ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನಾಮಪತ್ರ ಸಲ್ಲಿಸಿದ ವೇಳೆ 91 ವರ್ಷದ ಮಹಿಳೆಯೊಬ್ಬರು ಅವರ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ನೀಡಿದ್ದರು. ಆಕೆ ಡಾ. ಅನ್ನಪೂರ್ಣ ಶುಕ್ಲಾ, ಮೋದಿ ನಾಮಪತ್ರ ಸಲ್ಲಿಕೆಗೆ ಪ್ರಸ್ತಾಪಕರಾಗಿದ್ದರು. ಮದನ್ ಮೋಹನ್ ಮಾಳವಿಯಾ ಅವರ ಮಾನಸ ಪುತ್ರಿ ಎಂದು ಕರೆಯಲ್ಪಡುವ ಅವರು, ವೈದ್ಯೆ, ವೈದ್ಯಕೀಯ ಸಂಶೋಧಕಿ ಮತ್ತು ಶಿಕ್ಷಣ ತಜ್ಞೆಯೂ ಹೌದು.
ಅದು 1960ರ ಕಾಲ. ಹೊಸ ತಾಯಂದಿರನ್ನು ಪ್ರಲೋಭನೆಗೆ ಒಳಪಡಿಸಲು ಪಶ್ಚಿಮಾತ್ಯ ರಾಷ್ಟ್ರಗಳಿಂದ ಶಿಶು ಆಹಾರಗಳು ಭಾರತಕ್ಕೆ ರಾಶಿ ರಾಶಿಯಾಗಿ ಹರಿದು ಬಂದವು. ಶಿಶುಗಳಿಗೆ ಅತ್ಯಗತ್ಯವಾದ ಕಬ್ಬಿನಾಂಶ, ಕ್ಯಾಲ್ಸಿಯಂ, ಮಿನರಲ್ಸ್ಗಳನ್ನು ನೀಡುತ್ತೇವೆ ಎಂದು ಈ ಕಂಪನಿಗಳು ಭರವಸೆಯ ಮಹಾಪೂರವನ್ನೇ ಹರಿಸುತ್ತಿದ್ದವು. ಎಷ್ಟೋ ಮಂದಿ ತಾಯಂದಿರು, ಈ ಶಿಶು ಆಹಾರಗಳನ್ನು ನೀಡದೇ ಇದ್ದರೆ ನಮ್ಮ ಮಕ್ಕಳು ಬೆಳವಣಿಗೆಯನ್ನೇ ಕಾಣೋದಿಲ್ಲ ಎಂಬ ನಿರ್ಧಾರಕ್ಕೆ ಬರುವಷ್ಟರ ಮಟ್ಟಿಗೆ ಇವುಗಳು ಜನರ ತಲೆಕೆಡಿಸಿದ್ದವು. ಆದರೆ, ಅಗತ್ಯವಾಗಿ ಇರಬೇಕಾದ ‘ಶಿಶು ಆಹಾರ ತಾಯಿಯ ಎದೆ ಹಾಲಿಗೆ ಪರ್ಯಾಯವಲ್ಲ” ಎಂಬ ಎಚ್ಚರಿಕಾ ಸಂದೇಶ ಮಾತ್ರ ಇಂತಹ ಶಿಶು ಆಹಾರಗಳ ಮೇಲೆ ಅಂದಿನ ಕಾಲದಲ್ಲಿ ಇರಲಿಲ್ಲ. ಆದರೆ ಡಾ.ಅನ್ನಪೂರ್ಣ ಶುಕ್ಲಾ ಅವರ ಶಿಶು ಪೌಷ್ಠಿಕತೆಯ ಮೇಲಿನ ನಿರಂತರ ಸಂಶೋಧನೆ ಈ ತಪ್ಪನ್ನು ಸರಿಪಡಿಸಿತು.
ಹೌದು, ಇಂದು ಎಲ್ಲಾ ಶಿಶು ಆಹಾರಗಳ ಮೇಲೆ ‘ಇದು ತಾಯಿಯ ಹಾಲಿಗೆ ಪರ್ಯಾಯವಲ್ಲ” ಎಂಬ ಸಂದೇಶವಿದ್ದರೆ, ಅದಕ್ಕೆ ಕಾರಣ ಶುಕ್ಲಾ ಮತ್ತು ಅವರ ಸಂಶೋಧನೆ. ಅವರಿಂದಾಗಿ ಎಷ್ಟೋ ಮಂದಿ ತಾಯಂದಿರ ತಪ್ಪು ಕಲ್ಪನೆ ದೂರವಾಯಿತು. ತಾಯಿಯ ಹಾಲಿಗೆ ಸಮಾನವಾದ ಪೋಷಕಾಂಶವನ್ನು ಜಗತ್ತಿನ ಯಾವ ಶಿಶು ಆಹಾರಗಳು ನೀಡಲಾರವು ಎಂಬ ಸತ್ಯವನ್ನು ಶುಕ್ಲಾ ಅವರ ಸಂಶೋಧನೆ ಮನದಟ್ಟು ಮಾಡಿಕೊಟ್ಟಿತು.
