ಡಿಜಿಟಲ್ ಕ್ರಾಂತಿಯ ಮೂಲಕ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ನಿರೀಕ್ಷೆಯೊಂದಿಗೆ, ಎಲ್ಲಾ ನಾಗರಿಕರಿಗೂ ಡಿಜಿಟಲ್ ಶಿಕ್ಷಣದ ಸಂಪನ್ಮೂಲ ದೊರಕಲಿ ಎಂಬ ಉದ್ದೇಶದೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ‘ನ್ಯಾಷನಲ್ ಡಿಜಿಟಲ್ ಲೈಬ್ರರಿ’ಗೆ ಆರಂಭಗೊಳಿಸಿತು. ಐಐಟಿ-ಖರಗಪುರ ಇದನ್ನು ಅಭಿವೃದ್ಧಿಪಡಿಸಿತು. ನ್ಯಾಷನಲ್ ಡಿಜಿಟಲ್ ಲೈಬ್ರೆರಿ ಸಿಂಗಲ್ ವಿಂಡೋ ವೇದಿಕೆಯಾಗಿದ್ದು, ದೇಶ-ವಿದೇಶಗಳ ಪ್ರಮುಖ ಶಿಕ್ಷಣ ಸಂಸ್ಥೆಗಳಿಂದ ಮಾಹಿತಿ ಮತ್ತು ಇತರ ಸಂಪನ್ಮೂಲಗಳನ್ನು ಸಂಗ್ರಹಿಸಿ ಜನರಿಗೆ ಒದಗಿಸುತ್ತದೆ.
ಪ್ರಸ್ತುತ ಈ ಡಿಜಿಟಲ್ ಲೈಬ್ರರಿಯಲ್ಲಿ 3 ಕೋಟಿಗೂ ಹೆಚ್ಚು ಡಿಜಿಟಲ್ ಸಂಪನ್ಮೂಲಗಳು ಲಭ್ಯವಿದೆ. ಇದರಲ್ಲಿನ ವಿಷಯಗಳು ಶಿಕ್ಷಣದ ಎಲ್ಲಾ ಪ್ರಮುಖ ಆಯಾಮಗಳನ್ನೂ ಸ್ಪರ್ಶಿಸಿದೆ ಮತ್ತು ಎಲ್ಲಾ ಹಂತದ ವಿದ್ಯಾರ್ಥಿಗಳನ್ನೂ ಇದು ಒಳಗೊಂಡಿವೆ. ಸುಮಾರು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ.
ಇದರಲ್ಲಿ ಡಿಜಿಟಲ್ ಮೂಲವು ಪಠ್ಯಪುಸ್ತಕ, ಲೇಖನ, ವೀಡಿಯೋ, ಆಡಿಯೋ-ಪುಸ್ತಕ, ಉಪನ್ಯಾಸ, ಕಾದಂಬರಿ ಇತ್ಯಾದಿ ಎಲ್ಲಾ ಕಲಿಕೆಯ ಮಾಧ್ಯಮಗಳನ್ನು ಹೊಂದಿದೆ. ದಿನದ 24 ಗಂಟೆಗಳ ಕಾಲವೂ ಇಂಟರ್ನೆಟ್ ಸಂಪರ್ಕವುಳ್ಳ ಪ್ರತಿಯೊಬ್ಬ ನಾಗರಿಕನಿಗೂ ಈ ಡಿಜಿಟಲ್ ಲೈಬ್ರರಿ ಲಭ್ಯವಾಗಿರುತ್ತದೆ. ನ್ಯಾಷನಲ್ ಡಿಜಿಟಲ್ ಲೈಬ್ರರಿಯನ್ನು UMANG ಅಪ್ಲಿಕೇಶನ್ನೊಂದಿಗೆ ಸಂಯೋಜಿಸಲಾಗಿದೆ ಮತ್ತು ಬಳಕೆದಾರರು www.ndl.gov.in ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಇದರಲ್ಲಿ ನೋಂದಾಯಿಸಿಕೊಳ್ಳಬಹುದು.
