ಪ್ರಜಾರಕ್ಷಕ ಹಿಂದೂ ಸಾಮ್ರಾಟ, ರಾಷ್ಟ್ರಪ್ರೇಮಿ ಶಿವಾಜಿ ಮಹಾರಾಜರು ಫೆಬ್ರವರಿ 19, 1627ರಂದು ಶಿವನೇರಿದುರ್ಗದಲ್ಲಿ ಜನಿಸಿದರು. ತಂದೆ ಷಹಾಜಿ ಬೋಸ್ಲೆ – ತಾಯಿ ಜೀಜಾಬಾಯಿ. ತಂದೆ ಬಿಜಾಪುರ ಸುಲ್ತಾನನ ಹತ್ತಿರ ಉನ್ನತ ಹುದ್ದೆಯಲ್ಲಿದ್ದರು. ತಾಯಿ ಹೇಳುವ ಪೌರಾಣಿಕ ವೀರಾವೇಶದ ಕತೆಯನ್ನು ಕೇಳುತ್ತ ಬೆಳೆದ ಧೀರ. ದೊಡ್ಡವನಾದ ಮೇಲೆ ದಾದಾಜಿ ಕೊಂಡದೇವನಿಂದ ಶಸ್ತ್ರವಿದ್ಯೆಯನ್ನು ಕಲಿತ. ತರುಣವೀರನ ಮನಸ್ಸನ್ನು ಜಾಗೃತಗೊಳಿಸಿದವರೆಂದರೆ ಸಮರ್ಥ ರಾಮದಾಸರು.
ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆಯನ್ನು ಸಾರವತ್ತಾಗಿ ಕಣ್ಣಿಗೆ ಕಟ್ಟಿಸಬಲ್ಲ ಒಂದು ಶಬ್ದ ಇದೆ: ‘ಸ್ವರಾಜ್ಯ ಸಂಸ್ಥಾಪನೆ’, ‘ಸ್ವರಾಜ್ಯ ಸಂಸ್ಥಾಪಕ’ – ಇದೇ ಶ್ರೀ ಶಿವ ಛತ್ರಪತಿಗೆ ಒಪ್ಪುವ ಎಲ್ಲಕ್ಕಿಂತ ಯಥಾರ್ಥವಾದ ಬಿರುದು.
ವಾಸ್ತವಿಕ ಸಂಗತಿ ಎಂದರೆ ‘ಸ್ವರಾಜ್ಯ’ ಶಬ್ದವನ್ನು ಬಹುಶಃ ಮೊಟ್ಟಮೊದಲಿಗೆ ಪ್ರಯೋಗ ಮಾಡಿದವರೇ ಶಿವಾಜಿ ಮಹಾರಾಜರು. ಅದೂ ಸಹ ತಮ್ಮ ಕೇವಲ 16 ನೆಯ ವರ್ಷದ ಎಳೆವಯಸ್ಸಿನಲ್ಲಿ. ತಮ್ಮ ಕಿಶೋರ ಸಂಗಡಿಗ ದಾದಾಜಿ ನರಸ ಪ್ರಭುವಿಗೆ ಶಿವಛತ್ರಪತಿಯು ಬರೆದ ಪತ್ರದಲ್ಲಿ ಅದರ ಸ್ಪಷ್ಟ ಉಲ್ಲೇಖವಿದೆ. ಆ ಚರಿತ್ರಾರ್ಹ ಪತ್ರದ, ಸಂದರ್ಭ ಹೀಗಿದೆ. ಮಾವಳ ಪ್ರಾಂತದ ಕೆಲವು ಜಹಗೀರುದಾರರು ತನಗೆ ಸಲ್ಲುತ್ತಿದ್ದ ಕಂದಾಯವನ್ನು ನಿಲ್ಲಿಸಿ, ‘ಬಂಡಖೋರ’ ಬಾಲಕ ಶಿವಾಜಿಗೆ ಸಲ್ಲಿಸುತ್ತಿದ್ಧಾರೆಂಬ ಸುದ್ದಿ ಕೇಳಿ ಬಿಜಾಪುರದ ಸುಲ್ತಾನ ಕೆರಳಿ ಕೆಂಡವಾದ. ಆ ಎಲ್ಲ ಜಹಗೀರುದಾರರಿಗೆ ಅವನು ಒಂದು ಉಗ್ರ ಫರ್ಮಾನು ಹೊರಡಿಸಿದ. ಫರ್ಮಾನು ತಲುಪಿದವರ ಪೈಕಿ ದಾದಾಜಿ ನರಸಪ್ರಭುವಿನ ತಂದೆಯೂ ಒಬ್ಬ. ಆ ಪತ್ರವನ್ನು ದಾದಾಜಿ ಶಿವಾಜಿಗೆ ಕಳಿಸಿಕೊಟ್ಟ. ಅದಕ್ಕೆ ಉತ್ತರವಾಗಿ ಶಿವಾಜಿ ಬರೆದ ಪತ್ರ ಅದು. ಅದರ ಒಕ್ಕಣಿಕೆ ಹೀಗಿದೆ : ”ನಾವು ಬಂಡುಹೂಡಿದ್ದೇವೆಂಬುದು ನಿಜವಲ್ಲ. ಶ್ರೀ ರೋಹಿರೇಶ್ವರನು ಇದುವರೆಗೂ ನಮಗೆ ಯಶಸ್ಸು ನೀಡಿದ್ದಾನೆ. ಮುಂದಕ್ಕೂ ಹಿಂದವೀ ಸ್ವರಾಜ್ಯದ ಮನೋರಥವನ್ನು ಅವನೇ ಪೂರ್ಣಗೊಳಿಸುತ್ತಾನೆ. ಶ್ರೀ ರೋಹಿರೇಶ್ವರನ ಸಮ್ಮುಖದಲ್ಲೇ ನಾವೆಲ್ಲರೂ ಪ್ರತಿಜ್ಞಾಬದ್ಧರಾಗಿದ್ದೇವೆ. ಈ ರಾಜ್ಯ ನಿರ್ಮಾಣವಾಗಬೇಕೆಂದು ಭಗವಂತನ ಮನಸ್ಸಿನಲ್ಲೂ ಇಚ್ಛೆ ಇದೆ. ತಂದೆಯವರಿಗೆ ಧೈರ್ಯ ಹೇಳುವುದು.” ಆ ಪತ್ರ ಬರೆಯುವುದಕ್ಕೂ ಮೂರು ನಾಲ್ಕು ವರ್ಷ ಮುಂಚಿತವಾಗಿಯೇ ‘ಹಿಂದವೀ ಸ್ವರಾಜ್ಯ’ದ ಶಪಥವನ್ನು ಬಾಲಕ ಶಿವಾಜಿ ತೊಟ್ಟಿದ್ದ.
ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಆಂತಹ ಅಪ್ರತಿಮ ಕಲ್ಪನಾ ಸಾಮರ್ಥ್ಯ , ಧ್ಯೇಯದ ನಿರ್ಧಾರ, ಅದರ ಸಿದ್ಧಿಯಲ್ಲಿ ಸಂದೇಹಾತೀತವಾದ ನಂಬಿಕೆಗಳನ್ನೂ ತಾಳಿದ್ದ ಶಿವಾಜಿ ‘ಸ್ವರಾಜ್ಯ ಮಂತ್ರದ ದ್ರಷ್ಟಾರ ‘ಎಂದರೆ ಅದು ಅವನ ಯಥೋಚಿತ ವರ್ಣನೆಯೇ ಆದೀತು.
