ಮನೆಯಲ್ಲಿ ಬ್ರಿಟೀಷರ ಮನೋಭಾವನೆಗಳನ್ನೇ ಹೇರಲ್ಪಟ್ಟರೂ, ತಾತನಿಂದ ಅತಿಯಾಗಿ ಪ್ರಭಾವಿತರಾಗಿ ಸ್ವರಾಜ್ಯದ ಮನಸ್ಥಿತಿಯನ್ನು ಬೆಳೆಸಿಕೊಂಡ, ಕ್ರಾಂತಿಕಾರಿ ಮನೋಭಾವದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ನಂತರದಲ್ಲಿ ಆಧ್ಯಾತ್ಮ ಸಾಧನೆಯೆಡೆಗೆ ಮನಃಪರಿವರ್ತನೆಗೊಂಡ ಮಹಾನ್ ಚೇತನ ಶ್ರೀ ಅರವಿಂದ ಘೋಷರು. ಕಾಕತಾಳೀಯವೋ ಎಂಬಂತೆ ಅರವಿಂದರು ಜನಿಸಿದ್ದು ದೇಶಕ್ಕೆ ಸ್ವಾತಂತ್ರ್ಯ ದೊರಕಿದ ದಿನಾಂಕದಂದೇ, ಅರವಿಂದರ ಜನನವಾದದ್ದು ಆಗಸ್ಟ್ 15, 1872 ಕೊಲ್ಕತ್ತೆಯಲ್ಲಿ. ಕೃಷ್ಣಧನ್ ಘೋಷ್ ಮತ್ತು ಸ್ವರ್ಣಲತಾ ದೇವಿಯರ ನಾಲ್ವರು ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿದರು.
ತಂದೆ ಕೃಷ್ಣಧನ್ ಘೋಷರು ಭಾರತದ ಸಂಸ್ಕೃತಿಯ ಕುರಿತು ನಿರಾಸಕ್ತಿ ಹಾಗೂ ಆಂಗ್ಲರಿಂದ ಪ್ರಭಾವಕ್ಕೊಳಗಾದ ಪರಿಣಾಮ ತಮ್ಮ ಮಕ್ಕಳೂ ಅದೇ ಸಂಸ್ಕೃತಿಯಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ಅರವಿಂದರನ್ನು ಮೊದಲು ಬ್ರಿಟೀಷರ ಶಕ್ತಿಕೇಂದ್ರದಂತಿದ್ದ ಡಾರ್ಜಿಲಿಂಗ್ನ ಲಾರೆಟೋ ಹೌಸ್ ಬೋರ್ಡಿಂಗ್ ಸ್ಕೂಲಿಗೆ ಕಳುಹಿಸಿದರು. ನಂತರ ತಮ್ಮ ಮೂರೂ ಜನ ಗಂಡು ಮಕ್ಕಳನ್ನು ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದರು. ಇದರಿಂದ ಅರವಿಂದರು ಎಳವೆಯಲ್ಲಿ ಸ್ವದೇಶವನ್ನು ತೊರೆದು ಆಂಗ್ಲರ ನಾಡಿನಲ್ಲಿ ಸುಮಾರು 1979 ರಿಂದ 1992-93 ರವರೆಗೆ 14 ವರ್ಷಗಳ ಕಾಲ ಮ್ಯಾಂಚೆಸ್ಟರ್, ಲಂಡನ್ (1884), ಕ್ಯಾಂಬ್ರಿಡ್ಜ್ (1890) ಗಳಲ್ಲಿ ಅತ್ಯುತ್ತಮ ಶಿಕ್ಷಣ ಪಡೆದರು. ಅರವಿಂದರು ಲ್ಯಾಟಿನ್, ಗ್ರೀಕ್ ಸೇರಿದಂತೆ ಇನ್ನಿತರ ಭಾಷೆಗಳಲ್ಲಿ ಅಪಾರ ಪಾಂಡಿತ್ಯದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. ಅಷ್ಟೇ ಅಲ್ಲ ಫ್ರೆಂಚ್, ಜರ್ಮನ್, ಇಟಾಲಿಯನ್ ಭಾಷೆಗಳನ್ನೂ ಚೆನ್ನಾಗಿ ಬಲ್ಲವರಾಗಿದ್ದರು.