ಕೇಂದ್ರೀಕೃತ ಶೋಧನೆಗೆ ಅನುಕೂಲವಾಗುವಂತೆ ಫಿಲ್ಟರ್ಡ್ ಮತ್ತು ಫೆಡರೇಟೆಡ್ ಸರ್ಚ್ ಅನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ. ಇದರಿಂದ ಕಲಿಯುವವರಿಗೆ ಸರಿಯಾದ ಪ್ರಯತ್ನದಲ್ಲಿ ಕನಿಷ್ಠ ಶ್ರಮದಿಂದ ಮತ್ತು ಕನಿಷ್ಠ ಸಮಯದಲ್ಲಿ ತಮ್ಮ ಬೇಕಾದ ವಿಷಯದ ಮೂಲವನ್ನು ಪಡೆದುಕೊಳ್ಳಬಹುದಾಗಿದೆ. ಯಾವುದೇ ಭಾಷೆಯ ವಿಷಯವನ್ನು ಹಿಡಿದಿಟ್ಟುಕೊಳ್ಳುವಂತೆ ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾವನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಪ್ರಮುಖ ಸ್ಥಳೀಯ ಭಾಷೆಗಳಿಗೆ ಇಂಟರ್ಫೇಸ್ ಬೆಂಬಲವನ್ನು ಇದು ಒದಗಿಸುತ್ತದೆ. ಸಂಶೋಧಕರು ಮತ್ತು ವಿದ್ಯಾರ್ಥಿಗಳು, ವಿಭಿನ್ನ ಸಾಮರ್ಥ್ಯದ ಅಧ್ಯಯನಗಾರರು ಸೇರಿದಂತೆ ಎಲ್ಲರಿಗೂ ಮತ್ತು ಎಲ್ಲಾ ಶೈಕ್ಷಣಿಕ ಹಂತಗಳಿಗೂ ಪ್ರಯೋಜನಕಾರಿಯಾಗುವಂತೆ ಇದನ್ನು ವ್ಯವಸ್ಥಿತಗೊಳಿಸಲಾಗಿದೆ. ಪ್ರವೇಶ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಪ್ರಪಂಚದಾದ್ಯಂತದ ಉತ್ತಮ ಅಭ್ಯಾಸ ಶೈಲಿ ಮತ್ತು ಸಿದ್ಧತೆಯನ್ನು ಇದು ಕಲಿಯಲು ಅನುವು ಮಾಡಿಕೊಡುತ್ತದೆ ಮತ್ತು ಅನೇಕ ಮೂಲಗಳಿಂದ ಪರಿಶೋಧನೆಯನ್ನು ನಡೆಸಲು ಸಂಶೋಧಕರಿಗೆ ಅನುಕೂಲವಾಗುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ನಿರಂತರವಾಗಿ ಬೆಳೆಯುತ್ತಿರುವ ಡಿಜಿಟಲ್ ವಿಷಯ ಭಂಡಾರವು ಸಿಂಗಲ್ ವಿಂಡೋ ಸರ್ಚ್ ಸೌಲಭ್ಯವನ್ನು ಹೊಂದಿರುವುದು ಇದರ ವೈಶಿಷ್ಟ್ಯ. ಈ ಡಿಜಿಟಲ್ ಲೈಬ್ರರಿಯ ವಿಷಯ ಭಂಡಾರವನ್ನು ಬ್ರೌಸ್ ಮಾಡಲು ವಿಭಿನ್ನ ಮಾರ್ಗಗಳನ್ನು ಹೊಂದಿದೆ. ಉದಾಹರಣೆಗೆ ವಿಷಯಾಧಾರಿತವಾಗಿ ಬ್ರೌಸ್ ಮಾಡುವುದು, ಮೂಲವನ್ನು ಇಟ್ಟುಕೊಂಡು