ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಎಂದರೆ ನಮಗೆ ನೆನಪಾಗೋದು ಅವರ ಸಾಹಿತ್ಯ, ಜನಪದ ಜ್ಞಾನ. ಸಾಹಿತಿಯಾಗಿ, ಅತ್ಯುತ್ತಮ ಸಂಘಟನಾ ಪಟುವಾಗಿ, ಸಮಾಜಸೇವಕರಾಗಿ ಅವರು ನೀಡಿದ ಕೊಡುಗೆ ಅಪಾರ ಮತ್ತು ಅನನ್ಯ. ತುಳು ಬರಹಗಾರರಾಗಿ ಅವರು ತುಳುನಾಡಿನ ಪರಂಪರೆ ಶ್ರೇಷ್ಠತೆಗಳನ್ನು ಎತ್ತಿ ಹಿಡಿಯುವ ಕಾಯಕವನ್ನು ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ. ಅಂಕಣಕಾರರಾಗಿದ್ದರು, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯೂ ಅವರಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿ 1926ರ ಮಾರ್ಚ್ 19ರಂದು ಲಕ್ಶ್ಮೀನಾರಾಯಣ ಆಳ್ವರು ಜನಿಸಿದರು, `ಏರ್ಯ ಬೀಡು’ ಎಂಬ ಪ್ರತಿಷ್ಠಿತ ಮಾತೃ ಮೂಲ ಪದ್ಧತಿಯ, ದೈವಾರಾಧನೆಯ, ಕೃಷಿ ಪ್ರಧಾನ ಬಂಟ ಮನೆತನಕ್ಕೆ ಸೇರಿದವರು. ತಾಯಿ ಸೋಮಕ್ಕ ಮತ್ತು ತಂದೆ ಸುಬ್ಬಯ್ಯ ಆಳ್ವ. ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಬಂಟ್ವಾಳದಲ್ಲಿ. ಅವರು ಹೈಸ್ಕೂಲು ಓದಿದ್ದು ಕೆನರಾ ಹೈಸ್ಕೂಲು ಮಂಗಳೂರಿನಲ್ಲಿ. ಸ್ವಾತಂತ್ರ್ಯ ಹೋರಾಟಗಳು ತೀವ್ರವಾಗಿದ್ದ ಕಾಲದಲ್ಲಿ ಹುಟ್ಟಿದ್ದರಿಂದ ಸ್ವಾತಂತ್ರ್ಯಪೂರ್ವದ ಆದರ್ಶಗಳನ್ನು ಅವರು ಮೈಗೂಡಿಸಿಕೊಂಡಿದ್ದರು. ಹೋರಾಟಗಾರರ ಚಿಂತನೆಗಳು ಮತ್ತು ಆದರ್ಶಗಳಿಂದ ಅವರು ಪ್ರೇರಿತಗೊಂಡಿದ್ದರು. ಗಾಂಧೀಜಿಯವರು ‘ಭಾರತ ಬಿಟ್ಟು ತೊಲಗಿ’ ಎಂದು ಬ್ರಿಟಿಷರಿಗೆ ಕರೆ ಕೊಟ್ಟಾಗ ಆಳ್ವರು ವಿದ್ಯಾರ್ಥಿ ದಿಸೆಯಲ್ಲಿದ್ದರು. ಇವರು ಆರನೆಯ ತರಗತಿಯಲ್ಲಿ ಕಲಿಯುತ್ತಿದ್ದಾಗ 1949ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆಯಿತು. ಆ ದಿನಗಳಲ್ಲಿ ಎರಡು ದಿನಗಳ ಕಾಲ ಶಾಲೆಗೆ ಬಹಿಷ್ಕಾರ ಹಾಕಿ ರಸ್ತೆಯಲ್ಲಿ ನಿಂತು `ಭಾರತ್ ಮಾತಾಕಿ ಜೈ’ ಎಂದು` ಕ್ವಿಟ್ ಇಂಡಿಯಾ’ ‘ಮಹಾತ್ಮಾ ಗಾಂಧೀಜೀ ಕಿ ಜೈ’ ಎಂದು ಅವರು ಘೋಷಣೆ ಹಾಕಿದ್ದರು.
ಆರನೆಯ ತರಗತಿಯಲ್ಲಿರುವಾಗಲೇ ಪುಸ್ತಕಗಳ ಓದಿನ ಆಸಕ್ತಿ ಅವರಿಗೆ ಬೆಳೆದಿತ್ತು. ಓದು ಅವರಿಗೆ ಬರೆಯಲು ಪ್ರೇರಣೆಯನ್ನು ನೀಡಿತು. ಮೊದಮೊದಲಿಗೆ ಕತೆಗಳು, ಪತ್ತೇದಾರಿ ಕಾದಂಬರಿಗಳು, ಕಾದಂಬರಿಗಳನ್ನು ರಚಿಸಿದ ಅವರು ಬಳಿಕ ಗಂಭೀರ ಕೃತಿಗಳನ್ನು ರಚಿಸಲಾರಂಭಿಸಿದರು. ನಾಡು ನುಡಿ, ಯಕ್ಷಗಾನ, ಭಾಗವತಿಕೆ, ದೈವಾರಾಧನೆ, ತುಳು ಜನಪದ, ಬಂಟ ಸಮುದಾಯಕ್ಕೆ ಸಂಬಂಧಿಸಿದ ಅನೇಕ ಕೃತಿಗಳನ್ನು ಅವರು ರಚಿಸಿದ್ದಾರೆ.