ಯುಕೆಯಲ್ಲಿ ಪಿಎಚ್ಡಿ ಪದವಿಯನ್ನು ಮಾಡುತ್ತಿದ್ದ ವೇಳೆ, ಶುಕ್ಲಾ ಅವರಿಗೆ ಯುರೋಪ್ ದೇಶಗಳ ಮಕ್ಕಳ ತೂಕ ಭಾರತೀಯ ಮಕ್ಕಳಿಗಿಂತ ಹೆಚ್ಚಿರುವುದು ಗಮನಕ್ಕೆ ಬಂದಿತ್ತು. ಅಲ್ಲಿ ಕೆಲವೊಂದು ಕುಟುಂಬಗಳು ತಾಯಿಯ ಹಾಲಿಗೆ ಹೆಚ್ಚಿನ ಒತ್ತು ನೀಡುವುದನ್ನು, ಹಲವು ಕುಟುಂಬಗಳು ಜಾಹೀರಾತು ಮತ್ತು ಪ್ಯಾಕ್ ಆದ ಶಿಶು ಆಹಾರಗಳಿಂದ ತಪ್ಪು ಗ್ರಹಿಕೆಗೆ ಒಳಗಾಗಿ ಅವುಗಳನ್ನೇ ಹೆಚ್ಚಾಗಿ ನೀಡುತ್ತಿದ್ದನ್ನೂ ಅವರು ನೋಡಿದರು. ಇಂತಹ ಆಹಾರಗಳು ಮಕ್ಕಳ ಆರೋಗ್ಯಕ್ಕೆ ಉತ್ತಮ ಮತ್ತು ತಾಯಿಯ ಹಾಲು ಆರೋಗ್ಯ ವೃದ್ಧಿಗೆ ಸಾಕಾಗುವುದಿಲ್ಲ ಎಂಬುದು ಅಂತಹ ಕುಟುಂಬಗಳ ನಂಬಿಕೆಯಾಗಿತ್ತು. ಆದರೆ ಭಾರತದಲ್ಲಿ ತಾಯಿಯ ಎದೆ ಹಾಲಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂಬುದನ್ನು ಶುಕ್ಲಾ ಅರಿತುಕೊಂಡಿದ್ದರು. ತಮ್ಮ ಸಂಶೋಧನೆಯುದ್ದಕ್ಕೂ ಅವರು ತಾಯಿಯ ಎದೆ ಹಾಲಿನ ಮಹತ್ವ ಸಾರುವ ವೇದದ ಮಂತ್ರವನ್ನು ಆಧಾರವಾಗಿಟ್ಟುಕೊಂಡರು.
ವಾರಣಾಸಿ ಮೂಲದವರಾದ ಶುಕ್ಲಾ, ಈ ತಪ್ಪು ಗ್ರಹಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ನವಜಾತ ಶಿಶುಗಳ ಆರೋಗ್ಯಕ್ಕೆ ತಾಯಿಯ ಹಾಲು ಮಾತ್ರ ಪೂರಕವಾಗಬಲ್ಲದು ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಮಹತ್ವದ ಸಂಶೋಧನೆಯನ್ನು ಆರಂಭಿಸಿದರು.
ಮೂರು ವರ್ಷಗಳ ಕಾಲ ಡಾ.ಶುಕ್ಲಾ ಅವರು, 300 ಮಕ್ಕಳು ಹುಟ್ಟಿ 3 ವರ್ಷ ಪೂರೈಸುವವರೆಗೂ ಅವರನ್ನು ಸೂಕ್ಷ್ಮವಾಗಿ ಗಮನಿಸಿದರು. ಮಕ್ಕಳ ಎತ್ತರ, ತೂಕ, ಮಲ ವಿಸರ್ಜನೆಯ ಸ್ಥಿರತೆ, ತಿನ್ನುವ ವಿಧಾನ ಮತ್ತು ಕ್ಯಾಲೋರಿ ಇನ್ ಟೇಕ್ ಗಳತ್ತ ಅವರು ತಮ್ಮ ಗಮನವನ್ನು ಮುಖ್ಯವಾಗಿ ಕೇಂದ್ರೀಕರಿಸಿದರು. ಪ್ರೊಫೆಸರ್ ಚಾರ್ಲೊಟ್ ಎಂ.ಆ್ಯಂಡಸ್ರನ್, ಎಚ್.ಎ ಪೋರ್ಸ್ಯಾತ್, ಎಸ್.ಎಂ ಮರ್ಹಾ ಅವರೊಂದಿಗೆ ಕೂಡಿ ನವಜಾತ ಶಿಶುಗಳ ಡಯೆಟ್ ಬಗ್ಗೆ, ಒಬೆಸಿಟಿ ಬಗ್ಗೆ ಸಕ್ರಿಯ ಸಂಶೋಧನೆಯನ್ನು ಆರಂಭಿಸಿದರು.
