೋದಿ 2018ರ ಸೆಪ್ಟೆಂಬರ್ 23 ರಂದು ಈ ಯೋಜನೆಯನ್ನು ಪ್ರಾರಂಭಿಸಿದರು. ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಎಂಬ ಎರಡು ವಿಭಾಗಗಳನ್ನು ಈ ಯೋಜನೆ ಒಳಗೊಂಡಿದೆ.
ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪರಿವರ್ತಿಸುವ ಮೂಲಕ 150,000 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ರಚಿಸುವುದಾಗಿ ಭಾರತ ಸರ್ಕಾರ ಘೋಷಿಸಿದೆ. ಇಲ್ಲಿಯವರೆಗೆ 21000 ಇಂತಹ ಕೇಂದ್ರಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಮತ್ತು ಡಿಸೆಂಬರ್ 2022 ರ ವೇಳೆಗೆ 1,50,000 ಕೇಂದ್ರಗಳನ್ನು ರಚಿಸಲು ಭಾರತ ಸರ್ಕಾರ ಬದ್ಧವಾಗಿದೆ. ಈ ಕೇಂದ್ರಗಳು ತಾಯಂದಿರು ಮತ್ತು ಮಕ್ಕಳಿಗೆ ಆರೋಗ್ಯ ಸೇವೆಗಳು ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಹೊಂದಿರುವ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ತಲುಪಿಸುತ್ತಿವೆ.
ಆಯುಷ್ಮಾನ್ ಭಾರತ್ನ ಇನ್ನೊಂದು ಅಂಶವಾದ ಪಿಎಂ-ಜೆಎವೈ ಆರೋಗ್ಯ ವಿಮೆ ರೂಪದಲ್ಲಿ ಆರೋಗ್ಯ ರಕ್ಷಣೆಯನ್ನು ನೀಡುತ್ತದೆ. ಇದು ದ್ವಿತೀಯ ಮತ್ತು ತೃತೀಯ ಆರೈಕೆಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ.5 ಲಕ್ಷಗಳನ್ನು ಒದಗಿಸುತ್ತದೆ.
ಆಯುಷ್ಮಾನ್ ಭಾರತ್ ಯೋಜನೆ ಪ್ರಾರಂಭವಾಗಿ ಒಂದು ವರ್ಷವಾಗಿದೆ ಮತ್ತು ಇದು ಲಕ್ಷಾಂತರ ಫಲಾನುಭವಿಗಳ ಮುಖದಲ್ಲಿ ಸಂತಸವನ್ನು ತಂದಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಾಗಲೇ 47 ಲಕ್ಷ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆಯುಷ್ಮಾನ್ ಭಾರತ್ ಅನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ) ಅನುಷ್ಠಾನಗೊಳಿಸುತ್ತಿದ್ದು, ಈ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಲಾಗಿದೆ. ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 10.1 ಕೋಟಿ ಇ-ಕಾರ್ಡ್ಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ ಮತ್ತು ಈ ಯೋಜನೆಯಡಿ ಪ್ರತಿ ಸೆಕೆಂಡಿಗೆ 3 ಇ-ಕಾರ್ಡ್ಗಳನ್ನು ನೀಡಲಾಗುತ್ತಿದೆ.
ಇದುವರೆಗೆ, 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇತ್ತೀಚೆಗೆ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ಸರ್ಕಾರ ಈ ಯೋಜನೆಯ ಅನುಷ್ಠಾನವನ್ನು ಪ್ರಕಟಿಸಿದೆ.
ಇಲ್ಲಿಯವರೆಗೆ, 47 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಲಾಗಿದೆ. ಇದಕ್ಕಾಗಿ 7500 ಕೋಟಿ ರೂಪಾಯಿಯನ್ನು ವಿನಿಯೋಗಿಸಲಾಗಿದೆ. ಇದು ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.
ಮೆದುಳಿನ ಗೆಡ್ಡೆ ಶಸ್ತ್ರಚಿಕಿತ್ಸೆ, ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ, ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ರೋಗಗಳಿಗೆ ಯೋಜನೆಯಡಿಯಲ್ಲಿನ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಯೋಜನೆಯು ಇನ್ನಷ್ಟು ವಿಸ್ತಾರವಾಗಲಿದೆ, ಭಾರತ ಸರ್ಕಾರವು ದೇಶಾದ್ಯಂತ ಹಲವಾರು ಫಲಾನುಭವಿಗಳನ್ನು ತಲುಪುವಂತೆ ಯೋಜನೆಯನ್ನು ವಿಸ್ತರಿಸುತ್ತಿದೆ. ಕೆಲವು ದಿನಗಳ ಹಿಂದೆ, ಕ್ಯಾಬ್ ಸೇವಾ ಪೂರೈಕೆದಾರ ಓಲಾವು ಆಯುಷ್ಮಾನ್ ಭಾರತ್ನೊಂದಿಗೆ ಕೈಜೋಡಿಸಿ 2 ಮಿಲಿಯನ್ ಡ್ರೈವರ್ಗಳಿಗೆ ಆರೋಗ್ಯ ವಿಮೆಯನ್ನು ಒದಗಿಸಿದೆ.
ಮುಂಬರುವ ವರ್ಷಗಳಲ್ಲಿ, ಆಯುಷ್ಮಾನ್ ಭಾರತ್ ಯೋಜನೆಯು ಕೈಗೆಟುಕುವ ಆರೋಗ್ಯ ಸೇವೆ ಒದಗಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಜನರಿಗೆ ಪ್ರಯೋಜನವನ್ನು ನೀಡಲಿದೆ. ಬಡವರ ಬಾಳನ್ನು ಬೆಳಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.