ಹೀರಾ ಶಿರಾಜ್, ಪಾಕಿಸ್ಥಾನಿ ಮಹಿಳೆ ಅಕ್ಟೋಬರ್ 10, 2017 ರಂದು ರಾತ್ರಿ 8.26ಕ್ಕೆ ಸುಷ್ಮಾ ಸ್ವರಾಜ್ ಅವರಿಗೆ ಒಂದು ಟ್ವೀಟ್ ಮಾಡುತ್ತಾಳೆ, “ನನ್ನ ಒಂದು ವರ್ಷ ವಯಸ್ಸಿನ ಮಗಳಿಗೆ ತೆರೆದ ಹೃದಯದ ಚಿಕಿತ್ಸೆಗೆ ಭಾರತಕ್ಕೆ ಬರಲು ಮೆಡಿಕಲ್ ವೀಸಾ ನೀಡಿ” ಎಂದು. ಅದೇ ದಿನ ರಾತ್ರಿ 10.17 ಅದಕ್ಕೆ ಮರುತ್ತರ ಸಿಗುತ್ತದೆ. ಸುಷ್ಮಾ ಸ್ವರಾಜ್, “ನಾವು ಭಾರತದಲ್ಲಿ ನಿಮ್ಮ ಮಗುವಿನ ಚಿಕಿತ್ಸೆಗೆ ವೀಸಾ ನೀಡಲಿದ್ದೇವೆ”… ಏನಿದೆ ವಿಶೇಷ? ವಿದೇಶಾಂಗ ಸಚಿವರು ಇರುವುದೇ ಅದಕ್ಕೆ, ಕೊಟ್ಟಿದ್ದಾರೆ ಎನ್ನಬಹುದು. ಇಂತಹ ಘಟನೆಗಳು ಇಷ್ಟು ಬೇಗ ಪರಿಹಾರವಾದ ಇತಿಹಾಸವೇ ಇಲ್ಲ. ಒಬ್ಬರು ವಿದೇಶಾಂಗ ಮಂತ್ರಿ ಅದೂ ತಮ್ಮ ಶತ್ರು ದೇಶದ ಒಬ್ಬಳು ಮಾಮೂಲಿ ಪ್ರಜೆ ಮಾಡಿದ ಒಂದು ಟ್ವೀಟ್ಗೆ ಪರಿಹಾರ ದೊರಕಿಸಿದ ದಾಖಲೆಯೇ ಇಲ್ಲ. ಇದೊಂದೇ ಘಟನೆ ಆಗಿದ್ದರೆ ಅದು ಬಿಡಿ, ಬರೀ ಪ್ರಚಾರಕ್ಕೆ ಮಾಡಿದ್ದು ಎನ್ನಬಹುದಿತ್ತು. ಆದರೆ…
* ಆಗಸ್ಟ್ 2017, ಫೈಜಾ ತನ್ವೀರ್ಗೆ ಅಮೆಲೊಬ್ಲಾಸ್ಟೋಮಾ ಚಿಕಿತ್ಸೆಗೆ ವೀಸಾ.
* ಅಕ್ಟೋಬರ್ 2017 ಇಬ್ಬರು ಪಾಕಿಸ್ಥಾನೀ ಪ್ರಜೆಗಳಿಗೆ ಯಕೃತ್ತಿನ ಚಿಕಿತ್ಸೆಗೆ ವೀಸಾ.
* ಮೇ 2018 ನಸೀಮ್ ಅಖ್ತರ್ಗೆ ಪಿತ್ತ ಜನಕಾಂಗ ಚಿಕಿತ್ಸೆಗೆ ವೀಸಾ.
* ಖಾಸಿಫ್ ಚಾಚಾರ ತಂದೆ ಅಬ್ದುಲ್ಲಾ ಎಂಬುವವರ ಪಿತ್ತ ಜನಕಾಂಗ ಚಿಕಿತ್ಸೆಗೆ ವೀಸಾ.