ಬ್ರಿಟಿಷ್ ಸಂಸ್ಕೃತಿಗೆ ಮಾರು ಹೋಗಿದ್ದ ಅರವಿಂದರ ತಂದೆಯವರಿಗೆ ತಮ್ಮ ಮಗ ಐ.ಸಿ.ಎಸ್. ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಪಾಸ್ ಮಾಡಬೇಕೆಂಬ ಆಸೆ ಇತ್ತು. ಆದರೆ ಅರವಿಂದರಿಗೆ ತಮ್ಮ ತಾತ ರಾಜನಾರಾಯಣ ಬಸು ಅವರ ಚಿಂತನೆಗಳು ಪ್ರಭಾವ ಬೀರಿದ್ದರಿಂದ ಸ್ವದೇಶಿ ಶ್ರೇಷ್ಠ ಸಂಸ್ಕೃತಿಯನ್ನು ಆರಾಧಿಸುವ ಮನೋಭಾವ ಅರವಿಂದರಲ್ಲಿ ರೂಪುಗೊಂಡಿತ್ತು. ಅದೇ ಕಾರಣದಿಂದ ಬ್ರಿಟೀಷ್ ಸರ್ಕಾರದ ಪರೀಕ್ಷೆಗಳನ್ನು ಧಿಕ್ಕರಿಸಿ, ಎರಡು ವರ್ಷ ಅಧ್ಯಯನದ ನಂತರ ಕುದುರೆ ಸವಾರಿಯ ಪರೀಕ್ಷೆಗೆ ಹಾಜರಾಗದೇ ಉದ್ದೇಶಪೂರ್ವಕವಾಗಿ ಐ.ಸಿ.ಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. 1983 ರಲ್ಲಿ ಭಾರತಕ್ಕೆ ಮರಳಿದರು.
ಭಾರತದಲ್ಲಿ ಬರೋಡಾದ ಸಯ್ಯಾಜಿರಾವ್ ಗಾಯೆಕವಾಡ್ ಮಹಾರಾಜರ ಬಳಿ ಕೆಲಸಕ್ಕೆ ಸೇರಿದರು. ಮೊದಲು ಕಂದಾಯ ಇಲಾಖೆ ನಂತರದಲ್ಲಿ ಬರೋಡಾ ಮಹಾರಾಜರ ಕಾರ್ಯದರ್ಶಿ ಹುದ್ದೆಯನ್ನೂ ನಿರ್ವಹಿಸಿದ್ದರು.
ಜೊತೆಗೆ ಬರೋಡ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಅಷ್ಟೇ ಅಲ್ಲ ನಂತರದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಹುದ್ದೆಯೂ ಅರವಿಂದರ ಹೆಗಲಿಗೆ ಬಂತು. ಹೀಗೆ 1983 ರಿಂದ 1906 ರ ವರೆಗೆ ಸುಮಾರು 13 ವರ್ಷಗಳ ಕಾಲ ಬರೋಡಾ ಮಹಾರಾಜರ ಬಳಿ ಉದ್ಯೋಗ ಮಾಡಿದರು. ಅಷ್ಟರವರೆಗೂ ಭಾರತೀಯ ಭಾಷೆಗಳು ಮತ್ತು ಪರಂಪರೆಗಳ ಬಗ್ಗೆ ಅಷ್ಟೊಂದು ತಿಳಿದಿರದಿದ್ದ ಅರವಿಂದರು ಬರೋಡದಲ್ಲಿ ಸಂಸ್ಕೃತ ಹಾಗೂ ಇತರ ಭಾಷೆಗಳನ್ನು, ಭಾರತದ ಹಿಂದಿನ ಮತ್ತು ಪ್ರಸಕ್ತ ನಾಗರಿಕತೆಗಳ ಕುರಿತು ತಿಳಿದುಕೊಂಡರು.