ದೇವಿ ಅಂಬಾಭವಾನಿಯಿಂದ ಅನುಗ್ರಹಿತನಾದ ಶಿವಾಜಿ 19ನೇ ವಯಸ್ಸಿನಲ್ಲಿಯೇ ತೋರಣದುರ್ಗವನ್ನು ವಶಪಡಿಸಿಕೊಂಡನು. ನಂತರ ರಾಯಗಢ, ಚಾಕಣ್, ಸಿಂಹಗಢ, ಪುರಂದರಗಢವನ್ನು ಗೆದ್ದನು. ಗೆದ್ದ ಪ್ರದೇಶಗಳು ಬಿಜಾಪುರ ಸುಲ್ತಾನನ ಸಾಮ್ರಾಜ್ಯದಲ್ಲಿದ್ದವು. ಹೀಗಾಗಿ ಕೋಪಗೊಂಡ ಸುಲ್ತಾನ ಶಿವಾಜಿಯನ್ನು ನಿಗ್ರಹಿಸಲು ಕ್ರಿ. ಶ. 1659ರಲ್ಲಿ ಅಫಜಲಖಾನನನ್ನು ಕಳುಹಿಸಿದ. ಅಫಜಲಖಾನ ಪ್ರತಾಪಗಢದ ಬಳಿ ತನ್ನ ದೊಡ್ಡ ಸೈನ್ಯದೊಂದಿಗೆ ಬಂದು ವಾಯಿ ಎಂಬಲ್ಲಿ ಸಂಧಾನಕ್ಕಾಗಿ ಕರೆದ. ಶಿವಾಜಿಯನ್ನು ಉಪಾಯದಿಂದ ಮುಗಿಸುವ ಕುಕೃತ್ಯ ಖಾನ್ದಾಗಿತ್ತು. ಮಾತುಕತೆ ಮುಗಿದ ನಂತರ ಆಲಂಗಿಸಿ ತನ್ನ ಖಡ್ಗದಿಂದ ಬೆನ್ನಿಗಿರಿಯಬೇಕೆನ್ನುವಷ್ಟರಲ್ಲಿ ಒಳಸಂಚನ್ನು ಅರಿತಿದ್ದ ಶಿವಾಜಿ ಗುಪ್ತವಾಗಿ ಧರಿಸಿದ ಹುಲಿಯುಗುರಿನಿಂದ ವೈರಿಯ ಹೊಟ್ಟೆಯನ್ನು ಬಗೆದು ನೆಲಕ್ಕೆ ಕೆಡವಿದ್ದ. ಶಿವಾಜಿಯು ಬಹು ಯಶಸ್ವಿ ರಾಜನಾಗಲು ಅರ್ಹ ಗುಣಗಳನ್ನು ಹೊಂದಿದ್ದ ಮತ್ತು ಅವನಲ್ಲಿ ಗೆರಿಲ್ಲಾ ತಂತ್ರಯುದ್ಧ ಪರಿಣಿತ ಸೈನ್ಯವಿತ್ತು, ಅದರಿಂದ ಆತ ಒಂದೊಂದೇ ಕೋಟೆಗಳನ್ನು ವಶಪಡಿಸಿಕೊಳ್ಳುತ್ತ ಬಂದ. ಇದು ಔರಂಗ್ಜೇಬ್ನಿಗೆ ನುಂಗಲಾರದ ಬಿಸಿ ತುಪ್ಪವಾಯಿತು.
ಕ್ರಿ.ಶ. 1660ರಲ್ಲಿ ಮೊಘಲರು ಶಿವಾಜಿಯನ್ನು ಸಂಪೂರ್ಣ ನಾಶಗೊಳಿಸಬೇಕೆಂದು ನಿಶ್ಚಯಿಸಿದರು. ಆತನನ್ನು ಸೋಲಿಸಲು ಬಿಜಾಪುರದ ಸುಲ್ತಾನ ಕೈಜೋಡಿಸಿದ. ಔರಂಗ್ಜೇಬ್ ತನ್ನ ಸೇನಾಪತಿ ಶಯಿಸ್ತೇಖಾನ್ನನ್ನು ಕಳಿಸಿದಾಗ ಆತ ಕೆಲ ಕೋಟೆಯನ್ನು ವಶಪಡಿಸಿಕೊಂಡು ಪುಣೆಯಲ್ಲಿ ಬೀಡುಬಿಟ್ಟಾಗ ಅಲ್ಲಿಗೆ ರಾತ್ರಿ ದಿಢೀರನೇ ನುಗ್ಗಿ ಶಿವಾಜಿಯು ಶಯಿಸ್ತೇಖಾನನನ್ನು ಓಡಿಸಿದ. ಔರಂಗ್ಜೇಬ್ ಕ್ರಿ. ಶ. 1664ರಲ್ಲಿ ತನ್ನ ಸೇನಾನಿ ರಾಜಾ ಜಯಸಿಂಗನನ್ನು ಕಳಿಸಿದ. ಅವನು ಶಿವಾಜಿಯ ಹಲವು ಕೋಟೆಗಳನ್ನು ವಶಪಡಿಸಿಕೊಂಡ. ಹೀಗಾಗಿ ಶಿವಾಜಿ ಅನಿವಾರ್ಯವಾಗಿ ಪುರಂದರಗಢ ಒಪ್ಪಂದದಲ್ಲಿ 24 ಕೋಟೆಗಳನ್ನು ಮೊಘಲರಿಗೆ ನೀಡಿದ.
