ಮುಖ್ಯ ನ್ಯಾಯಾಧೀಶ ಈಗ ಮಿಟೂ ಆರೋಪಿ!
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ನ್ಯಾ. ರಂಜನ್ ಗೊಗೊಯ್ ಮೇಲೆ ಲೈಂಗಿಕ ಕಿರುಕುಳ ಮತ್ತು ಇತರೆ ಆರೋಪಗಳನ್ನು ಹೊರಿಸಿದ ಮಹಿಳೆ ಸುಳ್ಳು ಕತೆ ಕಟ್ಟಿದ್ದರೆ ‘ದ ವೈರ್’ ನಂತಹ ಪತ್ರಿಕೆಯಲ್ಲಿ ಬಂದ ವರದಿಯೇ 5700 ಪದಗಳನ್ನು ದಾಟುತ್ತಿತ್ತೆ? ಅದರಲ್ಲಿ ಹತ್ತಾರು ಅಧಿಕಾರಿಗಳ ಹೆಸರುಗಳಿವೆ. ಅವರೆಲ್ಲರ ಹೆಸರುಗಳನ್ನು, ದಿನಾಂಕ, ಸಮಯಗಳನ್ನು, ದೃಢೀಕೃತ ಪತ್ರಗಳನ್ನು, ಛಾಯಾಚಿತ್ರಗಳನ್ನು ಆ ಮಹಿಳೆ ದಾಖಲಿಸಿದ್ದರೆ ಎಲ್ಲವೂ ನಾಟಕವೆ? (https://thewire.in/…/former-supreme-court-employee-alleges-…)
ಚಿತ್ರದಾಖಲೆಗಳಿರುವ ಸ್ಕ್ರಾಲ್ ವರದಿ ಇಲ್ಲಿದೆ: https://scroll.in/…/chief-justice-of-india-sexually-harasse…
ಅದಿರಲಿ, ಈ ಮಹಿಳೆ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಲೈಂಗಿಕ ಕಿರುಕುಳ ಆರೋಪಿತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಮೂರು ನ್ಯಾಯಾಧೀಶರ ಸಮಿತಿ ರಚನೆ ಆಗಿರುವುದು ಇನ್ನೂ ವಿಚಿತ್ರ. ಆರೋಪಿತನೇ ನ್ಯಾಯ ಒದಗಿಸಲಾರ (Accused cannot adjudicate) ಎಂಬ ಅಲಿಖಿತ ಆದರೆ ಸಾಮಾನ್ಯ ಜ್ಞಾನದ ನಿಯಮವನ್ನೇ ಸುಪ್ರೀಂ ಕೋರ್ಟು ಗಾಳಿಗೆ ತೂರಿದೆ!
ಮಹಿಳೆಯ ದೂರುಗಳೆಲ್ಲವೂ ‘ಕಪೋಲಕಲ್ಪಿತ, ಸುಳ್ಳು’ ಎಂದು ಸುಪ್ರೀಂ ಕೋರ್ಟಿನ ಬಾರ್ ಕೌನ್ಸಿಲ್ ಈ ಯಾವ ವಿಚಾರಣೆಯನ್ನೂ ಮಾಡದೆಯೇ ಘೋಷಿಸಿರುವುದು ಇನ್ನೂ ಒಂದು ಕ್ರೌರ್ಯ. ಇವರೆಲ್ಲರೂ ಸೇರಿ ಫೋರಂ ಹಂಟಿಂಗ್ ಮಾಡುತ್ತಿರುವುದು ಸುಸ್ಪಷ್ಟ. (https://thewire.in/…/bar-council-condemns-sexual-harassment…)
ಈ ಎಲ್ಲ ಮಾಧ್ಯಮಗಳೂ ತುಂಬಾ ಎಡಪಂಥೀಯವೇ ಆದರೂ ಈ ವರದಿಯನ್ನು ಹೀಗೆ ಸವಿವರವಾಗಿ ಪ್ರಕಟಿಸಿವೆ ಎಂಬುದು ನನ್ನನ್ನು ಅಚ್ಚರಿಗೆ ತಳ್ಳಿದೆ. ಒಂದೋ, ನ್ಯಾಯಮೂರ್ತಿಗಳ ಬಗ್ಗೆ ಇನ್ನೇನೋ ಅಜೆಂಡಾ ಇದ್ದಿರಬಹುದು, ಅಥವಾ ಇಂಥ ಕಟ್ಟುಕತೆಯನ್ನು ಮಹಿಳೆಯಿಂದ ಇನ್ನಾರೋ ಮಾಡಿಸಿದರು ಎಂದು ಮುಂದೊಂದು ದಿನ ಹೇಳಲೂ ಇರಬಹುದು!! ಅಥವಾ ಇದು ಒಂದು ನೈಜ ಕಾಳಜಿಯ ವರದಿ ಆಗಿರಲೂಬಹುದು!!!
ರಂಜನ್ ಗೊಗೊಯ್ ಎಡಪಂಥೀಯ ನಿಲುವಿನವರು, ಈ ಹಿಂದೆ ಇತರೆ ಮೂವರು ನ್ಯಾಯಮೂರ್ತಿಗಳ ಜೊತೆ ಸೇರಿ ಮೋದಿ ಸರ್ಕಾರದ ವಿರುದ್ಧ ಪತ್ರಿಕಾ ಗೋಷ್ಠಿ ನಡೆಸಿದವರು ಎಂಬುದೇ ಅವರನ್ನು ಹೀಗೆ ಕೆಳಗೆ ತಳ್ಳಲು ರೂಪಿಸಿರುವ ಸಂಚು ಎಂಬ ತರ್ಕಗಳನ್ನು ಈಗಾಗಲೇ ನಮ್ಮ ಸ್ವಯಂಘೋಷಿತ ಬುದ್ಧಿಜೀವಿಗಳು ಹರಿಯಬಿಟ್ಟಿದ್ದಾರೆ.
ನ್ಯಾಯಮೂರ್ತಿಯೊಬ್ಬರ ಮೇಲೆ (ಅದೂ ಭಾರತ ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ) ಅವರದೇ ಕಚೇರಿಯ ಮಹಿಳೆ ಆರೋಪ ಮಾಡಿದರೆ ಅದು ವಿಚಾರಣೆಗೆ ಅರ್ಹವಲ್ಲ ಎಂಬ ಕಲ್ಪನೆಯೇ ದೋಷಪೂರಿತ. ಮಹಿಳೆಯೊಬ್ಬಳು ದೂರು ನೀಡಿದರೆ ಅದನ್ನು ಸಾಬೀತುಪಡಿಸಬೇಕಾದದ್ದು ಆರೋಪಿಯ ಹೊಣೆ ಎಂಬುದೇ ಈವರೆಗೆ ನ್ಯಾಯಾಲಯಗಳು ಹೇಳಿಕೊಂಡು ಬಂದಿವೆ. ಆದರೆ ಈಗ ಇಡೀ ನ್ಯಾಯಾಂಗದ ಬಹುದೊಡ್ಡ ಭಾಗವೇ ಈ ಮಹಿಳೆಯ ವಿರುದ್ಧ ವಿಚಾರಣೆಗೆ ಮುನ್ನವೇ ಹುಯಿಲೆಬ್ಬಿಸಿವೆ.
ನನಗಂತೂ, ಸಂತ್ರಸ್ತ ಮಹಿಳೆಯ ಸಂಬಂಧಿಗೆ ಆರೋಪಿತನು ಕೆಲಸ ಕೊಟ್ಟು ಆಮೇಲೆ ಕೆಲಸದಿಂದ ವಜಾ ಮಾಡಿದ ಒಂದೇ ಒಂದು ನಿದರ್ಶನವೇ ಸಾಕು, ಹೊರನೋಟಕ್ಕೇ ಏನೋ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ. ಇಡೀ ಕುಟುಂಬವೇ ಯಾತನೆ ಅನುಭವಿಸಿದೆ; ಪ್ರಕರಣದಲ್ಲಿ ಹಲವು ಅಧಿಕಾರಗಳು ಭಾಗಿಯಾಗಿದ್ದಾರೆ. ಪೊಲೀಸರೂ ಸೇರಿಕೊಂಡಿದ್ದಾರೆ. ನಿಜಕ್ಕೂ ಭಯ ಹುಟ್ಟಿಸುವ ಬೆಳವಣಿಗೆ.
