ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಜಗದೀಶ್ ಚಂದ್ರ ಬೋಸ್ ಒಬ್ಬ ಅಸಮಾನ್ಯ ವ್ಯಕ್ತಿ. ಸರ್ ಜಗದೀಶ್ಚಂದ್ರ ಬೋಸ್, ಒಬ್ಬ ಬಹುಮುಖ ಪ್ರತಿಭೆಯ ಬಂಗಾಲಿ ಮೂಲದ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನೆಡೆಸಿದ್ದ ಬೋಸರು ಅವರ ಕಾಲದ ಶ್ರೇಷ್ಟ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ಬೋಸರು ಸಸ್ಯಗಳು ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆಂದು ಜಗತ್ತಿಗೆ ಸಾಬೀತು ಮಾಡಿ ತೊರಿಸಿದವರು. ಭಾರತ ಉಪಖಂಡದಲ್ಲಿ ಪ್ರಯೋಗ ವಿಜ್ಞಾನಕ್ಕೆ ಅಡಿಪಾಯ ಹಾಕಿದವರು ಇವರು. ರೇಡಿಯೋ ವಿಜ್ಞಾನದ ತಂದೆ ಎಂದೂ, ಬೆಂಗಾಲಿ ವಿಜ್ಞಾನ ಸಾಹಿತ್ಯದ ತಂದೆ ಎಂದೂ ಇವರನ್ನು ಪರಿಗಣಿಸಲಾಗುತ್ತದೆ. ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಅನೇಕ ಉಪಕರಣಗಳನ್ನು (ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್) ತಾವೇ ಸ್ವತಃ ಕಂಡುಹಿಡಿದಿದ್ದರು. ಅಮೇರಿಕದ ಪೇಟೆಂಟ್ ತೆಗೆದುಕೊಂಡವರಲ್ಲಿ ಭಾರತೀಯ ಉಪಖಂಡದ ಮೊದಲಿಗರು. ಇದು ಆದದ್ದು 1904 ರಲ್ಲಿ.
ಬೋಸ್ ಜನಿಸಿದ್ದು ನವೆಂಬರ್ 30, 1858 ರಲ್ಲಿ, ಭಾರತದ ಬಂಗಾಳ ಪ್ರಾಂತ್ಯದಲ್ಲಿರುವ ಮೈಮನಸಿಂಗ್ ಎಂಬ ಈಗಿನ ಬಾಂಗ್ಲಾದೇಶಕ್ಕೆ ಸೇರಿದ ಪ್ರಾಂತ್ಯದಲ್ಲಿ.
ಕಲಕತ್ತೆಯ ಸೇಂಟ್ ಝೇವಿಯರ್ ಶಾಲೆ ಹಾಗೂ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಓದಿ, ಲಂಡನ್ನಿಗೆ ವೈದ್ಯಕೀಯವನ್ನು ಕಲಿಯಲು ತೆರಳಿದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಅವರು ಹೆಚ್ಚು ಕಾಲ ಅಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಲಾಗಲಿಲ್ಲ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿ 1884 ರಲ್ಲಿ ಕಲ್ಕತ್ತೆ ಮರಳಿ ಬಂದು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ಅಲ್ಲಿ ಜನಾಂಗ ಭೇದವಿದ್ದಾಗ್ಯೂ ಮತ್ತು ಸಂಶೋಧನೆಗೆ ಅಗತ್ಯವಾದ ಸಲಕರಣೆಗಳು ಮತ್ತು ಹಣದ ಸಹಾಯ ಇಲ್ಲದೇ ಇದ್ದಾಗ್ಯೂ ಅವರು ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದರು. ರೇಡಿಯೋ ಮತ್ತು ವೈರ್ಲೆಸ್ ಸಂಕೇತಗಳ ಕುರಿತ ಸಂಶೋಧನೆಯಲ್ಲಿ ಅವರು ಗಮನಾರ್ಹ ಪ್ರಗತಿಯನ್ನು ಸಾಧಿಸಿದರು. ಅವರು ತಮ್ಮ ಸಂಶೋಧನೆಗಳಿಂದ ವಾಣಿಜ್ಯಿಕ ಲಾಭ ಮಾಡಿಕೊಳ್ಳುವುದರ ಬದಲು ತಾವು ಕಂಡುಹಿಡಿದುದನ್ನು ಉಳಿದವರು ಅಭಿವೃದ್ಧಿಪಡಿಸಲಿ ಎಂಬ ಮಹಾನ್ ಮನೋಧರ್ಮದಲ್ಲಿ ಬಹಿರಂಗಪಡಿಸಿದರು. ನಂತರದಲ್ಲಿ, ಅವರು ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೊಸದಾರಿ ತೋರುವ ಹಲವಾರು ಸಂಶೋಧನೆಗಳನ್ನು ಮಾಡಿದರು. ಸಸ್ಯಗಳು ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರುಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸಿದರು.
