‘ನೀವು ಭಾರತವನ್ನು ಓದಬೇಕಾದರೆ, ಸ್ವಾಮಿ ವಿವೇಕಾನಂದರನ್ನು ಓದಿ. ಅವರಲ್ಲಿ ಯಾವ ಋಣಾತ್ಮಕ ಅಂಶಗಳೇ ಇಲ್ಲ. ಇರುವದು ಕೇವಲ ಧನಾತ್ಮಕ ಅಂಶಗಳೆ” ಎಂದು ನುಡಿದವರು ನೊಬೆಲ್ ಪುರಸ್ಕೃತ ಶ್ರೀರವೀಂದ್ರನಾಥ ಟಾಗೂರರು. ವಿವೇಕಾನಂದರನ್ನ ಓದಿದ ಪ್ರತಿಯೊಬ್ಬರದೂ ಇದೇ ಅನುಭವವೇ. ರಾಷ್ಟ್ರವು ಎದುರಿಸುತ್ತಿದ್ದ ಒಂದು ಸಂದಿಗ್ಧದ ಕ್ಲಿಷ್ಟಕರ ಸನ್ನಿವೇಶದಲ್ಲಿ ಜನಿಸಿ, ಎಲ್ಲ ಭರವಸೆಗಳನ್ನೂ ಕಳೆದುಕೊಂಡಿದ್ದ ಜನರಲ್ಲಿ ಅದ್ಭುತ ಸಂಚಲನವನ್ನು ಮೂಡಿಸಿ ಭಾರತೀಯರಲ್ಲಿದ್ದ ಸುಪ್ತ ಸಿಂಹವನ್ನು ಬಡಿದೆಬ್ಬಿಸಿದವರು ಅವರು. ಪ್ರಖರ ರಾಷ್ಟ್ರೀಯವಾದಿಗಳಾಗಿದ್ದ ತಿಲಕರಿಂದ ಹಿಡಿದು, ಮಹಾತ್ಮಾ ಗಾಂಧೀಜಿಯವರೆಗೂ ಎಲ್ಲರೂ ಸ್ವಾಮೀಜಿಯವರ ಪ್ರಭಾವಕ್ಕೊಳಗಾದವರೇ.
ಜೀವಿತಾವಧಿಯು ಅಲ್ಪವಾಗಿದ್ದರೂ ವಿವೇಕಾನಂದರು ಸಹಸ್ರ ಪೀಳಿಗೆಗಳವರೆಗು ಭಾರತ ನೆನಪಿಟ್ಟುಕೊಳ್ಳಬೇಕಾದಷ್ಟು ಸಾಧನೆಯನ್ನು, ಜಾಗೃತಿಯನ್ನು ಮೂಡಿಸಿ ಹೋಗಿದ್ದಾರೆ. ಸ್ವಾತಂತ್ರ್ಯದ ನಂತರವೂ ಈ ದೇಶ ಅನೇಕ ಸಮಸ್ಯೆಗಳಿಂದ ಬೇಯುತ್ತಿದೆ ಎಂದರೆ ನಾವು ಆ ಮಹಾತ್ಮನ ವಾಕ್ಯಗಳನ್ನು ಮರೆತಿದ್ದೇವೆ ಎಂದರ್ಥ. ವಿವೇಕಾನಂದರ ಕನಸಿನ ದೇಶವನ್ನು ಮುಂದಿಟ್ಟುಕೊಂಡು ಹೊರಟಿದ್ದರೆ, ಈ ಕಾಲಕ್ಕೆ ಭಾರತವು ಜಗದ್ಗುರು ಆಗಿರುತ್ತಿತ್ತು. ಆದರೆ ಈಗಲೂ ಸಮಯವಿದೆ. ರಾಷ್ಟ್ರಪ್ರಜ್ಞೆಯ, ಹೊಸ ಶಕ್ತಿಯ ನಾಯಕರ ಆಳ್ವಿಕೆ ಇರುವಾಗ, ಮತ್ತೆ ಇತಿಹಾಸದತ್ತ ಮುಖಮಾಡಿ, ಮಹಾತ್ಮರ ಕನಸನ್ನೊಮ್ಮೆ ಪರಾಮರ್ಶಿಸಬೇಕಿದೆ.
