1980 ರ ಸುಮಾರಿಗೆ ಪ್ರಕಟವಾದ ಗಿರೀಶ್ಕಾರ್ನಾಡರ ’ಹಿಟ್ಟಿನ ಹುಂಜ’ ನಾಟಕದ ಪ್ರತಿಮೆ ಅದೇಕೋ ನೆನಪಾಗುತ್ತಿದೆ. ’ಹಿಟ್ಟಿನ ಹುಂಜ’ದ ಕಲ್ಪನೆ ಮೂಲತಃ ಜನ್ನನ ’ಯಶೋಧರಚರಿತೆ’ ಕಾವ್ಯದ್ದು. ಜೈನ ಮತಾನುಯಾಯಿಯಾಗಿದ್ದ ಜನ್ನ ’ ಸಂಕಲ್ಪ ಹಿಂಸೆ’ಯ (ಕ್ರಿಯೆಯಿಂದಲ್ಲ, ಮನಸಿನಲ್ಲಿಯೂ ಹಿಂಸೆಯನ್ನು ಮಾಡುವ ಕುರಿತು ಯೋಚಿಸಿದ ಪಾಪ) ಪರಿಣಾಮವನ್ನು ಹೇಳುವ ಸಂದರ್ಭವೊಂದಿದೆ. ಈ ಕಾವ್ಯ ಅಂತಿಮವಾಗಿ ಹಿಂಸೆಯ ದುಷ್ಫಲವನ್ನು ಮತ್ತು ಅಹಿಂಸೆಯ ಸತ್ಫಲವನ್ನು ಹೇಳುತ್ತದೆ. ಈ ಕಾವ್ಯದ ಎಳೆಯೊಂದನ್ನು ಹಿಡಿದುಕೊಂಡು ಕಾರ್ನಾಡರು’ ಹಿಟ್ಟಿನ ಹುಂಜ’ ನಾಟಕವನ್ನು ರಚಿಸಿದ್ದರು. ಹಿಂಸೆಯನ್ನು ಹಿಡಿಯಬೇಕೇ ಅಥವಾ ಅಹಿಂಸೆಯನ್ನು ಹಿಡಿಯಬೇಕೆ ಎಂಬ ದ್ವಂದ್ವದಲ್ಲಿ ಹಿಟ್ಟಿನಲ್ಲಿ ಮಾಡಿದ ಹುಂಜದ ಪ್ರತಿಮೆಯನ್ನು ಬಲಿಕೊಡುವ ಮೂಲಕ ಶಾಂತಿಯನ್ನು ಹುಡುಕಿಕೊಳ್ಳುವ ಉದ್ದೇಶವಿತ್ತು. ಕತ್ತಿಯೆತ್ತಿ ಆ ಹುಂಜದ ಪ್ರತಿಮೆಯನ್ನು ಕತ್ತರಿಸುತ್ತಿದ್ದಂತೆ ಅದರೊಳಗೆ ಪ್ರವೇಶಿಸಿದ್ದ ಪಿಶಾಚಿಯೊಂದು ಕ್ಕೊಕ್ಕೋಕ್ಕೋ ಎಂದುಕೂಗಿಕೊಂಡ ಪ್ರಸಂಗವಿದೆ.ಆ ಮೂಲಕ ಬಲಿಕೊಟ್ಟು ಪಾಪ ತೊಳೆದುಕೊಳ್ಳುವ ಕನಸು ಈಡೇರುವುದಿಲ್ಲ.
