ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ತಿಳಿದು ಮಾತನಾಡುವವರಿಗಿಂತ ತಿಳಿಯದೆ ಮಾತನಾಡುವವರೇ ಅಧಿಕ. ಸಂಘವನ್ನು ಸರಿಯಾಗಿ ಅರ್ಥಮಾಡಿಕೊಂಡ ವ್ಯಕ್ತಿ ಅದರ ಬಗ್ಗೆ ಎಂದಿಗೂ ಋಣಾತ್ಮಕವಾಗಿ ಮಾತನಾಡಲಾರ. ಇದಕ್ಕೆ ಉತ್ತಮ ಉದಾಹರಣೆ ಲಕ್ನೋ ಮೂಲದ ಪತ್ರಕರ್ತ ಜಾಫರ್ ಇರ್ಶಾದ್. ಸಂಘದ ಬಗೆಗೆ ತನಗಿದ್ದ ಅನಿಸಿಕೆ ರಾತೋರಾತ್ರಿ ಹೇಗೆ ಬದಲಾಯಿತು ಎಂಬುದನ್ನು ಅವರು ಸೊಗಸಾಗಿ ವಿವರಿಸಿದ್ದಾರೆ.
‘ಒಬ್ಬ ಪತ್ರಕರ್ತನಾಗಿ ನಾನು ಆರ್ಎಸ್ಎಸ್ನ ಹಲವಾರು ಕಾರ್ಯಗಳ ಬಗ್ಗೆ ವರದಿ ಮಾಡಿದ್ದೇನೆ. ಆದರೆ ಅದರ ಸಿದ್ಧಾಂತ, ಚಟುವಟಿಕೆಗಳ ಬಗ್ಗೆ ನನಗೆ ಹೆಚ್ಚೇನೂ ತಿಳಿದಿರಲಿಲ್ಲ. ಇತ್ತೀಚಿಗೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ನಾಗ್ಪುರಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯೇ ನಡೆಯಿತು. ಅಚ್ಚರಿಯೆಂದರೆ ಜನರಿಗೆ ಸಂಘದ ಕಾರ್ಯದ ಬಗ್ಗೆಯಾಗಲಿ, ನಿಸ್ವಾರ್ಥ ಸೇವೆಯ ಬಗ್ಗೆಯಾಗಲಿ ಏನೂ ತಿಳಿದಿಲ್ಲ. ನಾನು ಕೂಡ ಇವರಲೊಬ್ಬ. ಇದರ ಬಗ್ಗೆ ನಿಮಗೆ ತಿಳಿಯಪಡಿಸುತ್ತೇನೆ.
ನಾನು ನ್ಯೂಸ್ಪೇಪರ್ ಏಜೆನ್ಸಿಯಲ್ಲಿದ್ದಾಗ ನನ್ನನ್ನು ಕಾನ್ಪುರಕ್ಕೆ ಪ್ರಧಾನ ಕರೆಸ್ಪಾಂಡೆನ್ಸ್ ಆಗಿ ನೇಮಕ ಮಾಡಲಾಯಿತು. 2011ರ ಜುಲೈ 10ರಂದು ನನ್ನ ಸಂಪಾದಕರು ನನಗೆ ಕರೆ ಮಾಡಿ ಫೆತೇಪುರದ ಮಾಲ್ವ ಸಮೀಪದಲ್ಲಿ ದೊಡ್ಡ ರೈಲು ಅಪಘಾತವಾಗಿದೆ ಎಂದು ತಿಳಿಸಿದರು. ತಕ್ಷಣ ಸುದ್ದಿಯನ್ನು ಖಚಿತಪಡಿಸಿಕೊಂಡು ಆ ಜಾಗಕ್ಕೆ ಧಾವಿಸಿದೆ.