ಕೇವಲ ವಿಜ್ಞಾನವಲ್ಲದೇ ಆಧ್ಯಾತ್ಮಿಕತ್ರ್ಯಲ್ಲಿಯೂ ಅವರಿಗೆ ಆಸಕ್ತಿಯಿದ್ದು ರಾಮಕೃಷ್ಣ ಮಠದ ಸಂಪರ್ಕದಲಿದ್ದರು. ಅಕ್ಕ ನಿವೇದಿತಾ ಸ್ವತಃ ಅವರನ್ನು ಅನೇಕ ಬಾರಿ ಪ್ರೋತ್ಸಾಹಿಸಿ ಅವರ ಸಾಧನೆಗೆ ಸಹಾಯವಾಗುತ್ತಿದ್ದಳು. ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯ ಬೇಕು ಸಾಕಷ್ಟು ಸಾಧನೆ ಮಾಡಬೇಕು ಎಂಬುದು ಅವರ ಆಶಯವಾಗಿತ್ತು.
ಹಿತೈಷಿಗಳ ಒತ್ತಡಕ್ಕೆ ಮಣಿದು ತಮ್ಮ ಸಂಶೋಧನೆಗಳಲ್ಲಿ ಒಂದಕ್ಕೆ ಅವರು ಪೇಟೇಂಟ್ಗಾಗಿ ಅರ್ಜಿ ಸಲ್ಲಿಸಿದರಾದರೂ ಯಾವುದೇ ಬಗೆಯ ಪೇಟೆಂಟ್ ಪಡೆಯುವುದರಲ್ಲಿ ಅವರಿಗೆ ಯಾವುದೇ ಆಸಕ್ತಿ ಇರಲಿಲ್ಲ ಎಂಬುದನ್ನು ವಿಶ್ವವೇ ಬಲ್ಲಂತ ಸಂಗತಿಯಾಗಿದೆ. “ನಾನೇನೂ ಸೃಷ್ಟಿಕರ್ತನಲ್ಲ. ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು ವಸ್ತುವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿವೆ. ಹಾಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು” ಎಂಬುದು ಅವರ ಹೃದಯ ವೈಶಾಲ್ಯ ವಿಚಾರಧಾರೆಯಾಗಿತ್ತು.
ಅವರು ತೀರಿಕೊಂಡ ಹಲವಾರು ವರುಷಗಳ ನಂತರ ಅವರು ಆಧುನಿಕ ವಿಜ್ಞಾನಕ್ಕೆ ಸಲ್ಲಿಸಿದ ಅನೇಕ ಕೊಡುಗೆಗಳಿಗಾಗಿ ಅವರನ್ನು ಗುರುತಿಸಲಾಗುತ್ತಿದೆ.
ಬೋಸ್ ಅವರಿಗೆ ರವೀಂದ್ರನಾಥ್ ಠಾಗೂರ್ ಅವರೊಂದಿಗೆ ಆಪ್ತ ಸ್ನೇಹವಿತ್ತು. ಐನ್ಸ್ಟೀನ್ ಅವರೊಂದಿಗೂ ಸಂಪರ್ಕವಿತ್ತು. ಜಗದೀಶ್ ಚಂದ್ರ ಬೋಸರಲ್ಲಿ ಆಧ್ಯಾತ್ಮಿಕ – ವೈಜ್ಞಾನಿಕ ಚಿಂತನೆಗಳೆರಡೂ ಒಂದಾಗಿ ಮೇಳೈಸಿದ್ದವು ಎಂಬುದು ಪ್ರಾಜ್ಞರ ಅಭಿಮತ.
