ರೈತರ ಸಾಲಮನ್ನಾವನ್ನು ದೊಡ್ಡ ಸಾಧನೆ ಎಂದು ಭಾವಿಸಿ, ಅದನ್ನೇ ಬಂಡವಾಳ ಮಾಡಿಕೊಂಡ ಪಕ್ಷಗಳ ನಡುವೆ ನರೇಂದ್ರ ಮೋದಿಯವರು ಭಿನ್ನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲಮನ್ನಾ ಯೋಜನೆಯ ಆಗುಹೋಗುಗಳನ್ನು ವಿವರಿಸಿ, ಅದರಿಂದ ಹೊರೆ ಹೆಚ್ಚುತ್ತದೆಯೇ ವಿನಃ ಕಡಿಮೆ ಆಗುವುದಿಲ್ಲ ಎಂದವರು ಮೋದಿ. ವಿಶ್ವ ಬ್ಯಾಂಕ್ನಿಂದಲೋ, ವಿದೇಶಗಳಿಂದಲೋ ಸಾಲ ತಂದು ಮಾಡುವ ಮನ್ನಾ ಹೊರೆಯೇ ಅಲ್ಲವೇ? ಹಿಂಬಾಗಿಲಿನಿಂದ ಹೊಸದೊಂದು ಆಪತ್ತು ತಂದುಕೊಂಡಂತೆ. ಆದರೆ ಈಗ ಹಾಗಾಗುತ್ತಿಲ್ಲ. ತಮ್ಮ ಮೊದಲ ಅವಧಿಯಲ್ಲಿ ಬೇವು ಲೇಪಿತ ಗೊಬ್ಬರ ಸಕಾಲಕ್ಕೆ, ಸಬ್ಸಿಡಿ ಸಹಿತ ದೊರೆಯುವಂತೆ ಮಾಡಿದ್ದ ಮೋದಿಯವರು ತೀರಾ ಇತ್ತೀಚೆಗೆ ಮಧ್ಯಂತರ ಬಜೆಟ್ನಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೊಳಿಸಿದ್ದರು. ಹೊಸ ಸಂಪುಟ ರಚನೆಯಾದ ವರಸೆಯೇ ಬದಲಾಗಿದೆ. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಹಳೆ ಯೋಜನೆಗಳಲ್ಲದೆ ಹೊಸ ಮೂರು ಯೋಜನೆಗಳು ಸೇರುತ್ತಿವೆ. ಅಮಿತ್ ಷಾ ಅವರು ಹೇಳಿದಂತೆ ಇವು ಭಾರತದ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಗುವ ಯೋಜನೆಗಳು. ಅವುಗಳ ಕುರಿತು ವಿವರ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ
ಈ ಪ್ರಾಯೋಗಿಕವಾಗಿ ಯೋಜನೆ ಡಿಸೆಂಬರ್ 1, 2018 ರಂದು ಜಾರಿಯಾಗಿತ್ತು. ಸದರಿ ಯೋಜನೆಯಂತೆ ಎರಡು ಎಕರೆವರೆಗಿನ ಭೂಮಿ ಹೊಂದಿರುವ ರೈತರಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6000 ರೂಪಾಯಿಗಳ ನೀಡಲಾಗುತ್ತಿತ್ತು. 2019-20ನೇ ಸಾಲಿನ ಮಧ್ಯಂತರ ಬಜೆಟ್ನಲ್ಲಿ 75000 ಕೋಟಿ ರೂಪಾಯಿಗಳ ಅಂದಾಜು ಮಾಡಲಾಗಿತ್ತು. ಆದರೆ ಈಗಿನ ಹೊಸ ತಿದ್ದುಪಡಿಯಂತೆ ಪ್ರತಿ ರೈತರೂ ಈ ಯೋಜನೆಯ ಫಲಾನುಭವಿಗಳಾಗಿದ್ದು, 14.50 ಕೋಟಿ ಹೊಸ ರೈತರಿಗೆ ಈ ಸೌಲಭ್ಯ ಸಿಗಲಿದೆ. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ 87217.5 ಕೋಟಿ ರೂಪಾಯಿಗಳ ಅಗತ್ಯ ಬೀಳಲಿದೆ. ಈಗಾಗಲೇ ಎರಡು ಕಂತುಗಳಲ್ಲಿ ಹಣ ಬಿಡುಗಡೆ ಆಗಿದ್ದು, ಮೊದಲ ಕಂತಿನಲ್ಲಿ 3.11 ಕೋಟಿ ರೈತರು ಫಲಾನುಭವಿಗಳಾಗಿದ್ದು, ಎರಡನೆಯ ಕಂತಿನಲ್ಲಿ 2.66 ಕೋಟಿ ರೈತರ ಕೈಗೆ ಹಣ ಸೇರಿದೆ. ಕೆಲವು ರಾಜ್ಯಗಳು ರೈತರ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡದೆ ಇರುವುದು ವಿಪರ್ಯಾಸ. ಕರ್ನಾಟಕದಲ್ಲೂ ಕೇವಲ 16 ರೈತರಿಗೆ ಹಣ ಸಂದಾಯವಾದ ಕುರಿತು ದಾಖಲೆಗಳು ಚುನಾವಣಾ ಸಮಯದಲ್ಲಿ ಹರಿದಾಡುತ್ತಿದ್ದವು.
ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ
ಇದು ನರೇಂದ್ರ ಮೋದಿಯವರ ಹೊಸ ಯೋಜನೆಗಳಲ್ಲಿ ಒಂದು. ಈಗಾಗಲೇ ಜಾರಿಯಲ್ಲಿರುವ ಅಟಲ್ ಪಿಂಚಣಿ ಯೋಜನೆ ಮಾದರಿಯಲ್ಲಿ ಅಸುರಕ್ಷಿತ ರೈತ ವರ್ಗಕ್ಕೆ ಪಿಂಚಣಿ ಸಿಗಲಿದೆ. ಎರಡು ಎಕರೆವರೆಗಿನ ಭೂಮಿ ಹೊಂದಿರುವ ರೈತರಿಗೆ 60 ವರ್ಷ ವಯಸ್ಸಿನ ನಂತರ ಮಾಸಿಕ 3000 ರೂಪಾಯಿಗಳ ತನಕ ಪಿಂಚಣಿ ದೊರೆಯಲಿದೆ. ಹೆಚ್ಚಿನ ನಿಯಮಗಳು ಅಟಲ್ ಪಿಂಚಣಿ ಯೋಜನೆಯಂತೆ ಇದ್ದು, 18 ರಿಂದ 40 ವರ್ಷ ವಯಸ್ಸಿನವರು ಯೋಜನೆಗೆ ಅರ್ಹರು. ಸದರಿ 12.5 ಕೋಟಿ ರೈತರು ಫಲಾನುಭವಿಗಳಾಗಿದ್ದಾರೆ. ರೈತರು ಭರಿಸಿದಷ್ಟೇ ಹಣವನ್ನು ಸರ್ಕಾರವೂ ತುಂಬಲಿದೆ. ಮೊದಲ ಮೂರು ವರ್ಷಗಳಲ್ಲಿ ಐದು ಕೋಟಿ ರೈತರ ಮುಟ್ಟುವ ಗುರಿ ಹೊಂದಲಾಗಿದೆ. ಈ ರೈತ ಪಿಂಚಣಿ ಯೋಜನೆಗೆ 10,774.5 ಕೋಟಿ ರೂಪಾಯಿಗಳ ವೆಚ್ಚದ ಅಂದಾಜು ಮಾಡಲಾಗಿದೆ.
ಪಿಂಚಣಿ ಪಡೆಯುವ ಸಂದರ್ಭದಲ್ಲಿ ಫಲಾನುಭವಿ ನಿಧನರಾದರೆ ನಾಮ ನಿರ್ದೇಶಿತರಿಗೆ ಪಿಂಚಣಿಯ 50%ರಷ್ಟು ಹಣ ದೊರೆಯಲಿದೆ. ರೈತರು ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಈ ಪಿಂಚಣಿ ಯೋಜನೆಗೆ ಬಳಸಬಹುದಾಗಿದೆ.