ಈ ವಿಷಯ ಹಿಂಸೆ ಅಹಿಂಸೆಯ ಚರ್ಚೆಗೆ ಒಂದು ಮುನ್ನುಡಿಯಂತಿದೆ. ಜೈನ ಕಾವ್ಯ ಹಾಗೂ ಅದರಒಂದು ಪ್ರತಿಮೆ ಹಿಂಸೆಯ ವಿಫಲತೆಯನ್ನು ಹೇಳುತ್ತಿದೆ. ಅಹಿಂಸೆಯ ಉನ್ನತ ಮೌಲ್ಯವನ್ನೂ ಹೇಳುತ್ತಿದೆ. ಹಿಟ್ಟಿನ ಹುಂಜವನ್ನು ತರಗತಿಗಳಲ್ಲಿ ಪಾಠ ಮಾಡಿದ ಪ್ರಾದ್ಯಾಪಕರಿಗೆ, ಪಠ್ಯವಾಗಿ ಅಥೈಸಿಕೊಳ್ಳುತ್ತಿದ್ದ ಪ್ರಜ್ಞಾವಂತ ವಿದ್ಯಾರ್ಥಿಗಳಿಗೆ, ಒಂದು ನಾಟಕವಾಗಿ ನೋಡಿದವರಿಗೆ, ಈಗ ಇದ್ದಕ್ಕಿದ್ದಂತೆ ಹಿಟ್ಟಿನ ಹುಂಜದೊಳಗಿಂದ ಕೇಳಿ ಬಂದ ’ ನಾನೂ ನಗರದ ನಕ್ಸಲ್’ ಎಂಬ ಧ್ವನಿ ಬೆಚ್ಚಿಬೀಳಿಸಿದೆ !! ಜೀವ ದಯೆಯೇ ಧರ್ಮವೆಂದು ನಂಬುವ ಕಾವ್ಯದೊಳಗಿಂದ ಕಥೆಯೊಂದನ್ನು ಆಯ್ದುಕೊಂಡು ಹೆಸರಾದ ಸಾಹಿತಿಯು ದೇಶಾದ್ಯಂತ ಅಮಾಯಕರ ರಕ್ತಚೆಲ್ಲಿದ ನಕ್ಸಲ್ ಸಿದ್ದಾಂತಕ್ಕೆ ನಾಗರಿಕ ಮುಖವಾಣಿ !!ನಾಟಕದ ಒಂದು ಪಾತ್ರದ ಮೂಲಕವೂ ಹಿಂಸೆಯನ್ನು ಮಾಡಿಸಲೊಪ್ಪದ ಸಾಹಿತಿಯೊಬ್ಬರು ಈಗ ಬಹಿರಂಗದಲ್ಲೇ ಹಿಂಸಾ ಸಿದ್ದಾಂತವಾದ ನಕ್ಸಲಿಸಂನ ನಗರದ ಬೆಂಬಲಿಗರಾಗಿ, ನಕ್ಸಲಿಯರಿಗೆ ಹಣಕಾಸಿನ, ಕಾನೂನಿನ ಸಹಾಯಕ್ಕೆ ಮಾನವ ಹಕ್ಕಿನ ಮುಖವಾಡ ತೊಡಿಸಿದ ಸಂಚುಕೋರರಿಗೆ ಬೆಂಬಲ ಸೂಚಿಸುತ್ತಾರೆ.
ಇಷ್ಟು ಕಾಲ ಕಾರ್ನಾಡರನ್ನು ಅವರ ಸಾಹಿತ್ಯ ಕೃತಿಗಳಿಗಾಗಿ ಓದಿಕೊಂಡು, ಮೆಚ್ಚಿಕೊಂಡ ನಮಗೆ ಈಗ ಹಿಂಸೆಯ ಸಿದ್ಧಾಂತವನ್ನು ಸಮರ್ಥಿಸಲು ಹೊರಟ ಮೇಲೆ ಒಬ್ಬ ಬರಹಗಾರನಾಗಿಯೂ ಓದುವುದಕ್ಕೆ ಮನಸಾಕ್ಷಿ ಒಪ್ಪಲಾರದು. ಕಾರ್ನಾಡರಲ್ಲೊಂದು ವಿನಂತಿಯಿದೆ. ನೀವೀಗ ಹಿಂಸೆಯನ್ನು ಆತ್ಮಸಾಕ್ಷಿಯಾಗಿ ಒಪ್ಪಿಕೊಂಡ ಕಾರಣ ಅಹಿಂಸೆಯನ್ನು ಮುಂದೆಮಾಡಿದ ನಿಮ್ಮ ಹಿಟ್ಟಿನ ಹುಂಜ ಈಗ ನೈತಿವಾಗಿ ನಿಮ್ಮದಲ್ಲ. ನಿಮ್ಮ ಸಿದ್ದಾಂತವೇ ಈಗ ಬದಲಾದ ಕಾರಣದಿಂದ ನೀವು ಈ ಕೃತಿಯನ್ನು ಹಿಂಪಡೆಯುವ ಉದಾರತೆಯನ್ನು ಪ್ರದರ್ಶಿಸಬೇಕು. ಇದರಿಂದ ಕನ್ನಡ ಸಾಹಿತ್ಯಕ್ಕೆ ಒಂದು ಕೃತಿ ನಷ್ಟವಾಗಬಹುದಾದರೂ ಬೌದ್ಧಿಕ ಅಪ್ರಾಮಾಣಿಕತೆಗಿಂತ ಕೃತಿಯನ್ನು ವಾಪಾಸ್ ಪಡೆಯುವುದೇ ಸರಿ.