”ತಮ್ಮ ಸಂಶೋಧನೆಯಲ್ಲಿ ಡಾ.ಅನ್ನಪೂರ್ಣ ಶುಕ್ಲಾ ಮತ್ತು ಅವರ ಸಹೋದ್ಯೋಗಿಗಳು ಇಂದಿನ ಅತ್ಯಂತ ಪ್ರಚಲಿತ ಮತ್ತು ಬಹುಪಾಲು ನಿರ್ಲಕ್ಷಿತವಾಗಿರುವ ಮಕ್ಕಳ ಸಮಸ್ಯೆಗಳನ್ನು ಒತ್ತಿಹೇಳಿದ್ದಾರೆ. ಪ್ರಾರಂಭದಲ್ಲಿ ಮಿತಿ ಮೀರಿ ತಿನ್ನಿಸುವುದು ಮತ್ತು ಅದರ ಪರಿಣಾಮವಾಗಿ ಬಂದ ಅತಿಯಾದ ತೂಕದ ಬಗ್ಗೆ ಅನೇಕರು ಚಿಂತಿಸುತ್ತಾರೆ ಆದರೆ ಕೆಲವರು ಮಾತ್ರ ಆ ನಿಟ್ಟಿನಲ್ಲಿ ಜಾಗೃತೆ ವಹಿಸುತ್ತಾರೆ . ಇಲ್ಲಿ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಲ್ಲಿ ಶೇ.70 ಕ್ಕಿಂತ ಹೆಚ್ಚಿನ ಶಿಶುಗಳು ತೂಕ ಅಥವಾ ಬೊಜ್ಜು ಹೊಂದಿದ್ದಾರೆ ಎಂದು ಕಂಡುಕೊಳ್ಳಲು ನನಗೆ ಆಶ್ಚರ್ಯವಾಯಿತು. ಇದು ಶಿಶು ಆಹಾರದ ಬಳಕೆ ಮತ್ತು ಜೈವಿಕವಾದ ತಾಯಿಯ ಹಾಲಿನ ತ್ಯಜಿಸುವಿಕೆಯಿಂದ ಬಂದದ್ದಾಗಿದೆ ಎಂಬುದು ತಿಳಿದು ಬಂತು” ಎಂಬುದಾಗಿ ಶಿಶು ಪೌಷ್ಠಿಕತೆಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ಮತ್ತೊಬ್ಬ ಸಂಶೋಧಕ ಆರ್.ಡಿ.ಜಿ ಕ್ರೀರೀಯವರು ಶುಕ್ಲ ಅವರು ಸಂಶೋಧನಾ ಕೆಲಸವನ್ನು ಉಲ್ಲೇಖಿಸಿ ಬರೆದಿದ್ದಾರೆ.
ಶುಕ್ಲಾ ಅವರು ಗಮನಿಸಿದ ಬಹುಪಾಲು ಮಕ್ಕಳ ಪೈಕಿ, ಘನ ಆಹಾರಗಳನ್ನು ಬೇಗನೇ ತಿಂದ ಮಕ್ಕಳು ಹೆಚ್ಚು ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ. ಆಕೆ ಪ್ರಕಟಿಸಿದ ಸಂಶೋಧನಾ ವರದಿಯಿಂದಾಗಿ ಭಾರತ ಮಾತ್ರವಲ್ಲ, ವಿಶ್ವದಾದ್ಯಂತದ ದೇಶಗಳ ಶಿಶು ಆಹಾರಗಳ ಮೇಲೆ ಎಚ್ಚರಿಕೆಯ ಸಂದೇಶವನ್ನು ಬರೆಯುವಂತಾಯಿತು.