ವಿವೇಕಾನಂದರ ದೊಡ್ಡ ಕನಸು, ‘ಸಶಕ್ತ ಭಾರತ‘ದ ನಿರ್ಮಾಣ. ಸಶಕ್ತತೆ ಎಲ್ಲ ಆಯಾಮಗಳಲ್ಲಿಯೂ ಇರಬೇಕೆಂಬುದು ಸ್ವಾಮೀಜಿಗಳ ಅಭಿಪ್ರಾಯವಾಗಿತ್ತು. ‘ಮನೆಯಲ್ಲಿ ಕೂತು ಗೀತೆ ಓದುವುದಕ್ಕಿಂತ, ಮೈದಾನದಲ್ಲಿ ಫುಟ್ಬಾಲ್ ಆಡುವುದು ಹೆಚ್ಚು ಅಗತ್ಯ’ ಎಂದವರು ನುಡಿದಿದ್ದರು. ಮೇಲ್ನೋಟಕ್ಕೆ ಖಾರವೆನಿಸುವ ಮಾತಂತೆ ಇದ್ದರೂ, ಅದರ ಅಭಿಪ್ರಾಯ ಸರ್ವಸಮ್ಮತವಾಗಿದೆ. ‘ಶರೀರಮಾದ್ಯಂ ಖಲು ಧರ್ಮಸಾಧನಂ’ ಎಂದು ಋಷಿವಾಕ್ಯಗಳೇ ಹೇಳಿವೆ. ಸಾಧನೆಗೆ ಬೇಕಾದ ಶರೀರವೇ ದೃಢವಿಲ್ಲದಿದ್ದರೆ, ಯಾರು ತಾನೆ ಸಾಹಸಕ್ಕೆ ಮುಂದಾಗುತ್ತಾರೆ. ಹೀಗಾಗಿಯೇ ಯೋಗ, ವ್ಯಾಯಾಮಕ್ಕೆ ಬಹಳ ಒತ್ತು ನೀಡುತ್ತಿದ್ದರು. ಇಂದಿನ ವೇಗದ ಬದುಕಿನಲ್ಲಿ ಸಾಹಸದ ಕ್ರೀಡೆಗಳೇ ಮಂಕಾಗಿವೆ. ಸ್ವಾಮೀಜಿಗಳು ಹೇಳಿದ್ದರಲ್ಲಾ, ‘ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ, ವಿದ್ಯುತ್ತಿನ ಇಚ್ಚಾಶಕ್ತಿ ಇರುವ ಯುವಕರು ಬೇಕು’ ಎಂದು, ಅಂತಹ, ಯಾವ ದುಷ್ಟಶಕ್ತಿಗಳಿಗೂ ಜಗ್ಗದೇ ಮುನ್ನುಗ್ಗುವ ತರುಣರ ತಯಾರಿ ನಡೆಯಬೇಕು.
ಮತ್ತೊಂದು ವಿವೇಕಾನಂದರು ಪುನಃಪುನಃ ಹೇಳುತ್ತಿದ್ದ ವಿಚಾರ ಯುವಕರ ಚಾರಿತ್ರ್ಯನಿರ್ಮಾಣ. ಇವತ್ತು ಈ ದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ, ಅತ್ಯಾಚಾರಗಳನ್ನು ಕೇಳಿದಾಗಲೆಲ್ಲಾ ಸ್ವಾಮೀಜಿಯವರ ಈ ಕಳಕಳಿ ಅರ್ಥವಾಗದೇ ಇರದು. ಸುಳ್ಳು ಆಧುನಿಕತೆಯ ಹುಚ್ಚಿನಲ್ಲಿ, ನಮ್ಮತನವನ್ನು ಮರೆಯುವುದಷ್ಟೇ ಅಲ್ಲದೇ ನೈತಿಕ ಮೌಲ್ಯಗಳನ್ನೂ ಕಳೆದುಕೊಂಡು ಪಶುಗಳಂತೆ ವರ್ತಿಸುತ್ತಿರುವುದು ನಿಜಕ್ಕೂ ಆತಂಕಕಾರಿ. ಸಂಸ್ಕಾರದ ಬೇರುಗಳನ್ನು ಮಕ್ಕಳಲ್ಲಿ ನೆಡುವುದನ್ನೇ ನಾವು ಮರೆತಿದ್ದೇವೆ. ಇದು ಬದಲಾಗಿ, ಪ್ರತಿಯೊಬ್ಬರಲ್ಲೂ ನೈತಿಕತೆಯ ಉದ್ದೀಪನವಾಗಬೇಕು. ಮೂಲೆಗುಂಪಾಗಿರುವ ಸಾಂಸ್ಕೃತಿಕ ಗ್ರಂಥಗಳು ಪುನರುಜ್ಜೀವನ ಪಡೆದುಕೊಳ್ಳಬೇಕು.