ಕನ್ನಡದ ಓದುಗರಿಗೆ ಬಹು ಕಾಲದಿಂದಲೂ ಅಮೂಲ್ಯವಾದ ಪುಸ್ತಕಗಳನ್ನು ನೀಡುತ್ತಾ ಬಂದ ಮನೋಹರ ಗ್ರಂಥ ಮಾಲೆಯೇ ಕಾರ್ನಾಡರ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. ಇಷ್ಟು ಕಾಲ ನಾವೇಲ್ಲರೂ ಬಹುಪ್ರೀತಿಯಿಂದಲೇ ಈ ಗ್ರಂಥಮಾಲೆಯ ಪುಸ್ತಕಗಳನ್ನು ಖರೀದಿಸಿ ಓದಿಕೊಂಡು ಬಂದಿದ್ದೇವೆ. ಗಿರೀಶ್ಕಾರ್ನಾಡ್ ಯಾವಾಗ ಬಹಿರಂಗವಾಗಿಯೇ ತನ್ನನ್ನು ನಕ್ಸಲ್ ಸಿದ್ದಾಂತದ ಸಮರ್ಥಕನಾಗಿ ನಡೆದುಕೊಂಡರೋ, ಆ ಕ್ಷಣದಿಂದಲೇ ಅವರೊಬ್ಬ ನಾಗರಿಕ ಸಮಾಜದ ನಡುವಿನ ಅಪಾಯಕಾರಿ ಸಂವಿಧಾನ ವಿರೋಧಿ ಸಿದ್ಧಾಂತದ ಬೆಂಬಲಿಗರೆಂದಾಯಿತು. ಮನೋಹರ ಗ್ರಂಥಮಾಲೆ ಈ ಕೂಡಲೇ ಸಂವಿಧಾನ ವಿರೋಧೀ ಅಪಾಯಕಾರಿ ಸಿದ್ಧಾಂತದ ಸಮರ್ಥಕ ಕಾರ್ನಾಡರ ಸಮಸ್ತ ಕೃತಿಗಳನ್ನೂ ಮಾರುಕಟ್ಟೆಯಿಂದ ವಾಪಾಸ್ ಪಡೆಯಬೇಕು ಮತ್ತು ಮುಂದೆ ಅವರ ಯಾವುದೇ ಕೃತಿಗಳನ್ನು ಮರುಮುದ್ರಣ ಮಾಡದಿರುವುದರ ಮೂಲಕ ಪ್ರಕಾಶನ ಸಂಸ್ಥೆಯು ನೆಲದ ಕಾನೂನನ್ನು , ನೈತಿಕತೆಯನ್ನು ಎತ್ತಿ ಹಿಡಿಯಬೇಕಾಗಿದೆ. ಆ ಮೂಲಕ ಹಿಂಸಾ ಸಿದ್ಧಾಂತವನ್ನು ಬಹಿಷ್ಕರಿಸಬೇಕಾಗಿದೆ.
ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ್ದು ಅಹಿಂಸೆಯೇ ಪರಮಧರ್ಮವೆಂಬ ನಂಬಿಕೆಯನ್ನು ಪ್ರತಿಪಾದಿಸಿದ ಶ್ರೀ ಮಹಾವೀರನ ಸಿದ್ಧಾಂತವನ್ನು ಪಾಲಿಸುವ ಶಾಹು ಶಾಂತಿ ಪ್ರಸಾದ್ ಜೈನ ಟ್ರಸ್ಟ್. ಪ್ರಶಸ್ತಿ ಪಡೆದ ಕಾಲಕ್ಕೆ ಕಾರ್ನಾಡ್ ಅದಕ್ಕೆ ಅರ್ಹತೆ ಹೊಂದಿದ್ದರಾದರೂ, ಪ್ರಸ್ತುತ ಹಿಂಸೆಯ ಸಿದ್ಧಾಂತಕ್ಕೆ ಬಹಿರಂಗವಾಗಿಯೇ ಬೆಂಬಲ ನೀಡಿರುವುದರಿಂದ ಅವರು ಪಡೆದ ಜ್ಞಾನಪೀಠವು ಗೌರವ ಕಳೆದುಕೊಂಡಂತಾಗಿದೆ. ಭಾರತೀಯ ಜ್ಞಾನಪೀಠ ಸಂಸ್ಥೆಯ ಜೈನ್ ಕುಟುಂಬ ಈ ಕೂಡಲೇ ಕಾರ್ನಾಡರಿಗೆ ನೀಡಿದ ಪ್ರಶಸ್ತಿಯನ್ನು ತಾತ್ವಿಕವಾಗಿ ಹಿಂಪಡೆಯುವ ಮೂಲಕ ಮತ್ತು ಹಿಂಸಾ ಸಿದ್ಧಾಂತದ ಸಮರ್ಥನೆಯ ಲೇಖಕರ ನಡವಳಿಕೆ ನಾಗರಿಕ ಸಮಾಜ ತಲೆತಗ್ಗಿಸುವಂತಾದುದಕ್ಕೆ ತನ್ನ ಖಂಡನೆಯನ್ನು ವ್ಯಕ್ತ ಪಡಿಸಬೇಕು.
ಕರ್ನಾಟಕದ ಬೇರೆ ಬೇರೆರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಕಾರ್ನಾಡರ ನಾಟಕಗಳನ್ನು ಪಠ್ಯವಾಗಿ ಇರಿಸಿದ್ದರೆ ಈ ಕೂಡಲೇ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ, ರಾಜ್ಯದ ಘನತೆವೆತ್ತ ರಾಜ್ಯಪಾಲರು ವಿಶ್ವವಿದ್ಯಾಲಯಗಳಿಂದ ಕೂಡಲೆ ಮಾಹಿತಿ ತರಿಸಿಕೊಂಡು ಅವರ ಯಾವುದೇ ಪಠ್ಯಗಳನ್ನು ಬೋಧನೆ ನಡೆಸದಂತೆ ಆದೇಶಿಸಿ, ಅಂತಹ ಪಠ್ಯಗಳನ್ನು ಹಿಂಪಡೆಯಬೇಕು.
ಓರ್ವ ಕನ್ನಡದ ಬೋಧಕನಾಗಿ, ಲೇಖಕನಾಗಿ ಇನ್ನು ಮುಂದೆ ಯಾವುದೇ ಸಂದರ್ಭದಲ್ಲಿ ಅದು ತರಗತಿಯ ಪಾಠಗಳಲ್ಲಿ, ವಿಚಾರಸಂಕಿರಣದ ಪ್ರಬಂಧಗಳಲ್ಲಿ ಹಾಗೂ ಸಾಹಿತ್ಯಿಕ ಬರವಣಿಗೆಗಳಲ್ಲಿ ಕಾರ್ನಾಡರ ಪಠ್ಯಗಳನ್ನು ಉಲ್ಲೇಖಿಸುವುದಿಲ್ಲ ಬೋಧಿಸುವುದಿಲ್ಲ ಎಂದು ತೀರ್ಮಾನಿಸಿದ್ದು , ಕನ್ನಡದ ವೈಚಾರಿಕ ವಲಯ, ಪ್ರಾಧ್ಯಾಪಕ ಬಂಧುಗಳು ನೈತಿಕವಾಗಿ ಇಂತಹ ತೀರ್ಮಾನಕ್ಕೆ ಬರಬೇಕಾಗಿದೆ.