* ಫಹಾದ್ ಇಜಾಜ್ ಎಂಬುವವರಿಗೆ ಫೋರ್ಟಿಸ್ ನೋಯ್ಡಾದಲ್ಲಿ ಚಿಕಿತ್ಸೆಗೆ ದಾಖಲಾದ ತಾಯಿಯ ಭೇಟಿ ಮಾಡಲು ಎಂಟು ತಾಸುಗಳಿಗಿಂತ ಕಡಿಮೆ ಅವಧಿಯಲ್ಲಿ ವೀಸಾ.
ಅದಕ್ಕೆ ಶಹಜೈಬ್ ಇಕ್ಬಾಲ್, ಪಾಕಿಸ್ಥಾನದ ಲಾಹೋರ್ ಪ್ರಜೆ “ಅಲ್ಲಾಹುವಿನ ನಂತರ ನೀವೇ ನಮ್ಮ ಕಡೆಯ ಆಶಾಕಿರಣ..” ಎಂದದ್ದು. ಎಂತಹ ಮಾತು? ಭಾರತ ಹೀಗಿರುವಾಗ ಮೊನ್ನೆ ಒಂದು ಘಟನೆ ನಡೆಯಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಲು ತೆರಳಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷಗಳ ನಿಯೋಗವನ್ನು ಕಾಶ್ಮೀರ ಸರ್ಕಾರ ವಾಪಸ್ ದೆಹಲಿಗೆ ಕಳುಹಿಸಿದೆ. ಆದರೆ ವಾಪಸ್ ತೆರಳುವ ವೇಳೆ ವಿಮಾನದಲ್ಲಿ ಕಾಶ್ಮೀರಿ ಮಹಿಳೆಯೊಬ್ಬರು ರಾಹುಲ್ ಗಾಂಧಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ವಕ್ತಾರೆ ರಾಧಿಕಾ ಖೇರ್ ಅವರು ಮಹಿಳೆಯ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಅಲ್ಲಿನ ಜನ ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ಮಹಿಳೆ ವಿವರಿಸಿದ್ದಾರೆ.
‘ನಮ್ಮ ಮಕ್ಕಳು ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ನನ್ನ ಸಹೋದರ ಹೃದಯ ರೋಗಿಯಾಗಿದ್ದು, ಕಳೆದ 10 ದಿನಗಳಿಂದ ಆತನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ನಾವು ತುಂಬಾ ಸಮಸ್ಯೆಯಲ್ಲಿ ಸಿಲುಕಿದ್ದೇವೆ’ ಎಂದು ಕಾಶ್ಮೀರಿ ಮಹಿಳೆ ರಾಹುಲ್ ಗಾಂಧಿ ಮುಂದೆ ಅಳಲು ತೋಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ರಾಹುಲ್ ಗಾಂಧಿ ಅವರು ಎದ್ದು ನಿಂತು ಮಹಿಳೆಯನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರೆ, ಇತರೆ ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ ಹಾಗೂ ಕೆ ಸಿ ವೇಣುಗೋಪಾಲ್ ಅವರು ಸಮಾಧಾನದಿಂದ ಮಹಿಳೆಯ ಅಳಲನ್ನು ಆಲಿಸುತ್ತಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ 12 ಪ್ರತಿಪಕ್ಷಗಳ ನಾಯಕರ ನಿಯೋಗ ಜಮ್ಮು ಮತ್ತು ಕಾಶ್ಮೀರ ಭೇಟಿಗಾಗಿ ಶ್ರೀನಗರಕ್ಕೆ ತೆರಳಿತ್ತು. ಆದರೆ ಪ್ರತಿಪಕ್ಷಗಳ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿಯೇ ತಡೆದ ಭದ್ರತಾ ಸಿಬ್ಬಂದಿ, ಅವರನ್ನು ವಾಪಸ್ ದೆಹಲಿಗೆ ಕಳುಹಿಸಿದ್ದಾರೆ.
