ಗಾಂಧೀಜಿ ವಿಚಾರಧಾರೆ ಒಳಹೊಕ್ಕು – 3
ಮಹಾವಿದ್ಯಾಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ, ಉಳಿದೆಡೆಗಳಲ್ಲೂ ಅದರ ಒಂದಷ್ಟು ಪ್ರಭಾವವಿರುವ ಒಂದು ಸಂಗತಿ ಏನೆಂದರೆ; ಯಾವುದೇ ಬಗೆಯಲ್ಲಿ ಉಳಿದವರಿಗಿಂತ ಸ್ವಲ್ಪ ವಿಶಿಷ್ಟವೆನಿಸಿದವರಿಗೆ ಒಂದು ಹೆಸರನ್ನಿಡುವುದು.
ಸಾಮಾನ್ಯವಾಗಿ ನಾಮಕರಣ ಮಾಡುವ ಹಕ್ಕಾಗಲೀ ಕರ್ತವ್ಯವಾಗಲೀ ಇರುವುದು ಅತ್ಯಂತ ಹತ್ತಿರದ ಬಂಧುಗಳಿಗೆ. ಮತ್ತು ಎಲ್ಲರಿಗೂ ಅತ್ಯಂತ ಹತ್ತಿರದ ಬಂಧುಗಳೆಂದರೆ ತಾಯ್ತಂದೆಯರೇ ತಾನೆ!
ಸಹಪಾಠಿಗಳಲ್ಲಿ ಕೆಲವರು, ಸಹೋದ್ಯೋಗಿಗಳಲ್ಲಿ ಕೆಲವರು ಅತ್ಯಂತ ಆಪ್ತರಾಗಿರುವವರಿರುತ್ತಾರೆ. ಅವರು ಹತ್ತಿರದ ಬಂಧುಗಳಂತೆ ಬದುಕಲ್ಲಿ ಸ್ಥಾನಪಡೆದಿರುತ್ತಾರೆ. ಅವರೂ ತಮ್ಮ ಅಂಥ ಆಪ್ತರಿಗೆ ತಮ್ಮದೇ ಪ್ರೀತಿಯ ಶಬ್ದಗಳಿಂದ ಹೆಸರಿಡುವುದಿದೆ. ತಪ್ಪಲ್ಲ.
ತಪ್ಪಾಗುವುದೆಲ್ಲಿ ಎಂದರೆ ಉಳಿದವರಿಗಿಂತ ವಿಶಿಷ್ಟವೆನಿಸುವ ಇಲ್ಲವೇ ವಿಚಿತ್ರವೆನಿಸುವ ಗುಣ-ಸ್ವಭಾವಗಳಿರುವವರನ್ನು ಅವರು ಸಂಕೋಚಪಡುವ ರೀತಿಯಲ್ಲಿ ಹೆಸರಿಸುವುದರಲ್ಲಿ.
ನೋಡಿ, ಸಹಪಾಠಿಗಳಲ್ಲಿ ಇಲ್ಲವೇ ಸಹೋದ್ಯೋಗಿಗಳಲ್ಲಿ ಒಬ್ಬಾತ ಯಾರ ಸುದ್ದಿಗೂ ಹೋಗದೆ, ತನ್ನ ಪಾಡಿಗೆ ತಾನಿರುತ್ತ, ಯಾರಿಗೂ ಕೆಡುಕನ್ನೆಸಗದೆ, ಕೆಡುಕನ್ನೆಸಗುವ ಶಕ್ತಿಯನ್ನೂ ಹೊಂದಿರದೆ, ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಇರುವಾತನಿಗೆ ಸಾಮಾನ್ಯವಾಗಿ ಎಲ್ಲರೂ ಇಡುವ ಹೆಸರೊಂದಿದೆ; ಅದು ಗಾಂಧಿ!
ಕಾಲೇಜು ಪರಿಸರದಲ್ಲಿ ಈ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಉದ್ಯೋಗಕ್ಷೇತ್ರದಲ್ಲಿಯೂ ಈ ನಾಮಕರಣ ಪ್ರಕ್ರಿಯೆ ಅಷ್ಟಿಷ್ಟು ಕೆಲಸಮಾಡುತ್ತಿದೆ. ಒಳ್ಳೆಯವನಂತೆ ಇರುವವನಿಗೆ ಗಾಂಧಿ ಎಂಬ ನಾಮಕರಣ.