ಮಾತ್ರವಲ್ಲ, ಆಕೆಯ ಸಂಶೋಧನೆಯ ಫಲವಾಗಿ, ಅಮೆರಿಕಾದ National Bureau of Weights and Measures ಮಕ್ಕಳ ತೂಕ ಮತ್ತು ಎತ್ತರದ ಅನುಪಾತವನ್ನು ಕೂಡ ಬದಲಾಯಿಸಿತು.
”ತಾಯಿ ಹಾಲು ಕುಡಿಯದೆ, ಕೇವಲ ಘನ ಆಹಾರಗಳನ್ನು ತಿಂದ ಒಂದು ವರ್ಷದವರೆಗಿನ ಮಕ್ಕಳು ಬೊಜ್ಜು ಹೊಂದಿರುವುದು ನಮಗೆ ತಿಳಿಯಿತು. ಸಂಶೋಧನೆ ಪ್ರಕಟವಾದಾಗ, ಸರ್ಕಾರ ಶಿಶು ಆಹಾರಗಳ ಮೇಲೆ ”ಇದು ತಾಯಿಯ ಹಾಲಿಗೆ ಪರ್ಯಾಯವಲ್ಲ” ಎಂಬ ಸಂದೇಶ ಬರೆಯುವಂತೆ ಆದೇಶ ನೀಡಿತು. ಇದರಿಂದ ಕಂಪನಿಗಳಿಗೆ ಬೇಸರವಾಯಿತು. ಆದರೆ ಈ ಸಂದೇಶದ ಪರಿಣಾಮವಾಗಿ ನಾವಿಂದು ಮಕ್ಕಳನ್ನು ಉಳಿಸುತ್ತಿದ್ದೇವೆ’ ಎಂದು ಡಾ.ಶುಕ್ಲಾ ಹೇಳುತ್ತಾರೆ.
ಶುಕ್ಲಾ ಅವರ ಸಂಶೋಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಪುಷ್ಠೀಕರಿಸಿದ್ದು, ಆರು ತಿಂಗಳವರೆಗೆ ಮಗುವಿಗೆ ತಾಯಿಯ ಹಾಲು ಬಿಟ್ಟು ಬೇರೇನೂ ನೀಡಬಾರದು ಎಂದಿದೆ.
ತಾಯಿಯ ಆಹಾರ ಪದ್ಧತಿ, ಆರೋಗ್ಯ ಕೂಡ ಮಗುವಿನ ಆರೋಗ್ಯದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಶುಕ್ಲಾ ಸಂಶೋಧನೆ ಹೇಳುತ್ತದೆ.
ಮಕ್ಕಳ ಆರೋಗ್ಯ ದೇಶದ ಭವಿಷ್ಯದ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ಈ ನಿಟ್ಟಿನಲ್ಲಿ ಮಹತ್ವದ ಪ್ರಯತ್ನವನ್ನು ನಡೆಸಿ ಸರ್ಕಾರದ ಕಣ್ಣು ತೆರೆಸಿದ ಶುಕ್ಲಾ ಅವರಿಗೆ ನಾವು ಧನ್ಯವಾದಗಳನ್ನು ಹೇಳಬೇಕಿದೆ.
ಇಂತಹ ಶುಕ್ಲಾ ಅವರು ಮೊನ್ನೆ, ಮೋದಿ ನಾಮಪತ್ರ ಸಲ್ಲಿಕೆಗೆ ಪ್ರಸ್ತಾಪಕರಾಗಿದ್ದರು. ಮೋದಿಯ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ನೀಡಿದ್ದರು. ”ನಾನು ತಾಯಿಯಂತೆ ಮೋದಿಗೆ ಆಶೀರ್ವಾದ ನೀಡಿದೆ, ಅವರು ಭಾವುಕರಾಗಿ ನನ್ನ ಕಾಲಿಗೆ ನಮಸ್ಕರಿಸಿದರು. ಕಳೆದ ಐದು ವರ್ಷಗಳಲ್ಲಿ ಅವರು ಅತ್ಯುತ್ತಮ ಕಾರ್ಯವನ್ನು ಮಾಡಿದ್ದಾರೆ. ಇಲ್ಲಿನ ಟ್ರಾಫಿಕ್ ಸಮಸ್ಯೆ ಸುಧಾರಣೆಗೊಂಡಿದೆ, ಈ ನಗರದ ಅಭಿವೃದ್ಧಿಗಾಗಿ ಅವರು ಮುಂದುವರೆಯಬೇಕು” ಎಂದು ಅನಿಸಿಕೆಯನ್ನು ಶುಕ್ಲಾ ವ್ಯಕ್ತಪಡಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.