ಮಂಗಳೂರು : ತುಳು ಸಂಸ್ಕೃತಿಯನ್ನು ನಗರ ಪ್ರದೇಶದ ಜನರಿಗೆ ಪರಿಚಯಿಸುವ ಹಾಗೂ ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ನಗರದಲ್ಲಿ ಕಂಬಳವನ್ನು ಆಯೋಜಿಸಲಾಗುತ್ತಿದ್ದು, 5 ವರ್ಷ ಬಳಿಕ ನಗರದಲ್ಲಿ ಕಂಬಳದ ಸಂಭ್ರಮ ಏರ್ಪಡಲಿದೆ. ಸುಮಾರು 25 ಮಂದಿ ತಂಡದಿಂದ ತಯಾರಿ ನಡೆದಿದ್ದು ಇದಕ್ಕೆ ರಾಮ-ಲಕ್ಷ್ಮಣ ಜೋಡುಕರೆ ಎಂದು ಹೆಸರಿಡಲಾಗಿದೆ. ಡಿಸೆಂಬರ್ 3 ರಂದು ಕೂಳೂರಿನ ಗೋಲ್ಡ್ಫಿಂಚ್ ಸಿಟಿಯಲ್ಲಿ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಬೆಳಿಗ್ಗೆ 9.30 ಕ್ಕೆ ಕಂಬಳದ ಉದ್ಘಾಟನೆ ನಡೆಯಲಿದೆ.
ನಿಟ್ಟೆ ವಿವಿ ಕುಲಾಧಿಪತಿ ವಿನಯಹೆಗ್ಡೆ ಕಾರ್ಯಕ್ರಮ ಉದ್ಘಾಟಿಸುವರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆ ವಹಿಸುವರು. ರಾಮ-ಲಕ್ಷ್ಮಣ ಕರೆಯನ್ನು ಎಂ. ಆರ್. ಜಿ. ಗ್ರೂಪ್ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸ್ಥಳೀಯ ಶಾಸಕರು, ವಿಧಾನಪರಿಷತ್ ಸದಸ್ಯರು, ಉದ್ಯಮಿಗಳು ಭಾಗವಹಿಸುವರು. ಸಾಯಂಕಾಲ 6 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ವಹಿಸಲಿದ್ದಾರೆ. ಅತಿಥಿಗಳಾಗಿ ಕೇಂದ್ರ ಸಚಿವರಾದ ಡಿ. ವಿ. ಸದಾನಂದ ಗೌಡ, ಅನಂತ ಕುಮಾರ್ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಗಣ್ಯರು, ತುಳು ಹಾಗೂ ಕನ್ನಡ ಚಲನಚಿತ್ರ ತಾರೆಯರು ಸಹಿತ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
125 ಮೀಟರ್ ಉದ್ದ ಕೆರೆ ನಿರ್ಮಿಸಲಾಗಿದ್ದು 6 ಸಾವಿರ ಕೆಂಪು ಕಪ್ಪು ಬಳಕೆ ಮಾಡಲಾಗಿದೆ. ತಳಭಾಗಕ್ಕೆ ಸುಮಾರು 80 ಲೋಡ್ನಷ್ಟು ಜಲ್ಲಿ ಹುಡಿ ಬಳಕೆ ಮಾಡಲಾಗಿದೆ. ಸುಮಾರು 100 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದು, ಆರು ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಿಗೆ ಸೂಕ್ತ ಬಹುಮಾನ ನೀಡಲಾಗುವುದು. ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಬಹುಮಾನವಾಗಿ 2 ಪವನ್ ಚಿನ್ನ, ದ್ವಿತೀಯ 1 ಪವನ್ ಚಿನ್ನ, ಹಗ್ಗ ನೇಗಿಲು ಹಿರಿಯ ವಿಭಾಗದಲ್ಲಿ 2 ಪವನ್, 1 ಪವನ್, 1 ಪವನ್, ಅಡ್ಡ ಹಲಗೆ ಹಗ್ಗ ನೇಗಿಲು ಕಿರಿಯ ವಿಭಾಗದಲ್ಲಿ 1 ಪವನ್, ಅರ್ಧ ಪವನ್, ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನ್, ವಿಜೇತ ಕೋಣಗಳ ಸಹಾಯಕ ತಂಡಕ್ಕೆ 1 ಸಾವಿರ ರೂ. ಬಹುಮಾನ ನೀಡಲಾಗುತ್ತದೆ.
