ಭಾರತ ಮಾತೆಯ ಪರಮ ವೈಭವ ಸ್ಥಿತಿಗಾಗಿ, ಆಕೆಯ ಮಾನ, ಘನತೆ ಗೌರವಗಳ ರಕ್ಷಣೆಗಾಗಿ ಅಸಂಖ್ಯಾತ ವೀರರು ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದರು. ಶ್ರೇಷ್ಠ ಕವಿವರ್ಯ ಬಂಕಿಮಚಂದ್ರ ಚಟರ್ಜಿಯವರು “ವಂದೇಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ” ಎಂಬ ಗೀತೆಯನ್ನೇ ರಚಿಸಿ, ಅದು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ, ಪ್ರೇರಣೆಗಳ ರಣಮಂತ್ರವಾಗುವಂತೆ ಮಾಡಿದರು. ಕನ್ನಡದ ಹೆಮ್ಮೆಯ ಕವಿ ಕುವೆಂಪು “ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಎಂದು ಭಾರತ ಮಾತೆಯೊಂದಿಗೆ ಕರ್ನಾಟಕ ಮಾತೆಯನ್ನು ಕೊಂಡಾಡಿದರು. ‘ಭಾರತ ಮಾತಾ ಕೀ ಜೈ’ ಎಂದು ಪ್ರತಿನಿತ್ಯ ಕೋಟ್ಯಂತರ ದೇಶಭಕ್ತ ಕಂಠಗಳು ಉಲಿಯುತ್ತಲೇ ಇರುತ್ತವೆ. ಆದರೆ ಇಲ್ಲೊಬ್ಬ ಸಂತ ಭಾರತ ಮಾತೆಗಾಗಿ ಒಂದು ಭವ್ಯ ಮಂದಿರವನ್ನೇ ನಿರ್ಮಿಸಿ ಅದನ್ನು ದರ್ಶಿಸುವವರಿಗೆ ನಿರಂತರ ಸ್ಫೂರ್ತಿ, ದೇಶಪ್ರೇಮ ಮೂಡಿಸುವ ಮಹಾನ್ ಕಾರ್ಯ ಮಾಡಿರುವುದು ಹಲವರಿಗೆ ತಿಳಿದಿಲ್ಲ. ಅವರೇ ಇದೇ ಜೂನ್ 25 ರಂದು ಇಹಲೋಕ ತ್ಯಜಿಸಿದ ಸ್ವಾಮಿ ಸತ್ಯಮಿತ್ರಾನಂದ ಗಿರಿ ಮಹಾರಾಜ್. ಹರಿದ್ವಾರದ ಗಂಗಾನದಿಯ ತಟದಲ್ಲಿ ನಿರ್ಮಿಸಿರುವ 8 ಅಂತಸ್ತುಗಳ ಭವ್ಯ ಭಾರತ ಮಾತಾ ಮಂದಿರ ಇನ್ನು ಸಾವಿರಾರು ವರ್ಷಗಳ ಕಾಲ, ಅದನ್ನು ಸಂದರ್ಶಿಸುವವರಿಗೆ ದೇಶಭಕ್ತಿ, ದೇಶಪ್ರೇಮದ ಸಿಂಚನ ಮಾಡಿಸುವುದರಲ್ಲಿ ಅಚ್ಚರಿಯೇನಿಲ್ಲ.
ಸ್ವಾಮಿ ಸತ್ಯಮಿತ್ರಾನಂದ ಗಿರಿಯವರು ಒಬ್ಬ ಹಿಂದು ಆಧ್ಯಾತ್ಮಿಕ ಗುರು. ಚಿಕ್ಕ ವಯಸ್ಸಿನಲ್ಲೇ ಜ್ಯೋರ್ತಿಮಠದ ಉಪಪೀಠವೊಂದಕ್ಕೆ ಜಗದ್ಗುರು ಶಂಕರಾಚಾರ್ಯರಾಗಿ ಆಯ್ಕೆಯಾದವರು. ಆದರೆ ಸನಾತನಹಿಂದು ಧರ್ಮದ ಶ್ರೇಷ್ಠ ವಿಚಾರಗಳನ್ನು ಜಗದಗಲ ಬಿತ್ತರಿಸಲು ಅವರಿಗೆ ಶಂಕರಾಚಾರ್ಯ ಪೀಠದ ಇತಿಮಿತಿ ಅಡ್ಡಿಯಾಗಿದ್ದರಿಂದ ಆ ಪೀಠ ತ್ಯಜಿಸಿದರು. ಸನ್ಯಾಸಿಯಾಗಿದ್ದುಕೊಂಡೇ 87 ವರ್ಷಗಳಷ್ಟು ದೀರ್ಘ ಕಾಲ ಸನಾತನ ಹಿಂದು ಧರ್ಮದ ರಕ್ಷಣೆಗಾಗಿ ಹಲವಾರು ಪೂರಕ ಚಟುವಟಿಕೆಗಳಲ್ಲಿ ನಿರತರಾದರು. ಅವುಗಳಲ್ಲಿ ಹರಿದ್ವಾರದಲ್ಲಿ ನಿರ್ಮಿಸಲಾಗಿರುವ ಭಾರತ ಮಾತಾ ಮಂದಿರವೂ ಒಂದು.