ನಾವು ಇಂತಹ ಘಟನೆಗಳನ್ನು ಮೊದಲು ವೈಯಕ್ತಿಕ ನೆಲೆಯಲ್ಲೇ ನೋಡಬೇಕು. ಸಾರ್ವಜನಿಕ ಕಾರಣಗಳನ್ನು (ನಾನು ಅಭ್ಯರ್ಥಿ, ನಾನು ನ್ಯಾಯಾಧೀಶ ಇತ್ಯಾದಿ) ಕೊಟ್ಟು ರಕ್ಷಣೆ ಪಡೆಯುವ ಅಥವಾ ಸಾರ್ವಜನಿಕ ಅನುಕಂಪ ಪಡೆಯುವ ಯತ್ನಕ್ಕೆ ನಾವೇ ಅವಕಾಶ ಕೊಡಬಾರದು. ಅಂತಹ ಹುದ್ದೆಯಲ್ಲಿ ಇದ್ದ ಮೇಲೆ ಆರೋಪಗಳನ್ನು ಸಾಕ್ಷಿ ಸಮೇತ ಬದಿಗೆ ಸರಿಸುವುದು ಅವರಿಗೆ ಕಷ್ಟವಾಗುವುದು ಯಾಕೆ? ಗೊಗೊಯ್ ಬ್ಯಾಂಕ್ ಖಾತೆಯಲ್ಲಿ ೬.೮ ಲಕ್ಷ ಇರುವುದಕ್ಕೂ ಪ್ರಕರಣಕ್ಕೂ ಸಂಬಂಧ ಇದೆಯೆ? ಇವರು ವಿಚಾರಣೆ ನಡೆಸದೇ ಇದ್ದಾರೆ ಬೇರೆಯವರು ವಿಚಾರಣೆ ನಡೆಸುವುದಿಲ್ಲವೆ?
ನಾನೇನೂ ಮೀಡಿಯಾ ಟ್ರಯಲ್ ಮಾಡಲಾರೆ. ಆದರೆ ಬಾರ್ ಕೌನ್ಸಿಲ್ನ ಪ್ರಜಾತಂತ್ರ ವಿರೋಧಿ, ನ್ಯಾಯನಿರ್ಣಯ ವಿರೋಧಿ ಹೇಳಿಕೆಯನ್ನು ಖಂಡಿತವಾಗಿಯೂ ಖಂಡತುಂಡ ಖಂಡಿಸುವೆ.
ವ್ಯವಸ್ಥೆಯ ಬಗ್ಗೆ ನ್ಯಾಯಾಲಯದಲ್ಲಿ ಹೇಳಬೇಕಾಗಿದ್ದನ್ನು ಪತ್ರಿಕಾಗೋಷ್ಠಿಯಲ್ಲೂ, ತನ್ನ ಮೇಲಿನ ಆರೋಪದ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಹೇಳಬೇಕಾಗಿದ್ದನ್ನು ನ್ಯಾಯಾಲಯದಲ್ಲೂ ಹೇಳಿದ ನ್ಯಾ. ರಂಜನ್ ಗೊಗೊಯ್ ನಡೆ ಖಂಡನೀಯ.
ನ್ಯಾಯಾಂಗಕ್ಕೇ ಕಳಂಕ.
ಪ್ರಜಾತಂತ್ರಕ್ಕೂ ಕಳಂಕ.
✍ ಬೇಳೂರು ಸುದರ್ಶನ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.