ಅಲ್ಲಿ ನಾನೇನು ನೋಡಿದೆನೋ ಅದು ನನ್ನ ಅಭಿಪ್ರಾಯವನ್ನು ಶಾಶ್ವತವಾಗಿ ಬದಲಾಯಿಸಿಬಿಟ್ಟಿತು
ಘಟನಾ ಸ್ಥಳಕ್ಕೆ ಧಾವಿಸಿದಾಗ ಅಪಘಾತದ ಭೀಕರತೆ ನನ್ನನ್ನು ಒಂದು ಕ್ಷಣ ಸ್ತಬ್ಧಗೊಳಿಸಿತು. ಬಳಿಕ ಸುಧಾರಿಸಿಕೊಂಡು ವರದಿ ಮಾಡಲಾರಂಭಿಸಿದೆ. ಅಲ್ಲಿ ವಿಶೇಷವಾದುದೇನೋ ನನಗೆ ಕಾಣಿಸಿತು. ಬಿಳಿ ಬಟ್ಟೆ, ಖಾಕಿ ಶಾರ್ಟ್ಸ್ ಧರಿಸಿದ ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ಮೃತದೇಹಗಳನ್ನು ರೈಲಿನಿಂದ ಹೊರಕ್ಕೆ ತಂದು ಅದನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಶವಪೆಟ್ಟಿಗೆಯಲ್ಲಿ ಇಡುತ್ತಿದ್ದರು. ಇವರು ಯಾರಾಗಿರಬಹುದು ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಹತ್ತಿರ ಹೋಗಿ ವಿಚಾರಿಸಿದೆ, ಆದರೆ ಅವರಿಂದ ಉತ್ತರ ಬರಲಿಲ್ಲ. ಅವರು ತಮ್ಮಷ್ಟಕ್ಕೆ ಕಾರ್ಯನಿರ್ವಹಿಸುತ್ತಿದ್ದರು.
ಬಳಿಕ ಅದೇ ವ್ಯಕ್ತಿಗಳು ರೈಲಿನ ಇತರ ಪ್ರಯಾಣಿಕರಿಗೆ, ಗಾಯಾಳುಗಳಿಗೆ, ಮೃತಪಟ್ಟವರ ಸಂಬಂಧಿಗಳಿಗೆ ಚಹಾ, ಬಿಸ್ಕತ್ ಹಂಚುತ್ತಿದ್ದರು. ನನಗೂ ನೀಡಿದರು. ಚಹಾ ಕುಡಿದ ನಾನು, ಮಾತನಾಡದೆ ಇಷ್ಟೊಂದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇವರು ಯಾರೆಂದು ತಿಳಿದುಕೊಳ್ಳಬೇಕು ಎಂಬ ದೃಢ ನಿರ್ಧಾರ ಮಾಡಿದೆ.
ಒಬ್ಬ ಸ್ವಯಂಸೇವಕನ ಬೆನ್ನತ್ತಿ ಅವರ ಪರಿಚಯವನ್ನು ಕೇಳಿದೆ. ನಿರ್ಲಿಪ್ತ ಮುಖಭಾವದೊಂದಿಗೆ ನನ್ನತ್ತ ನೋಡಿದ ಅವರು, ‘ನಿಮಗೆ ಇನ್ನೊಂದು ಕಪ್ ಚಹಾ ಬೇಕಾದರೆ ಅಶ್ವಥ ಮರದ ಬಳಿ ಬನ್ನಿ’ ಎಂದರು. ನನಗೆ ಚಹಾ ಬೇಕಾಗಿರಲಿಲ್ಲ. ಆ ನಿಸ್ವಾರ್ಥ ಸೇವಕರು ಯಾರು ಎಂಬುದಷ್ಟೇ ಬೇಕಿತ್ತು. ಮರದ ಬಳಿ ತೆರಳಿದೆ. ಅಲ್ಲಿ ಕುರ್ತಾ ಪೈಜಾಮ ತೊಟ್ಟ ಹಿರಿಯರೊಬ್ಬರು ಮರದ ಕೆಳಗಿದ್ದ ಜನರಿಗೆ ಕೆಲವೊಂದು ನಿರ್ದೇಶನಗಳನ್ನು ನೀಡುತ್ತಿದ್ದರು, ಅವರ ಬಳಿ ಸ್ವಯಂಸೇವಕರ ಬಗ್ಗೆ ಕೇಳಿದೆ. ನನ್ನನ್ನು ನೋಡಿ ಒಂದು ಕ್ಷಣ ನಕ್ಕ ಅವರು, ಬಳಿಕ ತಮ್ಮ ಕಾರ್ಯದಲ್ಲಿ ತಲ್ಲೀನರಾದರು.
