ಅಲ್ಲಿ ನಾಡಿನುತ್ತರದಲ್ಲಿ
ಪರ್ವತಗಳ ಎತ್ತರದಲಿ
ಮಗಮಗಿಸಿದ ಸೂರ್ಯರೇ
ವಜ್ರೋಪಮ ವೀರರೇ
ಇದೋ ವಂದನೆ ನಿಮಗೆ
ಭಾರತಾಂಬೆಯ ವಿಮೋಚನೆಗಾಗಿ ಅದೆಷ್ಟೋ ದೇಶಪ್ರೇಮಿಗಳ ಬಲಿದಾನವಾಯಿತು. ಅವರ ಬಾಳು ಅಮರವಾಯಿತು. ತಾಯಿ ಭಾರತಿಯ ಪದತಲಕ್ಕೆ ಅರ್ಪಿತ ಸುಮರಾಶಿಗಳಲ್ಲಿ ಈ ಹೊಸ ಪುಷ್ಪವೂ ಸೇರಿ ಹೋಯಿತು. ಇದೀಗ ಉಳಿದಿರುವುದು ಈ ಗತ ಸುಮದ ನೆನಪು ಮಾತ್ರ.ಈ ಸುಮ ಇನ್ಯಾರಲ್ಲ, ದ.ಕ ಜಿಲ್ಲೆಯ ಪುಣಚದ ಕುರೇಲು ಎಂಬಲ್ಲಿನ ನಿವಾಸಿ ಸೋಮಪ್ಪ.
1972ರ ಫೆಬ್ರವರಿ 1 ರಾಮದು ಪುಣಚ ಕುರೇಲುವಿನ ಕೆ.ಅಣ್ಣು ಪೂಜಾರಿ ದಂಪತಿಗಳ ಮೂರನೇ ಮಗನಾಗಿ ಜನಿಸಿದ ಸೋಮಪ್ಪನದು ದೊಡ್ಡ ಬಡಕುಟುಂಬ. ಬಾಲ್ಯದಲ್ಲೇ ತಂದೆ ತೀರಿದಾಗ ಕುಟುಂಬ ನಿಭಾವಣೆ ಹೊರೆ ಬಿದ್ದುದು ಬಡ ತಾಯಿಗೆ. ಬಡತನ , ಕಷ್ಟ ಕಾರ್ಪಣ್ಯಗಳ ನಡುವೆ ಮನೆಮಂದಿಯ ಕಣ್ಮಣಿಯಾಗಿ ಬೆಳೆದ ಸೋಮಪ್ಪ ಚುರುಕಿನ ವಿದ್ಯಾರ್ಥಿಯೂ ಹೌದು.
ಪ್ರಾಥಮಿಕ ಶಿಕ್ಷಣ ಪುಣಚಾ ಪರಿಯಾಲ್ತಡ್ಕ ಶಾಲೆಯಲ್ಲಿ ಪ್ರೌಢ ಶಿಕ್ಷಣ ಶ್ರೀದೇವಿ ಪ್ರೌಢಶಾಲೆಯಲ್ಲಿ, ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗ ನಿರ್ಮಾಣ ಹಂತದಲ್ಲಿ ಶ್ರೀದೇವಿ ಪ್ರೌಢಶಾಲಾ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರೌಢಶಾಲಾ ಮಂದಿಗೂ ಸಾಕಷ್ಟು ಮೊದಲೇ ಪರಿಚಿತನಾದ ಸೋಮಪ್ಪ ಉಭಯ ಶಾಲೆಗಳಲ್ಲೂ ಅಧ್ಯಾಪಕ ವೃಂದದ ನೆಚ್ಚಿನ ಕಣ್ಮಣಿ. ಶಾಲಾ ಕೆಲಸ ಕಾರ್ಯಗಳಲ್ಲಿ, ಆಟೋಟಗಳಲ್ಲಿ ಈತನಿಗಿದ್ದ ಅತಿ ಆಸಕ್ತಿಯೇ ಇದಕ್ಕೆ ಮೂಲಕಾರಣ. ಆಕರ್ಷಕ ದೃಢ ನಿಲುವಿನ ಮೈಕಟ್ಟು, ಉತ್ತಮ ಕಂಠ ಮಾಧುರ್ಯಗಳ ಸೊತ್ತಾಗಿದ್ದ ಸೋಮಪ್ಪ ಹಾಡುತ್ತಿದ್ದ “ಭಾರ್ಗವನ ಬಾಹುಬಲ ಭುಜ ಕೋಟಿಗಳ ತುಂಬಿ ಭೋರ್ಗರೆಯುತ್ತಿದೆ ಇಲ್ಲಿ ನೋಡ ಬನ್ನಿ” ಇಂದೂ ತಮ್ಮ ಕಿವಿಯಲ್ಲಿ ಆಗಾಗ್ಗೆ ಮೊಳಗುತ್ತಿರುತ್ತದೆ ಎಂದು ಹನಿಗಣ್ಣಿನಿಂದ ನುಡಿಯುತ್ತಾರೆ ಈತನ ಶಿಕ್ಷಕರು.