ಪ್ರಶಸ್ತಿ ಗೌರವಗಳು
ಬೋಸರಿಗೆ 1916 ರಲ್ಲಿ ನೈಟ್ ಹುಡ್ ಪ್ರಶಸ್ತಿ ಸಂದಿತು. ಬೋಸರು 1917 ರಲ್ಲಿ ಬೋಸ್ ಅವರು ಬೋಸ್ ಇನ್ಸ್ಟಿಟ್ಯೂಟನ್ನು ಕಲ್ಕತ್ತದಲ್ಲಿ ಸ್ಥಾಪಿಸಿದರು.
ಬೋಸ್ 1920 ರಲ್ಲಿ ಬೋಸರನ್ನು ಲಂಡನ್ನಿನ ಫೆಲೊ ಆಫ್ ರಾಯಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
1927 ರ ವರ್ಷದಲ್ಲಿ ಅವರು ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ 14 ನೇ ಅಧಿವೇಶನದ ಅಧ್ಯಕ್ಷತೆಯ ಗೌರವವನ್ನು ಪಡೆದರು.
1928 ರ ವರ್ಷದಲ್ಲಿ ಅವರಿಗೆ ವಿಯೆನ್ನಾ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯತ್ವ ಗೌರವ ಲಭಿಸಿತು.
1929 ರಲ್ಲಿ ಅವರಿಗೆ ಫಿನ್ನಿಶ್ ಸೊಸೈಟಿ ಆಫ್ ಸೈನ್ಸನ್ ಅಂಡ್ ಲೆಟರ್ಸ್ ಸದಸ್ಯತ್ವ ಗೌರವ ಸಂದಿತು.
ಅವರಿಗೆ ಲೀಗ್ ಆಫ್ ನೇಶನ್ಸ್ ಕಮಿಟಿ ಆಫ್ ಇಂಟಲೆಕ್ಚುಯಲ್ ಕೋಪರೇಶನ್ ಸದಸ್ಯತ್ವ ಗೌರವವವೂ ಸಂದಿತು.
ಬೋಸ್ ಅವರನ್ನು ಪ್ರಸಕ್ತದಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಎಂದಾಗಿರುವ ಅಂದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್ ಇಂಡಿಯಾದ ಸಂಸ್ಥಾಪಕ ಫೆಲೋ ಎಂದು ಗೌರವಿಸಲಾಗಿತ್ತು.
ದಿ ಇಂಡಿಯನ್ ಬೊಟಾನಿಕ್ ಗಾರ್ಡನ್ ಅನ್ನು ಜೂನ್ 25, 2009 ರ ವರ್ಷದಂದು ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬೊಟಾನಿಕ್ ಗಾರ್ಡನ್ ಎಂದು ಹೆಸರಿಸಲಾಯಿತು.
ತಮ್ಮ ಜೀವನದುದ್ದಕ್ಕು ಜ್ಞಾನ ಹಾಗು ವಿಜ್ಞಾನದ ಸಮ್ಮಿಲನದ Nk ಅನೇಕ ಸಾಧನೆ ಮಡಿದ ಶ್ರೇಷ್ಠ ವ್ಯಕ್ತಿ,
ನವೆಂಬರ್ 23, 1937 ರಂದು ಜಗದೀಶ್ಚಂದ್ರ ಬೋಸರು ನಿಧನರಾದರು.
ಇಂತಹ ಬಹುಮುಖ ಪ್ರತಿಭೆ ಅಪ್ರತಿಮ ವಿಜ್ಞಾನ ಜಗದೀಶ್ ಚಂದ್ರ ಬೋಸ್ ರವರಿಗೆ ಭಾರತೀಯರೆಲ್ಲರ ನಮನಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.