ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದೇಶಿತ ‘ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ’ ಯಲ್ಲಿ ಹಿಂದೂ ಜಾತಿಗಳನ್ನು ‘ಕ್ರೈಸ್ತ’ ರೆಂದು ಗುರುತಿಸುವ ಹುನ್ನಾರವನ್ನು ಎಲ್ಲ ಸಮಾಜಗಳ ಮಠಾಧೀಶರು, ಜಾತಿವಾರು ಸಂಘಟನೆಗಳ ಮುಖಂಡರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಮನವಿ ಮಾಡಿದ್ದಾರೆ.
ಮೌರ್ಯ ಸರ್ಕಲ್ ನಲ್ಲಿರುವ ಮೌರ್ಯ ಹೋಟೆಲ್ ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಹಿಂದೆ 2014- 15 ರಲ್ಲಿ ಕರ್ನಾಟಕ ಸರ್ಕಾರ ನ್ಯಾ.ಕಾಂತರಾಜು ಅವರ ನೇತೃತ್ವದಲ್ಲಿ ಜಾತಿ ಸಮೀಕ್ಷೆ ನಡೆಸಿತ್ತು. ಆ ಸಮೀಕ್ಷೆಯ ವರದಿ, ದತ್ತಾಂಶಗಳು ಅನ್ಯಾನ್ಯ ಕಾರಣಗಳಿಂದಾಗಿ ಸ್ವೀಕೃತವಾಗಲಿಲ್ಲ. ಕೊನೆಗೆ ಕರ್ನಾಟಕ ಸರ್ಕಾರವೇ ಕಾಂತರಾಜು ವರದಿಯನ್ನು ಕೈಬಿಟ್ಟಿರುವುದಾಗಿ ಘೋಷಿಸಿತು. ಮಾತ್ರವಲ್ಲ ಇನ್ನೊಂದು ಜಾತಿ ಸಮೀಕ್ಷೆ ಮಾಡುವುದಾಗಿ ಹೇಳಿತು. ಸರ್ಕಾರದ ಪ್ರಕಟಣೆಯ ಪ್ರಕಾರ ಇದೇ ಸೆ.22ರಿಂದ 15ದಿನಗಳ ಕಾಲ ದಸರಾ/ ನವರಾತ್ರಿಯ ಸಂದರ್ಭದಲ್ಲಿ ಈ ಸಮೀಕ್ಷೆ ನಡೆಯಲಿದೆ. ಹಿಂದುಳಿದ ಆಯೋಗ ಸಮೀಕ್ಷೆಗೆ ಒಳಪಡಲಿರುವ 1400ಕ್ಕೂ ಮಿಕ್ಕ ಜಾತಿ / ಉಪಜಾತಿಗಳ ಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಿದೆ ಎಂದು ಗಮನ ಸೆಳೆದರು.
ಸರ್ಕಾರದ ಈ ಜಾತಿಗಳ ಪಟ್ಟಿಯಲ್ಲಿ ಅನಧಿಕೃತವಾಗಿ ಹಿಂದು ಜಾತಿಗಳನ್ನು ಕ್ರೈಸ್ತ ಜಾತಿಗಳೆಂದು ಗುರುತಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಅನೇಕ ಜಾತಿಗಳ ಸಂಘಟನೆಯವರು ಹಿಂದುಳಿದ ಆಯೋಗಕ್ಕೆ ಪತ್ರ ಬರೆದು ತಮ್ಮ ಜಾತಿಗೆ ಕ್ರೈಸ್ತ ಹಣೆಪಟ್ಟಿ ಕಟ್ಟಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಿವೆ. ಆದರೆ , ಸರ್ಕಾರವಾಗಲಿ, ಆಯೋಗವಾಗಲಿ ತನ್ನ ನಿಲುವನ್ನು ಬದಲಿಸಿಲ್ಲ. ಹೀಗೆ ಹಿಂದೂ ಜಾತಿಗಳನ್ನು ಕ್ರೈಸ್ತರನ್ನಾಗಿಸುವ ಹುನ್ನಾರಕ್ಕೆ 50ಕ್ಕೂ ಹೆಚ್ಚು ಪ್ರಮುಖ ದಲಿತ, ಹಿಂದುಳಿದ ಮತ್ತು ಸವರ್ಣೀಯ ಜಾತಿಗಳೂ ಸೇರಿವೆ ಎಂದು ಅವರು ವಿವರಿಸಿದರು. ಏಕಾಏಕಿ ಲಿಂಗಾಯತ ಕ್ರೈಸ್ತ, ಒಕ್ಕಲಿಗ ಕ್ರೈಸ್ತ, ಕುರುಬ ಕ್ರೈಸ್ತ, ನೇಕಾರ ಕ್ರೈಸ್ತ, ಮಡಿವಾಳ ಕ್ರೈಸ್ತ, ಬಿಲ್ಲವ ಕ್ರೈಸ್ತ, ಕುಂಬಾರ ಕ್ರೈಸ್ತ, ಮಾದಿಗ ಕ್ರೈಸ್ತ, ಹೊಲೆಯ ಕ್ರೈಸ್ತ, ಬಂಜಾರ ಕ್ರೈಸ್ತ, ವಡ್ಡ ಕ್ರೈಸ್ತ -ಹೀಗೆ ಹೊಸ ಕ್ರೈಸ್ತ ಜಾತಿಗಳು ಹುಟ್ಟಿಕೊಳ್ಳಲು ಏನು ಕಾರಣ? ಇದು ಗಂಭೀರ ಚರ್ಚೆಗೆ, ತಳಮಟ್ಟದ ಜನಜಾಗೃತಿಗೆ ಕಾರಣವಾಗಬೇಕು ಎಂದು ತಿಳಿಸಿದರು.