ಸ್ವಾಮಿ ವಿವೇಕಾನಂದರು, ಬಕೀಮ್ ಚಂದ್ರರು ರವೀಂದ್ರನಾಥ ಠಾಗೋರ್ ಮೊದಲಾದವರ ಕೃತಿಗಳನ್ನು ಅಧ್ಯಯಿಸಿದರು. ಶ್ರೀ ರಾಮಕೃಷ್ಣ ಪರಮಹಂಸರ ವಚನಾಮೃತ, ಭರ್ತೃಹರಿಯ ನೀತಿಶತಕ, ಕಾಳಿದಾಸನ ವಿಕ್ರಮೋರ್ವಶೀಯ ಮುಂತಾದ ಕೃತಿಗಳು ಅರವಿಂದರ ಮೇಲೆ ಪ್ರಭಾವ ಬೀರಿರುವಂತದ್ದು. ಈ ಎಲ್ಲ ಕೃತಿಗಳನ್ನು ಅವರು ಸಂಸ್ಕೃತದಿಂದ ಇಂಗ್ಲಿಷಿಗೆ ಭಾಷಾಂತರ ಮಾಡಿದ್ದಾರೆ.
ಆ ಸಮಯಕ್ಕೆ ಭಾರತೀಯತೆಗೆ ಹೆಚ್ಚು ಆಪ್ತರಾಗಿದ್ದರು. ಆಗ ಅವರಿಗೆ ಬ್ರಿಟೀಷರಿಂದ ಭಾರತಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಹಾನಿಯ ಕುರಿತು ಅರ್ಥವಾಗತೊಡಗಿತು. ಅಲ್ಲಿಂದ ಮುಂದೆ ಅವರು ಭಾರತಕ್ಕೆ ರಾಜಕೀಯ ಸ್ವಾತಂತ್ರ ಕೊಡಿಸುವಲ್ಲಿಗೆ ಮುಂದಾದರು. ಅಲ್ಲಿಂದಲೇ ಸ್ನೇಹಿತ ಕೆ.ಜಿ. ದೇಶಪಾಂಡೆ ಅವರ ‘ಇಂದುಪ್ರಕಾಶ’ ಪತ್ರಿಕೆಯಲ್ಲಿ ಕ್ರಾಂತಿಕಾರಿ ಚಿಂತನೆಗಳನ್ನು, ಅತ್ಯಂತ ಖಾರವಾದ ಭಾಷೆಯಲ್ಲಿ ದೇಶಪ್ರೇಮ ಕುರಿತಾದ ಲೇಖನಗಳನ್ನು ‘ಹಳೆಯ ಲಾಂದ್ರಗಳಿಗೆ ಬದಲು ಹೊಸಲಾಂದ್ರಗಳು’ ಎಂಬ ಶೀರ್ಷಿಕೆಯಲ್ಲಿ ಬರೆಯಲಾರಂಭಿಸಿದ್ದರು. ಈ ಅವಧಿಯ ಕೊನೆಯ ಬಹುಪಾಲು ಸಮಯ ಅವರು ತಮ್ಮ ಕೆಲಸಕ್ಕೆ ರಜೆ ಹಾಕಿ ಸಾರ್ವಜನಿಕವಾಗಿ ತೋರಿಸಿಕೊಳ್ಳದೆ ಆಂತರಿಕವಾಗಿ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದರ ಪರಿಣಾಮ ಅವರು ತಮ್ಮ ಹುದ್ದೆಯಿಂದ ಉಚ್ಛಾಟನೆಗೊಂಡರು.
ಸ್ವಾತಂತ್ರ್ಯದ ಹೋರಾಟದಲ್ಲಿ ಅರವಿಂದರು
1905 ರ ಬೆಂಗಾಲ ವಿಭಜನೆಯ ಹೋರಾಟದ ಕಿಚ್ಚು ಅವರನ್ನು ಬರೋಡಾ ಕಾಲೇಜಿನ ಉದ್ಯೋಗಕ್ಕೆ ಇತಿಶ್ರೀ ಹಾಡಿ ಬಹಿರಂಗವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಸೂಕ್ತ ವೇದಿಕೆ ಆಯಿತು. 1906 ರಲ್ಲಿ ಅರವಿಂದ ಕೋಲ್ಕತ್ತೆಯಲ್ಲಿ ಹೊಸದಾಗಿ ಆರಂಭವಾದ ಬೆಂಗಾಲ್ ನ್ಯಾಷನಲ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇರಿಕೊಂಡರು. 1906 ಡಿಸೆಂಬರ್ 26 ರ ದಾದಾಬಾಯಿ ನವರೋಜಿ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಂಪೂರ್ಣ ಸ್ವತಂತ್ರವೇ ಕಾಂಗ್ರೇಸ್ ಧ್ಯೇಯ ಎಂದು ನಿರ್ಣಯವಾಗಲು ಅರವಿಂದರೇ ಕಾರಣ! ಸ್ವರಾಜ್, ಸ್ವದೇಶ ಮತ್ತು ರಾಷ್ಟ್ರೀಯ ಶಿಕ್ಷಣ ಎಂಬ ಧ್ಯೇಯಗಳ ಹುಟ್ಟಿಗೂ ಸಹಕರಿಸಿದರು. ಸುರೇಂದ್ರನಾಥ ಟಾಗೋರ್, ಜತಿನ್ ಬ್ಯಾನರ್ಜಿ ಅಂತಹ ಕ್ರಾಂತಿಕಾರಿಗಳ ಜತೆಗೂಡಿದ ಅರವಿಂದರು ‘ಅನುಶೀಲನಾ ಸಮಿತಿ’ಯಂತಹ ಯುವ ಸಂಘಟನೆಗಳ ರಚನೆಗೆ ಕಾರಣರಾದರು.