ಸ್ವಾಮಿ ಸತ್ಯಮಿತ್ರಾನಂದರು ಹುಟ್ಟಿದ್ದು 1932 ರ ಸೆಪ್ಟೆಂಬರ್ 19 ರಂದು ಆಗ್ರಾದ ಒಂದು ಮಧ್ಯಮವರ್ಗದ ಬ್ರಾಹ್ಮಣ ಕುಟುಂಬದಲ್ಲಿ. ತಂದೆ ಶಿವಶಂಕರ ಪಾಂಡೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ. ತಾಯಿ ತ್ರಿವೇಣಿ ಗೃಹಿಣಿ. ತಂದೆ ಪಾಂಡೆಯವರು ಹೆಸರಾಂತ ಶಿಕ್ಷಕರಾಗಿದ್ದು, ಆಗಿನ ರಾಷ್ಟ್ರಪತಿ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರಿಂದ ರಾಷ್ಟ್ರೀಯ ಪುರಸ್ಕಾರವನ್ನು ಪಡೆದಿದ್ದರು. ಸತ್ಯಮಿತ್ರಾನಂದರ ಪೂರ್ವಾಶ್ರಮದ ಹೆಸರು ಅಂಬಿಕಾ ಪ್ರಸಾದ್ ಎಂದು. ಹಿಂದಿ, ಸಂಸ್ಕೃತ ಅಭ್ಯಸಿಸಿದ ಸತ್ಯಮಿತ್ರಾನಂದರು ಆಗ್ರಾ ವಿ.ವಿ.ಯಿಂದ ಎಂ.ಎ. ಪದವಿ ಪಡೆದರು. ಹಿಂದಿ ಭಾಷೆಯಲ್ಲಿ ‘ಸಾಹಿತ್ಯ ರತ್ನ’ ಪದವಿಯ ಜೊತೆಗೆ ವಾರಾಣಸಿ ವಿದ್ಯಾಪೀಠದಿಂದ ಶಾಸ್ತ್ರೀ ಪದವಿಯೂ ಪ್ರಾಪ್ತ. ವಿದ್ಯಾಭ್ಯಾಸದ ಬಳಿಕ ಉದ್ಯೋಗದ ಆಕರ್ಷಣೆಗೆ ಮಾರು ಹೋಗದೆ, ಅವರು ಸೀದಾ ನಡೆದಿದ್ದು ಸ್ವಾಮಿ ವೇದವ್ಯಾಸಾನಂದ ಎಂಬ ಸ್ವಾಮೀಜಿಯವರ ಬಳಿಗೆ. ಅವರಿಂದಲೇ ಸಂನ್ಯಾಸ ದೀಕ್ಷೆ ಪಡೆದ ಅಂಬಿಕಾಪ್ರಸಾದರು ಸತ್ಯಮಿತ್ರಾನಂದ ಗಿರಿಯಾಗಿ ಬದಲಾದರು.
ತಮ್ಮ 27 ನೇ ವಯಸ್ಸಿಗೇ ಜ್ಯೋತಿರ್ಮಠದ ಉತ್ತರಾಮ್ನಾಯ ಮಠಕ್ಕೆ ಜಗದ್ಗುರು ಶಂಕರಾಚಾರ್ಯರಾಗಿ ಆಯ್ಕೆಯಾದದ್ದು ಸತ್ಯಮಿತ್ರಾನಂದರ ಬದುಕಿನ ಒಂದು ಪ್ರಮುಖ ಘಟ್ಟ. ಆದರೇನೋ ಅವರಿಗೆ ಶಂಕರಾಚಾರ್ಯ ಪೀಠ ತನ್ನ ಕಾರ್ಯವ್ಯಾಪ್ತಿಗೆ ತುಂಬಾ ಚಿಕ್ಕದೆನಿಸಿತು. ಅಲ್ಲೇ ಇದ್ದು ತಾನಂದುಕೊಂಡಿದ್ದನ್ನೆಲ್ಲ ಸಾಧಿಸುವುದು ಅಸಾಧ್ಯವೆನಿಸಿತು. ಶಂಕರಾಚಾರ್ಯ ಪೀಠದ ಸಂಕೇತವಾಗಿದ್ದ ದಂಡವನ್ನು ಗಂಗಾನದಿಯಲ್ಲಿ ವಿಸರ್ಜಿಸಿ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿದು’ ಹೊಸ ಬದುಕಿನತ್ತ ಹೆಜ್ಜೆ ಹಾಕಿದರು.
ಶಂಕರಾಚಾರ್ಯ ಪೀಠ ತ್ಯಜಿಸಿದರೂ ಸತ್ಯಮಿತ್ರಾನಂದಗಿರಿಯವರು ಸಂನ್ಯಾಸಕ್ಕೆ ವಿದಾಯ ಹೇಳಲಿಲ್ಲ. ಸಂನ್ಯಾಸಿಯಾಗಿದ್ದುಕೊಂಡೇ ಹಲವಾರು ಸಾಮಾಜಿಕ, ಧಾರ್ಮಿಕ, ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ದೇಶದ ಕೋಟಿ ಕೋಟಿ ಜನತೆಯ ದೇಶಭಕ್ತಿ ಭಾವನೆ ಮೂಡಿಸುವ ಭಾರತಮಾತಾ ಮಂದಿರ ನಿರ್ಮಾಣ ಈ ಚಟುವಟಿಕೆಗಳಲ್ಲಿ ಬಹುಮುಖ್ಯವಾದುದು. 1983 ರ ಮೇ 15 ರಂದು ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಭಾರತ ಮಾತಾ ಮಂದಿರವನ್ನು ಉದ್ಘಾಟಿಸಿದರು. ಸತ್ಯಾಮಿತ್ರಾನಂದ ಗಿರಿಯವರ ಸಮನ್ವಯ ಆಶ್ರಮದ ಪಕ್ಕದಲ್ಲೇ ಇರುವ ಭಾರತ ಮಾತಾ ಮಂದಿರ 180 ಅಡಿ ಎತ್ತರದ (55 ಮೀಟರ್) ಎಂಟು ಮಹಡಿಗಳ ಭವ್ಯ ಕಟ್ಟಡ. ಪ್ರತಿಯೊಂದು ಮಹಡಿಯಲ್ಲೂ ರಾಮಾಯಣ, ಮಹಾಭಾರತ, ಇತಿಹಾಸ, ಸಂಸ್ಕೃತಿಗಳಿಗೆ ಸಂಬಂಧಿಸಿದ ಬಹು ಆಕರ್ಷಕ, ಸುಂದರ ಪ್ರತಿಮೆಗಳು, ವಿವರಗಳಿವೆ. ಮೊದಲನೆ ನೆಲ ಮಹಡಿಯಲ್ಲಿ ಭಾರತ ಮಾತೆಯ ಭವ್ಯ ಸುಂದರ ಪುತ್ಥಳಿಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ. ಮೂರನೇ ಮಹಡಿ – ಮಾತೃಮಂದಿರ. ಇಲ್ಲಿ ಮೀರಾಬಾಯಿ, ಸಾವಿತ್ರಿ, ಮೈತ್ರಿ, ಗಾರ್ಗಿ ಮೊದಲಾದ ಭಾರತದ ಶ್ರೇಷ್ಠ ಮಾತೆಯರ ಸಾಲು ಸಾಲು ಪ್ರತಿಮೆಗಳಿವೆ.
ಜೈನ, ಬೌದ್ಧ, ಸಿಖ್ ಮತಗಳು ಸೇರಿದಂತೆ ಹಿಂದು ಧರ್ಮದ ವಿವಿಧ ಮತ, ಸಂಪ್ರದಾಯಗಳಿಗೆ ಸೇರಿದ ಮಹಾನ್ ಸಂತರ ಸಂತ ಮಂದಿರ – ನಾಲ್ಕನೇ ಮಹಡಿಯಲ್ಲಿದೆ. 5ನೇ ಮಹಡಿಯ ದೊಡ್ಡದೊಂದು ಸಭಾಂಗಣ. ಅದರ ವಿಶಾಲವಾದ ಗೋಡೆಗಳ ಮೇಲೆ ಭಾರತದಲ್ಲಿ ಪ್ರಕಾಶಗೊಂಡ, ಸಹಜೀವನ ನಡೆಸಿದ, ಭಾರತೀಯರು ಆಚರಿಸಿದ ವಿವಿಧ ಧರ್ಮಗಳಿಗೆ ಸಂಬಂಧಿಸಿದ ತೈಲಚಿತ್ರಗಳು, ವಿವಿಧ ಪ್ರಾಂತ್ಯಗಳಲ್ಲಿ ಹರಡಿರುವ ವೈಶಿಷ್ಟ್ಯಪೂರ್ಣ ಸಂಪ್ರದಾಯಗಳ ವಿವರಗಳಿವೆ. 6ನೇ ಮಹಡಿಯಲ್ಲಿರುವುದು ವಿವಿಧ ಶಕ್ತಿ ದೇವತೆಗಳ ಸುಂದರ ಪುತ್ಥಳಿಗಳು. 7ನೇ ಮಹಡಿ ಸಂಪೂರ್ಣವಾಗಿ ವಿಷ್ಣುವಿನ ಅವತಾರಕ್ಕೆ ಮೀಸಲು. ೮ನೇ ಮಹಡಿಯಲ್ಲಿ ಈಶ್ವರನ ಭವ್ಯ ವಿಗ್ರಹ, ಹಿನ್ನೆಲೆಯಲ್ಲಿ ಹಿಮಾಲಯ, ಕೇದಾರ, ಹರಿದ್ವಾರ , ಸಪ್ತ ಸರೋವರಗಳ ಭವ್ಯನೋಟ ಕಾಣಬಹುದು. 1998 ರಲ್ಲಿ ಸ್ವಾಮಿ ಸತ್ಯಮಿತ್ರಾನಂದ ಪ್ರತಿಷ್ಠಾನ ಆರಂಭಗೊಂಡ ಬಳಿಕ ರೇಣುಕೂಟ್, ಜಬಲ್ಪುರ, ಜೋಧ್ಪುರ, ಇಂದೋರ್ ಮತ್ತು ಅಹ್ಮದಾಬಾದ್ಗಳಲ್ಲಿ ಪ್ರತಿಷ್ಠಾನದ ಶಾಖೆಗಳನ್ನು ತೆರೆಯಲಾಗಿದೆ.
ಸ್ವಾಮಿ ವಿವೇಕಾನಂದರು ಆರಂಭಿಸಿದ ಹಿಂದು ಧರ್ಮ, ಸಂಸ್ಕೃತಿಯ ಪ್ರಸಾರ ಕಾರ್ಯವನ್ನು ಶ್ರದ್ಧೆಯಿಂದ ಮುಂದುವರೆಸಿದವರಲ್ಲಿ ಸ್ವಾಮಿ ಸತ್ಯಮಿತ್ರಾನಂದರು ಪ್ರಮುಖರು ಈ ಶ್ರೇಷ್ಠ ಉದ್ದೇಶಕ್ಕಾಗಿ ಅವರು ಆಫ್ರಿಕ, ಇಂಗ್ಲೆಂಡ್, ಜರ್ಮನಿ, ಸ್ವಿಜರ್ಲೆಂಡ್, ಹಾಲೆಂಡ್, ಅಮೆರಿಕ, ಕೆನಡ, ಆಸ್ಟ್ರೇಲಿಯ, ಜಪಾನ್, ಇಂಡೋನೇಷಿಯಾ, ಮಲೇಶಿಯಾ, ಹಾಂಕಾಂಗ್, ಥಾಯ್ಲೆಂಡ್, ಸಿಂಗಾಪುರ, ಫಿಜಿ, ಮಾರಿಷಸ್, ಫಿಲಿಫೈನ್ಸ್…. ಹೀಗೆ ಜಗತ್ತಿನಾದ್ಯಂತ ದಣಿವರಿಯದೆ ಸುತ್ತಿದರು. ಸ್ವಾಮೀಜಿಯವರ ಅದ್ಭುತ ವಾಗ್ಝರಿ, ಹಿಂದು ಧರ್ಮದ ಕುರಿತ ಅರ್ಥಪೂರ್ಣ ವ್ಯಾಖ್ಯಾನ ಅವರು ಹೋದೆಡೆಯಲ್ಲೆಲ್ಲ ಸಾವಿರಾರು ಮಂದಿ ಅನುಯಾಯಿಗಳನ್ನು , ಅಭಿಮಾನಿಗಳನ್ನು ಉತ್ಸ್ಫೂರ್ತಗೊಳಿಸಿತು.