ಪರಂಪರೆ ಮತ್ತು ಆಧುನಿಕತೆಗಳು ಒಂದರ ಕೈಯನ್ನು ಇನ್ನೊಂದು ಹಿಡಿದುಕೊಂಡು ಮುಂದಕ್ಕೆ ಹೆಜ್ಜೆಯಿಡಬೇಕು. ಆದರೆ ದುರದೃಷ್ಟವಶಾತ್ ನಮ್ಮ ಕಾಲದಲ್ಲಿ ಆಧುನಿಕತೆ ಎಂಬುದು ಪರಂಪರೆಯನ್ನು ವಿರೋಧದ ಭಾವದಿಂದ, ಅನುಮಾನದಿಂದ ನೋಡುತ್ತಾ ಧಿಕ್ಕರಿಸುತ್ತಾ ಸಾಗುವುದನ್ನು ನಾವು ಕಾಣುತ್ತೇವೆ. ಇದರ ಪರಿಣಾಮವಾಗಿ ಸಾವಿರಾರು ವರುಷಗಳ ಜೀವನಾನುಭವದಿಂದ ರೂಪುಗೊಂಡ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಗಳ ಕಡೆಗೆ ತಿರಸ್ಕಾರ, ಸಿನಿಕತನದ ಮನೋಭಾವಗಳು ರೂಪುಗೊಳ್ಳುತ್ತಾ ಅದನ್ನೇ ವೈಚಾರಿಕತೆಯೆಂದು ಬಿಂಬಿಸುವ ಪ್ರಯತ್ನಗಳು ನಮ್ಮ ನಡುವೆ ನಡೆಯುತ್ತಿದೆ. ಆದರೆ ಇವುಗಳ ನಡುವೆಯೂ ಆಶಾಕಿರಣವೆಂಬಂತೆ ಕೆಲವು ಧನಾತ್ಮಕ ಚಿಂತನೆಯ ’ಹಳೆಬೇರು- ಹೊಸಚಿಗುರು’ ಸೇರಿಕೊಂಡ ವಿದ್ಯಮಾನಗಳೂ ನಮ್ಮ ನಡುವೆ ನಡೆಯುವುದುಂಟು. ಅಂತಹ ಒಂದು ಪ್ರಶಂಸಾರ್ಹ ಪ್ರಸಂಗ ಮಂಗಳೂರಿನಲ್ಲಿ ಕ್ಯಾಪ್ಟನ್ ಬೃಜೇಶ್ ಚೌಟ ಮತ್ತು ಯುವಕರ ದಂಡು ಸೇರಿಕೊಂಡು ಬಂಗ್ರಕೂಳೂರಿನಲ್ಲಿ ನಡೆಸುತ್ತಿರುವ ಮಂಗಳೂರು ಕಂಬಳ.
ಕಂಬಳ ತುಳುನಾಡಿನ ಜನರ ಆಚರಣೆಯೂ ಹೌದು. ಕ್ರೀಡೆಯೂ ಹೌದು. ಸಾಂಸ್ಕೃತಿಕ ಹಬ್ಬವೂ ಹೌದು. ಈ ಕಂಬಳದೊಂದಿಗೆ ತುಳುನಾಡಿನ ಕೃಷಿ, ಧಾರ್ಮಿಕ ನಂಬಿಕೆ, ಸಾಮಾಜಿಕ ವ್ಯವಸ್ಥೆ, ಕ್ರೀಡಾ ಮನೋಭಾವ, ಸೌಂದರ್ಯ ಪ್ರಜ್ಞೆ, ವಾಕ್ಚಾತುರ್ಯ ವೈಭವ ಎಲ್ಲವೂ ಒಳಗೊಂಡಿದೆ. ಬಿತ್ತನೆಗೆ ಸಿದ್ಧವಾದ ಕೆಸರಿನ ಗದ್ದೆಯಲ್ಲಿ ಕೋಣಗಳನ್ನು ಓಲೈಸುವ ಜನಪದ ಕಲೆ ಈ ಕಂಬಳ. ಸೃಷ್ಟಿಕ್ರಿಯೆಯ ಫಲವಂತಿಕೆಯ ಸಂಕೇತವಾದ ಈ ಧಾರ್ಮಿಕ ಆಚರಣೆ ಲೌಕಿಕವಾಗಿ ಕ್ರೀಡೆಯ ಸ್ವರೂಪವನ್ನು ತಾಳಿ ಇಂದು ಜನಪ್ರಿಯವಾಗಿದೆ.
ಹಿಂದೆ ಊರೂರುಗಳಲ್ಲಿ, ಗ್ರಾಮ, ಸೀಮೆ, ಮಾಗಣೆಗಳಲ್ಲಿ, ಗುತ್ತಿನ ಮನೆಯ ಯಜಮಾನಿಕೆಯಲ್ಲಿ ನಿರಂತರ ನಡೆಯುತ್ತಿದ್ದ ಕಂಬಳಗಳು ಹಲವು ವೈವಿಧ್ಯಗಳನ್ನು ಹೊಂದಿದ್ದವು. ಬಾರೆ ಕಂಬಳ, ಪೂಕರೆ ಕಂಬಳ, ಅರಸು ಅಥವಾ ದೇವರ ಕಂಬಳ ಎಂದೆಲ್ಲಾ ಭಿನ್ನ ಭಿನ್ನ ನೆಲೆಗಳಲ್ಲಿ ನಡೆಯುತ್ತಿದ್ದ ಕಂಬಳಗಳು ಇಂದು ಆಧುನಿಕ ಸ್ಪರ್ಶವನ್ನು ಪಡೆದಿದೆ. ತಂತ್ರಜ್ಞಾನದ ಸಹಾಯದಿಂದ ಹೆಚ್ಚು ನಿಖರವಾದ ