ಅಂಗನವಾಡಿ ಮತ್ತು ಶಾಲೆಗಳಿಗೆ ವಿದ್ಯಾರ್ಥಿಗಳಿಗಾಗಿ ತಮ್ಮ ಆವರಣದಲ್ಲಿ ಗಾರ್ಡನ್ಗಳನ್ನು ನಿರ್ಮಾಣ ಮಾಡಲು ತಮಿಳುನಾಡಿನ ಶಿಕ್ಷಕಿಯೊಬ್ಬರು ಸಹಾಯ ಮಾಡುತ್ತಿದ್ದಾರೆ. ಅವರ ಗಾರ್ಡನ್ ಜಪಾನಿನ ರೈತ ಮತ್ತು ತತ್ವಜ್ಞಾನಿ ಮಸನೊಬು ಫುಕುಯೊಕಾ ಅವರ ನೈಸರ್ಗಿಕ ಕೃಷಿಯ ವಿಧಾನದಿಂದ ಪ್ರೇರಿತವಾಗಿದೆ. ಕೃಷಿ ವಿಜ್ಞಾನ, ಪರ್ಮಾಕಲ್ಚರ್ ತಂತ್ರಗಳನ್ನು ಮತ್ತು ಅರಣ್ಯನಾಶದ ವಿರುದ್ಧ ಮಿಯಾವಾಕಿ ತತ್ವಗಳನ್ನು ಸಹ ಇದು ಒಳಗೊಂಡಿದೆ.
ಮಾಯಾ ಗಣೇಶ್ ಅವರ ಮಾರ್ಗದರ್ಶನದೊಂದಿಗೆ ತಮಿಳುನಾಡಿನ ಕ್ಯಾಂಬ್ರಿಡ್ಜ್ ಐಜಿಸಿಎಸ್ ಇಯ ಅನೇಕ ವಿದ್ಯಾರ್ಥಿಗಳು 200ಕ್ಕೂ ಬಗೆಯ ಸಸ್ಯಗಳನ್ನು ಮತ್ತು 5 ಕ್ಕೂ ಹೆಚ್ಚು ಸ್ಥಳೀಯ ಜಾತಿಯ ಜೀವವೈವಿಧ್ಯ ಮರಗಳು ಮತ್ತು ಪೊದೆಗಳನ್ನು ತಮ್ಮ ಶಾಲಾ ಆವರಣದಲ್ಲಿ ಬೆಳೆಸಿದ್ದಾರೆ.
ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಎಂಬಿಎ ಮಾಡಿರುವ ಮಾಯಾ ಅತ್ಯಂತ ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದರು. ಆದರೆ, ಅವರ ಹೃದಯವು ಪ್ರಕೃತಿಗೆ ಹತ್ತಿರವಾಗಿತ್ತು, ಆದ್ದರಿಂದ 39 ನೇ ವಯಸ್ಸಿನಲ್ಲೇ ಅವರು ವೃತ್ತಿಜೀವನವನ್ನು ಬದಲಾಯಿಸಲು ನಿರ್ಧರಿಸಿದರು. ಗ್ಲೋಬಲ್ ಸೌತ್ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಬಾಧಿಸುತ್ತಿರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿ ಅವರು ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಲಂಡನ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು.
ಪ್ರಾಧ್ಯಾಪಕ ಮತ್ತು ಲೇಖಕ ಡಾ. ರಾಬರ್ಟ್ ಬೀಲ್ ಅವರು ನಗರದಲ್ಲಿ ಚಿಕ್ಕ ಜಾಗದಲ್ಲಿ ತಮಗೆ ಬೇಕಾದ ಆಹಾರವನ್ನು ಬೆಳೆಸಿದ ರೀತಿ ಮಾಯಾ ಅವರನ್ನು ಹೆಚ್ಚಾಗಿ ಆಕರ್ಷಿಸಿತು.
ಭಾರತಕ್ಕೆ ಹಿಂದಿರುಗಿದ ಬಳಿಕ ಅವರು, ಪುನರುತ್ಪಾದಕ ಕೃಷಿಯಲ್ಲಿ, ವಿಶೇಷವಾಗಿ ಪರ್ಮಾಕಲ್ಚರ್ನಲ್ಲಿ ಕೋರ್ಸ್ಗಳನ್ನು ಮಾಡುವುದಕ್ಕಾಗಿ ಸಮಯವನ್ನು ವಿನಿಯೋಗಿಸಿಕೊಂಡರು. ಡಾ. ದೆಬಲ್ ದೇಬ್, ಐಕಾಂತಿಕಾದ ರಾಘವ, ಲ್ಯಾರಿ ಕಾರ್ನ್, ಕ್ಲಿಯಾ ಚಾಂಡ್ಮಲ್, ಮತ್ತು ನರಸಣ್ಣ ಕೊಪ್ಪುಲಾ ಸೇರಿದಂತೆ ನೈಸರ್ಗಿಕ ಕೃಷಿಯ ವಿವಿಧ ಪ್ರತಿಪಾದಕರ ಅಡಿಯಲ್ಲಿ ತರಬೇತಿಯನ್ನು ಪಡೆದದ್ದು ಮಾತ್ರವಲ್ಲ, ಅವರು ಸಮುದಾಯ-ಚಾಲಿತ ಸುಸ್ಥಿರ ಯೋಜನೆಗಳಲ್ಲಿ ಸಹ ಕೆಲಸ ಮಾಡಿದರು.
ಎಪಿಎಲ್ ಗ್ಲೋಬಲ್ ಶಾಲೆಯಲ್ಲಿನ ಯುವ ಮನಸ್ಸುಗಳಿಗೆ ಮಣ್ಣಿನ ಮೇಲೆ ಪ್ರೀತಿಯನ್ನು ಹರಡಿಸಲು ಪ್ರಯತ್ನಿಸಿದ್ದು ಅವರ ಮಹತ್ವದ ಕಾರ್ಯವಾಗಿದೆ.
2017ರಲ್ಲಿ ಶಾಲೆಯು ತನ್ನ ಕ್ಯಾಂಪಸ್ ಅನ್ನು ಚೆನ್ನೈನ ಒಕ್ಕಿಯಮ್ ತೋರೈಪಕ್ಕಂಗೆ ಸ್ಥಳಾಂತರಿಸಲು ನಿರ್ಧರಿಸಿದ ಬಳಿಕ ಈ ಎಲ್ಲಾ ಬದಲಾವಣೆಗಳೂ ಶಾಲೆಯ ಆವರಣದಲ್ಲಿ ನಡೆಯಿತು.
ಡ್ರೈ ಪ್ಯಾಚ್, ಹೂವುಗಳು, ಹಣ್ಣಿನ ಮರಗಳು, ಗಿಡಮೂಲಿಕೆಗಳು, ಫೈಬರ್, ಡೈ, ಪೊದೆಗಳು, ತರಕಾರಿಗಳು, ಪಕ್ಷಿಗಳು, ಕೀಟಗಳು, ಹುಳುಗಳು ಮತ್ತು ಸೂಕ್ಷ್ಮಜೀವಿಗಳು ಮತ್ತು ಸಣ್ಣ ಸರೀಸೃಪಗಳಿಗೆ ಒತ್ತು ನೀಡುವ ಜೀವವೈವಿಧ್ಯ ವ್ಯವಸ್ಥೆಯನ್ನು ರಚಿಸುವ ಕಾರ್ಯವನ್ನು ಮಾಯಾ ಮತ್ತು ಇಲ್ಲಿನ ವಿದ್ಯಾರ್ಥಿಗಳು ಮಾಡಿದ್ದಾರೆ. ಈ ಉದ್ಯಾನವು ಜಪಾನಿನ ರೈತ ಮತ್ತು ತತ್ವಜ್ಞಾನಿ ಮಸನೊಬು ಫುಕುಯೊಕಾ ಅವರ ನೈಸರ್ಗಿಕ ಕೃಷಿಯ ವಿಧಾನದಿಂದ ಪ್ರೇರಿತವಾಗಿದೆ. ಈ ಕಾರ್ಯದಲ್ಲಿ ಮಾಯಾ ಅವರು ಕಳೆದ ಮೂರು ವರ್ಷಗಳಲ್ಲಿ ಬಹಳ ದೂರ ಸಾಗಿ ಬಂದಿದ್ದಾರೆ.
