ಕಮ್ಯುನಿಸ್ಟರ ಬಣ್ಣಗಳಲ್ಲಿ ನನಗೆ ನಂಬಿಕೆ ಇಲ್ಲ, ಅಂತೆಯೇ ಆಕ್ರಮಣಕಾರಿ ಧಾರ್ಮಿಕತೆಯನ್ನು ಹಂಚುವುದರಲ್ಲೂ ನನಗೆ ನಂಬಿಕೆ ಇಲ್ಲ.
ಇದೇನು ಎಂದುಕೊಳ್ಳಬೇಡಿ. ಪಶ್ಚಿಮ ಬಂಗಾಳದ ಸದ್ಯದ ಅಧಿನಾಯಕಿ ಮಮತಾ ಬ್ಯಾನರ್ಜಿ ಲೋಕ ಚುನಾವಣಾ ಸೋಲಿನ ನಂತರ ರಚಿಸಿ, ಪ್ರಕಟಿಸಿದ ಕವನ. ಕೆಲವರು ಕೇಳಿರಲೂಬಹುದು. ಇದನ್ನು ಪ್ರಚುರ ಪಡಿಸುವ ಕೆಲಸವಂತೂ ಈಗಾಗಲೇ ಎಡ ಮಾಧ್ಯಮಗಳ ಹೇಗಲೇರಿದೆ. ಬಹುಶಃ ಮಹಾಘಟಬಂಧನ್ ಮತ್ತೆ ಏನಾದರೂ ಕಾಣಿಸಿಕೊಂಡರೆ ಈ ಕವನ ಅದರ ಗೀತೆ ಆಗಲೂಬಹುದು.
ಮಮತಾ ಬ್ಯಾನರ್ಜಿ ಎಲ್ಲರೂ ಕೇಳಿರಬಹುದಾದ ಹೆಸರು. ಮುಖ್ಯಮಂತ್ರಿ ಆಗುವ ತನಕ ಹೋರಾಟಗಳ ಮಾಡುತ್ತಾ, ಕಮ್ಯುನಿಸ್ಟರ ಅಂಗಳದಲ್ಲಿ ತನ್ನ ಸರಳತೆಯ ಮೂಲಕವೂ ಗಮನ ಸೆಳೆದ ದಿಟ್ಟ ಮಹಿಳೆ. ಜನವರಿ 1, 1998 ರಂದು ಅವರ ಹೆಮ್ಮೆಯ ತೃಣಮೂಲ ಕಾಂಗ್ರೆಸ್ ಉದಿಸಿದರೂ ಅಧಿಕಾರ ಗಗನ ಮಲ್ಲಿಗೆ ಆಗಿತ್ತು. ರಾಜಕೀಯ ಎಂದ ಮೇಲೆ ಕೇಳಬೇಕೆ? ಅವಕಾಶವಾದಿತನದ ಪರಮಾವಧಿ. ಸಿಲಿಗುರಿಯ ಹೋರಾಟವನ್ನು ಏಣಿಯಾಗಿ ಬಳಸಿಕೊಂಡ ಮಮತಾ ಬ್ಯಾನರ್ಜಿ ದೊಡ್ಡ ಪಾಲು ಕಮ್ಯುನಿಸ್ಟರನ್ನೇ ಎತ್ತಿ ಬಗಲಿಗೆ ಹಾಕಿಕೊಂಡರು. ಎಡಪಂಥೀಯರ ಕೋಟೆಯಲ್ಲಿ ವಿಜಯ ಪತಾಕೆ ಹಾರಿಸಿದರು. ಅಲ್ಲಿಂದ ಮುಂದೆ ಶುರುವಾದದ್ದು ಓಲೈಕೆ ರಾಜಕಾರಣ, ಅನಾಚಾರ, ಮತಾಂತರ ಮತ್ತು ಸರ್ವಾಧಿಕಾರ. ಯಾವ ಪರಿಯಲ್ಲಿ ಇತ್ತು ಎಂದರೆ ಅಂತಹ ಕಮ್ಯುನಿಸ್ಟ್ ಪಕ್ಷದ ಸದ್ದಡಗಿಹೋಯಿತು. ಭಾರತದ ಉದ್ಧಾರವೇ ತಮ್ಮ ಗುರಿ ಎಂದು ಅರಚುವ ಪತ್ರಿಕೆ ಟಿವಿ ಮಾಧ್ಯಮಗಳಲ್ಲಿ ಇದು ಕಾಣಿಸಲೂ ಇಲ್ಲ.