ಹರಿದ್ವಾರದಲ್ಲಿ ಸ್ವಾಮೀಜಿ ಸಮನ್ವಯ ಕುಟೀರ ಮತ್ತು ಸಮನ್ವಯ ಸೇವಾ ಟ್ರಸ್ಟ್ಗಳೆಂಬ ಇನ್ನೆರಡು ಸಂಸ್ಥೆಗಳನ್ನೂ ಆರಂಭಿಸಿದ್ದಾರೆ. ಸಮನ್ವಯ ಕುಟೀರ ಸಂಪೂರ್ಣವಾಗಿ ಅಧ್ಯಾತ್ಮ ಸಾಧಕರಿಗೆ ಮೀಸಲಾಗಿದ್ದು ಅಲ್ಲಿ ಪುರಾತನ ಧಾರ್ಮಿಕ ಗ್ರಂಥಗಳಲ್ಲದೆ ಸತ್ಸಂಗ ಭವನ, ಮೊಬೈಲ್ ಡಿಸ್ಪೆನ್ಸರಿ, ಗ್ರಂಥಾಲಯ, ಜೊತೆಗೆ ಭಕ್ತರಿಗೆ ಉಳಿದುಕೊಳ್ಳಲು ಆಧುನಿಕ ಸೌಲಭ್ಯಸಹಿತ ವಸತಿಗೃಹಗಳೂ ಇವೆ. ಸಮನ್ವಯ ಕುಟೀರಕ್ಕೆ ಭೇಟಿ ನೀಡುವವರು ಅಧ್ಯಯನ, ಧ್ಯಾನ ಮಾಡಬಹುದು. ಯೋಗ ಕಲಿಯಬಹುದು. ಅಧ್ಯಾತ್ಮಿಕ ಸತ್ಸಂಗಗಳಲ್ಲಿ ಪಾಲ್ಗೊಳ್ಳಬಹುದು. ಜಾತಿಭೇದದ ಯಾವುದೇ ಅಡ್ಡಗೋಡೆಗಳು ಇಲ್ಲಿಲ್ಲ. ಅಸ್ಪೃಶ್ಯತೆ ಒಂದು ಮಹಾಪಾಪ ಎಂದೇ ಸತ್ಯಮಿತ್ರಾನಂದರು ತಮ್ಮ ಪ್ರವಚನಗಳಲ್ಲಿ ತಪ್ಪದೆ ಉಲ್ಲೇಖಿಸುತ್ತಾ ಬಂದಿದ್ದಾರೆ.
ಭಾರತ ಮಾತಾ ಮಂದಿರಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ವಾಜಪೇಯಿ, ಈಗಿನ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ನ ಪ್ರಮುಖರಾದ ಬಾಳಾ ಸಾಹೇಬ ದೇವರಸ್, ಕು.ಸೀ. ಸುದರ್ಶನ್, ಡಾ. ಮೋಹನ್ ಭಾಗವತ್ ಮೊದಲಾದವರೆಲ್ಲ ಭೇಟಿ ನೀಡಿ, ಸತ್ಯಮಿತ್ರಾನಂದ ಗಿರಿಯವರ ಅದ್ಭುತ ಪರಿಕಲ್ಪನೆಯನ್ನು ಶ್ಲಾಘಿಸಿದ್ದಾರೆ. ಸಮನ್ವಯ ಕುಟೀರದಲ್ಲಿ ಉಚಿತ ವಿದ್ಯಾರ್ಥಿ ನಿಲಯ, ವೃದ್ಧಾಶ್ರಮ, ಉಚಿತ ವೈದ್ಯಕೀಯ ಚಿಕಿತ್ಸಾ ಕೇಂದ್ರ, ಗೋಶಾಲೆ ಇತ್ಯಾದಿಗಳೂ ಇವೆ.
