ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 11ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು 14-1-2018 ರ ಭಾನುವಾರದಂದು ಕೋಡಿಯಾಲ್ ಬೈಲ್ ಪಿವಿಎಸ್ ವೃತ್ತದ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 7.30೦ ಕ್ಕೆ ಸರಿಯಾಗಿ ಪ್ರಾರ್ಥನೆಯೊಂದಿಗೆ ಅಭಿಯಾನಕ್ಕೆ ಮಂಗಳೂರು ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಶ್ರೀ ರಮೇಶ್ ರಾವ್ ಹಾಗೂ ಬೆಸೆಂಟ್ ಕಾಲೇಜಿನ ಉಪನ್ಯಾಸಕ ಶ್ರೀ ಬೀಡುಬೈಲು ಗಣಪತಿ ಭಟ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ, ಬ್ರಹ್ಮಚಾರಿ ಶಿವಕುಮಾರ್, ಶ್ರೀ ಸುಬ್ರಾಯ್ ನಾಯಕ್ ಸೇರಿದಂತೆ ಸುಮಾರು ಇನ್ನೂರು ಕಾರ್ಯಕರ್ತರು ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಸ್ವಚ್ಛತೆ: ಬೆಸೆಂಟ್ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಉಪನ್ಯಾಸಕ ಆಂಡ್ರೂ ರೋಡ್ರಿಗಸ್ , ಪ್ರೋ. ಅಮಿತಾ ಮಾರ್ಗದರ್ಶನದಲ್ಲಿ ಪಿವಿಎಸ್ ವೃತ್ತದಿಂದ ಕರಂಗಲಪಾಡಿ ಸಾಗುವ ಮುಖ್ಯರಸ್ತೆಯ ಬದಿಗಳನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸಿದರು. ಮತ್ತೊಂದು ಗುಂಪು ಚೇತನಾ ಕಾಟಿಯಾರ್ ಹಾಗೂ ಬಳಗ ತೋಡಿನಲ್ಲಿದ್ದ ಕಸಕಡ್ಡಿ ತೆಗೆದು ಹಸನು ಮಾಡಿದರು. ನಿವೇದಿತಾ ಬಳಗದ ಸದಸ್ಯೆಯರು ಶ್ರೀಮತಿ ಉಷಾ ದಿನಕರ್ ರಾವ್ ಹಾಗೂ ಶ್ರೀಮತಿ ವಾಸಂತಿ ನಾಯಕ್ ಜೊತೆಗೂಡಿ ಒಟ್ಟುಗೂಡಿದ ತ್ಯಾಜ್ಯವನ್ನು ಟಿಪ್ಪರ್ಗೆ ತುಂಬಿಸುವ ಕಾರ್ಯ ಮಾಡಿದರು. ಕೆಪಿಟಿ ಎನ್ನೆಸ್ಸೆಸ್ ಯುವ ಕಾರ್ಯಕರ್ತರು ಕಾಂಪೌಂಡಿನ ಮೇಲೆ ಹಾಗೂ ಸುತ್ತಮುತ್ತ ಬೆಳೆದಿದ್ದ ಹುಲ್ಲು ಕತ್ತರಿಸಿದರು.
ಬಸ್ ತಂಗುದಾಣಕ್ಕೆ ಬಣ್ಣ: ಕೊಡಿಯಾಲ್ ಬೈಲ್ ಬಸ್ ತಂಗುದಾಣ ನಿರ್ವಹಣೆ ಇಲ್ಲದೇ ಪ್ರಯಾಣಿಕರು ಕುಳಿತುಕೊಳ್ಳಲು ಹಿಂಜರಿಯುತ್ತಿದ್ದುದನ್ನು ಗಮನಿಸಿ ಇಂದು ಸ್ವಚ್ಛ ಮಂಗಳೂರು ಕಾರ್ಯಕರ್ತರು ಅಲ್ಲಲ್ಲಿ ಅಂಟಿಸಲಾಗಿದ್ದ ಪೋಸ್ಟರ್ ಜಾಹೀರಾತುಗಳನ್ನು ಕಿತ್ತುಹಾಕಿದರು ನಂತರ ಪಾಚಿಹಿಡಿದ ಮೇಲ್ಛಾವಣಿಯನ್ನು ನೀರಿನಿಂದ ತಿಕ್ಕಿತೊಳೆದು ತಂಗುದಾಣದ ಒಳಭಾಗ ಹಾಗೂ ಹೊರಭಾಗಗಳನ್ನು ಬಣ್ಣ ಹಚ್ಚಿ ಸುಂದರಗೊಳಿಸಿದರು. ಕು. ರಾಜೇಶ್ವರಿ ಕೊಡಿಕಲ್, ಶ್ರೀ ಸುಧೀರ್ ಕೊಕ್ರಾಡಿ ಹಾಗೂ ಹಿಂದೂ ವಾರಿಯರ್ಸ್ನ ಸದಸ್ಯರು ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನ ಮಾಡಿ ತಂಗುದಾಣವನ್ನು ಸುಂದರಗೊಳಿಸಿದರು.
