ಸಂವಿಧಾನದ 370ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ಜಮ್ಮು ಕಾಶ್ಮೀರದ ಆರ್ಥಿಕತೆಯನ್ನು ವೇಗವಾಗಿ ಪ್ರಗತಿ ಕಾಣುತ್ತಿರುವ ಭಾರತದ ಆರ್ಥಿಕತೆಯೊಂದಿಗೆ ಏಕೀಕೃತಗೊಳಿಸಲಾಗಿದೆ. ಜಮ್ಮು ಕಾಶ್ಮೀರವು ಆರ್ಥಿಕ ಪ್ರಗತಿಗೆ ವ್ಯಾಪಕವಾದ ಅವಕಾಶಗಳನ್ನು ಹೊಂದಿದೆ. ಆದರೆ ಕೈಗಾರಿಕೆಗಳ ಕೊರತೆ ಮತ್ತು ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದಾಗಿ ಅಲ್ಲಿನ ಜನರು ಅವಕಾಶಗಳಿಂದ ವಂಚಿತರಾಗಿದ್ದರು.
CMIE ಅಂಕಿ-ಅಂಶಗಳ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ದೇಶದಲ್ಲೇ ಅತೀ ಹೆಚ್ಚು ಅಂದರೆ ಶೇ.15ರಷ್ಟು ನಿರುದ್ಯೋಗದ ಸಮಸ್ಯೆಯಿದೆ. ಇದು ರಾಷ್ಟ್ರೀಯ ಸರಾಸರಿ ಶೇ.6.4ರಿಂದ ಎರಡು ಪಟ್ಟು ಹೆಚ್ಚು. ಈ ರಾಜ್ಯದ ಬಳಿಕದ ಸ್ಥಾನವನ್ನು ಹರಿಯಾಣ ಮತ್ತು ಕೇರಳ ಹೊಂದಿದೆ. ಇಲ್ಲಿ ಕ್ರಮವಾಗಿ ಶೇ.13.7ರಷ್ಟು ಮತ್ತು ಶೇ.10ರಷ್ಟು ನಿರುದ್ಯೋಗಗಳಿವೆ.
ಜಮ್ಮು ಕಾಶ್ಮೀರದ ಉತ್ಪಾದನಾ ವಲಯವು ಕೇವಲ ಕರಕುಶಲಗಳಿಗೆ ಸೀಮಿತಗೊಂಡಿದೆ. ಇತರ ಉತ್ಪಾದನಾ ವಲಯಗಳು ಇನ್ನೂ ಅಲ್ಲಿ ಬೆಳವಣಿಗೆಯನ್ನು ಕಂಡಿಲ್ಲ ಮತ್ತು ಕೈಗಾರಿಕೆಗಳ ಮೇಲಿನ ಸರ್ಕಾರದ ವ್ಯಯವು 2016-17ರ ಸಾಲಿನಲ್ಲಿ ರಾಜ್ಯ ಜಿಡಿಪಿಯ ಶೇ.0.13ರಿಂದ ಶೇ.0.09ಕ್ಕೆ ಇಳಿಕೆಯಾಗಿದೆ.
ಒಟ್ಟು ಹೊಸ ಯೋಜನೆಗಳಲ್ಲಿ ಈ ರಾಜ್ಯದ ಪಾಲು 2023-14ರಲ್ಲಿ ಶೇ.4.4 ಇದ್ದು, ಅದು 2018-19ರ ಸಾಲಿನಲ್ಲಿ ಶೇ.0.02ಕ್ಕೆ ಇಳಿದಿದೆ.
ಸಂವಿಧಾನದ 370ನೇ ವಿಧಿ ರದ್ಧತಿಗೂ ಮುಂಚಿತವಾಗಿ, ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಹೂಡಿಕೆಯನ್ನು ಮಾಡುವಂತೆ ಕೈಗಾರಿಕೋದ್ಯಮಿಗಳಿಗೆ ಕರೆಯನ್ನು ನೀಡಿತ್ತು. ಕೇಂದ್ರ ಸರಕಾರವು ಶ್ರೀನಗರ ಮೆಟ್ರೋ ಪ್ರಾಜೆಕ್ಟ್ ಅನ್ನು 1300 ಎಂಜಿನಿಯರ್ಗಳನ್ನು ನೇಮಕಗೊಳಿಸುವ ಮೂಲಕ ತ್ವರಿತಗೊಳಿಸಿದೆ. 5,108 ಕೋಟಿ ರೂಪಾಯಿಗಳ ಮೆಟ್ರೋ ಯೋಜನೆ ಇದಾಗಿದ್ದು, ಇಂದಿರಾ ನಗರದಿಂದ ಎಚ್ಎಂಟಿಗೆ ಜಂಕ್ಷನ್ಗೆ ಮತ್ತು ಹುಝುರಿಬಾಗ್ನಿಂದ ಓಸ್ಮಾನಬಾದ್ಗೆ ಶ್ರೀನಗರದ ಮೂಲಕ ಹಾದು ಹೋಗುವ ಎರಡು ಕಾರಿಡಾರ್ಗಳನ್ನು ಒಳಗೊಂಡಿದೆ.