ಆಳ್ವರು ಬರೆದ ರಾಮಾಶ್ವಮೇಧ ತರಂಗಗಳು ಕೃತಿ 1959 ರಲ್ಲಿ ಪ್ರಕಟವಾಯಿತು. ಈ ಕೃತಿಯು ಅಂದಿನ ಮೈಸೂರು ಮತ್ತು ಮದರಾಸು ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿ ಪರಿಗಣಿತವಾಗಿತ್ತು. ಸ್ನೇಹಸೇತು-ಪತ್ರರೂಪದ ಕಾದಂಬರಿ ; ಜೀವನ ಚಿತ್ರ-ಮುಳಿಯ ತಿಮ್ಮಪ್ಪಯ್ಯನವರ ಕುರಿತದ್ದು; ಕೃತಿವಿಮರ್ಶೆ-ನಾಗೇಗೌಡರ ಸ್ವಾಗತ ಗೀತೆ ಅವರು ಬರೆದ ಅನೇಕ ಕೃತಿಗಳಲ್ಲಿ ಸೇರಿವೆ. ಮೊದಲ ಮಳೆ, ಸಂಚಯ, ಓರಗೆಗೆ ಒಲವಿನ ಒಸಗೆ ಮುಂತಾದುವುಗಳನ್ನೂ ಅವರು ಬರೆದಿದ್ದಾರೆ. ತುಳುನಾಡಿನ ಭೂತಾರಾಧನೆಯ ಕುರಿತಾದ ಸಮಗ್ರ ಅಧ್ಯಯನ ಗ್ರಂಥ ‘ಮಂಗಳ ತಿಮರು’ ಭಾರೀ ಖ್ಯಾತಿಯನ್ನು ಪಡೆದುಕೊಂಡಿದೆ. ಕೌಟುಂಬಿಕ ಪರಿಚಯದ ‘ನೂರರ ನೆನಪು’, ಸಂಪಾದಿತ ಗ್ರಂಥ-‘ಗಾನ ಕೋಗಿಲೆ’ ಯಕ್ಷಗಾನ ಭಾಗವತ ದಾಮೋದರ ಮಂಡಚ್ಛರ ಸಂಸ್ಮರಣ ಗ್ರಂಥವನ್ನೂ ಅವರು ರಚಿಸಿದ್ದಾರೆ.
ನೂರರ ನೆನಪು, ಪರಿಚಯ, ಶ್ರೀರಾಮಾಶ್ವಮೇಧದ ರಸತರಂಗಗಳು, ಸ್ನೇಹಸೇತು, ಪತ್ರ ಸಾಹಿತ್ಯ ಸಂಪಾದಿಸಿ, ಪತ್ರಾವಳಿ ಅವರ ಪ್ರಸಿದ್ಧ ಕೃತಿಗಳಾಗಿವೆ.
ಸಾಹಿತ್ಯ ಸಮ್ಮೇಳನ, ಕೆನರಾ ಜ್ಯೂನಿಯರ್ ಕಾಲೇಜ್ ಬೆಳ್ಳಿಹಬ್ಬ, ಬಂಟರ ಸಂಘದ ಅಮೃತ ಮಹೋತ್ಸವ, ತುಳು ಸಾಹಿತ್ಯ ಅಕಾಡಮಿ ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ. ಅವರ ಸಾಹಿತ್ಯ ಪ್ರತಿಭೆಗೆ ಅನೇಕ ಪ್ರಶಸ್ತಿ, ಸನ್ಮಾನಗಳು ಒಲಿದು ಬಂದಿವೆ. ಹೀಗೆ ಬಂದ ಹಣದಿಂದ ಶಾಶ್ವತ ನಿಧಿಯನ್ನು ಸ್ಥಾಪಿಸಿರುವ ಅವರು, ಅದರ ಮೂಲಕ ವಿದ್ವಾಂಸರನ್ನು ಗೌರವಿಸಿ ಸನ್ಮಾನಿಸುವ ಕಾರ್ಯವನ್ನು ಮಾಡಿದ್ದಾರೆ. ಬಂಟ್ವಾಳ ತಾಲ್ಲೂಕಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕಾಸರಗೋಡು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕೀರ್ತಿ ಅವರದ್ದು. ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ, ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಸಮಿತಿ, ಪರಮೇಶ್ವರಭಟ್ಟ ಪ್ರಶಸ್ತಿ ಸಮಿತಿ, ಪೊಳಲಿ ಶೀನಪ್ಪ ಹೆಗಡೆ ಪ್ರಶಸ್ತಿ ಸಮಿತಿಗಳ ಅಧ್ಯಕ್ಷರಾಗಿಯೂ ದುಡಿದಿದ್ದಾರೆ.
ಸಾಹಿತ್ಯ ಲೋಕದ ಮಿನುಗು ನಕ್ಷತ್ರದಂತಿದ್ದ ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ನಮ್ಮನ್ನಗಲಿದ್ದಾರೆ. ಆದರೆ ತಮ್ಮ ಸಾಹಿತ್ಯದ ಮೂಲಕ ಅವರು ನಮ್ಮೊಂದಿಗೆ ಸದಾ ಇರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.