ಇದು ಒಳ್ಳೆಯ ನಡೆಯೇ ಅಲ್ಲವೇ? ಇದಕ್ಕೇಕೆ ತಕರಾರು?
ತಕರಾರಿರುವುದು; ಹಾಗೆ ನಾಮಕರಣಗೊಂಡವನನ್ನು ಕಾಣುವ ದೃಷ್ಟಿಕೋನದ ಬಗ್ಗೆ. ಹೆಸರಿಟ್ಟವರೇ ಆತನನ್ನು ಅಪಹಾಸ್ಯದಿಂದ, ಅಲಕ್ಷ್ಯಭಾವದಿಂದ ನಾಲಾಯಕ್ಕು ಎಂಬ ರೀತಿಯಿಂದ ಕಾಣುತ್ತಾರೆ. ಈ ಭಾವವನ್ನು ಅವರು ಹೆಸರಿಸುತ್ತಿರುವುದು ’ಗಾಂಧಿ’ ಎಂಬ ಶಬ್ದದಿಂದ.
ಗಾಂಧಿ ಎಂದರೆ ಒಳ್ಳೆಯವನಾಗಿದ್ದೂ ನಾಲಾಯಕ್ಕಾದ ಮನುಷ್ಯ ಎಂದು!
ಗಾಂಧಿ ಎಂದರೆ ಉತ್ತಮನಿದ್ದೂ ಕೆಲಸಕ್ಕೆ ಬಾರದವನು ಎಂದು!
ಗಾಂಧಿ ಎಂದರೆ ಗುಣವಂತನಿದ್ದೂ ಪರೋಪಕಾರಕ್ಕೊದಗದವನು ಎಂದು!
ಇದು ಗಾಂಧಿ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾದ ಚಿತ್ರಣ. ಗಾಂಧಿವ್ಯಕ್ತಿತ್ವವನ್ನು ಅಪಮಾನಿಸುವ ಚಿತ್ರಣ.
ಗಾಂಧಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಗೈದ ಅಪವ್ಯಾಖ್ಯಾನ.
ಗಾಂಧಿ ಉತ್ತಮರಿದ್ದರು, ಗುಣವಂತರಿದ್ದರು, ಶ್ರದ್ಧಾವಂತರಿದ್ದರು, ಇತ್ಯಾದಿ ಹೌದು. ಇದರ ಜತೆಗೆ ಅವರು ಎಲ್ಲರಿಗೂ ಒದಗುತ್ತಿದ್ದರು, ಪರೋಪಕಾರಿಗಳಿದ್ದರು, ಜನರ ಮಧ್ಯೆಯೇ ಇರುತ್ತಿದ್ದರು.
ಗಾಂಧಿ ಬದುಕಿದ್ದೇ ಇತರರಿಗಾಗಿ. ಒಂದಕ್ಕೊಂದು ತಾಕಲಾಟವಿಲ್ಲದಂತೆ ಸಮಾಜಕ್ಕಾಗಿ, ರಾಷ್ಟ್ರಕ್ಕಾಗಿ, ವಿಶ್ವಕ್ಕಾಗಿ ಅವರು ಬದುಕಿದ್ದರು.
ತಾನಾಯಿತು, ತನ್ನ ಪಾಡಾಯಿತು, ತನಗಾರ ಸುದ್ದಿಯೂ ಬೇಡ ಇತ್ಯಾದಿ ಜೀವನದೃಷ್ಟಿ ಗಾಂಧಿಯದ್ದಲ್ಲ, ಮಾತ್ರವಲ್ಲ; ಇಂತಹ ದೃಷ್ಟಿ ಗಾಂಧಿ ಬಳಿ ಸುಳಿಯಲೂ ಸಾದ್ಯವಿಲ್ಲ.