ಕಣಿವೆ ರಾಜ್ಯಕ್ಕೆ ಘೋಷಣೆಯಾದ ಮತ್ತೊಂದು ದೊಡ್ಡ ಯೋಜನೆಯೆಂದರೆ ಸ್ಟೀಲ್ಬರ್ಡ್ ಹೆಲ್ಮೆಟ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್. ಈ ರಾಜ್ಯದ ಮೊದಲ ಹೂಡಿಕೆದಾರರ ಸಮಾವೇಶ ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲಿ ನಡೆಯಲಿದ್ದು, ಇದಕ್ಕೆ ಮೊದಲೇ ಸ್ಟೀಲ್ಬರ್ಡ್ ಹೆಲ್ಮೆಟ್ ಮ್ಯಾನಫ್ಯಾಕ್ಚರಿಂಗ್ ಯುನಿಟ್ ಇಲ್ಲಿ ಸ್ಥಾಪನೆಗೊಳ್ಳಲಿದೆ.
ಕಾನ್ಫಿಡರೇಶನ್ ಆಫ್ ಇಂಡಿಯಾ ಇಂಡಸ್ಟ್ರೀ (ಸಿಐಐ)ನ ಅಧ್ಯಕ್ಷ ಮತ್ತು ಬ್ಯಾಂಕಿಂಗ್ ದಿಗ್ಗಜ ಉದಯ್ ಕೋಟಕ್ ಅವರು ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. “ಈ ರಾಜ್ಯದ ತಲಾ ಆದಾಯ NSDP 63,995 ನಮ್ಮ ದೇಶದ ರಾಷ್ಟ್ರೀಯ ಸರಾಸರಿಯ ಶೇ.55ರಷ್ಟಾಗಿದೆ. ಕೃಷಿಯು ಉತ್ಪಾದನೆಯ ಶೇ.80ರಷ್ಟು ಆಗಿದೆ. ಸರ್ಕಾರ ಮತ್ತು ಸ್ಥಳಿಯ ಉದ್ಯಮಗಳು ಸೇರಿದಂತೆ ಕೈಗಾರಿಕೆಗಳ ಶ್ರಮ ಪ್ರಗತಿ ದರವನ್ನು ವೃದ್ಧಿಸಲು ಮತ್ತು ಉದ್ಯೋಗ, ಜೀವನೋಪಾಯಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಇಂದಿನ ಅವಶ್ಯಕತೆಯಾಗಿದೆ” ಎಂದು ಕೋಟಕ್ ಹೇಳುತ್ತಾರೆ.
ಪ್ರಸಿದ್ದ ಡೈರಿ ಉತ್ಪನ್ನಗಳ ಮಾರಾಟಗಾರ ಅಮೂಲ್ ಜಮ್ಮು ಕಾಶ್ಮೀರದಲ್ಲಿ ಹೂಡಿಕೆಯನ್ನು ಮಾಡಲು ಆಸಕ್ತಿಯನ್ನು ತೋರಿಸಿದೆ. ಹಾಸ್ಪಿಟಾಲಿಟಿ ಇಂಡಸ್ಟ್ರಿಯ ದಿಗ್ಗಜ ಲೆಮನ್ ಟ್ರೀ, ಗುಲ್ಮಾರ್ಗ್ ಮತ್ತು ಸೋನ್ಮಾರ್ಗ್ನಲ್ಲಿ ಎರಡು 35-40 ಬೆಡ್ ಸಾಮರ್ಥ್ಯದ ಹೋಟೆಲ್ ನಿರ್ಮಾಣ ಮಾಡಲಿದೆ. ಈಗಾಗಲೇ ಈ ಸಂಸ್ಥೆ ಕಾತ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೋಟೆಲ್ಗಳನ್ನು ಹೊಂದಿದೆ.