ರಾಜಾ ಜಯಸಿಂಗನು ಶಿವಾಜಿಯ ಮನವೊಲಿಸಿ ಔರಂಗ್ಜೇಬ್ನ ಭೇಟಿಯಾಗಲು ಆಗ್ರಾಕ್ಕೆ ಕರೆದುಕೊಂಡು ಬಂದ. ಅಲ್ಲಿ ಔರಂಗ್ಜೇಬ್ ಶಿವಾಜಿಯನ್ನು ಸರಿಯಾಗಿ ನಡೆಸಿಕೊಳ್ಳದೇ ಸೆರೆಯಲ್ಲಿಟ್ಟ. ಬುದ್ಧಿವಂತ ಶಿವಾಜಿ ತನ್ನ ಮಗ ಸಂಭಾಜಿಯ ಜತೆಗೂಡಿ ಉಪಾಯದಿಂದ ಪಾರಾದ. ಎರಡು ವರ್ಷದ ನಂತರ ತಾನು ಕಳೆದುಕೊಂಡ ಕೋಟೆಗಳನ್ನು ಮತ್ತೆ ಗೆದ್ದ. ಕ್ರಿ. ಶ. 1674ರಲ್ಲಿ ರಾಯಗಢದಲ್ಲಿ ಕಿರೀಟಧಾರಣೆ ಮಾಡಿಸಿಕೊಂಡು ಛತ್ರಪತಿ ಎನಿಸಿದ.
ಹೈಂದವೀ ಸ್ವರಾಜ್ಯಕ್ಕಾಗಿ ಹಗಲಿರುಳು ದುಡಿದ ಮತ್ತು ಅನ್ಯ ಧರ್ಮಿಯರಿಗೆ ಗೌರವವನ್ನು ನೀಡುತ್ತಿದ್ದ ಶಿವಾಜಿ ಎಲ್ಲ ಸ್ತ್ರೀಯರಿಗೂ ರಾಜ್ಯದಲ್ಲಿ ಗೌರವವಿರುವಂತೆ ನೋಡಿಕೊಂಡ. ಮತ್ತು ಸಾಧು-ಸಂತರ ಮಾರ್ಗದರ್ಶನವನ್ನು ಪಡೆಯುತ್ತಿದ್ದ. ಈತನ ಸಾಮ್ರಾಜ್ಯದ ಒಬ್ಬ ಸೈನಿಕ ಅನ್ಯಧರ್ಮೀಯ ಸ್ತ್ರೀಗೆ ಅಪಮಾನ ಮಾಡಿದ್ದನ್ನು ತಿಳಿದು ಅವನ ಕಣ್ಣು ಕೀಳುವಂತೆ ಆದೇಶ ನೀಡಿದ್ದು ನೋಡಿದರೆ ಆತನ ಬಗ್ಗೆ ಗೌರವ ಮೂಡುತ್ತದೆ.
ಶೂರ ಶಿವಾಜಿಗೆ ಪೇಶ್ವೆ ಎಂಬ ಮುಖ್ಯಮಂತ್ರಿ ಇದ್ದನು. ಮತ್ತು ಸಲಹೆಗಾಗಿ ಅಷ್ಟಪ್ರಧಾನರೆಂಬ ಮಂತ್ರಿಮಂಡಳವಿತ್ತು. ಭೂಕಂದಾಯವೇ ಮೊದಲಾಗಿ ರಾಜ್ಯದ ಪ್ರಮುಖ ಆದಾಯವಿತ್ತು. ಶಿವಾಜಿಯು ತನ್ನ ಅಲ್ಪಕಾಲಾವಧಿಯಲ್ಲಿಯೇ ಅಪಾರ ಸಾಧನೆಯನ್ನು ಮಾಡಿದನು. ಈತನ ಮಗ ಸಂಭಾಜಿಯು ಪರಮವೀರನಾಗಿದ್ದ ಮೊಮ್ಮಗ ಸಾಹುವು ವೀರನಾಗಿದ್ದರೂ ಆತ ಎಲ್ಲ ಅಧಿಕಾರವನ್ನು ಪೇಶ್ವೆಗಳಿಗೆ ನೀಡಿ ರಾಜ್ಯ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡನು.