1907 ರಲ್ಲಿ ಮಂದಗಾಮಿ – ತೀವ್ರಗಾಮಿಗಳೆಂದು ಕಾಂಗ್ರೆಸ್ ಇಬ್ಭಾಗವಾದಾಗ ಅರವಿಂದರು ತಿಲಕರು ಮತ್ತಿತರರ ಜೊತೆ ತೀವ್ರಗಾಮಿಗಳ ಜೊತೆ ಸೇರಿದರು. ಪುಣೆ,ಮುಂಬಯಿ, ಬರೋಡಗಳಲ್ಲೆಲ್ಲ ತೀವ್ರವಾದ ಸಂಚಾರ ಮಾಡಿ ರಾಷ್ಟ್ರೀಯ ಹೋರಾಟಕ್ಕೆ ಅಲ್ಲಿಯ ಜನರನ್ನು ಬಡಿದೆಬ್ಬಿಸುವ ಕೆಲಸ ಮಾಡಿದರು. ‘ಬಂದೇಮಾತರಮ್’ ಎಂಬ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಆ ಪತ್ರಿಕೆಯ ಮೂಲಕ ಯುವಕರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸುತ್ತಿದ್ದರು. ಇವರ ಪತ್ರಿಕೆಯಿಂದ ಸ್ವಾತಂತ್ರ್ಯ ಸಂಗ್ರಾಮ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ಬ್ರಿಟೀಷರು ಇವರನ್ನು ರಾಜದ್ರೋಹದ ಆಪಾದನೆಯ ಮೇರೆಗೆ ಬಂಧಿಸಿದರು. ಕೆಲದಿನಗಳ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತಾದರೂ ಮತ್ತೆ 1908 ರ ಮೇ 4 ರಂದು ಆಲಿಪುರ ಬಾಂಬ್ ಮೊಕದ್ದಮೆಯಲ್ಲಿ ಸಿಲುಕಿಸಿ ಅವರನ್ನು ಮತ್ತೊಮ್ಮೆ ವರ್ಷಕ್ಕೂ ಅಧಿಕ ಸಮಯಗಳವರೆಗೆ ಸೆರೆಮನೆಗೆ ಕಳುಹಿಸಲಾಗಿತ್ತು. ಜೈಲು ಅವರಿಗೆ ಯೋಗಸಾಧನೆಯ ತಾಣವಾಯಿತು. ಅಲ್ಲಿ ಅವರು ಅನೇಕ ಆಧ್ಯಾತ್ಮಿಕ ಅನುಭೂತಿಗಳನ್ನು ಹೊಂದಿದರು. ವಿವೇಕಾನಂದರು ತಮ್ಮ ಜೊತೆ ನಿತ್ಯವೂ ಮಾತನಾಡುತ್ತಿದ್ದುದಾಗಿ ಅವರು ಹೇಳಿಕೊಳ್ಳುತ್ತಾರೆ. ಈ ಬಾರಿಯೂ ಯಾವುದೇ ಸಾಕ್ಷಾಧಾರಗಳು ಇಲ್ಲದ ಕಾರಣ ಅವರು ಬಿಡುಗಡೆಗೊಂಡರು. ಅಷ್ಟರಲ್ಲಿ ಸಂಘಟನೆ ಛಿದ್ರಛಿದ್ರವಾಗಿತ್ತು. ನಾಯಕರೆಲ್ಲ ಸೆರೆಮನೆ, ಗಡಿಪಾರು ಇನ್ನಿತರ ಕಾರಣಗಳಿಂದ ಹರಿದುಹಂಚಿಹೋಗಿದ್ದರು. ಸುಮಾರು ಒಂದು ವರ್ಷಗಳ ರಾಷ್ಟವಾದಿ ಹೋರಾಟವನ್ನು ಜೀವಂತವಾಗಿ ಇರಿಸುವ ನಿಟ್ಟಿನಲ್ಲಿ ಏಕಾಂಗಿಯಾಗಿ ಹೋರಾಡಿದರು.