ಜಮ್ಮು ಕಾಶ್ಮೀರದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಹೂಡಿಕೆದಾರರ ಸಮಾವೇಶವನ್ನು ಆಯೋಜನೆಗೊಳಿಸಲು ಸಿಐಐ ಅಲ್ಲಿನ ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಿದೆ. “ಸಿಐಐ ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸದಾಗಿ ರಚನೆಗೊಳ್ಳಲಿರುವ ಆಡಳಿತದೊಂದಿಗೆ ಕಾರ್ಯ ಮಾಡುವುದನ್ನು ಎದುರು ನೋಡಲಿದೆ. ಈ ಮೂಲಕ ಅಲ್ಲಿನ ತ್ವರಿತ ಪ್ರಗತಿಗೆ ಕೊಡುಗೆ ನೀಡಲಾದೆ” ಎಂದು ಕೈಗಾರಿಕಾ ಮಂಡಳಿ ಹೇಳಿದೆ.
ಜಮ್ಮು ಕಾಶ್ಮೀರದ ಆರೋಗ್ಯ, ಶಿಕ್ಷಣ, ಸಾಮಾಜಿಕ ಆರ್ಥಿಕ ಸ್ಥಿತಿಗತಿ ಭಾರತದ ಇತರ ಕೆಲವು ರಾಜ್ಯಗಳಿಗಿಂತ ಉತ್ತಮವಾಗಿದೆ. ಈ ರಾಜ್ಯವು ಇತರ ಕೆಲವು ರಾಜ್ಯಗಳಿಗಿಂತ ಬಹು ಪಾಲು ಹೆಚ್ಚಿನ ಸಾಮಾಜಿಕ ವ್ಯಯವನ್ನು ಹೊಂದಿದೆ. ಜಮ್ಮು ಕಾಶ್ಮೀರದ ತಲಾ ಆದಾಯ ಸಾಮಾಜಿಕ ವ್ಯಯ ವರ್ಷಕ್ಕೆ ಸುಮಾರು 12,000. ಉಳಿದ ರಾಜ್ಯಗಳಲ್ಲಿ ಇದು ರೂ.8,500 ಆಗಿದೆ.
ಆದರೆ ಜಮ್ಮು ಕಾಶ್ಮೀರ ಶೇ.73.6ರಷ್ಟು ಕೆಂದ್ರ ಸರ್ಕಾರದ ಕೊಡುಗೆಯನ್ನು ಮತ್ತು ಶೇ.26ರಷ್ಟು ರಾಜ್ಯದ ಕೊಡುಗೆಯನ್ನು ಹೊಂದಿರುವ ಅತ್ಯಂತ ಗೊಂದಲಮಯವಾದ ರಾಜ್ಯ. ಇಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಹಣವನ್ನು ಸುರಿಯುತ್ತಿರುವುದರಿಂದ ಬೇರೆ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಇದರ ಸ್ಥಿತಿಗತಿ ಉತ್ತಮವಾಗಿದೆ. ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದದಿಯ ಪ್ರಕಾರ, ಜಮ್ಮು ಕಾಶ್ಮೀರವು ಶೇ.1ರಷ್ಟು ಜನಸಂಖ್ಯೆಯು ಶೇ.10ರಷ್ಟು ಕೇಂದ್ರದಿಂದ ಅನುದಾನವನ್ನು ಪಡೆದುಕೊಳ್ಳುತ್ತಿದೆ.
ಪ್ರಸ್ತುತ ಆ ರಾಜ್ಯಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಂಡಿದೆ.ಇದರಿಂದ ಅಲ್ಲಿ ಖಾಸಗಿ ಹೂಡಿಕೆ ಹೆಚ್ಚಾಗಲಿದೆ. ಇದರಿಂದ ಆ ರಾಜ್ಯ ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇಲ್ಲ. ಕೈಗಾರಿಕೆ ಮತ್ತು ಕಾರ್ಪೋರೇಟ್ ಚಟುವಟಿಕೆ ಹೆಚ್ಚಾದಂತೆ ಆ ರಾಜ್ಯ ತನ್ನದೇ ಸಂಪನ್ಮೂಲಗಳಿಂದ ಆದಾಯವನ್ನು ಗಳಿಸಿಕೊಳ್ಳಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.