ಉತ್ತಮ ಕಬಡ್ಡಿ ಆಟಗಾರನಾಗಿದ್ದು ಗ್ರಾಮೀಣ ದಸರಾ ಕ್ರೀಡಾ ಕೂಟಗಳಲ್ಲಿ ತಪ್ಪದೇ ಪ್ರಶಸ್ತಿ ಬಾಚುತ್ತಿದ್ದ ಸೋಮಪ್ಪ ಕಾಲೇಜು ಶಿಕ್ಷಣ ಪಡೆದದ್ದು ಪುತ್ತೂರಿನ ವಿವೇಕಾನಂದ ವಿದ್ಯಾಲಯದಲ್ಲಿ. ಈ ಹಂತದಲ್ಲಿ ಸಾಮಾಜಿಕ ಕಾರ್ಯಕ್ಷೇತ್ರದತ್ತ ಅತೀವ ಸೆಳೆತ. ಅಂತೆಯೇ 1992 ರಲ್ಲಿ ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ಯಶಸ್ವಿ ಕರಸೇವೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕನೂ ಆಗಿದ್ದ ಸೋಮಪ್ಪನಿಗೆ ದೇಶಸೇವೆ ಮಾಡಬೇಕೆಂಬ ಅದಮ್ಯ ಆಸೆ.
ದೈವಸಂಕಲ್ಪವೋ ಏನೋ ಎಂಬಂತೆ ಮರುವರ್ಷವೇ ಬಿಎಸ್ಎಫ್ಗೆ ಸೇರ್ಪಡೆ. ತರಬೇತಿ ಮುಗಿಸಿದಾಕ್ಷಣ ಪುಣಚಾದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಘೋಷ್ ವರ್ಗದಲ್ಲಿ ಪಾಲ್ಗೊಂಡ ಸೋಮಪ್ಪನಿಗೆ ಮುಂದೆ ಕರ್ತವ್ಯ ನಿರ್ವಹಿಸಲು ಕರೆ ಬಂದ ಸ್ಥಳ ಭಾರತದ ಮುಕುಟಮಣಿ ಕಾಶ್ಮೀರ. ಕಣಿವೆಯಲ್ಲಿ ಉಗ್ರಗಾಮಿಗಳಿಗೆ ಎದೆಯೊಡ್ಡಿ ನಿಂತ ಈ ಸಾಹಸಿ ಪ್ರತಿ ಬಾರಿ ಊರಿಗೆ ಬಂದಾಗ ಕಲಿತ ಶಾಲೆ, ಆತ್ಮೀಯರನ್ನು ಕಾಣದೆ ಹಿಂತಿರುಗುವ ಕ್ರಮ ಇಲ್ಲ.
ಆಗಸ್ಟ್ ಆರಂಭದಲ್ಲಿ ಪುಣಚಾಗೆ ಬಂದಿದ್ದ ಸೋಮಪ್ಪನಿಗೆ ದಿಢೀರನೆ ಕರ್ತವ್ಯದ ಕರೆ ಬಂತು ಆಗಸ್ಟ್ 12 ರಂದು ಕಾಶ್ಮೀರದತ್ತ ಪಯಣ. ದೇಶ ರಕ್ಷಣೆಯ ಕೈಂಕರ್ಯಕ್ಕಿಳಿದಿರುವುದಾಗಿ ಆಗಸ್ಟ್ 18 ರಂದು ಊರಿಗೆ ಪತ್ರ ಬರೆದ.
1996ರ ಆಗಸ್ಟ್ 22ರಂದು ಈ ಪತ್ರ ಮನೆಗೆ ಮುಟ್ಟುವ ಒಂದು ಘಂಟೆ ಮುನ್ನ ಸೋಮಪ್ಪನ ಪಾರ್ಥಿವ ಶರೀರ ಮಿಲಿಟರಿ ಗೌರವದೊಂದಿಗೆ ಪುಣಚಕ್ಕೆ ತಲುಪಿತು. ದೀರ್ಘಕಾಲ ಬಾಳಿ ಬೆಳಗಬೇಕಿದ್ದ ದೇಹ ವಿಧಿಯಾಟಕ್ಕೆ ಸಿಲುಕಿ ಆರಿ ಹೋಯಿತು. ದೇಹ ಛಿದ್ರವಾದರೂ ಸೋಮಪ್ಪನ ಆತ್ಮ ಅಮರವಾಯಿತು ದೇಶಸೇವೆಯಿಂದ. ಭಾರತಾಂಬೆಯ ಪಾದಪದ್ಮದಲ್ಲಡಗಿದ ಸೋಮಪ್ಪನನ್ನು ಹಡೆದವ್ವ ನಿಜವಾಗಿಯೂ ಧನ್ಯೆ. ಸಮಾಜ ಬೇಕು ಬೇಕೆನ್ನುತ್ತಿರುವಾಗಲೇ ಕರ್ತವ್ಯದ ಕರೆಗೆ ಓಗೊಟ್ಟು ಪ್ರಾಣತ್ಯಾಗ ಮಾಡಿದ ಸೋಮಪ್ಪನ ಬದುಕು ಸಾವಿನಲ್ಲೂ ಧನ್ಯವಾಯಿತು.
ಸಂಘದ ನಿಷ್ಠಾವಂತ ಸೇವಕನಾಗಿ, ನಿಸ್ವಾರ್ಥ ಸೇವೆಯನ್ನು ರಕ್ತದಲ್ಲೇ ಮೈಗೂಡಿಸಿಗೊಂಡಿದ್ದ ವೀರ ಯೋಧನೊಬ್ಬ ಭಾರತಮಾತೆಗೆ ವೀರ ತ್ಯಾಗವನ್ನು ಮಾಡಿ ಅಮರನಾದ.
ಶ್ರೀಮತಿ ಗಂಗಮ್ಮ ಹರಿಕೃಷ್ಣ ಶಾಸ್ತ್ರಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.