ಹೊರಬಂದ ನಂತರ ಅರವಿಂದರು ಇಂಗ್ಲಿಷಿನಲ್ಲಿ ‘ಕರ್ಮಯೋಗಿ’, ಬಂಗಾಳಿಯಲ್ಲಿ ‘ಧರ್ಮ’ ಎಂಬ ಸಾಪ್ತಾಹಿಕಗಳನ್ನು ಆರಂಭಿಸಿದರು. ಅದರಲ್ಲಿ ಅನೇಕಾನೇಕ ಸ್ಪೂರ್ತಿದಾಯಕ ಬರಹಗಳು ಬಂದವು.
ನಿವೇದಿತಾ ಮತ್ತು ಅರವಿಂದರು
ಸ್ವಾಮಿ ವಿವೇಕಾನಂದರು ಮಹಾಸಮಾಧಿಯಾದ ನಂತರ ವಿವೇಕಾನಂದರ ಮಾನಸಪುತ್ರಿ ನಿವೇದಿತೆಯನ್ನು ಅರವಿಂದರು ಬರೋಡದಲ್ಲಿ ಭೇಟಿ ಮಾಡುತ್ತಾರೆ.1902 ಅಕ್ಟೋಬರ್ 20 ರಂದು ಬರೋಡಾ ರೈಲು ನಿಲ್ದಾಣದಲ್ಲಿ ಅರವಿಂದರು ರೈಲಿನಲ್ಲಿ ಬರುತ್ತಿದ್ದ ಸೋದರಿ ನಿವೇದಿತೆಗಾಗಿ ಕಾಯುತ್ತಿದ್ದರು. ಅವರನ್ನು ಸಾರೋಟಿನಲ್ಲಿ ರಾಜರ ಅತಿಥಿಗ್ರಹಕ್ಕೆ ಕರೆತಂದು ಚಹ ಸೇವಿಸುತ್ತಾ ಮಾತು ಪ್ರಾರಂಭವಾಗುತ್ತದೆ “ಥ್ಯಾಂಕ್ಯು ಮೇಡಮ್”
“ನನ್ನನ್ನು ಮೇಡಮ್ ಎಂದು ಕರೆಯಬೇಡಿ, ಮಿ. ಘೋಷ್.. ನಾನು ಸಹೋದರಿ, ಸಹೋದರಿ ನಿವೇದಿತಾ”
ಹೀಗೆ ದೇಶದ ಮಹಾನ್ ಚೇತನಗಳ ಮಾತು ಕತೆ ಪ್ರಾರಂಭವಾದದ್ದು.
ಮುಂದುವರೆದು,
ಸಹೋದರಿ, ನಿಮ್ಮ ‘ಕಾಳಿ ದಿ ಮದರ್’ ಓದಿದ್ದೇನೆ. ಅದರಲ್ಲಿ ನೀವು ನೇರವಾಗಿ ಯುವಜನರಿಗೆ ಕ್ರಾಂತಿಗೆ ಕರೆ ನೀಡಿದ್ದೀರಿ. ಅದ್ಭುತ ಪ್ರೇರಣಾತ್ಮಕ ಪುಸ್ತಕ’’.‘‘ಧನ್ಯವಾದಗಳು. ನೀವು ‘ಇಂದುಪ್ರಕಾಶ’ ಪತ್ರಿಕೆಯಲ್ಲಿ ಬರೆಯುವ ‘ಹಳೆಯ ಲಾಂದ್ರಗಳಿಗೆ ಬದಲು ಹೊಸ ಲಾಂದ್ರಗಳು’ ಎಂಬ ಲೇಖನಸರಣಿಯನ್ನು ಓದಿದ್ದೇನೆ. ತುನಬಾ ಒಳ್ಳೆಯ ವಿಮರ್ಶಾತ್ಮಕ ಲೇಖನಗಳು. ನಿರ್ಭೀತಿಯಿಂದ ಬರೆದಿದ್ದೀರಿ. ಅವುಗಳಲ್ಲಿ ಕಾಂಗ್ರೆಸ್ ಕುರಿತು ನೀವು ಬರೆದಿರುವ ಅಭಿಪ್ರಾಯಗಳಿಗೆ ನನ್ನ ಸಂಪೂರ್ಣ ಸಹಮತ ಇದೆ’’.