ತನ್ನ ಪಾಡಿಗೆ ತಾನು ಇರಬಹುದಾಗಿದ್ದ ಗಾಂಧಿ ದಕ್ಷಿಣ ಆಫ್ರಿಕಾಕ್ಕೆ ತನ್ನ ಕಕ್ಷಿದಾರರ ಪರ ವಕಾಲತ್ತು ವಹಿಸಲು ಹೋಗಿ ಆ ಕೆಲಸ ಮುಗಿದ ತಕ್ಷಣ ವಾಪಸ್ ಭಾರತಕ್ಕೇ ಬರಬೇಕಾಗಿತ್ತು. ಬರಲಿಲ್ಲ. ಅಲ್ಲಿ ಅವರಿಗೆ ತಾವು ಕಂದು ಬಣ್ಣದವರೆಂದು, ಭಾರತೀಯರೆಂದು ಅಪಮಾನವಾಯಿತು. ಟಿಕೆಟಿದ್ದೂ ರೈಲಿಂದ ಹೊರದಬ್ಬಲ್ಪಟ್ಟರು. ಈ ಅಪಮಾನವನ್ನು ಎದುರಿಸುತ್ತಿರುವುದು ತಾವೊಬ್ಬರೇ ಅಲ್ಲ, ದಕ್ಷಿಣ ಆಫ್ರಿಕಾದ ಸಮಸ್ತ ಭಾರತೀಯರು ಎನ್ನುವುದು ಗೊತ್ತಾದ ಬಳಿಕ ಸಮಾಧಾನಪಟ್ಟುಕೊಳ್ಳದೆ ಅದರ ವಿರುದ್ಧ ಹೋರಾಟಕ್ಕಾಗಿ ಅಲ್ಲೇ ಕಾಲೂರಿದರು.
ದಕ್ಷಿಣ ಆಫ್ರಿಕಾಕ್ಕೂ ಗಾಂಧಿಗೂ ನಂಟು ಬೆಳೆದಿದ್ದು ಯಾವುದೇ ಉದ್ಯೋಗದಿಂದಲ್ಲ, ಆಫ್ರಿಕಾದ ವ್ಯಾಮೋಹವೂ ಅಲ್ಲ; ಅಲ್ಲಿ ವರ್ಣದ್ವೇಷ ಆಧಾರಿತವಾಗಿ ನಡೆಯುತ್ತಿದ್ದ ಭಾರತೀಯರ ಅಪಮಾನದಿಂದ.
ಎಲ್ಲಿ ಅಪಮಾನ-ಅನ್ಯಾಯಗಳಿವೆಯೋ ಅಲ್ಲಿ ಗಾಂಧಿ ಇದ್ದಾರೆ. ಗಾಂಧಿ ಇರುವಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟನೆ ಇದೆ. ಈ ಪ್ರತಿಭಟನೆ ಯಾರಿಗೂ ಹಾನಿಯಾಗದಂತೆ, ಎಲ್ಲರೂ ಪಾಲ್ಗೊಳ್ಳುವಂತೆ ಅಹಿಂಸಾತ್ಮಕವಾಗಿ ಇರುತ್ತದೆ. ಜತೆಗೆ, ಇಷ್ಟಿದ್ದೂ ಹೀಗಿದ್ದೂ ಅನ್ಯಾಯ ಮಾಡುವ ಯಾರೇ ಆಗಲಿ, ಶಾಸನವೇ ಇರಲಿ, ಗಾಂಧಿಪ್ರತಿಭಟನೆಯನ್ನು ಕಡೆಗಣಿಸಲಾಗದಂತೆ, ಕರೆದು ಮಾತನಾಡಿಸಲೇಬೇಕಾಗುವಂತೆ, ಹಾಗೆ ಮಾತಾಡುತ್ತ ತಲೆ ಬಾಗುವಂತೆ ಆ ಪ್ರತಿಭಟನೆ ಇರುತ್ತದೆ.
ಗಾಂಧಿಯಲ್ಲಿ ಒಳ್ಳೆಯತನ ಇದೆ. ಗಾಂಧಿ ಇರುವಲ್ಲಿ ಒಳ್ಳೆಯತನ ಇರುತ್ತದೆ. ಹಾಗೆ ಉಳಿದವರಲ್ಲೂ ಒಳ್ಳೆಯತನ ಇರುವಂತೆ ಗಾಂಧಿ ಇರುತ್ತಾರೆ.
ಈ ನೆಲೆಯಲ್ಲಿ ಗಾಂಧಿ ನಾಮಕರಣವನ್ನು ಸೂಕ್ತ ವ್ಯಕ್ತಿಗಳಿಗೆ ಮಾಡಬಹುದೇ? ಅಂಥ ವ್ಯಕ್ತಿಗಳು ಸಿಗಬಹುದೇ? ಸಿಗುತ್ತಾರೆ. ಸಿಕ್ಕೇಸಿಗುತ್ತಾರೆ. ಹುಡುಕಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.