ಮಹಾಘಟಬಂಧನ್ ರೂಪುಗೊಂಡ ನಂತರ ಎಲ್ಲರೂ ಪ್ರಧಾನಿ ಹುದ್ದೆ ಕನಸು ಕಂಡವರು. ಅದರಲ್ಲಿ ಮಮತಾ ಕೂಡ ಒಬ್ಬರು. ಅವರ ಸಾಧನೆಗಳ ಬಗ್ಗೆ ಕೇಳಿದರೆ ಅವರು ನಿಮಗೂ ಅರ್ಥವಾಗಲಿಕ್ಕೆ ಸಾಕು.
ದುರ್ಗಾ ಪೂಜೆ ನಿಷೇಧ- ಬಂಗಾಳ ಎಂದೊಡನೆ ನೆನಪಾಗಿ ಬರುವುದು ದುರ್ಗಾ ಮಾತೆ. ಅಂತಹ ಪೂಜೆಯ ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ನಿಷೇಧಿಸಲಾಯಿತು.
ಅಧಿಕಾರಿಗಳ ಆತ್ಮಹತ್ಯೆ- ತೀರ ಇತ್ತೀಚಿನ ಒಂದು ಘಟನೆ ತಿಳಿಯುವುದಾದರೆ, ಫೆಬ್ರವರಿ ತಿಂಗಳಿನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಹತ್ತು ವರ್ಷಗಳಿಂದ ತನ್ನ ಉಳಿತಾಯ ಮತ್ತು ಸವಲತ್ತುಗಳನ್ನು ತಡೆ ಹಿಡಿಯಲಾಗಿದೆ ಹಾಗೂ ಸಾಕ್ಷಿಗಳೇ ಇರದ ಎರಡು ಕೇಸ್ಗಳನ್ನು ಮಮತಾ ಅನಾವಶ್ಯಕ ಎಳೆದು ಹಿಂಸಿಸುತ್ತಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡರು.
ಶಾರದ ಚಿಟ್ ಫಂಡ್ ಹಗರಣ- ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ತಮ್ಮ ಮನೆ, ಹಣ ಕಳೆದುಕೊಂಡು ಬೀದಿ ಪಾಲಾದ ಹಗರಣ. ಈ ವಿಷಯ ಬಂದಾಗ ಮಮತಾ ವರ್ತನೆ ಹೇಗಿರುತ್ತೆ ಅಂತ ನಿಮಗೂ ತಿಳಿದಿದೆ. ಅವರು ಇದರಲ್ಲಿ ಆರೋಪಿಯಾಗಿದ್ದಾರೆ. ಸದರಿ ಹಗರಣದ ಸಂಬಂಧ ಮತ್ತೊಬ್ಬ ಆರೋಪಿ ಕೋಲ್ಕತ್ತದ ಪೋಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ವಿಚಾರಣೆಗೆ ಸಿಬಿಐ ತನಿಖಾ ತಂಡ ತೆರಳಿದ್ದಾಗ ಸಿಬಿಐ ಅಧಿಕಾರಿಗಳನ್ನು ಬಂಧಿಸಲಾಯಿತು. ಮಮತಾ ಬ್ಯಾನರ್ಜಿ ಅವರು ಧರಣಿ ಕೈಗೊಂಡರು. ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ ತಮ್ಮ ಧರಣಿ ಹಿಂಪಡೆದರು. ಈ ಸಂದರ್ಭದಲ್ಲಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ಮೋದಿಯವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದ್ದು ಹಾಗೂ ಅವರು ಸಂಪೂರ್ಣ ಸಹಕಾರ ನೀಡಿದ್ದನ್ನು ನೆನಪಿಸಿಕೊಳ್ಳಬಹುದು.
ರೋಹಿಂಗ್ಯಾ ನಿರಾಶ್ರಿತರು- ಬಾಂಗ್ಲಾ ಮತ್ತು ಮಯನ್ಮಾರ್ಗಳ ನಿರಾಶ್ರಿತರಿಗೆ ಬ್ಯಾನರ್ಜಿ ಅಕ್ಷರಶಃ ಮಮತಾಮಯಿ ಆದರು. ಅವರಿಗಾಗಿ ಟೊಂಕ ಕಟ್ಟಿ ನಿಂತ ಇವರು ಲಕ್ಷಾಂತರ ಅಕ್ರಮ ಮತದಾರರನ್ನು ಸೃಷ್ಟಿಸಿಕೊಂಡರು.