ಮೂರನೆಯ ಕನಸೆಂದರೆ, ಹೊಸ ಹೊಸ ಜ್ಞಾನದ ಬೆಳವಣಿಗೆ. ಅಮೇರಿಕಾ, ಯುರೋಪ್ಗಳನ್ನು ಸುತ್ತಿದ್ದ ಸ್ವಾಮೀಜಿಗಳು ಅಲ್ಲಿ ಮೇಲೆದ್ದಿದ್ದ ವೈಜ್ಞಾನಿಕ ಪ್ರಗತಿಯನ್ನು ನೋಡಿದ್ದರು. ಹೀಗಾಗಿ, ಭವಿಷ್ಯದಲ್ಲಿ ಈ ದೇಶಗಳ ಜೊತೆ ಸ್ಪರ್ಧಿಸಬೇಕಾದರೆ, ವಿಜ್ಞಾನದ ಪ್ರಗತಿಯ ಅವಶ್ಯಕತೆಯನ್ನು ಅವರು ಅರಿತಿದ್ದರು. ಅದರ ಫಲವಾಗಿ ತಲೆಯೆತ್ತಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ನೋಡಿದಾಗಲೇ ಜ್ಞಾನದ ಬಗ್ಗೆ ಅವರಿಗಿದ್ದ ಹಂಬಲದ ಅನುಭವವಾಗುತ್ತದೆ.
ಎಲ್ಲ ಧಾರ್ಮಿಕ ವೈರುಧ್ಯಗಳನ್ನೂ ಮೀರಿ, ಏಕತೆಯಿಂದ ಭಾರತೀಯರೆಲ್ಲರೂ ಒಟ್ಟಾಗಿ ದುಡಿಯಬೇಕೆಂಬ ಅವರ ಕನಸು ಇನ್ನೂ ಕನಸಾಗೇ ಇರುವುದು ದುರಂತ. ಈ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಗೆ ಬರುವ ಹೊಣೆ ನಮ್ಮ ಮೇಲೆಯೇ ಇದೆ. ಇದು ಒಂದು ಸಾಮಾಜಿಕ ಕಾರ್ಯ. ಯಾರೋ ಒಬ್ಬರಿಂದ ನೆರವೇರುವುದಿಲ್ಲ. ಬಾಲ್ಯದಿಂದಲೇ ಸಂಸ್ಕಾರವನ್ನು, ಶುದ್ಧ ಚಾರಿತ್ರ್ಯವನ್ನು ಬಿತ್ತುವುದು ಪಾಲಕರ ಕರ್ತವ್ಯವಾದರೆ, ಶಿಕ್ಷಣದ ಮೂಲಕ ಸಾಮಾಜಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವುದು ಪೋಷಕರು, ಶಿಕ್ಷಕರ ಕೈಯಲ್ಲಿದೆ. ಇದೆಲ್ಲವನ್ನೂ ಅಳವಡಿಸಿಕೊಂಡು, ಉನ್ನತ ರಾಷ್ಟ್ರದ ನನಸಿಗೆ ನಾವು ಶ್ರಮಪಡಬೇಕಿದೆ. ‘ಒಬ್ಬ ಶಕ್ತ ವ್ಯಕ್ತಿಯ ನಿರ್ಮಾಣದಿಂದಲೇ ಶಕ್ತ ಸಮಾಜದ ನಿರ್ಮಾಣ ಸಾಧ್ಯ ಎಂದು ವಿಶ್ವೇಶ್ವರಯ್ಯನವರು ಹೇಳಿದಂತೆ, ವ್ಯಕ್ತಿಗತವಾದ ಔನ್ನತ್ಯದ ಮೂಲಕ ನಾಡಿನ ಶ್ರೇಷ್ಠತೆಯತ್ತ ದಾಪುಗಾಲಿಡುವ ಸಂಕಲ್ಪವನ್ನು ಮಾಡೋಣ.
ವಂದೇ ಮಾತರಂ..
✍ ಭೀಮ್ಸೇನ್ ಪುರೋಹಿತ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.