ಕಾಲು-ಬಾಯಿ ರೋಗ ನಿರೋಧಕ ಚುಚ್ಚುಮದ್ದು
ಗೋವು ಪ್ರೇಮಿಗಳಿಗೆ, ಬಡ ರೈತರಿಗೆ ಇದು ಸಿಹಿ ಸುದ್ದಿ. ಹಸುಗಳು ಕಾಲು-ಬಾಯಿ ರೋಗದಿಂದ ಬಳಲುತ್ತಿರುವ ಮತ್ತು ಹಠಾತ್ತನೆ ನಿಧನ ಹೊಂದಿದ ಸುದ್ದಿ ಕೇಳುತ್ತಲೇ ಇರುತ್ತದೆ. ಆದರೆ ಕೇಂದ್ರ ಸರ್ಕಾರದ ಹೊಸ ಯೋಜನೆಯಂತೆ ಹಸು, ಎತ್ತು, ಎಮ್ಮೆ, ಕುರಿ, ಆಡು ಮತ್ತು ಹಂದಿಗಳಂತಹ ಪ್ರಾಣಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ದೊರೆಯಲಿದೆ. ಸುಮಾರು 50 ಕೋಟಿ ಪ್ರಾಣಿಗಳು, 13343 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಲು-ಬಾಯಿ ರೋಗದಿಂದ ಮುಕ್ತಿ ಪಡೆಯಲಿವೆ.
ಪ್ರಧಾನ ಮಂತ್ರಿಯವರ ವ್ಯಾಪಾರಿ ಪಿಂಚಣಿ ಯೋಜನೆ
ಈ ಯೋಜನೆಗೆ ಇನ್ನೂ ಯಾವುದೇ ಹೆಸರು ನೀಡಲಾಗಿಲ್ಲ. ಸಣ್ಣ ವರ್ತಕರು, ಸಗಟು ವ್ಯಾಪಾರಿಗಳು ಮತ್ತು ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಂಡವರು ಈ ಯೋಜನೆಯ ಫಲಾನುಭವಿಗಳು. ಅವರು ವಾರ್ಷಿಕವಾಗಿ ತೆರುವ ಜಿಎಸ್ಟಿ 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇರಬೇಕು ಎನ್ನಲಾಗಿದೆ. ಸದರಿ ಸರಿ ಸುಮಾರು ಮೂರು ಕೋಟಿ ಅರ್ಹರು ಇದ್ದು, ಅರವತ್ತು ವರ್ಷ ವಯಸ್ಸಿನ ನಂತರ ಮಾಸಿಕ 3000 ರೂಪಾಯಿಗಳ ಪಡೆಯಲಿದ್ದಾರೆ. ಇದಾಗಲೇ 40 ಲಕ್ಷ ಜನರು ನೊಂದಾಯಿತರಾಗಿದ್ದು, ಇಲ್ಲೂ ಸರ್ಕಾರ ಅವರ ಹಣದಷ್ಟೇ ತನ್ನ ಪಾಲನ್ನು ನೀಡಲಿದೆ. ಈ ಯೋಜನೆಗೆ ತುಂಬಾ ಬೇಡಿಕೆಯಿದ್ದು, ಚುನಾವಣಾ ಸಮಯದಲ್ಲಿ ಹಲವು ವರ್ತಕರು ಬಿಜೆಪಿ ನಾಯಕರ ವಿನಂತಿಸಿದ್ದರು. ಆಸಕ್ತರಿಗಾಗಿ 3.25 ಲಕ್ಷ ಗ್ರಾಹಕ ಸೇವಾ ಕೇಂದ್ರಗಳನ್ನು ಭಾರತ ಸರ್ಕಾರ ಸ್ಥಾಪಿಸಿದೆ.
ನರೇಂದ್ರ ಮೋದಿಯವರು ಮೊದಲ ಕ್ಯಾಬಿನೆಟ್ ಸಭೆಯ ನಂತರ ಪ್ರಕಟಿಸಿದಂತೆ ಈ ನಿರ್ಣಯಗಳು ಮುಂದಿನ ದಿನಗಳಲ್ಲಿ ಮಹತ್ವಪೂರ್ಣ ಎನಿಸಲಿವೆ. ತಮ್ಮ ಪ್ರಣಾಳಿಕೆಯ ಪ್ರತಿ ಭರವಸೆಯನ್ನು ಜಾರಿ ಮಾಡುವ ಹಠಕ್ಕೆ ಬಿದ್ದಂತೆ ಕಾಣುತ್ತಿರುವ ಕೇಂದ್ರ ಸರ್ಕಾರದಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡಬಹುದು. ಒಬ್ಬ ಸಣ್ಣ ರೈತ, ಚಿಕ್ಕ ವರ್ತಕ ಅಷ್ಟೇ ಏಕೆ ರೈತನ ಬಡ ಹಸುವನ್ನು ಮರೆಯದ ಮೋದಿಯವರ ಸರ್ಕಾರದ ಯೋಜನೆಗಳು ನಿಜಕ್ಕೂ ಶ್ಲಾಘನೀಯ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.