ನಮ್ಮ ಜಾತಿ ಸಮುದಾಯಗಳನ್ನು ಒಡೆಯುವ ಷಡ್ಯಂತ್ರ ಇದರ ಹಿಂದೆ ಇದೆ. ನಮ್ಮ ಜಾತಿಗಳೊಳಗೆ ಮತಾಂತರಕ್ಕೆ ಕುಮ್ಮಕ್ಕು ಕೊಟ್ಟು ನಮ್ಮನ್ನು ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ಅಡಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕ್ರೈಸ್ತ ಹೆಸರಿನಲ್ಲಿ ಮತಾಂತರಿತರು ನಮ್ಮ ಜಾತಿಗಳೊಳಗೆ ನುಸುಳಿ ನಮ್ಮ ಪಾಲಿನ ಮೀಸಲಾತಿಯನ್ನು ಕಬಳಿಸುವ ಹುನ್ನಾರವಿದೆ. ಸರ್ಕಾರದ ಈ ಪಟ್ಟಿಯಲ್ಲಿ ಪ್ರೊಟೆಸ್ಟೆಂಟ್, ಕ್ಯಾಥೋಲಿಕ್ ಇತ್ಯಾದಿ ಮೂಲ ಕ್ರೈಸ್ತ ಜಾತಿಗಳೇ ಇಲ್ಲ ಅವರಿಗೆಲ್ಲ ಕೇವಲ ಕ್ರೈಸ್ತರೆಂದು ಗುರುತಿಸಿಕೊಳ್ಳಲು ಅವಕಾಶ ಒದಗಿಸಲಾಗಿದೆ. ಸರ್ಕಾರದ ಈ ದ್ವಂದ್ವ ನೀತಿಯ ರಾಜಕಾರಣವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ವಿನಂತಿಸಿದರು.
ನಾವು ನಮ್ಮ ಜಾತಿ, ಉಪಜಾತಿಗಳ ಸಂಘಟನೆಯ ತುರ್ತು ಸಭೆ ನಡೆಸಿ ಖಂಡನಾ ನಿರ್ಣಯ ಕೈಗೊಳ್ಳಬೇಕು. ತಕ್ಷಣ ಸಮೀಕ್ಷೆಯ ಜವಾಬ್ದಾರಿ ಹೊತ್ತಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಕ್ರೈಸ್ತ ಗೊಂದಲ ಸರಿಪಡಿಸಿ ನಂತರ ಸಮೀಕ್ಷೆ ಆರಂಭಿಸುವಂತೆ ಆಗ್ರಹ ಪತ್ರ ಬರೆಯಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿ ನಡೆಸಿ ಹಕ್ಕೊತ್ತಾಯ ಮಂಡಿಸಿ ಸರ್ಕಾರದ ಗಮನವನ್ನು ಸೆಳೆಯಬೇಕು. ಎಲ್ಲ ಮಠಾಧೀಶರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಅವರ ಸಂದೇಶವೂ ಮಾಧ್ಯಮಗಳಿಗೆ ರವಾನೆಯಾಗಬೇಕಿದೆ. ಜನಜಾಗೃತಿಗೆ ಸಾಮಾಜಿಕ ಜಾಲತಾಣವನ್ನು ವ್ಯಾಪಕವಾಗಿ ಬಳಸಬೇಕು ಎಂದ ಅವರು, ಪ್ರಮುಖ ಕೇಂದ್ರಗಳಲ್ಲಿ ಎಲ್ಲ ಜಾತಿ, ಸಮುದಾಯಗಳ ಪ್ರಮುಖರ, ಮಠಾಧೀಶರ ಪಾಲ್ಗೊಳ್ಳುವಿಕೆಯಲ್ಲಿ ದುಂಡು ಮೇಜಿನ ಸಭೆಯನ್ನು ಸಂಘಟಿಸಲಿದ್ದೇವೆ ಎಂದು ತಿಳಿಸಿದರು.
ಸರ್ಕಾರ ತನ್ನ ನಿಲುವನ್ನು ಬದಲಿಸಲು ಒಪ್ಪದಿದ್ದರೆ ಮತ್ತು ಬಗ್ಗಲಿಲ್ಲವಾದರೆ ಹೋರಾಟದ ಹಾದಿಗೂ ಸಜ್ಜಾಗಲಿದ್ದೇವೆ ಎಂದು ಅವರು ಎಚ್ಚರಿಸಿದರು.
ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಯಳವ ಸಮಾಜದ ಮುಖಂಡ ಗೋವಿಂದರಾಜು, ಮಡಿವಾಳ ಸಮುದಾಯದ ರಾಜ್ಯ ಸಂಚಾಲಕ ಅಂಜಿರಪ್ಪ, ಮರಾಠ ಸಮುದಾಯದ ರಾಜ್ಯ ಸಂಚಾಲಕ ಗಣೇಶ್ ರಾವ್ ಕೇಸರ್ಕರ್, ತಿಗಳರ ಸಮುದಾಯದ ರಾಜ್ಯ ಸಂಚಾಲಕ ಶ್ರೀಧರ್, ನೇಕಾರರ ಒಕ್ಕೂಟದ ರಾಜ್ಯ ಅಧ್ಯಕ್ಷ ಸೋಮಶೇಖರ್ ಮತ್ತು ಉಪ್ಪಾರ ಸಮಾಜದ ಮುಖಂಡ ನಾಗರಾಜು, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.