ಹೀಗೆ ಒಬ್ಬರಿಗೊಬ್ಬರು ಅಭಿನಂದನೆ ಸೂಚಿಸಿದರು.
“ನೀವು ಶಕ್ತಿಯ ಆರಾಧಕರೆಂದು ಕೇಳಿದ್ದೇನೆ” ಎಂದು ನಿವೇದಿತೆ ಒಮ್ಮೆ ಹೇಳುತ್ತಾಳೆ. ಅರವಿಂದರ ಗುಪ್ತ ಕಾರ್ಯಾಚರಣೆಗಳಲ್ಲಿ, ಸಂಘಟನೆಗಳಲ್ಲಿ ನಿವೇದಿತಾ ಸಕ್ರಿಯವಾಗಿ ಭಾಗವಹಿಸುತ್ತಾಳೆ. ಬ್ರೀಟಿಷರ ಕೈವಶವಾಗುವುದರಲ್ಲಿದ್ದ ಅರವಿಂದರನ್ನು ನಿವೇದಿತೆ ಪಾರು ಮಾಡಿದ್ದಾಳೆ. ಅರವಿಂದರ ಕೋರಿಕೆಯ ಮೇರೆಗೆ ‘ಕರ್ಮಯೋಗಿನಿ’ ಪತ್ರಿಕೆಗೆ ಸಂಪಾದಕತ್ವವನ್ನು ನಿರ್ವಹಿಸಿ ಸಂಪಾದಕೀಯಗಳನ್ನೂ ಬರೆದಿದ್ದಾಳೆ. ಅರವಿಂದರ ಜೊತೆ ಆಧ್ಯಾತ್ಮದ ವಿಷಯಗಳನ್ನು ಚರ್ಚಸಿದೇ ನಿವೇದಿತಾ ರಾಜಕೀಯವನ್ನೇ ಹೆಚ್ಚಾಗಿ ಚರ್ಚಿಸುತ್ತಿದ್ದಳು ಎಂದು ಅರವಿಂದರೇ ಹೇಳಿಕೊಳ್ಳುತ್ತಾರೆ.”
ತದನಂತರ ಅಂತರ್ಮುಖಿಗಳಾದ ಅರವಿಂದರು ಯೋಗ ಸಾಧನೆಯಲ್ಲಿ ತಮ್ಮ ಜೀವನ ಕಳೆಯುವ ನಿರ್ಧಾರ ಮಾಡಿ ಏಪ್ರಿಲ್ 4, 1910 ರಂದು ಪಾಂಡಿಚೇರಿಗೆ ಆಗಮಿಸಿದರು. ಅಲ್ಲಿಂದ ಮುಂದೆ ಅವರು ರಾಜಕೀಯದ ಕಡೆ ತಿರುಗಿಯೂ ನೋಡಲಿಲ್ಲ.
ನಾಲ್ಕು ವರ್ಷಗಳ ಯೋಗಸಾಧನೆಯ ನಂತರ ಅವರು ‘ಆರ್ಯ’ ಎಂಬ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿ ತಮ್ಮ ಕೃತಿಗಳಾದ ಗೀತಾಪ್ರಬಂಧ, ದಿವ್ಯ ಜೀವನ, ಮಾನವ ಚಕ್ರ, ಯೋಗ ಸಮನ್ವಯ ಹಾಗೂ ಹಲವಾರು ಪದ್ಯಗಳನ್ನು ಕಂತಿನಲ್ಲಿ ಪ್ರಕಟಿಸುತ್ತಿದ್ದರು. 1921 ರಲ್ಲಿ ಆರ್ಯ ಪತ್ರಿಕೆ ಸ್ಥಗಿತಗೊಂಡಿತು.