ಇದಿಷ್ಟೇ ಅಲ್ಲದೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸಿದ ಅನ್ಯ ಪಕ್ಷೀಯರ ಮೇಲೆ ಹಲ್ಲೆ, ಕುಟುಂಬಸ್ಥರ ಮೇಲೆ ದೌರ್ಜನ್ಯ ಹೀಗೆ ಸಾಲು ಸಾಲು ದುರ್ನಡತೆಯ ತೋರಲಾಯಿತು. ಬೇಸತ್ತ ಅನೇಕ ಟಿಎಂಸಿ ನಾಯಕರು ಅನ್ಯ ಪಕ್ಷಗಳ ಸೇರಿದರು.
ಇತ್ತೀಚೆಗೆ ನಡೆದ ಲೋಕ ಚುನಾವಣಾ ಸಂದರ್ಭದಲ್ಲಿ ಬಂಗಾಳದಲ್ಲಿ ಚುನಾವಣೆ ನಡೆದ ಪರಿಯನ್ನು ಅನೇಕ ವಿಡಿಯೋಗಳು ಜಗಜ್ಜಾಹೀರು ಮಾಡಿದ್ದವು. ಪರಿಣಾಮವಾಗಿ, ಒಟ್ಟು 42 ಲೋಕಸಭಾ ಕ್ಷೇತ್ರಗಳಲ್ಲಿ 34 ರಿಂದ 22 ಸ್ಥಾನಗಳಿಗೆ ಟಿಎಂಸಿ ಕುಸಿದಿದೆ. ಅಲ್ಲದೆ ಮೋದಿಯವರು ತೃಣಮೂಲ ಕಾಂಗ್ರೆಸ್ನ ಸುಮಾರು 40 ಕ್ಕೂ ಹೆಚ್ಚು ಶಾಸಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದಿದ್ದರು. ಯಾವಾಗ ತನ್ನ ಎಲ್ಲ ಪ್ರಯತ್ನಗಳು ಕೈ ಕೊಟ್ಟವೋ ಆಗ ರಾಜೀನಾಮೆ ಪ್ರಹಸನ ಆರಂಭಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ನಾವು ಈ ಸೋಲನ್ನು ಒಪ್ಪುವುದಿಲ್ಲ. ಮತ್ತೆ ತಾಳೆ ಮಾಡಿ, ವಿಮರ್ಶೆ ಮಾಡುತ್ತೇವೆ ಎನ್ನಲಾಯಿತು. ಮಮತಾ ಬ್ಯಾನರ್ಜಿ ನಾನೀಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಣಯ ತೆಗೆದುಕೊಂಡಿದ್ದು, ಪಕ್ಷದ ಉಸ್ತುವಾರಿ ನೋಡಿಕೊಳ್ಳುವ ಇರಾದೆ ಇದೆ ಎಂದರು. ಮುಂದುವರಿದು, ಆದರೆ ಪಕ್ಷದ (!) ನಾಯಕರು ಮತ್ತು ಕಾರ್ಯಕರ್ತರು ತಮಗೆ ರಾಜೀನಾಮೆ ನೀಡಲು ಬಿಡುತ್ತಿಲ್ಲ ಎನ್ನುತ್ತ ತಮ್ಮ ಕವನ ಓದಿ ಮುಗಿಸಿದರು. ಇದು ಕೇವಲ ಜನರನ್ನು ಮರುಳು ಮಾಡುವ ವಿಧಾನ. ತಾನು ನೊಂದಿದ್ದೇನೆ. ನೇರವಾಗಿ ಚುನಾವಣೆ ಎದುರಿಸಿ ಸೋತೆ. ತನಗೆ ಮೋಸವಾಗಿದೆ ಎಂದು ಬಿಂಬಿಸುವ ತಂತ್ರವಾಗಿರಬಹುದು.
ನನಗೆ ಪ್ರಜಾಪ್ರಭುತ್ವದ ಬಣ್ಣಗಳಲ್ಲಿ ನಂಬಿಕೆ ಇಲ್ಲ,
ನಾನು ಮಮತಾ.
ನನಗೆ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ,
ನಾನು ಮಮತಾ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.