ಇನ್ನೇನು ಲೋಕಸಭಾ ಚುನಾವಣಾ ಸಮೀಪದಲ್ಲಿದೆ. ಇಷ್ಟರವರೆಗೂ ಯಾವುದೇ ಗಮನಾರ್ಹ ಹಗರಣಗಳಿಗೆ ಸಿಲುಕದೆ ಭಾರತೀಯರ ನಂಬಿಕೆಯನ್ನು ಉಳಿಸಿಕೊಂಡು ಬಂದಿರುವ ಕೇಂದ್ರ ಸರ್ಕಾರ ವಿರೋಧ ಪಕ್ಷಗಳಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಇತ್ತೀಚಿಗೆ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಬಹಳ ದೊಡ್ಡ ಮಟ್ಟದಲ್ಲಿ ಆರೋಪ ಮಾಡುವ ಮೂಲಕ ಒಂದಾದರೂ ಹಗರಣದ ಮಸಿಯನ್ನು ಮೋದಿಯವರ ಮುಖಕ್ಕೆ ಮೆತ್ತಬೇಕು ಎನ್ನುವ ಕಾಂಗ್ರೆಸ್ ಪಕ್ಷದ ಆಸೆಗೆ ಸ್ವತಃ ಸರ್ವೋಚ್ಚ ನ್ಯಾಯಾಲಯವೇ ತಣ್ಣೀರೆರಚಿದೆ. ಇದೀಗ ರಾಹುಲ್ ಗಾಂಧಿ ಅಥವಾ ಇತರ ಕಾಂಗ್ರೆಸ್ ನಾಯಕರ ಬಾಯಿಯಿಂದ ರಫೆಲ್ ಹೆಸರು ಕೇಳಿಬಂದರೆ ದೇಶದ ಜನ ಹೊಟ್ಟೆ ಹಿಡಿದು ನಗುವಂತಹ ಸಂದರ್ಭ ಸೃಷ್ಟಿಯಾಗಿದೆ.
ಆದರೆ ತನ್ನ ಪ್ರಯತ್ನವನ್ನು ಎಂದಿಗೂ ನಿಲ್ಲಿಸದ ಕಾಂಗ್ರೆಸ್ ಪಕ್ಷ ಮೊನ್ನೆ ಇನ್ನೊಂದು ದೊಡ್ಡ ಬಾಂಬ್ ತಯಾರು ಮಾಡಿಕೊಂಡು ಬಂದು ಅಖಾಡಕ್ಕಿಳಿಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳಿಗೆ ಕನ್ನ ಹಾಕಲಾಗಿದೆ ಎಂದು ಲಂಡನ್ನಲ್ಲಿ ಕಳೆದ ಸೋಮವಾರ ಸಯ್ಯದ್ ಶುಜಾ ಎನ್ನುವ ವ್ಯಕ್ತಿಯಿಂದ ಹೇಳಿಕೆ ಕೊಡಿಸಿದ ಕಾಣದ ಕೈಗಳು ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಷನ್ ಎನ್ನುವ ವೇದಿಕೆಯ ಮೂಲಕ ಅದೊಂದು ಸಂಪೂರ್ಣ ಸತ್ಯ ಘಟನೆ ಎಂದು ಸಾಬೀತುಪಡಿಸಿ ಕೇಂದ್ರ ಸರ್ಕಾರಕ್ಕೆ ದೊಡ್ಡ ಹಿನ್ನಡೆ ತರಬೇಕೆನ್ನುವ ಕನಸು ಕಂಡಿದ್ದವು. ಮತ್ತು ಆ ಮೂಲಕ ಭಾರತದಲ್ಲಿ ಇವಿಎಂ ಬಳಕೆಯನ್ನು ನಿಲ್ಲಿಸಿ ಹಿಂದಿನಂತೆಯೇ ಬ್ಯಾಲೆಟ್ ಬಾಕ್ಸ್ ಮೂಲಕ ಚುನಾವಣೆ ಎದುರಿಸಿ ಮುಂದಿನ ಚುನಾವಣೆಯಲ್ಲಿ ದೊಡ್ಡ ಅವ್ಯವಹಾರಗಳೊಂದಿಗೆ ಗೆಲ್ಲುವ ಕನಸನ್ನು ಕಂಡಿದ್ದವು.