ಈ ಉಪಕ್ರಮದಡಿಯಲ್ಲಿ, 1 ರಿಂದ 12 ನೇ ತರಗತಿಯ ಮಕ್ಕಳು ಶಾಲಾ ಆವರಣದ ಪ್ರತಿ ಮೂಲೆಯಲ್ಲೂ ಸ್ಥಳೀಯ ಪ್ರಭೇದಗಳ ಸಸ್ಯಗಳನ್ನು ನೆಡುತ್ತಾರೆ. ಶಾಲೆಯು ಹೊಂದಿರುವ ಹೊರಾಂಗಣ ಸ್ಥಳಗಳ ಪ್ರತಿ ಇಂಚುಗಳು ಕೂಡ ಈಗ ಗಿಡಮೂಲಿಕೆಗಳು, ತರಕಾರಿಗಳು, ಹಣ್ಣುಗಳು, ಪೊದೆಗಳು, ಹೂವುಗಳು, ಔಷಧೀಯ ಸಸ್ಯಗಳು ಮತ್ತು ನಾರುಗಳನ್ನು ಸಹ ಬೆಳೆಯುತ್ತವೆ. ಶಾಶ್ವತ, ಸ್ವಾವಲಂಬಿ, ಜೀವವೈವಿಧ್ಯ ವ್ಯವಸ್ಥೆಯ ಮೂಲಕ ಈ ತೋಟವು ವೈವಿಧ್ಯಮಯವಾಗಿದೆ. ನಾವು ಬಳಸುವ ಹೆಚ್ಚಿನ ಸ್ಥಳೀಯ ಬೀಜಗಳು ಮುಕ್ತ-ಪರಾಗಸ್ಪರ್ಶ ಮತ್ತು ಅಪರೂಪದ್ದಾಗಿದೆ ಎಂದು ಮಾಯಾ ಹೇಳುತ್ತಾರೆ.
ಈ ಉದ್ಯಾನದಲ್ಲಿ ಬೆಳೆಸಲಾಗುವ ತರಕಾರಿಗಳನ್ನು ಮಾರುಕಟ್ಟೆಗೆ ಮಾರಲಾಗುವುದಿಲ್ಲ, ಬದಲಿಗೆ ಶಾಲಾ ಮಕ್ಕಳಿಗೆ, ಶಾಲಾ ಸಿಬ್ಬಂದಿಗಳಿಗೆ, ಶಾಲಾ ಸಮುದಾಯದೊಳಗಿನ ಪ್ರತಿಯೊಬ್ಬರಿಗೂ ಹಂಚಲಾಗುತ್ತದೆ. ಸ್ಥಳೀಯ ಬದನೆಕಾಯಿಯಿಂದ ಹಿಡಿದು ಬಾಲಿಯ ಶುಂಠಿ, ಗೆಣಸು ಎಲ್ಲವನ್ನೂ ಈ ಉದ್ಯಾನವನದಲ್ಲಿ ಬೆಳೆಯಲಾಗುತ್ತಿದೆ.
ಮಾತ್ರವಲ್ಲ ಈ ಶಾಲೆ ಈಗ, ತನ್ನಲ್ಲಿನ ಬೀಜಗಳನ್ನು, ಗಿಡಗಳನ್ನು ಇತರ ಶಾಲೆಗಳಿಗೆ ಅಂಗನವಾಡಿಗಳಿಗೆ ಹಂಚುತ್ತಿದೆ. ಮಾಯಾ ಅವರು ವಿದ್ಯಾರ್ಥಿಗಳೊಂದಿಗೆ ಇತರ ಸ್ವಯಂಸೇವಕರೊಂದಿಗೆ ಸೇರಿ ಚೆನ್ನೈನಲ್ಲಿನ ಅಂಗನವಾಡಿ, ಶಾಲೆಗಳಲ್ಲಿ ಪೌಷ್ಠಿಕ ತರಕಾರಿಗಳನ್ನು ನೀಡುವ ಉದ್ಯಾನವನ್ನು ಬೆಳೆಸಲು ಸಹಾಯ ಮಾಡುತ್ತಿದ್ದಾರೆ.