ಕೇಂದ್ರ ಸರ್ಕಾರದ ಈ ವರ್ತನೆಗೆ ಕಿಡಿ ಕಾರಿದ ರಾಹುಲ್ ಗಾಂಧಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ‘ಮೋದಿ ಸರ್ಕಾರ ಪ್ರತಿಪಕ್ಷ ನಿಯೋಗಕ್ಕೆ ಅವಕಾಶ ಕಲ್ಪಿಸದೇ ಏನನ್ನೋ ಮುಚ್ಚಿಡುತ್ತಿದೆ’ ಎಂದು ಕಿಡಿಕಾರಿದ್ದಾರೆ.
ಈ ವಿಡಿಯೋವನ್ನು NDTV, ಭಾರತೀಯ ಯುವ ಕಾಂಗ್ರೆಸ್, ಕಾಂಗ್ರೆಸ್ ವಕ್ತಾರರು ಸೇರಿದಂತೆ ಹಲವರು ವೈರಲ್ ಮಾಡಿದ್ದಾರೆ. ಅದಿರಲಿ ಒಂದಿಷ್ಟು ಅಂಶಗಳನ್ನು ನಿಮಗೆ ಹೇಳಲೇಬೇಕು.
⭕ ರಾಹುಲ್ ಗಾಂಧಿಯವರು ದೇಶದ ಪ್ರತಿಷ್ಠಿತ ವ್ಯಕ್ತಿ. ಅವರಿಗೆ Z+ ಭದ್ರತೆ ನೀಡಲಾಗಿರುತ್ತದೆ. ಯಾರಿಗೂ ಅವರನ್ನು ನೇರಾನೇರ ಭೇಟಿ ಮಾಡಲು ಅವಕಾಶವಿಲ್ಲ.
⭕ ರಾಹುಲ್ ಗಾಂಧಿಯವರು ವಿಮಾನದ ಕೊಂಚ ದುಬಾರಿ ಎನ್ನಿಸುವ ವಿಭಾಗದಲ್ಲಿ ಪಯಣಿಸುತ್ತಿದ್ದರು. ಅವರ ಭೇಟಿಯಾಗಲು ಅದೇ ರೀತಿಯಲ್ಲಿ ಪ್ರಯಾಣಿಸುವವರಿಗೆ ಮಾತ್ರ ಸಾಧ್ಯ.
⭕ ಸ್ವಲ್ಪ ದಿನಗಳ ಹಿಂದೆ ಇಂತಹದೇ ಇನ್ನೊಂದು ಘಟನೆ ಬರ್ಖಾ ದತ್ಳಿಗೂ ಎದುರಾಗಿತ್ತು.
⭕ ವಿಮಾನದಲ್ಲಿ ಬೇರೊಬ್ಬರ ಚಿತ್ರಗಳನ್ನು ತೆಗೆಯುವುದು, ವಿಡಿಯೋ ಮಾಡುವುದು ಅಪರಾಧ.
ಅದು ಬಿಡಿ, ರಾಹುಲ್ ಗಾಂಧಿಯವರ ಜೊತೆ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ನಿಜಕ್ಕೂ ಅವರ ಭದ್ರತೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎನ್ನಿಸುತ್ತದೆ. ಅಂತಹ ಕೆಲವು ಘಟನೆಗಳು ಈ ಕೆಳಗಿನಂತಿವೆ.
⭕ ಉತ್ತರ ಪ್ರದೇಶದ ಅಮೇಥಿಯಲ್ಲಿ ಏಪ್ರಿಲ್ 2019ರಂದು ರಾಹುಲ್ ಗಾಂಧಿ ಹಣೆಯ ಮೇಲೆ ಹಸಿರು ಲೈಟ್ ಕಾಣಿಸಿಕೊಂಡು ಅದು ಲೇಸರ್ ಗನ್ ಲೈಟ್ ಎಂದು ಪ್ರಚಾರವಾಗಿತ್ತು. ಅದಕ್ಕೆ ಕಾಂಗ್ರೆಸ್ ನಾಯಕರು ಪತ್ರಗಳ ಮೇಲೆ ಪತ್ರ ಬರೆದಿದ್ದರು. ನಂತರ ಅದು ಕ್ಯಾಮೆರಾಮ್ಯಾನ್ ಒಬ್ಬರ ಮೊಬೈಲ್ ಬೆಳಕಾಗಿತ್ತು.
