ಮಕ್ಕಳು ಕಡಿಮೆ ಅಂಕ ಪಡೆದರೆ ಅದು ಅವರ ವಿಫಲತೆಯಲ್ಲ ಪಾಲಕರೇ!! ಸೆಕೆಂಡ್ ಪಿಯು ಕಡಿಮೆ ಅಂಕಿ ಪಡೆದರೆ ಆಕಾಶ ಕಳಚಿ ಬೀಳಲ್ಲ ಮಕ್ಕಳೇ… !
ಇವತ್ತಿನ ಶಿಕ್ಷಣ ವ್ಯವಸ್ಥೆಯಲ್ಲಿ ಉರು ಹೊಡೆದು ಅಂಕ ಪಡೆಯುವುದೇ ಮುಖ್ಯವಾಗಿದೆ. ಅದರಿಂದಲೇ ಮುಂದೆ ಒಳ್ಳೆಯ ಕೆಲಸ ಸಿಗಲೂಬಹುದು. ಆದ್ರೆ ಕಡಿಮೆ ಅಂಕ ಪಡೆದರೆ ತಪ್ಪು ಅನ್ನೋದು ಖಂಡಿತ ತಪ್ಪು!!
ಮಕ್ಕಳು ಇನ್ನಾವುದೋ ಹ್ಯುಮಾನಿಟೀಸ್ ಕೋರ್ಸ್ ಓದಿದರೆ, ಅಥವಾ ಕಲೆ, ಸಂಗೀತ, ನಾಟಕ, ಸಿನೆಮಾ, ಧ್ವನಿಗ್ರಹಣ, ಛಾಯಾಗ್ರಹಣ ಇತ್ಯಾದಿ ಕೋರ್ಸ್ಗಳನ್ನು ಮಾಡಿದರೆ ಅದು ಸಮಾಜಕ್ಕೂ ಕೊಡುಗೆ. ಮಕ್ಕಳ ಸೃಜನಶೀಲತೆಗೂ ಅವಕಾಶ ಸಿಕ್ಕಿದ ಹಾಗೆಯೇ ಆಗುತ್ತದೆ. ಕಾಮರ್ಸ್ ಓದಿ ಲೆಕ್ಕಪರಿಶೋಧಕರಾಗಬಹುದು; ಕಲೆ ಓದಿ ಇತಿಹಾಸ ಸಂಶೋಧನೆ ಮಾಡಬಹುದು; ಬಿಎಸ್ಸಿ ಓದಿ ಕೃಷಿರಂಗದಲ್ಲಿ ಒಳ್ಳೆಯ ಹೆಸರು ಮಾಡಬಹುದು.
ಕಡಿಮೆ ಅಂಕ ಬಂದಿದ್ರೆ ಮಕ್ಕಳು ಬೇಜಾರಾಗೋದೂ ಬೇಡ. ತಂದೆ ತಾಯಂದಿರು ಮುಖ ಒಣಗಿಸಿಕೊಳ್ಳೋದೂ ಬೇಡ. ನಮ್ಮ ಸಮಾಜದಲ್ಲಿ ಸಾಧನೆ ಮಾಡಿರುವ ಹಲವಾರು ಮಂದಿ ಪ್ರಥಮ ಶ್ರೇಣಿಯಲ್ಲಿ ಪಾಸ್ಸಾದವರಲ್ಲ. ಫೇಲಾದರೂ ಮತ್ತೆ ಪರೀಕ್ಷೆ ಬರೆದು ಶಿಕ್ಷಣವನ್ನು ಮುಂದುವರೆಸಿದ ಅನೇಕ ಮಂದಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಫೇಲಾಗಿರುವವವರು ಉದ್ಯಮ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ ಉದಾಹರಣೆಗಳೂ ಇದೆ. ಒಂದೇ ಪ್ರಯತ್ನದಲ್ಲಿ ಎಲ್ಲರಿಗೆ ಎಲ್ಲವೂ ದಕ್ಕುವುದಿಲ್ಲ, ಮರಳಿ ಮರಳಿ ಪ್ರಯತ್ನಿಸಿ ಗೆಲುವನ್ನು ನಮ್ಮದಾಗಿಸಿಕೊಳ್ಳಬೇಕು.
ಮಕ್ಕಳು ನಿಜಕ್ಕೂ ತಾವು ಯಾವುದರಲ್ಲಿ ಆಸಕ್ತಿ ಹೊಂದಿದ್ದೇವೆ ಎಂದು ತಿಳಿದುಕೊಳ್ಳೋ ಹಂತದಲ್ಲೇ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ವಕ್ಕರಿಸಿರೋದು ಈ ದೇಶದ ದೊಡ್ಡ ದುರಂತ. ನನ್ನ ಪ್ರಕಾರ ಎಸೆಸೆಲ್ಸಿ ಓದಿದ ಮೇಲೆ ಮಕ್ಕಳು ಹಳ್ಳಿಗೆ ಹೋಗಿ ಎರಡು ವರ್ಷ ಕೌಶಲ್ಯ, ಬದುಕು, ಪರಿಸರ, ಪ್ರಾಣಿ, ಪಕ್ಷಿಗಳ ಬಗ್ಗೆ ಸ್ವಂತ ಆಸಕ್ತಿ ಬೆಳೆಸಿಕೊಳ್ಳಬೇಕು. ಹೊರತು ಕುಡುಮಿಗಳಾಗಿ ರೂಮಿನಲ್ಲಿ ಕೂತು ಉರು ಹೊಡೆಯುವುದಲ್ಲ.
ಇದು ನಾವು ನೀವು ಚರ್ಚಿಸಿ ಬದಲಾಗೋ ಸಂಗತಿ ಅಲ್ಲ. ನೀತಿ ನಿರೂಪಕರಿಗೆ ಇನ್ನೂ ಈ ಬಗ್ಗೆ ಜ್ಞಾನೋದಯ ಆಗಿಲ್ಲ. ದಯವಿಟ್ಟು ಯಾರೂ ಟೆನ್ಶನ್ ತಗೊಳ್ಳೋದೇ ಬೇಡ. ಖುಷಿಯಾಗಿರಿ. ಬೇಸಗೆ ರಜೆಯನ್ನು ಅನುಭವಿಸಿ. ಸೆಕೆಂಡ್ ಪಿಯುಸಿ ಒಂದು ಅತಿಚಿಕ್ಕ ಹೆಜ್ಜೆ. ಬದುಕಿನಲ್ಲಿ ಎದುರಿಸಬೇಕಾದ ಪರೀಕ್ಷೆಗಳು ಇದಕ್ಕಿಂತ ದೊಡ್ಡವು.
ಪಾಸಾದ ಮತ್ತು ಫೇಲಾದ ಎಲ್ಲರಿಗೂ ಅಭಿನಂದನೆಗಳು!!ಮುಖ್ಯವಾಗಿ ಫೇಲಾದವರಿಗೆ ಇನ್ನೊಂದು ಚಪ್ಪಾಳೆ. ನಿಮ್ಮ ಬದುಕಿನ ಅವಕಾಶಗಳು ಈಗ ಸಿಕ್ಕಾಪಟ್ಟೆ ಜಾಸ್ತಿ ಆಗಿವೆ!!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.