ಅಂಬಾಭವಾನಿಯ ಈ ಪುತ್ರ ಹಗಲಿರುಳು ಪ್ರಜೆಗಳ ಮತ್ತು ಹಿಂದೂ ಧರ್ಮದ ಬಗ್ಗೆ ಅವಿರತವಾಗಿ ದುಡಿದ.
ಶಿವಾಜಿ ಮಹಾರಾಜರ ವ್ಯಕ್ತಿತ್ವವು ಇಂತಹ ಅಪ್ರತಿಮ ನೀತಿತೇಜಸ್ಸಿನಿಂದ ಬೆಳಗುತ್ತಿತ್ತೆಂದೇ ಅವರು ಸ್ವರಾಜ್ಯವನ್ನು ಭದ್ರಗೊಳಿಸುವ ಅನೇಕ ಕ್ರಾಂತಿಕಾರಕ ಸುಧಾರಣೆಗಳನ್ನು ಜಾರಿಗೆ ತರಲು ಸಾಧ್ಯವಾಯಿತು. ಶತಶತಮಾನಗಳಿಂದ ಬಲವಾಗಿ ಬೇರು ಬಿಟ್ಟಿದ್ದ ಹಲವಾರು ಸ್ವಹಿತಾಸಕ್ತಿಗಳು, ಕುರುಡು ರೂಢಿಗಳ ಮೇಲೆ ಅವರು ವಜ್ರಪ್ರಹಾರ ಮಾಡಲು ಮುಂದಾದರು. ಸೈನಿಕ ಸರದಾರರ ಸಾಹಸ ಕಾರ್ಯಗಳಿಗೆ ಮೆಚ್ಚುಗೆಯಾಗಿ ಆಗಿನ ಕಾಲದಲ್ಲಿ ಕಜಹಗೀರುಕ ಗಳನ್ನು ಕೊಡುವ ಪದ್ಧತಿ ಸರ್ವೇಸಾಮಾನ್ಯವಾಗಿತ್ತು. ಅಂತಹ ಜಹಗೀರುಗಳ ಒಡೆಯರಿಲ್ಲರೂ ಪಾಳೆಯಗಾರರಂತೆ ಸ್ವಂತ ಸೈನ್ಯವಿಟ್ಟುಕೊಂಡು ಕರೆ ಬಂದಾಗ ಮಾತ್ರ ರಾಜ್ಯದ ಸೇವೆಗೆ ಹಾಜರಾಗುತ್ತಿದ್ದರು. ‘ ಸ್ವರಾಜ್ಯ‘ ದೊಳಗೆ ಹಲವಾರು ‘ರಾಜ್ಯ‘ ಗಳಿರುವಂತಹ ಈ ಪರಿಸ್ಥಿತಿಯ ಅಪಾಯವನ್ನು ಶಿವಾಜಿ ಮಹಾರಾಜರು ಕೊನೆಗಾಣಿಸಿದರು. ಜಹಗೀರುಗಳನ್ನು ಕೊಡುವ ಪದ್ಧತಿಯನ್ನು ನಿಲ್ಲಿಸಿದರು. ಸ್ವರಾಜ್ಯದ ಹೊರತಾಗಿ ಇತರರು ಸೇನೆಗಳನ್ನು ಇಟ್ಟುಕೊಳ್ಳುವುದನ್ಣೂ ನಿಷೇಧಿಸಿದರು. ಹೊಸದಾಗಿ ತಮ್ಮ ಬೀಗನಾದ ಶಿರ್ಕೆಯು ಮದುವೆ ಬಳುವಳಿಯಾಗಿ ಜಹಗೀರು ಕೇಳಿದಾಗಲೂ ಮಹಾರಾಜರು ಕೌಶಲ್ಯದಿಂದ ಆ ಸಲಹೆಯನ್ನು ನಿವಾರಿಸಿದರು. ಹೆಚ್ಚುವರಿ ಜಮೀನನ್ನೆಲ್ಲ ಸಾಮಾನ್ಯ ಬಡ ರೈತರಿಗೆ ಹಂಚಿಬಿಟ್ಟರು. ಇದರಿಂದ ಇಡೀ ರೈತಸಮುದಾಯದಲ್ಲಿ ಸ್ವರಾಜ್ಯದ ಬಗ್ಗೆ ನೇರವಾದ ನಿಷ್ಠೆ, ಸ್ವರಾಜ್ಯದ ಸಂರಕ್ಷಣೆಯಲ್ಲಿ ತಮ್ಮ ಹಿತವೂ ಇದೆ ಎನ್ನುವ ಅವಿಚಲ ನಂಬಿಕೆ ನೆಲೆಗೊಂಡಿತು.