ಈಗಾಗಲೇ ರಾಜ್ಯದ ಸಾವಿರಾರು ಸರ್ಕಾರಿ, ಅನುದಾನಿತ ಶಾಲೆಗಳ ಗೋಡೆಗಳಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ಹಾಕಲಾಗಿದೆ. ಯಾವ ವೇದಿಕೆಯಿಂದ ಕಾರ್ನಾಡ್ ’ ನಾನೂ ನಗರದ ನಕ್ಸಲ್’ ಎಂದು ಕೊರಳಿಗೆ ತೂಗುಮಾಲೆಯನ್ನು ಧರಿಸಿಕೊಂಡರೋ, ಆ ಚಿತ್ರಗಳನ್ನು ಪತ್ರಿಕೆ, ಟಿ.ವಿ.ಗಳ ಮೂಲಕ ನೋಡಿದ ಎಳೆಯ ವಯಸ್ಸಿನ ಮಕ್ಕಳ ಮನಸ್ಸಿನ ಮೇಲೆ ’ ಹಿಂಸೆಯ ಸಮರ್ತನೆ’ ಎಂಬ ಭಾವನೆ ಬಿತ್ತಲ್ಪಟ್ಟು, ಮುಂದೆ ಆ ಮಕ್ಕಳೂ ನಕ್ಸಲ್ ಸಿದ್ದಾಂತದ ಬೆಂಬಲಕ್ಕೆ ನಿಂತರೆ, ನಾಡಿಗೆ ಕಾನೂನು ಸಮಸ್ಯೆ ಮಾತ್ರವಲ್ಲ ಅದೆಷ್ಟೋ ಮನೆಗಳ ಬೆಳಕೂ ಕಮರಿ ಹೋದೀತು. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಕೂಡಲೇ ಎಲ್ಲಾ ಶಾಲೆಗಳ ಗೋಡೆಗಳಿಂದ ಕಾರ್ನಾಡರ ಭಾವಚಿತ್ರವನ್ನು ತೆರವು ಮಾಡುವಂತೆ ಆದೇಶಿಸಬೇಕೆಂದು ಕೇಳಿಕೊಳ್ಳುತ್ತೇನೆ. ಮಕ್ಕಳ ಮನಸ್ಸಿಗೆ ನೀಡಬೇಕಾದ ಆರೋಗ್ಯಕರ ಚಿಂತನೆ, ಮಾದರಿಯ ಮುಂದೆ ಜ್ಞಾನಪೀಠ ಪ್ರಶಸ್ತಿ ಹಿರಿದಲ್ಲ.
ಕನ್ನಡಿಗರ ಪ್ರಾತಿನಿಧಿಕ ಸಾಹಿತ್ಯ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕೂಡ ತನ್ನ ಆಮಂತ್ರಣ ಪತ್ರಿಕೆ, ಕಾರ್ಯಕ್ರಮದ ವೇದಿಕೆಗಳಲ್ಲಿ ಯಾವುದೇ ಕಾರಣಕ್ಕೂ ಕಾರ್ನಾಡರ ಭಾವಚಿತ್ರವನ್ನು ಪ್ರದರ್ಶಿಸಬಾರದು.
ಈ ಪ್ರತಿಕ್ರಿಯೆ ಮತ್ತೊಮ್ಮೆ ಸಹಿಷ್ಣು ಮತ್ತು ಅಸಹಿಷ್ಣುತೆಯ ಚರ್ಚೆಯನ್ನು ಮುಂದೆತಂದಿದೆ. ನಿಜವಾದ ಅಸಹಿಷ್ಣುತೆಯ ಹಿಂಸೆಯ ಸಮರ್ಥನೆಯಲ್ಲಿದೆ. ಈ ದೇಶದಲ್ಲಿ ನಕ್ಸಲಿಸಂ, ಮಾವೋವಾದಿಗಳಷ್ಟು ಅಸಹಿಷ್ಣುಗಳು ಇನ್ಯಾರಿದ್ದಾರೆ? ತಮ್ಮ ದಾರಿಗೆ ಅಡ್ಡವಾದ ಎಲ್ಲರನ್ನು ಬರ್ಭರವಾಗಿಯೇ ಕೊಂದು ಕೊಂಡು ಹೋದ ಸಿದ್ದಾಂತ ಮಾನವೀಯ, ಸಹಿಷ್ಟ್ಣು ಗುಣವನ್ನು ಹೊಂದಲು ಹೇಗೆ ತಾನೇ ಸಾಧ್ಯ? ನಗರ ನಕ್ಸಲ್ ಎಂಬ ಪದವನ್ನು ಯಾರು ಸೃಷ್ಟಿಸಿದರು ಎನ್ನುವುದಕ್ಕಿಂತ ತಾವೇ ಹಾಕಿಕೊಂಡ ಮುಖವಾಡ ಬಯಲಾದುದರ ಬಗ್ಗೆ ಚರ್ಚೆಯಾಗಬೇಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರದ ಹೆಸರಲ್ಲಿ ದೇಶ ಒಡೆಯುವ ಸಂಚಿನ ಮಾತುಗಳನ್ನಾಡಿದವರ ಬೆಂಬಲಕ್ಕೆ ನಿಲ್ಲುವುದು ನ್ಯಾಯ ಹೇಗಾಗುತ್ತದೆ? ಇಷ್ಟಕ್ಕೂ ನ್ಯಾಯಲಯ ಆರೋಪಿತರ ಸಂಚನ್ನು ಇನ್ನೂ ನಿರಾಕರಿಸಿಲ್ಲ. ಮುಕ್ತವಾದ ಮತ್ತು ನ್ಯಾಯಸಮ್ಮತವಾದ ವಿಚಾರಣೆ ನಡೆಯಲು ಅವಕಾಶ ಮಾಡುವ ಮೊದಲೆ ಎಲ್ಲಾ ಪ್ರಭಾವಿಗಳು ಹೀಗೆ ಆರೋಪಿತರ ಬೆಂಬಲಕ್ಕೆ ನಿಂತಾಂಗ ಅದು ವಿಚಾರಣೆಯ ಮೇಲೆ ಪ್ರಭಾವ ಬೀರುವುದಿಲ್ಲವೇ? ಚರ್ಚೆಯನ್ನೇ ನಮ್ಮ ಪ್ರಜಾಪ್ರಭುತ್ವದ ಸೌಂಧರ್ಯವೆಂದು ತಮಗನುಕೂಲ ಸಂದರ್ಭದಲ್ಲೆಲ್ಲಾ ಹೇಳಿಕೊಂಡು ತಿರುಗಾಡುವ ಸೋಗಲಾಡಿ ಬುದ್ಧಿ ಜೀವಿಗಳು ತಮ್ಮ ಫೇಸ್ ಬುಕ್ ಪುಟಗಳಲ್ಲಿ ತಮ್ಮ ಶಿಷ್ಯ ಪರಿವಾರಕ್ಕೆ ಈ ಚರ್ಚೆಯಲ್ಲಿ ಭಾಗವಹಿಸಬೇಡಿ, ಈ ಚರ್ಚೆಯೇ ಒಂದು ಸಂಚು, ಮುಂದೆ ಭಾರಿ ದೊಡ್ಡ ಅನಾಹುತವೇ ಸೃಷ್ಟಿಯಾಗಲಿದೆ ಎಂದು ಬರೆದುಕೊಂಡವರು, ಇಂತಹ ಚರ್ಚೆಯಿಂದ ತಮ್ಮ ಬಂಡವಾಳ ಬಯಲಾಗುತ್ತದೆ ಎಂದಾಗ ಚರ್ಚೆಗೆ ಕೋಮುವಾದ, ಬಲಪಂಥೀಯತೆಯ ಪಟ್ಟಕಟ್ಟಿ ಅಸಹಿಷ್ಣುತೆಯನ್ನು ಪ್ರಕಟಿಸಿದವರಿಗೆ ಈಗೇಕೆ ಪ್ರಜಾಪ್ರಭುತ್ವದ ಸೌಂದರ್ಯ ಕಾಣುವುದಿಲ್ಲಾ? ಮಾಧ್ಯಮ- ಅಭಿವ್ಯಕ್ತಿಗಳನ್ನೆ ತಮಗೆ ಪೂರಕವಾಗಿದ್ದಾಗ ಸ್ವಾತಂತ್ರ್ಯದ ಪರಿಭಾಷೆಯಲ್ಲಿ ವಾಖ್ಯಾನಿಸುತ್ತಿದ್ದವರಿಗೆ ತಮಗನುಕೂಲವಾಗದೇ ಇದ್ದಾಗ ಬಂಡವಾಳಶಾಹಿಯಾಗಿ, ಕೋಮುವಾದಿಯಾಗಿ ಕಾಣುತ್ತದೆಯಾದರೆ ಯಾರು ವೈಚಾರಿಕ ಜಗತ್ತಿನ ಅಸಹಿಷ್ಣುಗಳು? ಈ ನಾನು ನಗರದ ನಕ್ಸಲನೆಂದವರ ಹಿಂದಿರುವ ಅಂತರಾಷ್ಟ್ರೀಯ ಸಂಚನ್ನೂ ಬಯಲಿಗೆಳೆದಿದೆ. ಗೌರಿ ಹತ್ಯೆ, ಅದರ ಸ್ಮರಣೆ ಅವರು ಸೃಷ್ಟಿಸಿಕೊಂಡ ನೆಪವಷ್ಟೇ. ಒಳ ಸಂಚಿರುವುದು 2019 ರ ಚುಣಾವಣೆಯಲ್ಲಿ ಹೇಗಾದರೂ ಮೋದಿಯವರನ್ನು ಸೋಲಿಸಬೇಕು ಮತ್ತು ಆ ಮೂಲಕ ಭಾರತಾದಾದ್ಯಂತ ಎನ್.ಜಿ.ಒ.ಗಳ ಹೆಸರಿನಲ್ಲಿ ಪ್ರತಿವರ್ಷವೂ ವಿದೇಶಗಳಿಂದ ಬರುತ್ತಿದ್ದ ಕೋಟ್ಯಾಂತರ ರೂಪಾಯಿಗಳ ಸರಬರಾಜಿಗೆ ಬಿದ್ದ ಕಡಿವಾಣ, ಸರ್ಕಾರಿ ಬಂಗಲೆಗಳ ತೆರವಿನಿಂದ ಉಂಟಾದ ಪಲ್ಲಟ, ಸರ್ಕಾರಿ ಕಮಿಟಿಗಳಲ್ಲಿ ಸಿಗದ ಸಲಹೆಗಾರರ ಅವಕಾಶಗಳೆಲ್ಲವೂ ಸೇರಿ ಇವರುಗಳಿಗೆ ಉಸಿರುಗಟ್ಟಿಸಿದೆ. ಅಳಿವಿನಂಚಿನ ಸಿದ್ದಾಂತಕ್ಕೆ ಸರ್ಕಾರಿ ಕೃಪೆಯೂ ಇಲ್ಲವಾದರೆ ಉಳಿಸುವುದಾದರೂ ಹೇಗೆ ಎಂಬ ಗೊಂದಲದಲ್ಲೆ ಹುಟ್ಟಿದ ಹೊಸಕೂಗು ನಾನು ನಗರದ ನಕ್ಸಲ್ಅಭಿಯಾನ. ಕಾಡಿನ ಹಿಂಸಾ ಸಿದ್ಧಾಂತಕ್ಕೆ ನಾಗರಿಕ ವೇಶವನ್ನು ತೊಡಿಸಿ,ಇನ್ನಷ್ಟು ಕಾಲ ಬದುಕಿಸುವುದಷ್ಟೇ ಇವರ ಉದ್ದೇಶ. ದೇಶದ ಸಜ್ಜನ ನಾಗರಿಕ ಶಕ್ತಿ ಈ ಹಿಂಸಾ ಸಿದ್ಧಾಂತಕ್ಕೆ ಸೆಡ್ಡು ಹೊಡೆದು ತಮ್ಮ ದ್ವನಿಯನ್ನು ಎತ್ತಲಾರಂಭಿಸಿದ್ದು ಆಶಾದಾಯಕ ಬೆಳವಣಿಗೆ. ಕಾರ್ನಾಡ್ ತನ್ನ ನಡವಳಿಕೆಗಾಗಿ ನಾಗರಿಕ ಸಮಾಜದ ಕ್ಷಮೆಯಾಚಿಸಬೇಕು. ಇಲ್ಲವೇ ವೈಚಾರಿಕ ಜಗತ್ತಿನ ಸಹಿಷ್ಣು ಬಹಿಷ್ಕಾರಕ್ಕೆ ಸಿದ್ಧವಾಗಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.