Success has got many fathers. But failure is an orphan (ಗೆಲುವಿಗೆ ಅನೇಕರು ತಂದೆ ತಾಯಿ. ಆದರೆ ಸೋಲು ಮಾತ್ರ ತಬ್ಬಲಿ). ಇದೊಂದು ಇಂಗ್ಲಿಷ್ ನಾಣ್ನುಡಿ. ಚುನಾವಣಾ ಫಲಿತಾಂಶದ ಸಂದರ್ಭದಲ್ಲಂತೂ ಈ ನಾಣ್ನುಡಿ ಹೆಚ್ಚು ಪ್ರಸ್ತುತ.
ಭಾರತೀಯ ಜನತಾ ಪಕ್ಷಕ್ಕೆ ಹಿಂದೆಂದೂ ದೊರಕದ ಅಭೂತಪೂರ್ವ ಗೆಲುವು (ಎನ್ಡಿಎ 354, ಬಿಜೆಪಿಗೆ 303) ಈಚೆಗೆ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಪ್ರಾಪ್ತವಾದ ಬಳಿಕ, ಇಂತಹ ಪ್ರಚಂಡ ಗೆಲುವಿಗೆ ಕಾರಣರಾರು? ಇದರ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಇತ್ಯಾದಿ ವಿಷಯಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ, ಪಕ್ಷದ ಒಳಗೆ-ಹೊರಗೆ, ನಾಲ್ಕು ಜನ ಅಭಿಮಾನಿಗಳು ಸೇರಿದ ಕಡೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಲೇ ಇವೆ. ಸಾಮಾಜಿಕ ಜಾಲತಾಣದಲ್ಲಂತೂ ಬಿಜೆಪಿ ಪರ ಪದೇಪದೇ ಲೇಖನಗಳನ್ನು ಟಂಕಿಸಿದ, ಬಿಜೆಪಿ ಪರ ಪ್ರಚಾರ ಭಾಷಣ ಮಾಡಿದ, ಮೋದಿ ಪರ ಜಾಲತಾಣಗಳಲ್ಲಿ ಪ್ರಭಾವ ಬೀರಿದ ಇಂಥಿಂಥ ಮಹನೀಯರೇ ಈ ಪ್ರಚಂಡ ಗೆಲುವಿಗೆ ಕಾರಣರು ಎಂದು ಪಟ್ಟಿ ಸಹಿತ ಹೆಸರುಗಳನ್ನು ಉಲ್ಲೇಖಿಸಲಾಗಿದೆ! ಇನ್ನು ಅವರನ್ನೆಲ್ಲ ಒಂದೆಡೆ ಸೇರಿಸಿ, ಅವರಿಗೆಲ್ಲ ಬಿಜೆಪಿ ವತಿಯಿಂದ ಸನ್ಮಾನಿಸುವುದೊಂದೇ ಬಾಕಿ ಇದೆ!
ಮಾಧ್ಯಮಗಳಲ್ಲಿ, ಇದಕ್ಕೆ ಭಿನ್ನವಾದ ಕೊಂಚ ಸತ್ಯಕ್ಕೆ ಸಮೀಪವಿರುವ ವಿಶ್ಲೇಷಣೆಗಳು ಪ್ರಕಟವಾಗಿವೆ. ಜನಧನ್, ಆಯುಷ್ಮಾನ್, ಗ್ಯಾಸ್ ಸಬ್ಸಿಡಿ, ನೋಟು ಅಮಾನ್ಯೀಕರಣ, ದೇಶದ್ರೋಹಿಗಳ ವಿರುದ್ಧ ಕಠಿಣ ನಿಲುವು, ಮೋದಿಯವರ ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತ, ಪಾರದರ್ಶಕ ನೀತಿ, ರಕ್ಷಣೆಗೆ ಒತ್ತು ನೀಡಿದ್ದು, ವ್ಯವಸ್ಥಿತ ಚುನಾವಣಾ ಪ್ರಚಾರ ಮುಂತಾದ ಸಕಾರಾತ್ಮಕ ಅಂಶಗಳೇ ಮೋದಿ ಗೆಲುವಿಗೆ ಕಾರಣವೆಂದು ಹೇಳಲಾಗಿದೆ. ಈ ವಿಶ್ಲೇಷಣೆಯಲ್ಲಿ ಉತ್ಪ್ರೇಕ್ಷೆ ಇಲ್ಲ. ಮೋದಿ-ಶಾ ಜೋಡಿಯ ದಣಿವರಿಯದ ಸುತ್ತಾಟ, ವ್ಯವಸ್ಥಿತ ಪ್ರಚಾರಗಳೇ ಪ್ರಚಂಡ ಗೆಲುವಿಗೆ ಕಾರಣ ಎಂಬ ವಿಶ್ಲೇಷಣೆಯೂ ತಕ್ಕ ಮಟ್ಟಿಗೆ ನಿಜವೇ.
ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದ್ದರಿಂದಲೇ ಆ ಗೆಲುವಿಗೆ ನೂರಾರು ಕಾರಣಗಳನ್ನು ಹುಡುಕಲಾಗುತ್ತಿದೆ. ಆ ಗೆಲುವಿನ ಕ್ರೆಡಿಟ್ ಅನ್ನು ತಮ್ಮದಾಗಿಸಿಕೊಳ್ಳಲು ಹಲವರು ಯತ್ನಿಸುತ್ತಿರುವುದೂ ಕಂಡುಬರುತ್ತಿದೆ. ಒಂದು ವೇಳೆ ಬಿಜೆಪಿ ಈ ಮ್ಯಾಜಿಕ್ಸಂಖ್ಯೆ 272 ನ್ನು ತಲುಪದೆ ಸೋತಿದ್ದರೆ, ಆಗ ಆ ಸೋಲಿಗೆ ನಾವೇ ಕಾರಣರು ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದವರ ಸಂಖ್ಯೆ ಎಷ್ಟಿದ್ದಿರಬಹುದು? ಬಹುಶಃ ನರೇಂದ್ರ ಮೋದಿ, ಪಕ್ಷಾಧ್ಯಕ್ಷ ಅಮಿತ್ ಶಹಾ ಹೊರತುಪಡಿಸಿದರೆ, ಬೇರಾರೂ ಈ ಸೋಲಿಗೆ ನಾವೇ ಹೊಣೆ ಎಂದು ಒಪ್ಪಿಕೊಳ್ಳುವ ಸಂಭವ ಇರುತ್ತಿರಲಿಲ್ಲವೇನೋ. ಅದಕ್ಕೆ ನಾನು ಹೇಳಿದ್ದು – ‘ಸೋಲು ಎಂದಿದ್ದರೂ ಅನಾಥ’ ಎಂದು. ಬಿಜೆಪಿ ಸೋತಿದ್ದರೆ ಅದಕ್ಕೆ ಬಯ್ಗಳ ತಿನ್ನಬೇಕಾದವರ ಸಂಖ್ಯೆಯೇನೋ ದೊಡ್ಡದೇ ಆಗಿರುತ್ತಿತ್ತು.
ಸೋಲು-ಗೆಲುವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಹಜವೇ ಆಗಿದ್ದರೂ ಅದನ್ನು ಸಂತುಲನ ಮಾನಸಿಕತೆಯಿಂದ ಸ್ವೀಕರಿಸುವವರ ಸಂಖ್ಯೆ ತುಂಬಾ ಕಡಿಮೆ ಇರುತ್ತದೆ. ಬಿಜೆಪಿಗೆ ಲೋಕಸಭೆಯಲ್ಲಿ ಕೇವಲ 2 ಸ್ಥಾನ ಬಂದಾಗ ಇಡೀ ಪಕ್ಷದ ಕಾರ್ಯಕರ್ತರೆಲ್ಲ ಕುಗ್ಗಿ, ನಿರಾಶರಾಗಿದ್ದರೂ ಪಕ್ಷದ ನೇತಾರ ವಾಜಪೇಯಿ ಅವರು ಮಾತ್ರ ‘ಹಮ್ ಹಾರೇಂಗೇ ನಹೀ’ ಎಂದು ಹೇಳಿ ಕಾರ್ಯಕರ್ತರಲ್ಲಿ ಧೈರ್ಯ, ವಿಶ್ವಾಸ ತುಂಬಿದ್ದರು. ಮುಂದೊಂದು ದಿನ ಇಡೀ ದೇಶವೇ ಅಚ್ಚರಿಪಡುವಷ್ಟು ಸಂಖ್ಯೆಯಲ್ಲಿ ನಾವು ಗೆದ್ದು ಬರುತ್ತೇವೆ ಎಂದೂ ಅವರು ಹೇಳಿದ್ದರು. ಅವರ ಮಾತು ಈಗಂತೂ ನಿಜವಾಗಿದೆ. ಲೋಕಸಭೆಯಲ್ಲಿ 2 ಸ್ಥಾನ, ಕರ್ನಾಟಕ ವಿಧಾನಸಭೆಯಲ್ಲೂ ಬಿಜೆಪಿಗೆ ಎರಡೇ ಸ್ಥಾನ ದೊರಕಿದ್ದಾಗ ಜನಸಂಘದ ನಾಯಕ ಜಗನ್ನಾಥ ರಾವ್ ಜೋಶಿಯವರಿಗೆ ಅಭಿಮಾನಿಯೊಬ್ಬರು ಅಲವತ್ತುಕೊಂಡು ‘ಹೀಗೇಕಾಯ್ತು?’ ಎಂದು ಕೇಳಿದ್ದರಂತೆ. ಜಗನ್ನಾಥ ಜೋಶಿಯವರು ಮಾತ್ರ ಸ್ವಲ್ಪವೂ ವಿಚಲಿತರಾಗದೆ “ಅರೆ, ನಿನಗೆ ಗೊತ್ತಿಲ್ವೇನಪ್ಪಾ ಕುಟುಂಬ ಯೋಜನೆಯ ಸೂತ್ರ? ಹಮ್ ದೋ ಹಮಾರೆ ದೋ (ನಾವಿಬ್ಬರು ನಮಗಿಬ್ಬರು). ಆ ಸೂತ್ರದಂತೆ ಕೇಂದ್ರದಲ್ಲಿ 2, ರಾಜ್ಯದಲ್ಲಿ 2 ಸೀಟು ಆರಿಸಿಬಂದಿದ್ದೇವೆ.. ಹಹ್ಹಹ್ಹಹ್ಹ” ಎಂದು ನಕ್ಕಿದ್ದರಂತೆ. ಆ ಉತ್ತರ ಕೇಳಿಸಿಕೊಂಡವರು ಇನ್ನಷ್ಟು ಜೋರಾಗಿ ಬಿದ್ದು ಬಿದ್ದು ನಕ್ಕಿದ್ದರಂತೆ. ಸೋಲನ್ನು ಹೇಗೆ ಸ್ವೀಕರಿಸಬೇಕೆಂಬ ಸಂದೇಶ ಜಗನ್ನಾಥ ರಾಯರ ಆ ತಮಾಷೆಯ ಉತ್ತರದಲ್ಲಿತ್ತು. ವಾಜಪೇಯಿಯಂತಹ, ಜಗನ್ನಾಥರಾಯರಂತಹ ಸೋಲನ್ನು ಶಾಂತವಾಗಿ ಸ್ವೀಕರಿಸಿ, ಗೆಲುವಿನ ಕನಸು ಕಾಣುವವರು ಇದ್ದಿದ್ದರಿಂದಲೇ ಬಿಜೆಪಿ ಈ ಬಾರಿ ಪ್ರಚಂಡ ಜಯ ಸಾಧಿಸುವುದಕ್ಕೆ ಸಾಧ್ಯವಾಗಿದೆ.
ಮೇ 23 ರಂದು ಸಂಜೆ ಪ್ರಚಂಡ ಜಯ ದೊರಕುವ ಮುನ್ಸೂಚನೆ ಕಾಣಿಸಿಕೊಂಡಾಗ ದೆಹಲಿಯ ಪಕ್ಷದ ಕಚೇರಿಯಲ್ಲಿ ಪ್ರಧಾನಿ ಮೋದಿ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದ ಮಾತು ಅತ್ಯಂತ ಮನೋಜ್ಞ. “ಈ ಜಯಕ್ಕೆ ಮೋದಿ ಕಾರಣ ಎಂದು ಹಲವರು ಹೇಳ್ತಾರೆ. ಆದರೆ ಇದಕ್ಕೆ ನಾನು ಕಾರಣನಲ್ಲ. ನೀವೆಲ್ಲರೂ ಕಾರಣ. ದೇಶದ 130 ಕೋಟಿ ಜನರು ಕಾರಣ. ಅವರಿಗೆ ನಾನು ತಲೆಬಾಗಿ ವಂದಿಸುವೆ” ಬಿಜೆಪಿಯೆಂದರೆ ಮೋದಿ; ಮೋದಿ ಎಂದರೆ ಬಿಜೆಪಿ ಎಂದಾಗಿರುವ ಈ ಸಮಯದಲ್ಲೂ ಮೋದಿಯವರ ತಲೆ ಈ ಪ್ರಚಂಡ ವಿಜಯದಿಂದ ಒಂದಿನಿತೂ ತಿರುಗಿಲ್ಲ. ಅಹಂಕಾರ ಅವರನ್ನು ಅಡರಿಲ್ಲ ಎನ್ನುವುದಕ್ಕೆ ಅವರ ಈ ವಿನೀತ ಮಾತುಗಳೇ ಸಾಕ್ಷಿ. ಆದೇನೂ ಕಪಟ ವಿನಯದ ಮಾತುಗಳಾಗಿರಲಿಲ್ಲ. ಅವರ ಅಂತರಾಳದಿಂದ ಹೊಮ್ಮಿದ ಪ್ರಾಮಾಣಿಕತೆಯ ನುಡಿಗಳು ಅವು. ಅಂತಹ ವಿನಯವಂತಿಕೆ ಎಷ್ಟು ಮಂದಿಗೆ ಸಾಧ್ಯ?