ಆಧುನಿಕ ಭಾರತದ ಪುನರ್ಜಾಗರಣದ ಪಾಂಚಜನ್ಯ ಮೊಳಗಿಸಿದ ಸಿಂಹ ಸಂನ್ಯಾಸಿ ಸ್ವಾಮಿ ವಿವೇಕಾನಂದರು ಯಾರ ಕುರಿತಾಗಿ ಈ ರೀತಿ ಭಾವೋತ್ಕರಾಗಿ ನುಡಿದರೋ ಯಾವ ಕಾಲದಲ್ಲಿ ನಮ್ಮ ಧರ್ಮ ಸಂಸ್ಕೃತಿಗಳು ಹೇಳಹೆಸರಿಲ್ಲದಂತೆ ತೊಡೆದು ಹೋಗುತ್ತಿದ್ದವೋ, ನಮ್ಮ ಜನಾಂಗಕ್ಕೆ ಜನಾಂಗವೇ ವಿನಾಶದ ಮಡುವಿನಲ್ಲಿ ಮುಳುಗಿ ಹೋಗುತ್ತಿದ್ದಿತೋ ಅಂಥ ವಿಷಗಳಿಗೆಯಲ್ಲಿ ನಮ್ಮ ಧರ್ಮವನ್ನೂ ಸಮಾಜವನ್ನೂ ಉದ್ಧಾರ ಮಾಡಿದ ಮಹಾನ್ ರಾಷ್ಟ್ರಪುರುಷ ಶಿವಾಜಿ ಮಹಾರಾಜರು. ಅಧರ್ಮವನ್ನಳಿಸಿ ಧರ್ಮರಾಜ್ಯ ಸ್ಥಾಪಿಸಿದ ಯುಗುಪುರುಷ ಆತ. ನಮ್ಮೆಲ್ಲ ಪ್ರಾಚೀನ ಮಹಾಕಾವ್ಯಗಳಲ್ಲಿ, ಶಾಸ್ತ್ರಗಳಲ್ಲಿ ಬಣ್ಣಿಸಲಾದ ಅಭಿಜಾತ ನಾಯಕನ ಸರ್ವಸದ್ಗುಣಗಳ ಸಜೀವ ಆಕಾರ ! ಅವನಷ್ಟು ಶ್ರೇಷ್ಠನಾದ ಶೂರ, ಸತ್ಪುರುಷ, ಭಗವದ್ಭಕ್ತ ರಾಜಇನ್ನೊಬ್ಬನುಂಟೇ? ಭಾರತದ ಆತ್ಮಚೇತನದ ಮೂರ್ತರೂಪವೇ ಇವನು.” ಭಾರತ ಭವಿಷ್ಯದ ಆಶಾದೀಪ ಶಿವರಾಯ!”.
ಅಂತಹ ಉಜ್ವಲ ರಾಷ್ಟ್ರೀಯ ಆಶಾದೀಪವು ತನ್ನ ಪೂರ್ಣ ತೇಜಸ್ಸಿನಿಂದ ಕಂಗೊಳಿಸುವ ದಿವ್ಯ ಮುಹೂರ್ತ ಛತ್ರಪತಿ ಶಿವಾಜಿ ಮಹಾರಾಜರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.