ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ 2019ರ ಮಹಾ ಚುನಾವಣೆಯಷ್ಟು ರೋಚಕತೆಯನ್ನು ಮೂಡಿಸಿದ ಚುನಾವಣೆ ಬೇರೆ ಇರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಎನ್ಡಿಎಯನ್ನು ಮಟ್ಟಹಾಕಲು ಕಾಂಗ್ರೆಸ್, ಜೆ ಡಿ ಎಸ್, ಟಿ ಡಿ ಪಿ, ಆರ್ ಜೆ ಡಿ, ಎಸ್ ಪಿ, ಬಿ ಎಸ್ ಪಿ ಮೊದಲಾದ ಪಕ್ಷಗಳು ಸೇರಿ ಮಹಾಘಟ ಬಂಧವನ್ನು ರೂಪಿಸಿಕೊಂಡು ಸವಾಲೊಡ್ಡಿದ್ದವು. 2017 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಉಪಚುನಾವಣೆಗಳಲ್ಲಿ ಎಸ್ ಪಿ ಹಾಗೂ ಬಿ ಎಸ್ ಪಿ ಗಳು ಜೊತೆಯಾಗಿ ಬಿಜೆಪಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿ ರಾಷ್ಟ್ರ ಮಟ್ಟದಲ್ಲಿ ಮಹಾಘಟಬಂಧವು ಪ್ರಾಬಲ್ಯಕ್ಕೆ ಬರುವ ಎಲ್ಲಾ ಸಾಧ್ಯತೆಗಳನ್ನು ತೆರೆದಿಟ್ಟಿದ್ದವು. ಡಿಸೆಂಬರ್ ತಿಂಗಳಲ್ಲಿ ನಡೆದ ರಾಜಸ್ಥಾನ್, ಮಧ್ಯಪ್ರದೇಶ್ ಹಾಗೂ ಛತ್ತೀಸ್ಗಢಗಳ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಹಿಂದಿ ಭಾಷಿಕರ ಹೃದಯ ಭೂಮಿಯಲ್ಲಿ ಕೂಡಾ ತನ್ನ ಹಳೆಯ ಛಾಪನ್ನು ಪುನಃ ಮೂಡಿಸಬಲ್ಲೆ ಎಂಬುದನ್ನು ತೋರಿಸಿತು. ಈ ಹಿನ್ನೆಲೆಯಲ್ಲಿ ಮೋದಿ ಸರಕಾರವು ಪುನರಾಯ್ಕೆಯಾಗುವುದು ಸಂಶಯವೇನೋ ಎಂಬ ವಾತಾವರಣವಂತೂ ರೂಪುಗೊಂಡದ್ದು ಸತ್ಯ.
ದೇಶದ ಲುಟಿಯೆನ್ ಮಾಧ್ಯಮಗಳು, ಬುದ್ಧಿ ಜೀವಿಗಳು ಈ ಪರಿಸ್ಥಿತಿಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಗಳಿಸುವುದು ಅಸಾಧ್ಯವೆಂಬ ತೀರ್ಮಾನಕ್ಕೂ ಬಂದು ಬಿಟ್ಟಿದ್ದರು. ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಹಾಗೂ ಎನ್ಡಿಎಗಳಿಗೆ 2014 ರ ಸಾಧನೆಯನ್ನು ಪುನರಾವರ್ತಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು ಮಹಾಘಟಬಂಧದ ಸಾಧ್ಯತೆಗಳನ್ನು ಇನ್ನಷ್ಟು ಪ್ರಖರಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು, ದೇವೇಗೌಡ, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಮಾಯಾವತಿ ಮುಂತಾದವರು ತಯಾರಿಯನ್ನೂ ಶುರು ಮಾಡಿದ್ದರು.
ಆದರೆ ಚುನಾವಣಾ ಪ್ರಕ್ರಿಯೆಗಳು ಮುಗಿದ ನಂತರ ವಿವಿಧ ಸಂಸ್ಥೆಗಳು ಮಾಡಿ ಪ್ರಕಟಿಸಿದ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಹಾಗೂ ಘಟಬಂಧಗಳ ಅಧಿಕಾರವನ್ನು ಹಿಡಿಯುವ ಆಸೆಯನ್ನು ಅರ್ಧ ನಾಶ ಮಾಡಿದರೆ ಚುನಾವಣಾ ಫಲಿತಾಂಶ ಇವರನ್ನೆಲ್ಲಾ ಸಂಪೂರ್ಣವಾಗಿ ಮಕಾಡೆ ಮಲಗಿಸಿದವು. ದೇಶದ ಜನತೆ ಬಿಜೆಪಿಯೊಂದಕ್ಕೇ 303 ಸ್ಥಾನಗಳ ಸಂಪೂರ್ಣ ಬಹುಮತವನ್ನು ನೀಡಿದ್ದರೆ ಎನ್ಡಿಎಗೆ ಮೂರನೇ ಎರಡರ ಸಮೀಪದಷ್ಟು ಬಹುಮತ ದೊರಕಿಸಿಕೊಟ್ಟಿತು. ತಾನು ಪ್ರಧಾನಿಯಾಗಬೇಕು ಅಥವಾ ಬಿಜೆಪಿಯೇತರ ಸರಕಾರ ರಚನೆಯ ಪ್ರಕ್ರಿಯೆಯಲ್ಲಿ ಕಿಂಗ್ ಮೇಕರ್ ಆಗಬೇಕು ಎಂದು ಕನಸುಕಂಡ ಎಲ್ಲರ ಕನಸುಗಳು ನುಚ್ಚುನೂರಾದವು. ಜಾತಿ ರಾಜಕೀಯದಲ್ಲೇ ಮುಳುಗೇಳುತ್ತಿದ್ದ ಉತ್ತರಪ್ರದೇಶ ಕೂಡ ಜಾತಿ ಧರ್ಮಗಳ ಮೇರೆಯನ್ನು ಮೀರಿ ನಿರ್ಣಾಯಕ ನಾಯಕನ ಪರವಾಗಿ ನಿಂತಿತು. ದೇಶಕ್ಕೊಬ್ಬ ಸಮರ್ಥ ಆಡಳಿತಗಾರನೇ ಬೇಕೆಂಬ ಪ್ರಜೆಗಳ ನಿರ್ಧಾರ ನರೇಂದ್ರ ಮೋದಿಗೆ ಸಂಪೂರ್ಣ ಬಹುಮತವನ್ನು ತಂದವು.
ಆದರೆ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಪುನರಾಯ್ಕೆ ಆಕಸ್ಮಿಕವಲ್ಲ. ಇದರ ಹಿಂದೆ ಸಾಕಷ್ಟು ಸಾಧನೆಗಳಿವೆ ಹಾಗೂ ಬಹಳಷ್ಟು ಪರಿಶ್ರಮವಿದೆ. ಈಗ ಭಾರತೀಯ ಮತದಾರ ಬಹಳ ಪ್ರಬುದ್ಧನಾಗಿದ್ದಾನೆ. ದೇಶದ ಪ್ರಗತಿಗೆ ಎಂತಹ ನಾಯಕ ಬೇಕು ಎಂಬುದನ್ನು ತೀರ್ಮಾನಿಸುವಷ್ಟು ಬುದ್ಧಿವಂತಿಕೆ ಪ್ರಜೆಗಳಲ್ಲಿದೆ. ಮೋದಿಯ ಪುನರಾಯ್ಕೆಯ ನಂತರ ಈ ಬಾರಿ ಮೋದಿ ಹಿಂದುತ್ವದ ಅಲೆಯಲ್ಲಿ ಪುನರಾಯ್ಕೆಯಾಗಿದ್ದಾರೆ ಎಂದು ಕೆಲ ಬುದ್ಧಿಜೀವಿಗಳು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು.
ಹೌದು ಮೋದಿ ತಾನು ಹಿಂದೂ ಎನ್ನಲು ಸ್ವಲ್ಪವೂ ಹಿಂಜರಿಕೆ ತೋರಲಿಲ್ಲ, ತನ್ನ ಹಿಂದೂ ಅಸ್ಮಿತೆಯ ಬಗ್ಗೆ ಒಂದಿನಿತೂ ನಾಚಿಕೆಪಡಲಿಲ್ಲ. ನೇಪಾಳದ ಪಶುಪತಿನಾಥ ಕ್ಷೇತ್ರವಾಗಲಿ, ಕಾಶಿಯ ವಿಶ್ವನಾಥನ ಸನ್ನಿಧಿಗಾಗಲಿ, ಕೇದಾರನಾಥ, ಬದರೀನಾಥಕ್ಕೆ, ಕರ್ನಾಟಕದ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕ್ಷೇತ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸಂಪೂರ್ಣ ಹಿಂದೂ ಆಸ್ತಿಕನಾಗಿ ನರೇಂದ್ರ ಮೋದಿಯವರು ನಡೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ಮೋದಿ ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದಾರೆ, ಹಣೆಯಲ್ಲಿ ಗಂಧ ಭಸ್ಮಧಾರಿಯಾಗಿದ್ದಾರೆ, ಗಂಗಾರತಿಯಲ್ಲಿ ಭಕ್ತಿಭಾವದಲ್ಲಿ ತನ್ಮಯರಾಗಿ ಭಾಗವಹಿಸಿದ್ದಾರೆ. ಆದರೆ ನರೇಂದ್ರ ಮೋದಿಯವರು ಕಳೆದ 5 ವರ್ಷಗಳ ಆಡಳಿತಾವಧಿಯಲ್ಲಿ ಅಥವಾ ತಮ್ಮ ಹಿಂದಿನ ಮುಖ್ಯಮಂತ್ರಿ ಅವಧಿಯಲ್ಲಾಗಲೀ ತಮ್ಮ ಹಿಂದೂ ನಂಬಿಕೆಯನ್ನು ಇತರರ ಮೇಲೆ ಎಂದೂ ಹೇರಿಲ್ಲ. ಹಿಂದೂ ಭಯೋತ್ಪಾದನೆಯನ್ನು ಖಡಾಖಂಡಿತವಾಗಿ ಅವರು ಅಲ್ಲಗಳೆದಿದ್ದರೂ ಗೋ ಸಂರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವವರ ಮೇಲೆ ಕಾನೂನು ಕ್ರಮಕ್ಕೆ ಕರೆ ನೀಡಲು ಹಿಂದುಮುಂದು ನೋಡಲಿಲ್ಲ. ಹಿಂದೂ ಮುಸ್ಲಿಂ ಸಹಿಷ್ಣುತೆಯನ್ನು ಮುರಿಯುವ ಒಂದು ಮಾತನ್ನೂ ಮೋದಿ ಆಡಿಲ್ಲ. ಹೀಗಿರುವಾಗ ಹಿಂದುತ್ವದ ಅಲೆಯ ಮೇಲೆ ಮೋದಿ ಗೆದ್ದಿದ್ದಾರೆ ಎನ್ನುವ ಮಾತು ಅವರ ಜನಪ್ರಿಯತೆಯನ್ನು ಅಲ್ಲಗಳೆಯುವ ಒಂದು ದಾರಿ ಮಾತ್ರ.
ನರೇಂದ್ರ ಮೋದಿ ಬಡತನದ ಹಿನ್ನೆಲೆಯಿಂದ ಬೆಳೆದು ಬಂದವರು, ಜನಸಾಮಾನ್ಯರ ಕಷ್ಟಕಾರ್ಪಣ್ಯಗಳ ಅರಿವಿದ್ದವರು. ಈ ಹಿಂದೆ ದೇಶವನ್ನು ಆಳಿದವರಿಗಿಂತ ವಿಭಿನ್ನವಾಗಿ ಆಲೋಚಿಸಿ ಜನರ ಕಷ್ಟಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಮಾಡಿದರು. ಮನೆಗಳಲ್ಲಿ ಶೌಚಾಲಯವಿಲ್ಲದಿದ್ದರೆ ಮನೆಯ ಹೆಣ್ಣುಮಕ್ಕಳು ಯಾವ ರೀತಿಯ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು ದೇಶದ 9 ಕೋಟಿ ಶೌಚಾಲಯ ರಹಿತ ಮನೆಗಳಿಗೆ ಉಚಿತವಾಗಿ ಶೌಚಾಲಯ ಕಟ್ಟಿಸಿಕೊಟ್ಟರು. 2014 ರವರೆಗೆ ದೇಶದ 38% ಮನೆಗಳಲ್ಲಿ ಮಾತ್ರ ಶೌಚಾಲಯವಿದ್ದಿದ್ದು 2019 ರಲ್ಲಿ ದೇಶದ 95% ಮನೆಗಳಲ್ಲಿ ಶೌಚಾಲಯವು ಲಭ್ಯವಿದೆ. ದೇಶದ ಎಲ್ಲಾ ಹಳ್ಳಿಗಳು ಬಯಲು ಶೌಚ ಮುಕ್ತ ಹಳ್ಳಿಗಳಾಗಿ ಬದಲಾಗಿವೆ, ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿಕೊಂಡಂತೆ ಬಯಲು ಶೌಚದಿಂದ ವಿವಿಧ ಸಾಂಕ್ರಾಮಿಕ ರೋಗಗಳಿಗೆ ವಾರ್ಷಿಕವಾಗಿ ಮರಣಿಸುತ್ತಿದ್ದ ಸುಮಾರು 3 ಲಕ್ಷ ಮಕ್ಕಳ ಜೀವವು ಸಂಪೂರ್ಣ ಶೌಚಾಲಯ ಯೋಜನೆಯಿಂದಾಗಿ ಈಗ ಉಳಿಯುತ್ತಿದೆ. ಈ ಯೋಜನೆಯು ಮೋದಿ ಸರಕಾರವು ಜನಮನವನ್ನು ಗೆದ್ದು ಒಂದಷ್ಟು ಹೆಚ್ಚುವರಿ ಮತಗಳನ್ನು ಗಳಿಸಿಕೊಟ್ಟಿದೆ.
ಮೋದಿ ಸರಕಾರಕ್ಕೆ ಜನಬೆಂಬಲವನ್ನು ಹೆಚ್ಚಿಸಿದ ಇನ್ನೊಂದು ಪ್ರಮುಖ ಯೋಜನೆ ಸಂಪೂರ್ಣ ವಿದ್ಯುದೀಕರಣ ಯೋಜನೆ. ದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲದ 18452 ಹಳ್ಳಿಗಳನ್ನು ಪ್ರಧಾನಮಂತ್ರಿ ಗ್ರಾಮೀಣ ಯೋಜನೆಯಡಿಯಲ್ಲಿ ಸಾವಿರ ದಿನಗಳೊಳಗಾಗಿ ವಿದ್ಯುದೀಕರಿಸಿ ನಂತರ ದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲದ 2.6 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ದೊರಕಿಸಿಕೊಟ್ಟು ಬಹುತೇಕ 100% ಮನೆಗಳಿಗೆ ವಿದ್ಯುದೀಕರಣ ಮಾಡಿದ ಸಾಧನೆ ಜನರ ಮನಸ್ಸನ್ನು ನರೇಂದ್ರ ಮೋದಿ ಸರಕಾರದೆಡೆ ಸೆಳೆಯುವಂತೆ ಮಾಡಿದೆ. ಗ್ಯಾಸ್ ಸಂಪರ್ಕವಿಲ್ಲದ 7 ಕೋಟಿ ಮನೆಗಳಿಗೆ ಉಜ್ವಲಾ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕವನ್ನು ಕೊಡಿಸಿ ಮಹಿಳೆಯರ ಬದುಕು ಸುಗಮವಾಗುವಂತೆ ಮಾಡಿದುದು ಮಹಿಳೆಯರಲ್ಲಿ ಮೋದಿ ಸರಕಾರದ ಬಗೆಗೆ ಒಲವು ಹೆಚ್ಚಲು ಕಾರಣವಾಯಿತು. ದೇಶದ 50 ಕೋಟಿ ಜನರಿಗೆ ಅನುಕೂಲವಾಗುವಂತೆ ರೂಪಿಸಿದ ವಾರ್ಷಿಕ 5 ಲಕ್ಷ ರೂ. ಗಳ ವರೆಗೆ ಉಚಿತ ವೈದ್ಯಕೀಯ ವೆಚ್ಚವನ್ನು ಭರಿಸುವ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ ಯೋಜನೆಯು ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಪಾಲಿಗೆ ದೊಡ್ಡ ನೆಮ್ಮದಿಯನ್ನು ತಂದಿದ್ದಂತೂ ಸತ್ಯ. ರೈತರಿಗೆ ನೇರವಾಗಿ 6 ಸಾವಿರ ರುಪಾಯಿಗಳ ಪ್ರೋತ್ಸಾಹ ಧನ ವರ್ಗಾವಣೆ, ಮೊದಲಾದ ಸರಕಾರ ಜಾರಿಗೆ ತಂದ ಈ ಎಲ್ಲಾ ಜನಕಲ್ಯಾಣ ಯೋಜನೆಗಳು ದೇಶದ 40 ಕೋಟಿ ಫಲಾನುಭವಿಗಳ ಬದುಕಿನಲ್ಲಿ ಬದಲಾವಣೆಯನ್ನು ತಂದಿರುವಾಗ ಮೋದಿ ಸರಕಾರಕ್ಕೆ ಜನಪ್ರಿಯತೆಯು ಬಾರದೆ ಇರುತ್ತದೆಯೇ?
ಇನ್ನು ಬಿಜೆಪಿ ಸರಕಾರವು ಕೈಗೊಂಡ ಅಭಿವೃದ್ಧಿ ಕೆಲಸಗಳು ಯುವ ಜನತೆಯನ್ನು ಮೋದಿಯೆಡೆಗೆ ಸೆಳೆದಿವೆ. ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು, ಯುವಕರನ್ನು ಉದ್ಯಮಶೀಲರನ್ನಾಗಿಸಲು ಸರಕಾರವು ರೂಪಿಸಿದ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ 18 ಕೋಟಿ ಯುವಕರಿಗೆ ಉದ್ಯಮ ರೂಪಿಸಲು ಹಾಗೂ ಉದ್ಯಮದ ಅಭಿವೃದ್ಧಿ ಮಾಡಲು ಮುದ್ರಾ ಲೋನ್ಗಳನ್ನು ಕೊಡಲಾಗಿದೆ. ಕೌಶಲ್ಯ ಭಾರತ ಯೋಜನೆಯಡಿಯಲ್ಲಿ ದೇಶದ 4 ಕೋಟಿ ಯುವಕರಿಗೆ ವಿವಿಧ ಕೌಶಲ್ಯ ತರಬೇತಿ ನೀಡಿ ಅವರನ್ನು ಉದ್ಯಮಶಾಲಿಗಳನ್ನಾಗಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ದೇಶದಲ್ಲಿ ಧಾರಾಳ ವಿದೇಶೀ ಹೂಡಿಕೆ ನಡೆದು ಯುವಕರಿಗೆ ಉದ್ಯೋಗಾವಕಾಶ ರೂಪಿಸಿದ ಯೋಜನೆ, ಯುವಕರನ್ನು ಉದ್ಯಮಶೀಲರನ್ನಾಗಿಸುವ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಮುಂತಾದವುಗಳು ಯುವಕರನ್ನು ಬಿಜೆಪಿಯೆಡೆಗೆ ಸೆಳೆದು ತಂದವು. ಮುಂಚಿಗಿಂತ ಎರಡಪಟ್ಟು ಹೆಚ್ಚು ವೇಗ ಪಡೆದುಕೊಂಡ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಆಧುನಿಕ ಹಾಗೂ ಹೆಚ್ಚು ಸುರಕ್ಷಿತವಾದ ರೈಲ್ವೇ ವ್ಯವಸ್ಥೆ, 500 ಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ದೇಶದ ಎಲ್ಲಾ 100% ಹಳ್ಳಿಗಳಿಗೆ ಪಕ್ಕಾ ಟಾರು ರಸ್ತೆಯ ಸಂಪರ್ಕ ವ್ಯವಸ್ಥೆ ಕಲ್ಪಿಸಿದುದು ಮೊದಲಾದವುಗಳು ಜನರು ಮೋದಿ ಸರಕಾರದ ಕಡೆಗೆ ಆಕರ್ಷಿತರಾಗಲು ಕಾರಣವಾದವು.
ರಾಷ್ಟ್ರೀಯ ಸುರಕ್ಷತೆಯ ವಿಷಯದಲ್ಲಿ ಒಂದಿಷ್ಟೂ ರಾಜಿಮಾಡಿಕೊಳ್ಳದ ಮೋದಿ ಸರ್ಕಾರ ಜನರಿಗೆ ಬಹಳ ಇಷ್ಟವಾಗಿದೆ. ಕಳೆದ 5 ವರ್ಷದಲ್ಲಿ ದೇಶದ ಗಡಿಯನ್ನು ಹೊರತು ಪಡಿಸಿ ದೇಶದ ಒಳಗಿನ ನಾಗರಿಕರ ಮೇಲೆ ಒಂದೇ ಒಂದು ಭಯೋತ್ಪಾದನಾ ದಾಳಿ ನಡೆಯದಿರುವುದು ಸರ್ಕಾರದ ಕುರಿತು ಜನರ ವಿಶ್ವಾಸವನ್ನು ಹೆಚ್ಚಿಸಿದೆ. ಉಗ್ರರು ಉರಿಯಲ್ಲಿನ ಸೈನಿಕ ಕೇಂದ್ರದ ಮೇಲೆ ನಡೆಸಿದ ದಾಳಿಯ ವಿರುದ್ಧವಾಗಿ ಸರಕಾರ ನಡೆಸಿದ ಮೊದಲ ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾದಲ್ಲಿ ನಡೆದ ಸೈನಿಕರ ಮೇಲಿನ ದಾಳಿಯ ನಂತರ ಪಾಕಿಸ್ಥಾನದೊಳಗೆ ಹೋಗಿ ಉಗ್ರ ಕೇಂದ್ರಗಳ ಮೇಲೆ ನಡೆಸಿದ ನಡೆಸಿದ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ಗಳು ಸರ್ಕಾರದ ದೇಶ ರಕ್ಷಣೆಯ ಬದ್ಧತೆಯ ವಿಚಾರದಲ್ಲಿ ಪ್ರಜೆಗಳಲ್ಲಿ ಹೆಚ್ಚು ನಂಬಿಕೆಯನ್ನು ಮೂಡಿಸಿದೆ.
ಕಳೆದೈದು ವರ್ಷಗಳಲ್ಲಿ ದೇಶವು ಸ್ಥಿರ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ದೇಶದ 7.2 ಶೇಕಡಾ ಜಿಡಿಪಿಯ ಬೆಳವಣಿಗೆಯನ್ನು ಕಂಡಿದೆ. ದೇಶವು ದಾಖಲೆಯ ಪ್ರಮಾಣದ ವಿದೇಶೀ ನೇರ ಹೂಡಿಕೆಯನ್ನು ಕಂಡಿದೆ. ಉದ್ಯಮ ಸ್ನೇಹೀ ರಾಷ್ಟ್ರಗಳ ಪಟ್ಟಿಯಲ್ಲಿ (ಈಜ್ ಆಫ್ ಡೂಯಿಂಗ್ ಬ್ಯುಸಿನೆಸ್) ಭಾರತವು 142 ನೇ ಸ್ಥಾನದಿಂದ 77 ನೇ ಸ್ಥಾನಕ್ಕೆ ಜಿಗಿದಿದೆ. ಅಟೋಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಕ್ಷೇತ್ರಗಳಲ್ಲಿ ಭಾರತವು ಪ್ರಮುಖ ಉತ್ಪಾದನಾ ದೇಶವಾಗಿ ಬೆಳೆಯುತ್ತಿದೆ. ಆದರೆ ಈ ಎಲ್ಲಾ ಆರ್ಥಿಕ ಬೆಳವಣಿಗೆಯ ಎಡೆಯಲ್ಲಿಯೂ ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಸರಕಾರವು ಯಶಸ್ವಿಯಾಗಿದೆ. ಪ್ರಸ್ತುತ 2 ರ ಆಸುಪಾಸಿನಲ್ಲಿರುವ ಹಣದುಬ್ಬರ ಗ್ರಾಹಕರ ಬದುಕನ್ನು ಸಹನೀಯವಾಗಿಸಿದೆ. ಹಣದುಬ್ಬರವು ಸಾಮಾನ್ಯವಾಗಿ ಪ್ರತೀ ಸರಕಾರವನ್ನೂ ಕಾಡುವ ವಿಚಾರವಾಗಿದ್ದರೂ ಈ ಸರಕಾರವು ಕಾಳಸಂತೆಕೋರರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾದುದರಿಂದ ಬೆಲೆಯೇರಿಕೆಯನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು. ತಗ್ಗಿದ ಬೆಲೆಯೇರಿಕೆಯ ಪ್ರಮಾಣವು ಜನರು ಸರಕಾರದೆಡೆಗೆ ಸಕಾರಾತ್ಮಕ ಭಾವವನ್ನು ರೂಡಿಸಿಕೊಳ್ಳಲು ಸಹಕಾರಿಯಾಯಿತು.
ನರೇಂದ್ರ ಮೋದಿ ಸರಕಾರದ ಕಟ್ಟುನಿಟ್ಟಿನ ಕ್ರಮಗಳಿಂದ ಭ್ರಷ್ಟಾಚಾರವು ನಿಯಂತ್ರಿಸಲ್ಪಟ್ಟು ಸರಕಾರವು ಜನರ ಭಾರೀ ಮೆಚ್ಚುಗೆಗೆ ಪಾತ್ರವಾಯಿತು. ಯುಪಿಎ ಸರಕಾರವು ಭ್ರಷ್ಟಾಚಾರ ಆರೋಪಗಳ ಭಾರಕ್ಕೆ ಕುಸಿದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್ ಸರಕಾರದ ಅಂತಿಮ ವರ್ಷದಲ್ಲಿ ಸರ್ಕಾರದ ಭ್ರಷ್ಟಾಚಾರಕ್ಕೆ ಎದುರಾಗಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಜನಾಂದೋಲನವೂ ನಡೆದಿತ್ತು. ಆದರೆ ಕಳೆದ ಐದು ವರ್ಷದ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆಯೂ ನರೇಂದ್ರ ಮೋದಿ ಸರಕಾರದ ಮೇಲೆ ಅಂಟಿಕೊಂಡಿಲ್ಲ. ರಫೇಲ್ ಯುದ್ಧ ವಿಮಾನದ ಖರೀದಿಯ ಕುರಿತಾಗಿ ವಿಪಕ್ಷಗಳ ರಾಜಕೀಯ ಪ್ರೇರಿತ ಆರೋಪವನ್ನು ಸುಪ್ರೀಂ ಕೋರ್ಟ್ ಹಾಗೂ ಸಿ ಎ ಜಿ ಗಳು ತಿರಸ್ಕರಿಸಿದವು. ಇದರಿಂದಾಗಿ ಮೋದಿ ಸರಕಾರದ ನಿಷ್ಕಳಂಕತ್ವವೂ ಹೆಚ್ಚು ಪ್ರಚಾರ ಪಡೆಯಿತು. ನೋಟ್ ಬ್ಯಾನ್, ಜಿ ಎಸ್ ಟಿ ಜಾರಿ, ಸಾಲಗಳ್ಳರಿಂದ ಸಾಲ ಮರುವಸೂಲಾತಿ ಮಾಡಿದ ಇನ್ಸಾಲ್ವೆನ್ಸಿ ಹಾಗೂ ಬ್ಯಾಂಕ್ರಪ್ಟ್ಸಿ ಕೋಡ್ ಕಾನೂನುಗಳು ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಸಾರಿದ ಯುದ್ಧವನ್ನು ಎತ್ತಿ ತೋರಿದವು.
ಇದೆಲ್ಲವನ್ನೂ ಮೀರಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮಗಳ ಮೂಲಕ ಜನರೊಡನೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡದ್ದು ಜನರು ಮೋದಿಯೆಡೆಗೆ ವಿಶೇಷವಾದ ಪ್ರೀತಿ ವಿಶ್ವಾಸ ಹಾಗೂ ಆದರವನ್ನು ತೋರುವಂತೆ ಮಾಡಿತು. ಜನಸಾಮಾನ್ಯನೊಬ್ಬ ಮಾಡಿದ ಮನವಿಗೂ ಸ್ಪಂದಿಸುವ ಪ್ರಧಾನ ಮಂತ್ರಿ ಕಾರ್ಯಾಲಯದ ಕಾರ್ಯ ವೈಖರಿ ಸರ್ವರ ಪ್ರಶಂಸೆಗೆ ಪಾತ್ರವಾಗಿತ್ತು.
ಬಿಜೆಪಿ ಪಕ್ಷ 2019 ರ ಚುನಾವಣೆಯನ್ನು ತುಂಬಾ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಿಭಾಯಿಸಿದೆ. ಸರಕಾರದ ಸಾಧನೆಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಲಾಗಿತ್ತು. ಲಕ್ಷಾಂತರ ವಾಟ್ಸಾಪ್ ಗ್ರೂಪ್ಗಳನ್ನು ಹಾಗೂ ಸಾಮಾಜಿಕ ಮಾಧ್ಯಮ ವಾಲಂಟಿಯರ್ಗಳನ್ನು ಈ ಕೆಲಸಕ್ಕೆ ತಯಾರು ಮಾಡಲಾಗಿತ್ತು. ಫೇಸ್ಬುಕ್ ಹಾಗೂ ಟ್ವೀಟರ್ಗಳನ್ನೂ ಧಾರಾಳವಾಗಿ ಬಳಸಲಾಗಿತ್ತು. ಸ್ವತಃ ನರೇಂದ್ರ ಮೋದಿ ದೇಶಾದ್ಯಂತ 142 ರ್ಯಾಲಿ ಹಾಗೂ 7 ರೋಡ್ ಶೋಗಳನ್ನು ಹಮ್ಮಿಕೊಂಡಿದ್ದರು. ಈ ಮೂಲಕ 5 ಕೋಟಿ ಮತದಾರರನ್ನು ನೇರವಾಗಿ ಸಂಪರ್ಕಿಸಿದ್ದರು. ಭಾಜಪಾ ಅಧ್ಯಕ್ಷ ಅಮಿತ್ ಶಾ ಕೂಡಾ ಇಷ್ಟೇ ಸಂಖ್ಯೆಯ ರ್ಯಾಲಿಗಳನ್ನು ನಡೆಸಿ ಸರಕಾರ ಮಾಡಿದ ಕೆಲಸಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಜೊತೆಗೆ ಬಿಜೆಪಿ ನಾಯಕತ್ವವು ಪ್ರಾಂತ್ಯ ಮಟ್ಟದಲ್ಲಿ ರಾಮ್ ಮಾಧವ್, ಹಿಮಂತ್ ಬಿಸ್ವಾಸ್ ಸರ್ಮಾ, ಬಿ ಎಲ್ ಸಂತೋಷ್ ಮೊದಲಾದ ಪ್ರಮುಖ ಚತುರ ನಾಯಕರನ್ನು ನೇಮಕಾತಿ ಮಾಡಿ ಚುನಾವಣಾ ತಂತ್ರಗಾರಿಕೆಯನ್ನು ಮೆರೆದಿತ್ತು. ರಾಜ್ಯಮಟ್ಟದ ನಾಯಕರ, ಲಕ್ಷಾಂತರ ಬೂತ್ ಮಟ್ಟದ ಕಾರ್ಯಕರ್ತರ, ಪೇಜ್ ಪ್ರಮುಖರ ಪರಿಶ್ರಮವು ಬಿಜೆಪಿಯ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇವೆಲ್ಲವುಗಳ ಹಿಂದೆ ಪ್ರಮುಖವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸಂಘ ಪರಿವಾರದ ದೃಢವಾದ ಬೆಂಬಲವೂ ಇತ್ತು.
2009 ನೇ ಇಸವಿಯಲ್ಲಿ ಬಿಜೆಪಿಗೆ 8 ಕೋಟಿ ವೋಟ್ಗಳು ಲಭಿಸಿದ್ದವು, 2014 ರಲ್ಲಿ ಬಿಜೆಪಿಗೆ 17 ಕೋಟಿ ವೋಟ್ಗಳು ದೊರಕಿದವು. 2019 ರ ಚುನಾವಣೆಯಲ್ಲಿ ಬಿಜೆಪಿಗೆ ಬರೋಬ್ಬರಿ 25 ಕೋಟಿ ವೋಟ್ಗಳು ದೊರಕಿವೆ. ದೇಶದ ಮತದಾರರಲ್ಲಿ 37.4% ಮತದಾರರು ನೇರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಎನ್ಡಿಎ ಒಕ್ಕೂಟಕ್ಕೆ ದೇಶದ 45 % ಮತದಾರರು ವೋಟ್ ಮಾಡಿದ್ದಾರೆ. 2014 ರ ಚುನಾವಣೆಯಲ್ಲಿ ಮೋದಿ ಪ್ರಭಾವವು 9 ಕೋಟಿ ಹೆಚ್ಚುವರಿ ಮತದಾರರನ್ನು ಸೆಳೆತಂದಿದ್ದರೆ, 2019 ರ ಚುನಾವಣೆಯಲ್ಲಿ ಆ ಮತದಾರರನ್ನು ಉಳಿಸಿಕೊಂಡು ಇನ್ನೂ 8 ಕೋಟಿ ಹೆಚ್ಚುವರಿ ಮತದಾರರನ್ನು ಸೆಳೆಯಲು ಸರಕಾರದ ಸಾಧನೆಗಳು ಯಶಸ್ವಿಯಾಗಿವೆ. ಒಂದು ಅವಧಿಯ ಆಡಳಿತದ ನಂತರ ಜನರಲ್ಲಿ ಆಡಳಿತ ವಿರೋಧೀ ಅಲೆ ಮೂಡುವುದು ಸಹಜ. ಆದರೆ ಈ ಬಾರಿ ಆಡಳಿತ ಪರ ಅಲೆಯು ಮೂಡಿ ಹೆಚ್ಚುವರಿ ಮತಗಳು ಲಭಿಸಬೇಕಾಗಿದ್ದಲ್ಲಿ ಸರಕಾರದ ಕೆಲಸಗಳು ಯಾವ ಮಟ್ಟದಲ್ಲಿ ಜನರನ್ನು ತಲುಪಿದೆ ಹಾಗೂ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು.
ಇಂದು ನರೇಂದ್ರ ಮೋದಿಯವರು ಇಂದು ಪಕ್ಷವನ್ನು ಮೀರಿ ಬೆಳೆದಿದ್ದಾರೆ. ಸರಕಾರದ ವತಿಯಿಂದ ಏನೋ ಕೆಲಸ ಆಗುತ್ತಿದೆ, ಸರ್ಕಾರವನ್ನು ನಂಬಬಹುದು ಎನ್ನುವ ವಿಶ್ವಾಸವನ್ನು ಜನರಲ್ಲಿ ಮೂಡಿಸುವಲ್ಲಿ ಮೋದಿ ಸರ್ಕಾರವು ಯಶಸ್ವಿಯಾಗಿದೆ. 2019 ರಿಂದ 2024 ರ ವರೆಗಿನ ಮುಂದಿನ 5 ವರ್ಷಗಳು ಮೋದಿ ಸರ್ಕಾರಕ್ಕೆ ತುಂಬಾ ಸವಾಲಿನದ್ದಾಗಿದೆ. ಏಕೆಂದರೆ ಈ ಹಿಂದಿನ 5 ವರ್ಷಗಳಲ್ಲಿ ಮೋದಿ ಸರಕಾರವು ಅಭಿವೃದ್ಧಿ ಕೆಲಸಕ್ಕೊಂದು ಮಾದರಿ ಮಾನದಂಡವನ್ನು ನಿರೂಪಿಸಿ ತೋರಿಸಿ ಕೊಟ್ಟಿದೆ. ಜನರಲ್ಲೂ ಮೋದಿ ಸರಕಾರದ ಬಗೆಗೆ ಅಪಾರ ನಿರೀಕ್ಷೆಯಿದೆ. ಈ ಎಲ್ಲಾ ನಿರೀಕ್ಷೆಗಳ ಮಟ್ಟವನ್ನು ತಲುಪಬೇಕಾದ ಮಹತ್ತರ ಜವಾಬ್ದಾರಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ಮೇಲಿದೆ.
✍ ಗಣೇಶ್ ಭಟ್ ವಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.