ಪುಟ್ ಪಾಥ್ ದುರಸ್ತಿ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ ಮುಂಭಾಗದ ಪುಟ್ಪಾಥ್ ಅಲ್ಲಲ್ಲಿ ಕಿತ್ತುಹೋಗಿತ್ತು. ತತ್ಪರಿಣಾಮ ಆ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೋಡಿಗೆ ಬೀಳುವ ಅಪಾಯವಿತ್ತು. ಆ ಅಪಾಯ ತಪ್ಪಿಸಬೇಕೆಂಬ ಸದಾಶಯದಿಂದ ಸುಮಾರು ಹತ್ತು ಕಲ್ಲಿನ ಸ್ಲಾಬ್ಗಳನ್ನು ಹೊತ್ತು ತಂದು ಕಾಲುದಾರಿಯನ್ನು ಸರಿಮಾಡಿ, ತೋಡುಗಳನ್ನು ಸ್ವಚ್ಛಗೊಳಿಸಿ ಮುಚ್ಚಲಾಗಿದೆ. ಅಭಿಯಾನದ ಮುಖ್ಯ ಸಂಯೋಜಕ ಶ್ರೀ ದಿಲ್ರಾಜ್ ಆಳ್ವ ಮಾರ್ಗದರ್ಶನದಲ್ಲಿ ಶ್ರೀ ಸಂದೀಪ್ಕುಮಾರ್ ತಾರಾನಾಥ್ ಹಾಗೂ ಕುಮಾರ್ ಜಿಮ್ ಗೆಳೆಯರು ಶ್ರಮವಹಿಸಿ ಕಾರ್ಯಪೂರ್ಣಗೊಳಿಸಿದರು.
ಆವರಣ ಗೋಡೆಯ ಸ್ವಚ್ಛತೆ: ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ಆವರಣ ಗೋಡೆಯನ್ನು ನೀರಿನಿಂದ ತೊಳೆಯಲಾಯಿತು. ಹಾಗೂ ಅದಕ್ಕೆ ತಾಗಿಕೊಂಡಿರುವ ಪುಟ್ ಪಾಥ್ನಲ್ಲಿ ಹಾಕಿದ್ದ ಕಸದ ರಾಶಿಯನ್ನು ತೆಗೆಯಲಾಯಿತು ಹಾಗೂ ಸುತ್ತಮುತ್ತಲಿನ ಎಲ್ಲ ಅಂಗಡಿಗಳಿಗೆ ಹೋಗಿ ಕಾಲುದಾರಿಯಲ್ಲಿ ಕಸತ್ಯಾಜ್ಯ ಸುರಿಯದಂತೆ ವಿನಂತಿಸಲಾಗಿದೆ. ಕೊಳೆಯಾಗಿದ್ದ ಕಾಂಪೌಂಡ್ ಗೋಡೆಗೆ ಬಣ್ಣ ಬಳಿಯಲಾಯಿತು. ಬರುವ ದಿನಗಳಲ್ಲಿ ತ್ಯಾಜ್ಯ ಬೀಳದಂತೆ ನೋಡಿಕೊಂಡು ಆವರಣಗೋಡೆಯನ್ನು ಅರ್ಥಪೂರ್ಣ ಚಿತ್ರಗಳಿಂದ ಸುಂದರಗೊಳಿಸಲಾಗುವುದು.
ಶ್ರೀ ಶುಭೋದಯ ಆಳ್ವ, ಶ್ರೀ ಸುರೇಶ್ ಶೆಟ್ಟಿ ಹಾಗೂ ಶ್ರೀ ಉಮಾನಾಥ್ ಕೋಟೆಕಾರ್ ಅಭಿಯಾನದ ಉಸ್ತುವಾರಿ ವಹಿಸಿದ್ದರು. ಶ್ರೀ ಪಿ ಎನ್ ಭಟ್, ಜಪಾನಿ ಪ್ರಜೆ ಯೋಕೋ, ಶ್ರೀ ರಕ್ಷಿತ್ ಕೆ ಪಿ ಆರ್, ಶ್ರೀ ರಾಜೇಂದ್ರ ಡಿ ಎಸ್ ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದ್ದರು. ಎಲ್ಲ ಕಾರ್ಯಕರ್ತರಿಗೆ ಶ್ರೀಲಕ್ಷ್ಮೀನಾರಾಯಣಿ ದೇವಸ್ಥಾನದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಸ್ವಚ್ಛತಾ ಅಭಿಯಾನಕ್ಕೆ ಎಂ ಆರ್ಪಿಎಲ್ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.