ಅಮೆರಿಕದ ‘ಸೈಬರ್ ಪರಿಣತ’ ಎಂದು ಹೇಳಿಕೊಂಡಿದ್ದ ಸಯ್ಯದ್ ಶುಜಾ ಎನ್ನುವ ವ್ಯಕ್ತಿಯ ಹೇಳಿಕೆ ಹೊರ ಬೀಳುತ್ತಿದ್ದಂತೆಯೇ ಪೂರ್ವ ತಯಾರಿಯಂತೆಯೇ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಮೋದಿ ವಿರೋಧಿ ಮಾಧ್ಯಮಗಳು ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದೆ ಎಂದು ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿದವು. ಒಂದರ ಹಿಂದೊಂದರಂತೆ ಪುಂಖಾನುಪುಂಖವಾಗಿ ನಾಯಕರುಗಳ ಹೇಳಿಕೆಗಳು ಹೊರಬಿದ್ದವು. ಎಲ್ಲಕ್ಕಿಂತಲೂ ವಿಚಿತ್ರವೆಂದರೆ ಇವಿಎಂ ಹ್ಯಾಕ್ ವಿಚಾರವಾಗಿಯೇ ಗೋಪಿನಾಥ ಮುಂಢೆ ಅವರ ಸಾವು ಸಂಭವಿಸಿದೆ ಎನ್ನುವ ಆರೋಪಗಳನ್ನು ಮಾಡುವ ಮೂಲಕ ಈ ವಿಚಾರವನ್ನು ಇನ್ನೂ ಹಲವಾರು ಆಯಾಮಗಳಿಗೆ ತೆಗೆದುಕೊಂಡು ಹೋಗಿ ಮುಂದಿನ ಚುನಾವಣೆಯವರೆಗೂ ದೊಡ್ಡ ಮಟ್ಟದಲ್ಲಿ ಸುಳ್ಳು ಬಿಂಬಿಸುವ ಪ್ರಯತ್ನ ಕೂಡಾ ಮಾಡಲಾಗಿತ್ತು! ಇಷ್ಟು ವರ್ಷ ಗೌರಿ ಲಂಕೇಶ್ ಅವರ ಹತ್ಯೆಗೆ ಅಸಹಿಷ್ಣುತೆಯೇ ಕಾರಣ ಎಂದು ಬಿಂಬಿಸುತ್ತಾ ಬಂದಿದ್ದ ಕನ್ನಡದ ಒಂದು ಪತ್ರಿಕೆಯಂತೂ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಮತ್ತು ಇವಿಎಂ ಹ್ಯಾಕ್ ವಿಚಾರಕ್ಕೂ ನಡುವೆ ಸಂಬಂಧವಿದೆ ಎನ್ನುವಂತಹಾ ಸುದ್ದಿ ಮಾಡಿತು!!
ತಾನು ಎದುರಾಳಿಯ ಕಡೆಗೆ ಎಸೆದ ಬಾಂಬ್ ಒಂದು ಇನ್ನೇನು ಸ್ಪೋಟಿಸಿ ಬಿಡಲಿದೆ ಎಂದು ಖುಷಿಯಿಂದ ಕಣ್ಣರಳಿಸಿ ನೋಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ನಿರಾಸೆಯಾಗಿದೆ. ಎರಡೇ ದಿನದಲ್ಲಿ ಆ ಹೊಸಾ ಬಾಂಬ್ ಕೂಡಾ ಠುಸ್ ಎಂದಿದೆ!
ಆರೋಪ ಮಾಡಿದ ಸಯ್ಯದ್ ಶುಜಾ ತನ್ನ ಆರೋಪಕ್ಕೆ ಪೂರಕವಾಗಿ ಯಾವ ಪುರಾವೆಯನ್ನೂ ನೀಡಿಲ್ಲ. ಮಾಧ್ಯಮದ ಪ್ರಶ್ನೆಗಳಿಗೂ ಉತ್ತರಿಸಿಲ್ಲ. ಪುರಾವೆಯೇ ಇಲ್ಲದೆ ದೊಡ್ಡ ಆರೋಪ ಮಾಡಿದ ಆತ ಇದೀಗ ಮುಖಭಂಗ ಅನುಭವಿಸುವಂತಾಗಿದೆ. ಮುಖಭಂಗ ಕೇವಲ ಆತನಿಗಷ್ಟೇ ಆಗಿಲ್ಲ. ‘ಇವಿಎಂಗೆ ಕನ್ನ’ ಕಾರ್ಯಕ್ರಮವನ್ನು ಆಯೋಜಿಸಿದ್ದ ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಷನ್ನ ಮುಖ್ಯಸ್ಥ ಅಶೀಷ್ ರೇ ಎಂಬ ವ್ಯಕ್ತಿ ಕಾಂಗ್ರೆಸ್ ಬೆಂಬಲಿಗ ಎನ್ನುವುದೂ ಮತ್ತು ಆತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹಿಂದಿನಿಂದಲೂ ಬೆಂಬಲಿಸುತ್ತಿದ್ದ ವಿಚಾರ ಕೂಡಾ ಬೆಳಕಿಗೆ ಬಂದಿದ್ದು, ಅದನ್ನು ಸ್ವತಃ ರವಿಶಂಕರ್ ಪ್ರಸಾದ್ ಅವರೇ ಎಳೆಎಳೆಯಾಗಿ ದೇಶದ ಜನತೆಯ ಮುಂದೆ ಬಿಡಿಸಿಟ್ಟಿದ್ದಾರೆ. ಆ ಮೂಲಕ ಅದೊಂದು ಕಾಂಗ್ರೆಸ್ ಪಕ್ಷ ಮತ್ತು ಬೆಂಬಲಿಗರೇ ಸೇರಿ ಮಾಡಿಸಿದ ನಾಟಕ ಎಂದು ದೇಶದ ಜನತೆಗೆ ಮನದಟ್ಟು ಮಾಡಿಸಿದ್ದಾರೆ.
ಅದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅವರೇ ಆ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡಿದ್ದರಿಂದ ಇದೊಂದು ಸಂಪೂರ್ಣ ಕಾಂಗ್ರೆಸ್ ಪಕ್ಷವೇ ಮುಂದೆ ನಿಂತು, ಹೊಸದಾಗಿ ಕಥೆ ಹೆಣೆದು, ಪಾತ್ರಧಾರಿಗಳನ್ನು ಆಯ್ಕೆ ಮಾಡಿ ನಿರ್ದೇಶಿಸಿ ಪ್ರದರ್ಶಿಸಿದ ನಾಟಕ ಎನ್ನುವುದು ದೇಶದ ಜನತೆಗೆ ಅರಿವಾಗಿ ಹೋಗಿದೆ.
ಹ್ಯಾಕರ್ ಎಂದು ಹೇಳಿಕೊಳ್ಳುತ್ತಿರುವ ಸಯ್ಯದ್ ಶುಜಾ ಎನ್ನುವ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಆರೋಪ ಮಾಡಿರುವ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದಿಂದ ಪ್ರಾಯೋಜಿತವಾದ ಷಡ್ಯಂತ್ರ ಎನ್ನುವುದು ಎರಡೇ ದಿನದಲ್ಲಿ ಬಹುತೇಕ ಭಾರತೀಯರ ಅರಿವಿಗೆ ಬಂದಿದೆ. ಚುನಾವಣಾ ಆಯೋಗ ಆತನ ಮೇಲೆ ದೂರು ದಾಖಲಿಸುತ್ತಿದ್ದಂತೆಯೇ ಆತ ಆಗ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದ ECIL ಎನ್ನುವ ಮತಯಂತ್ರ ವಿನ್ಯಾಸ ಕಂಪನಿ ‘ನಮ್ಮ ಕಂಪನಿಯ ಯಾವುದೇ ವಿಭಾಗದಲ್ಲೂ 2009 ರಿಂದ 2014 ರವರೆಗೆ ಸಯ್ಯದ್ ಶುಜಾ ಎನ್ನುವ ವ್ಯಕ್ತಿ ಕೆಲಸ ಮಾಡಿರಲಿಲ್ಲ’ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದು ತಿಳಿಸಿದೆ. ಹಾಗೆಯೇ ಅದನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದೆ.
ಇದೀಗ ಸಯ್ಯದ್ ಶುಜಾನ ಪೂರ್ವಾಪರ ಕೆದಕುವ, ಆ ಮೂಲಕ ಈ ಆರೋಪದ ಹಿಂದಿರುವ ಕೈಗಳ ಹುಡುಕಾಟ ನಡೆದಿದೆ. ಇನ್ನೇನು ಕೆಲವೇ ಸಮಯದಲ್ಲಿ ಶುಜಾನ ಕಾರ್ಯಕ್ರಮದ ಹಿಂದೆ ನಿಂತ ಪ್ರಾಯೋಜಕರು ಯಾರು ಎನ್ನುವ ಅಂಶವೂ ಬೆಳಕಿಗೆ ಬರಲಿದೆ. ಅಲ್ಲಿಯವರೆಗೂ ನಿತ್ಯ ರಾಜಕೀಯ ಸುದ್ದಿಗಳನ್ನು ಎಂಜಾಯ್ ಮಾಡುವವರಿಗೆ ಮಜವೋ ಮಜ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.