⭕ ಕರ್ನಾಟಕ ವಿಧಾನಸಭಾ ಚುನಾವಣಾ ವೇಳೆ ಹುಬ್ಬಳ್ಳಿಗೆ ಆಗಮಿಸಿದಾಗ ಅವರ ಹೆಲಿಕಾಪ್ಟರ್ನಲ್ಲಿ ದೋಷ ಕಾಣಿಸಿತ್ತು. ಇದನ್ನು ಅಂತರಾಷ್ಟ್ರೀಯ ಸಂಚು ಎಂದು ಬಿಂಬಿಸಲಾಯಿತು. ತನಿಖೆಯ ನಂತರ ಇದು ಪೈಲಟ್ಗಳ ಬೇಜವಾಬ್ದಾರಿಯೇ ಹೊರತು ದೊಡ್ಡ ಅನಾಹುತವಲ್ಲ ಎಂದು ಸಾಬೀತಾಗಿತ್ತು.
⭕ ಮಾರ್ಚ್ 27, 2019 ರಂದು ರಾಜಸ್ಥಾನ ಮೂಲದ ಪತ್ರಕರ್ತ ರಾಜೇಂದ್ರ ವ್ಯಾಸ್ ತಾನು ಗಾಯಗೊಂಡಿದ್ದೆ, ರಾಹುಲ್ ಗಾಂಧಿ ತನ್ನ ಬಚಾವ್ ಮಾಡಿದರು ಎಂದು ಹೇಳಿದ್ದ. ಕೊನೆಗೆ ಇದು ರಾಹುಲ್ ಗಾಂಧಿ ಮತ್ತು ಆ ಪತ್ರಕರ್ತ ಸೇರಿ ಆಡಿದ ನಾಟಕ ಎಂದು ರುಜುವಾತಾಯಿತು.
ಕಾಶ್ಮೀರದ ಮಹಿಳೆಯ ವಿಚಾರಕ್ಕೆ ಮರಳೋಣ. ಹೆಮ್ಮೆಯಿಂದ ಹೇಳುತ್ತೇನೆ, ನನ್ನ ಭಾರತ, ಶತ್ರುಗಳಿಗೂ ದೇಹಿ ಎಂದಾಗ ಸಹಾಯ ಮಾಡುವ ನನ್ನ ದೇಶ ಮನೆಯ ಮಕ್ಕಳನ್ನು ಅನಾಥರಾಗಿ ಎಂದಿಗೂ ಕೈ ಬಿಟ್ಟಿಲ್ಲ. ಅಂತಹುದರಲ್ಲಿ ವಿಮಾನದಲ್ಲಿ ದುಬಾರಿ ವೆಚ್ಚದ ಬ್ಯುಸಿನೆಸ್ ಕ್ಲಾಸ್ನಲ್ಲಿ ತೆರಳುವ ಮಹಿಳೆ ತನ್ನ ಸಹೋದರನ ಚಿಕಿತ್ಸೆಗೆ ಭಾರತ ಸರ್ಕಾರ ಅವಕಾಶ ಕೊಡುತ್ತಿಲ್ಲ ಎನ್ನುವುದು, ಅದೂ ಅಷ್ಟೊಂದು ಭದ್ರತೆ ಹೊಂದಿರುವ ವ್ಯಕ್ತಿಯನ್ನು ನೇರವಾಗಿ ಭೇಟಿ ಮಾಡಿ..! ಮತ್ತು ಇದನ್ನು ಚಿತ್ರೀಕರಣ ನಿರ್ಬಂಧಿಸಲಾದ ಸ್ಥಳದಲ್ಲಿ ವಿಡಿಯೋ ಮಾಡಿ ಹಂಚಲಾಗುತ್ತದೆ. ಸತ್ಯ ನಿಮ್ಮ ಕಣ್ಣೆದುರೇ ಇದೆ. ಇಷ್ಟಕ್ಕೂ ರಾಹುಲ್ ಗಾಂಧಿಯವರು ಏನನ್ನು ಸಾಬೀತು ಪಡಿಸಲು ಹೊರಟಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಅವರು ಐದು ಲಕ್ಷಕ್ಕೂ ಹೆಚ್ಚಿನ ನಿರಾಶ್ರಿತ ಕಾಶ್ಮೀರಿ ಪಂಡಿತರ ಭೇಟಿ ಆಗಲಿಲ್ಲ, ಪುಲ್ವಾಮ ದಾಳಿಯ ಹುತಾತ್ಮರ ಕುಟುಂಬಗಳ ಭೇಟಿ ಆದ ಉದಾಹರಣೆ ಇಲ್ಲ. ಸರ್ದಾರ್ ಪಟೇಲರ ಮತ್ತು ಅಂಬೇಡ್ಕರರ ವಿರೋಧದ ನಡುವೆಯೂ ಜಾರಿ ಮಾಡಲಾಗಿದ್ದ ಅಸಂವಿಧಾನಿಕ ಒಂದು ಕಾಯ್ದೆ ಕಾನೂನನ್ನು ರದ್ದು ಮಾಡಲಾಗಿದೆ. ಆ ಕಾನೂನಿನ ಶಕ್ತಿ ಇದ್ದರೂ ಕಾಶ್ಮೀರ 1947 ರಲ್ಲಿ ಹೇಗಿತ್ತೋ ಹಾಗೆ ಉಳಿದಿತ್ತು. ಆರ್ಟಿಕಲ್ 370 ರದ್ದತಿಯಿಂದ ಹಲವಾರು ಕಾಶ್ಮೀರದ ನಾಗರೀಕರು ಖುಷಿ ವ್ಯಕ್ತಪಡಿಸಿರುವ ಹಲವಾರು ಫೋಟೋ, ವಿಡಿಯೋಗಳು ಭಾರತದ ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಎಲ್ಲಕಿಂತ ಹೆಚ್ಚಾಗಿ ಭಾರತದ ತ್ರಿವರ್ಣಧ್ವಜ ಇಷ್ಟು ವರ್ಷಗಳ ನಂತರ ಕಾಶ್ಮೀರದ ತುಂಬೆಲ್ಲಾ ಪಸರಿಸಿದೆ. ಭಾರತೀಯ ಸೈನಿಕರ ಬಲಿದಾನ ಇನ್ನೂ ವ್ಯರ್ಥವಾಗಲು ಬಿಡದ ಕೇಂದ್ರ ಸರ್ಕಾರ ಅವರಿಗೆ ವಿಶೇಷ ಅಧಿಕಾರವನ್ನು ನೀಡಿದೆ. ಲಡಾಖಿನ ಯುವ ಸಂಸದ ವಿಶೇಷಾಧಿಕಾರ ರದ್ದತಿ ನಂತರದ ವಸ್ತುನಿಷ್ಠ ವರದಿಯನ್ನು ದೇಶದ ಮುಂದಿಟ್ಟಿದ್ದಾರೆ. ಮುಫ್ತಿ, ಅಬ್ದುಲ್ಲಾಗಳ ಕೆಲ ಸಂತತಿಗಳನ್ನು ಹೊರತು ಪಡಿಸಿ ಇಡೀ ಭಾರತ ದೇಶವೇ ಎದ್ದು ನಿಂತು ಹರ್ಷಿಸಿದೆ. ಆದರೆ ರಾಹುಲ್ ಗಾಂಧಿಯವರು ಪ್ರತ್ಯೇಕತಾವಾದಿಗಳ ದನಿಯಾಗಲು ಹೊರಟಿದ್ದಾರೆ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.