ಪ್ರಶ್ನೆಗೆ ಉತ್ತರ ಸಿಗಲಿಲ್ಲ, ನನ್ನ ವರದಿಯನ್ನು ಮುಂದುವರೆಸಿದೆ. ಕೆಲಹೊತ್ತಿನ ಬಳಿಕ ಅದೇ ಹಿರಿಯ ವ್ಯಕ್ತಿ ನನ್ನ ಬಳಿ ಬಂದು ಪ್ಲಾಸ್ಟಿಕ್ ಬ್ಯಾಗ್ವೊಂದನ್ನು ನೀಡಿದರು. ಇದರಲ್ಲೇನಿದೆ ಎಂದು ಕೇಳಿದೆ. ’ನೀನು ಇಲ್ಲಿ ಸುಮಾರು ಹೊತ್ತಿನಿಂದ ವರದಿ ಮಾಡುತ್ತಿದ್ದೀಯ, ಇದರಲ್ಲಿ ನಾಲ್ಕು ಚಪಾತಿ, ಪಲ್ಯ ಇದೆ. ಮೊದಲು ಇದನ್ನು ತಿನ್ನು’ ಎಂದರು. ಈ ಬಾರಿ ದೃಢ ನಿರ್ಧಾರ ಮಾಡಿದೆ. ನೀವು ನಿಮ್ಮ ಗುರುತನ್ನು ಹೇಳದ ಹೊರತು ನಾನು ಇದನ್ನು ತಿನ್ನಲಾರೆ ಅಂದೆ. ನಾನು ನನ್ನನ್ನು ಜಾಫರ್ ಇರ್ಶಾದ್ ಎಂದು ಪರಿಚಯಿಸಿಕೊಂಡೆ. ಅವರು ನಾವು ಆರ್ಎಸ್ಎಸ್ ಸ್ವಯಂಸೇವಕರು ಎಂದರು. ಒಂದು ಕ್ಷಣ ಅವಕ್ಕಾದೆ. ಸಂಘದಲ್ಲಿರುವವರಿಗೆ ಇಂತಹ ಮಾನವೀಯ ಮುಖ ಇದೆ ಎಂಬುದು ಮೊದಲ ಬಾರಿಗೆ ನನಗೆ ಅರಿವಾಯಿತು, ಇದು ನನಗೆ ಹೊಸತೆನಿಸಿತು!
ನಿಮ್ಮ ಸೇವೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ನೀಡಿ, ಇದರಿಂದ ನಿಮ್ಮ ಸೇವೆ ನನ್ನ ಮುಂದಿನ ಕಥೆಯ ಭಾಗವಾಗುತ್ತದೆ ಎಂದು ಅವರಲ್ಲಿ ವಿನಂತಿಸಿದೆ. ಅವರು ಆಗಲ್ಲ ಎಂದರು. ನಾನು ಹಠ ಮಾಡಿದೆ. ಆದರೆ ಯಾರಿಗೂ ತಿಳಿಸಬಾರದು ಎಂಬ ಷರತ್ತಿನೊಂದಿಗೆ ಅವರ ಕೆಲವೊಂದು ಸಿದ್ಧತೆಗಳ ಬಗ್ಗೆ ತಿಳಿಸಿದರು. ಸಂತ್ರಸ್ಥರಿಗೆ ಚಹಾ ಮತ್ತು ಆಹಾರವನ್ನು ತಯಾರಿಸಿದ್ದು ನಮ್ಮ ಮನೆಯ ಮಹಿಳೆಯರೇ ಎಂದರು. ಶವ ಸುತ್ತಲು ಇಲ್ಲಿಗೆ ತರಲಾದ ಬಿಳಿ ಬಟ್ಟೆಯನ್ನು ಬಟ್ಟೆ ಅಂಗಡಿ ಹೊಂದಿರುವ ಸಂಘದ ಕಾರ್ಯಕರ್ತ ನೀಡಿದ್ದಾನೆ ಎಂದರು. ಈ ವಿಷಯವನ್ನು ವರದಿ ಮಾಡಬೇಡಿ ಎಂದು ಪುನರುಚ್ಚರಿಸಿ ಅವರು ಸ್ಥಳದಿಂದ ತೆರಳಿದರು.
7 ವರ್ಷವಾಯಿತು, ಆ ಘಟನೆ ಆರ್ಎಸ್ಎಸ್ನ ಮಾನವೀಯ, ಪ್ರೇಮದ ಮುಖವನ್ನು ನನಗೆ ತೋರಿಸಿತು. ಒಂದು ವರದಿಯಾಗಿ ಅಲ್ಲ, ಮನುಷ್ಯನಾಗಿ ನನಗಿದು ಅರ್ಥವಾಯಿತು. ಹೌದು! ಸ್ವಯಂಸೇವಕರು ಮಾಡುವುದು ಕೇವಲ ನಿಸ್ವಾರ್ಥ ಸೇವೆ’.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.