ನವದೆಹಲಿ: ಪಶ್ಚಿಮಬಂಗಾಳಕ್ಕೆ ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾಗಿ ತಿಳಿಸಿದೆ.
ತಮ್ಮ ರಾಜ್ಯದ ಹೆಸರನ್ನು ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡಲು ಅನುಮೋದನೆಯನ್ನು ನೀಡುವಂತೆ ಕೋರಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಈ ನಿಟ್ಟಿನಲ್ಲಿ ಈ ಬಾರಿಯ ಅಧಿವೇಶನದಲ್ಲಿ ತಿದ್ದುಪಡಿ ತರುವಂತೆ ಕೋರಿದ್ದರು. ಆದರೆ ಬುಧವಾರ ರಾಜ್ಯಸಭೆಗೆ ಲಿಖಿತ ಉತ್ತರವನ್ನು ನೀಡಿರುವ ಕೇಂದ್ರ ಗೃಹ ಸಚಿವಾಲಯ, ಪಶ್ಚಿಮಬಂಗಾಳಕ್ಕೆ ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಅಂಗೀಕರಿಸಲಾಗಿಲ್ಲ ಎಂದಿದೆ.
ವರದಿಯ ಪ್ರಕಾರ, ಪಶ್ಚಿಮ ಬಂಗಾಳದ ಹೆಸರು ಭಾರತದ ರಾಜ್ಯಗಳ ಪಟ್ಟಿಯಲ್ಲಿ ಕೊನೆಯಲ್ಲಿ ಇರುತ್ತದೆ, ಹೀಗಾಗಿ ಪ್ರಮುಖ ಸಮಸ್ಯೆಗಳ ವಿಷಯದಲ್ಲಿ ಈ ರಾಜ್ಯಕ್ಕೆ ಗಮನ ಸಿಗುತ್ತಿಲ್ಲ, ಹೀಗಾಗಿ ತಮ್ಮ ರಾಜ್ಯದ ಹೆಸರನ್ನು ಬದಲಾಯಿಸಬೇಕು ಎಂದು ಬ್ಯಾನರ್ಜಿ ಒತ್ತಾಯವಾಗಿದೆ.
2016ರಲ್ಲಿ ತಮ್ಮ ರಾಜ್ಯವನ್ನು ಬಂಗಾಳಿಯಲ್ಲಿ ಬಾಂಗ್ಲಾ, ಇಂಗ್ಲೀಷಿನಲ್ಲಿ ಬೆಂಗಾಲ್, ಹಿಂದಿಯಲ್ಲಿ ಬಂಗಾಳ್ ಎಂದು ಕರೆಯಲು ಅನುವು ಮಾಡಿಕೊಡಬೇಕೆಂದು ಮಮತಾ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಕೇಂದ್ರ ಒಂದೇ ಹೆಸರನ್ನು ಸೂಚಿಸುವಂತೆ ತಿಳಿಸಿತ್ತು. ಇದಕ್ಕಾಗಿ ‘ಬಾಂಗ್ಲಾ’ವನ್ನು ಆಯ್ಕೆ ಮಾಡಿ ಕಳುಹಿಸಿತ್ತು. ಆದರೀಗ ಆ ಹೆಸರನ್ನು ಕೇಂದ್ರ ನಿರಾಕರಿಸಿದೆ.
ಈಗಾಗಲೇ ಭಿನ್ನಾಭಿಪ್ರಾಯದ ಬೇಗುದಿಯಲ್ಲಿ ಕುದಿಯುತ್ತಿರುವ ಬಿಜೆಪಿ ಮತ್ತು ಟಿಎಂಸಿಯು ರಾಜ್ಯದ ಹೆಸರಿನ ವಿಷಯದಲ್ಲಿ ಮತ್ತೊಂದು ಸುತ್ತು ಗುದ್ದಾಟ ನಡೆಸಿದರೂ ಅಚ್ಚರಿಯಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.