ಬ್ರೌಸ್ ಮಾಡುವುದು, ಅಧ್ಯಯನ ವಿಷಯದ ಮೂಲಕ ಬ್ರೌಸ್ ಮಾಡುವುದು ಮತ್ತು ಸಂಪನ್ಮೂಲ ಪ್ರಕಾರವನ್ನು ಕಲಿಯುವ ಮೂಲಕ ಬ್ರೌಸ್ ಮಾಡುವುದು. ಅಲ್ಲದೇ, ಇಲ್ಲಿ ಸರ್ಚ್ ಫಲಿತಾಂಶವನ್ನು ಫಿಲ್ಟರ್ ಮಾಡಬಹುದು ಮತ್ತು ಫೆಸೆಟ್ ಆಧಾರಿತ ಪರಿಷ್ಕರಣೆ ಆಯ್ಕೆಗಳೊಂದಿಗೆ ಬ್ರೌಸ್ ಮಾಡಬಹುದಾಗಿದೆ. ಇಲ್ಲಿರುವ ವಿಷಯಗಳು ವಿವಿಧ ಹಂತದ ಬಳಕೆದಾರರಿಗೆ ಉಪಯುಕ್ತವಾಗಿವೆ. ವಿವಿಧ ಸಬ್ಜೆಕ್ಟ್ ಡೊಮೇನ್ಗಳಿಗೆ ಇಲ್ಲಿ ವಿಷಯಗಳು ಲಭ್ಯವಿದೆ.
ಪ್ರಾಥಮಿಕದಿಂದ ಸ್ನಾತಕೋತ್ತರ ಹಂತದವರೆಗಿನ ಬಳಕೆದಾರರಿಗೆ ಶೈಕ್ಷಣಿಕ ಸಾಮಗ್ರಿಗಳು ಇದರಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು, ಗ್ರಂಥಪಾಲಕರು, ಗ್ರಂಥಾಲಯದ ಬಳಕೆದಾರರು, ವೃತ್ತಿಪರರು, ವಿಭಿನ್ನ ಸಾಮರ್ಥ್ಯದ ಬಳಕೆದಾರರು ಮತ್ತು ಇತರ ಎಲ್ಲ ಜೀವಮಾನದ ಕಲಿಯುವವರಿಗೆ ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಶಿಕ್ಷಣ ಮಟ್ಟ, ಭಾಷೆಯ ಆಯ್ಕೆ, ವಿಷಯದ ಮಾಧ್ಯಮ ಮತ್ತು ಇತರ ಅಂಶಗಳ ಆಧಾರದ ಮೇಲೆ ಮಾಹಿತಿಯನ್ನು ಇಲ್ಲಿ ವೈಯಕ್ತೀಕರಿಸಬಹುದು. ತಂತ್ರಜ್ಞಾನ, ವಿಜ್ಞಾನ, ಮಾನವಿಕತೆ, ಕೃಷಿ ಮತ್ತು ಇತರ ಅನೇಕ ಸಬ್ಜೆಕ್ಸ್ ಡೊಮೇನ್ಗಳನ್ನು ಇದು ಹೊಂದಿದೆ.
ಪುಸ್ತಕಗಳು, ಲೇಖನಗಳು, ಹಸ್ತಪ್ರತಿಗಳು, ವಿಡಿಯೋ ಉಪನ್ಯಾಸಗಳು, ಪ್ರಬಂಧಗಳು ಇತ್ಯಾದಿ 60 ಕ್ಕೂ ಹೆಚ್ಚು ಬಗೆಯ ಕಲಿಕಾ ಸಂಪನ್ಮೂಲಗಳು ಲಭ್ಯವಿದೆ. ವಿಷಯಗಳು 8 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಇಲ್ಲಿನ ವಿಷಯ ಭಂಡಾರವು ವಿವಿಧ ಭಾರತೀಯ ಸಾಂಸ್ಥಿಕ ಭಂಡಾರಗಳಿಂದ ವಿಷಯಗಳನ್ನು ಸಂಯೋಜಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.