ನಂತರದಲ್ಲಿ ಕೇವಲ ನಾಲ್ಕೈದು ಶಿಷ್ಯರೊಂದಿಗೆ ಇದ್ದ ಅರವಿಂದರ ಬಳಿ ಆಧ್ಯಾತ್ಮಿಕ ಸಾಧನೆಗಾಗಿ ಬರುತ್ತಿದ್ದ ಜನರ ಸಂಖ್ಯೆ ಕ್ರಮೇಣ ಅಗಾಧವಾಯಿತು. ಅದೆಷ್ಟು ಹೆಚ್ಚಾಯಿತೆಂದರೆ ಆಧ್ಯಾತ್ಮಿಕ ಜೀವನಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿದವರ ಮಾರ್ಗದರ್ಶನಕ್ಕಾಗಿ ಸಾಧಕರ ಒಂದು ಸಮೂಹವನ್ನೇ ರಚಿಸಲಾಯಿತು. ಇದುವೇ ಶ್ರೀ ಅರವಿಂದಾಶ್ರಮಕ್ಕೆ ಬುನಾದಿಯಾಗಿದ್ದು ಇತಿಹಾಸ. 1924 ಎಪ್ರಿಲ್ 24 ರಂದು ಅರವಿಂದರ ಶಿಷ್ಯರಾಗಿದ್ದ ಮೇರಿ ರಿಚರ್ಡ್ಸ್ ಎಂಬ ಫ್ರಾನ್ಸ್ ಮಹಿಳೆ ಶ್ರೀ ಅರವಿಂದಾಶ್ರಮ ಸ್ಥಾಪನೆಗೆ ಕಾರಣಿಭೂತರಾದರು. ಯೋಗವನ್ನು ಹೊರತು ಪಡಿಸಿ ಭಾರತದ ಸಂಸ್ಕೃತಿ, ವೇದ, ಮಾನವತಾವಾದಗಳ ಕುರಿತಂತೆಯೂ ಬರೆಯತ್ತಿದ್ದರು. ಅಷ್ಟೇ ಅಲ್ಲದೇ ಅವರ ಸಮಗ್ರ ವಾಙಮಯವನ್ನು ಶ್ರೀ ಅರವಿಂದಾಶ್ರಮವು 35 ಸಂಪುಟಗಳಷ್ಟು ಬೃಹತ್ ಸಾಹಿತ್ಯವನ್ನು ಪ್ರಕಟಿಸಲಾಗಿದೆ. ಅವರ ‘ಸಾವಿತ್ರಿ’ ಎಂಬ 24,000 ಸಾಲುಗಳ ಮಹಾಕಾವ್ಯ ಒಂದು ಬೃಹತ್ತಾದ ಹಾಗೂ ಆಧ್ಯಾತ್ಮಿಕತೆಯ ಕುರಿತಂತೆ ಇರುವ ಅಷ್ಟೇ ಮಹತ್ತಾದ ಕೃತಿ. 1983 ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಅರವಿಂದರು ಮತ್ತೊಮ್ಮೆ 1950 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಆಗಿನ ರಾಷ್ಟ್ರಪತಿಗಳಾಗಿದ್ದ ಶ್ರೀ ರಾಜೇಂದ್ರ ಪ್ರಸಾದರು ಹಾಗೂ ಆಗಿನ ಪ್ರಧಾನಿಗಳಾಗಿದ್ದ ನೆಹರೂವರು ಅರವಿಂದರ ಕೃತಿಗಳನ್ನು ಮೆಚ್ಚಿದ್ದರು.
1950 ಡಿಸೆಂಬರ್ 5 ರಂದು ಅರವಿಂದರು ಮಹಾಸಮಾಧಿಯನ್ನು ಹೊಂದಿದರು. ಅರವಿಂದರ ಹೆಸರಲ್ಲಿರುವ ಪಾಂಡಿಚೆರಿಯ ‘ಅರವಿಂದ ಆಶ್ರಮ’ ಅವರ ಚಿಂತನೆಗಳನ್ನು ಬಿತ್ತರಿಸುತ್ತಿದ್ದು, ಈ ಮೂಲಕ ಅರವಿಂದರು ಜನಮಾನಸದಲ್ಲಿ ಜೀವಂತವಾಗಿ ಉಳಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.