ಇಂತಹ ಭಾರತ ಮಾತಾ ಮಂದಿರವನ್ನು ಎರಡನೇ ಬಾರಿ ನೋಡುವ ಸದವಕಾಶ ನನಗೆ ಮೊನ್ನೆ ಜೂನ್ 20 ರಂದು ನಮ್ಮ ಚಾರ್ಧಾಮ್ ಯಾತ್ರೆಯ ನಡುವೆ ದೊರಕಿತ್ತು. 1992 ರಲ್ಲಿ ಒಮ್ಮೆ ಹರಿದ್ವಾರಕ್ಕೆ ಹೋಗಿದ್ದಾಗ ಈ ಮಂದಿರವನ್ನು ವೀಕ್ಷಿಸಿದ್ದೆ. ಭಾರತ ಮಾತಾ ಮಂದಿರದಲ್ಲಿ ಆರೆಸ್ಸೆಸ್ ಸಂಸ್ಥಾಪಕ ಡಾ. ಹೆಡಗೇವಾರ್ ಅವರ ಪುತ್ಥಳಿಯನ್ನೂ ಪ್ರದರ್ಶಿಸಲಾಗಿದೆ. ಆ ಪುತ್ಥಳಿಯನ್ನು ವೀಕ್ಷಿಸಿದ ಸಂಘದ ಸ್ವಯಂಸೇವಕರಿಗೆ, ಅಭಿಮಾನಿಗಳಿಗೆ ಸಂತಸವಾಗುವುದು ತೀರಾ ಸಹಜ.
ಹಿಂದು ಧರ್ಮ, ಸಂಸ್ಕೃತಿ, ಭಾರತ ಮಾತೆಯ ಸೇವೆಗಾಗಿಯೇ ತಮ್ಮ ಇಡೀ ಜೀವನ ಮುಡುಪಾಗಿಟ್ಟ ಸ್ವಾಮಿ ಸತ್ಯಮಿತ್ರಾನಂದ ಗಿರಿ ಮಹಾರಾಜ್ ಅವರು ಮೊನ್ನೆ ಜೂನ್ 25 ರಂದು ಕಾಲವಾದರೆಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ, ನನ್ನ ಮನಸ್ಸು ಒಂದು ಕ್ಷಣ ಅಧೀರವಾಯಿತು. ಆರೆಸ್ಸೆಸ್ ಸಮಾವೇಶದಲ್ಲೊಮ್ಮೆ ಅವರ ಪ್ರಖರ ಭಾಷಣವನ್ನು ಆಲಿಸಿದ್ದೆ. ಅವರ ನಿಧನಕ್ಕೆ ಕೇವಲ 5 ದಿನಗಳ ಮೊದಲು ಹರಿದ್ವಾರದ ಭಾರತ ಮಾತಾ ಮಂದಿರಕ್ಕೆ ಭೇಟಿ ನೀಡಿದ್ದೆ. ಆಗ ಅವರು ಪಕ್ಕದಲ್ಲೇ ಇರುವ ಸಮನ್ವಯ ಕುಟೀರದಲ್ಲಿ ಖಾಯಿಲೆಯಿಂದಾಗಿ ವಿಶ್ರಾಂತಿಯಲ್ಲಿರುವ ಮಾಹಿತಿ ನನಗೆ ತಿಳಿಯಲೇ ಇಲ್ಲ. ಛೆ, ತಿಳಿದಿದ್ದರೆ ಕೊನೆಯ ಬಾರಿಗೆ ಮಹಾನ್ ಸಂತರೊಬ್ಬರನ್ನು ಕಾಣುವ ಅವಕಾಶ ಸಿಗುತ್ತಿತ್ತು. ಯಾವುದಕ್ಕೂ ಅದೃಷ್ಟ ಇರಬೇಕಲ್ಲವೇ?
ಹರಿದ್ವಾರಕ್ಕೆ ನೀವು ಹೋದರೆ, ಗಂಗೆಯ ದಡದಲ್ಲಿರುವ ಭಾರತ ಮಾತಾ ಮಂದಿರಕ್ಕೆ ತಪ್ಪದೆ ಭೇಟಿ ನೀಡಿ. ಅಲ್ಲಿರುವ ಸಂತ ಮಹಂತರು, ವೀರ ನಾರಿಯರು, ಪುರಾಣ ಪುರುಷರು, ಋಷಿಮುನಿಗಳು, ಸ್ವಾತಂತ್ರ್ಯ ಹೋರಾಟಗಾರರು, ದೇವದೇವತೆಗಳ ಪುತ್ಥಳಿಗಳನ್ನು ಕಣ್ತುಂಬಿಕೊಳ್ಳಿ. 8 ಮಹಡಿಗಳನ್ನಿಳಿದು ಕೆಳಗೆ ಬಂದಾಗ ಅವ್ಯಕ್ತ ಭಾವವೊಂದು ನಿಮ್ಮ ಮೈಮನಗಳನ್ನು ಆವರಿಸಿಕೊಳ್ಳುವುದು ನಿಶ್ಚಿತ.
✍ ದು.ಗು. ಲಕ್ಷ್ಮಣ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.