ಕಳೆದ ವರ್ಷವಷ್ಟೇ, ಮಾಯಾ ಅರಣ್ಯನಾಶದ ವಿರುದ್ಧ ಮಿಯಾವಾಕಿ ಸಸ್ಯಗಳನ್ನು ಬೆಳೆಸುವ ನಿರ್ಧಾರವನ್ನು ತೆಗೆದುಕೊಂಡರು. ಶಾಲೆಯು ಎರಡು ಸಣ್ಣ ಪ್ಯಾಚ್ಗಳನ್ನು ಪ್ರಯೋಗಕ್ಕಾಗಿ ಮೀಸಲಿಡಲು ನಿರ್ಧರಿಸಿದರು. ಸ್ಥಳೀಯ ಬೀಜಗಳನ್ನು ಚೆನ್ನೈನಿಂದ ಪಡೆದುಕೊಂಡರು.
“ಆರಂಭಿಕ ತಿಂಗಳುಗಳಲ್ಲಿ, ಈ ಸಸ್ಯಗಳು ಕೇವಲ 1.5 ಅಡಿ ಎತ್ತರ ಮಾತ್ರ ಬೆಳೆದವು, ಮತ್ತು ಬಹುಶಃ ಇದಕ್ಕೆ ಜೀವರಾಶಿಗಳ ಕೊರತೆಯು ಒಂದು ಸಮಸ್ಯೆಯಾಗಿದೆ ಎಂದು ನಾವು ಭಾವಿಸಿದ್ದೇವೆ. ಆದ್ದರಿಂದ ನಾವು ಸ್ಥಳೀಯ ಕಬ್ಬಿನ ಮಾರಾಟಗಾರರಿಂದ, ಸ್ಥಳೀಯ ತರಕಾರಿ ಮಾರುಕಟ್ಟೆಗಳಿಂದ ಮತ್ತು ಸುತ್ತಮುತ್ತಲಿನ ಅಪಾರ್ಟ್ಮೆಂಟ್ ಸಂಕೀರ್ಣದಿಂದ ತ್ಯಾಜ್ಯವನ್ನು ಪಡೆದುಕೊಂಡೆವು. ಹೊಂಡಗಳನ್ನು ಅಗೆದು ಈ ಜೈವಿಕ ವಿಘಟನೀಯ ತ್ಯಾಜ್ಯವನ್ನು ಅದರಲ್ಲಿ ತುಂಬಿಸಿ ಅದರಲ್ಲಿ ಗಿಡಗಳನ್ನು ನೆಟ್ಟೆವು. ಒಂದು ವರ್ಷದೊಳಗೆ, ಈ ಮರಗಳು ಏಳು-ಎಂಟು ಅಡಿ ಎತ್ತರಕ್ಕೆ ಬೆಳೆದವು” ಎಂದು ಮಾಯಾ ಹೇಳುತ್ತಾರೆ.
ಈ ಮಿಯಾವಾಕಿ ಪ್ಯಾಚ್ ಇಂದು ಕೀಟಗಳನ್ನು, ಹಕ್ಕಿಗಳನ್ನು, ಪ್ರಾಣಿಗಳನ್ನು ಮತ್ತು ಸರಿಸೃಪಗಳನ್ನು ತನ್ನತ್ತ ಆಕರ್ಷಿಸುತ್ತಿದೆ.
ಭೂಮಿಯ ಸಂರಕ್ಷಣೆ, ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ಉದ್ಯಾನವನವನ್ನು ನಿರ್ಮಾಣ ಮಾಡಿದ್ದೇವೆ ಎಂದು ಮಾಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.