ಫಲಿತಾಂಶ ಪ್ರಕಟವಾದ ಮರುದಿನವೇ ಮೋದಿ ಬಿಜೆಪಿಯ ವರಿಷ್ಠ ನಾಯಕರಾದ ಆಡ್ವಾಣಿ ಮತ್ತು ಡಾ. ಮುರಳಿಮನೋಹರ ಜೋಷಿಯವರ ಮನೆಗೆ ತೆರಳಿ, ಕಾಲಿಗೆರಗಿ ಅವರಿಂದ ಆಶೀರ್ವಾದ ಪಡೆದರು. ಈ ಇಬ್ಬರೂ ಹಿರಿಯರೂ ಬಿಜೆಪಿಯ ಏಳಿಗೆಗಾಗಿ ಬೆವರು ರಕ್ತ ಒಂದಾಗಿಸಿದವರು ಎಂಬುದು ಮೋದಿಯವರಿಗೆ ಚೆನ್ನಾಗಿ ಗೊತ್ತಿತ್ತು. ಈ ಚುನಾವಣೆಯಲ್ಲಿ ಅವರಿಬ್ಬರ ಪಾತ್ರ ಗೌಣವಾಗಿದ್ದರೂ, ಪಕ್ಷವು ಈ ಎತ್ತರಕ್ಕೆ ಏರಲು ಅವರಿಬ್ಬರ ಅಭೂತಪೂರ್ವ ಪರಿಶ್ರಮ, ತ್ಯಾಗಗಳೇ ಕಾರಣ ಎಂಬುದೂ ಮೋದಿಯವರಿಗೆ ತಿಳಿಯದ ಸಂಗತಿಯಲ್ಲ. ಹಾಗೆಂದೇ ಅವರಿಬ್ಬರನ್ನೂ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಪ್ರಚಂಡ ಗೆಲುವಿನಿಂದ ಮೋದಿಯವರ ತಲೆ ತಿರುಗಿಲ್ಲ ಎನ್ನುವುದಕ್ಕೆ ಈ ಪ್ರಕರಣವೂ ಒಂದು ನಿದರ್ಶನ.
“ಬಿಜೆಪಿಯ ಗೆಲುವಿಗೆ ಪ್ರಚಾರ ಬಯಸದ ಆರೆಸ್ಸೆಸ್ ಕಾರ್ಯಕರ್ತರೇ ಕಾರಣ” ಎಂದು ಕಾಂಗ್ರೆಸ್ ವಕ್ತಾರ ಬಿ.ಎಲ್. ಶಂಕರ್ ಟಿವಿ ವಾಹಿನಿಯ ಚರ್ಚೆಯ ವೇಲೆ ತಿಳಿಸಿರುವುದನ್ನು ಅಷ್ಟಾಗಿ ಯಾರೂ ಗಮನಿಸಿರಲಿಕ್ಕಿಲ್ಲ. ನಿಜವಾಗಿ ಈ ಮಾತನ್ನು ಬಿಜೆಪಿಯ ವಕ್ತಾರರು ಹೇಳಬೇಕಿತ್ತು. ಬಿಜೆಪಿಯ ಗೆಲುವಿಗಾಗಿ ದೇಶಾದ್ಯಂತ ಸದ್ದಿಲ್ಲದೆ, ಪ್ರಚಾರ ಬಯಸದ ಲಕ್ಷಾಂತರ ಮಂದಿ ಆರೆಸ್ಸೆಸ್ ಕಾರ್ಯಕರ್ತರು ಶ್ರಮಿಸಿದ್ದಾರೆ. ತಾವು ಹಗಲು ರಾತ್ರಿ ಶ್ರಮಿಸಿದ್ದಕ್ಕೆ ಕನಿಷ್ಠ ಧನ್ಯವಾದವನ್ನೂ ಅವರು ಅಪೇಕ್ಷಿಸಿಲ್ಲ. ಸಂಘದ ಸೂಚನೆಯಂತೆ ಕೆಲಸ ಮಾಡಿ ತಮ್ಮ ಕರ್ತವ್ಯ ಮುಗಿಸಿದ್ದಾರೆ. ಫಲಿತಾಂಶದ ಮರುದಿನ ಎಂದಿನಂತೆ ಶಾಖಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಪ್ರಚಾರ ಬಯಸದ, ಬಿಜೆಪಿ ಗೆಲುವಿಗೆ ವೈಯಕ್ತಿಕ ಕಷ್ಟನಷ್ಟಗಳನ್ನು ಲೆಕ್ಕಿಸದೆ ಶ್ರಮಿಸುವ ಈ ಅನಾಮಿಕರಿಗೆ ಧನ್ಯವಾದ ಹೇಳುವವರು ಯಾರು ?
ಹೀಗೆ ಬಿಜೆಪಿಯ ಗೆಲುವಿಗೆ ನೂರಾರು ಕಾರಣಗಳಿವೆ. ಯಾರೋ ಒಬ್ಬರಿಂದ ಅಥವಾ ಕೆಲವರಿಂದ, ಸಾಮಾಜಿಕ ಜಾಲತಾಣದ ನೆಟ್ಟಿಗರಿಂದ ಅಥವಾ ಕೆಲವರ ಪ್ರಚಂಡ, ಆಕರ್ಷಕ ಭಾಷಣಗಳಿಂದ ಬಿಜೆಪಿ ಪ್ರಚಂಡ ಗೆಲುವು ಪಡೆಯಿತು ಎಂದು ವಿಶ್ಲೇಷಿಸಿದರೆ, ಅದು ಈ ಪ್ರಚಂಡ ಗೆಲುವಿಗೆ ನಾವೆಲ್ಲ ಎಸಗುವ ಘೋರ ಅಪಚಾರವೇ ಆಗಬಹುದು.
ದೆಹಲಿಯ ವಿಜಯದ ಸಭೆಯ ಭಾಷಣದಲ್ಲಿ ಮೋದಿ ಹೇಳಿರುವ ಎರಡು ಮಾತುಗಳನ್ನು ಪಕ್ಷದ ಕಾರ್ಯಕರ್ತರು, ಮುಖಂಡರೆಲ್ಲರೂ ನಿರಂತರ ಮನನ ಮಾಡಿ ಕೊಳ್ಳಬೇಕಾದ ಅಗತ್ಯವಿದೆ. ಮೋದಿ ಹೇಳಿದ್ದು : “ನಾನು ನನ್ನ ಸ್ವಂತಕ್ಕಾಗಿ ಏನನ್ನೂ ಮಾಡುವುದಿಲ್ಲ. ನನ್ನ ದೇಹದ ಕಣ ಕಣವೂ ಕ್ಷಣಕ್ಷಣವೂ ದೇಶ, ಜನತೆಗೆ ಸಮರ್ಪಿತ. ಯಾರ ಜತೆಗೂ ದ್ವೇಷ, ಅಸೂಯೆ, ಪ್ರತೀಕಾರದಿಂದ ವರ್ತಿಸುವುದಿಲ್ಲ”.
ಮೋದಿ ಫ್ಯಾಕ್ಟರ್ನಿಂದಾಗಿ ಗೆಲುವು ಸಾಧಿಸಿರುವ ಬಿಜೆಪಿಯ 303 ಎಂಪಿಗಳೂ ಈ ಮಾರ್ಮಿಕ ಮಾತುಗಳನ್ನು ನೆನಪಿಟ್ಟುಕೊಂಡು, ಅದರಂತೆಯೇ ನಡೆದರೆ, ಮೋದಿಯವರಂತೆಯೇ ನಡೆನುಡಿಗಳನ್ನು ರೂಢಿಸಿಕೊಂಡರೆ 2024 ರ ಚುನಾವಣೆಯಲ್ಲೂ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವುದು ಕಷ್ಟವಾಗದು.
✍ ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.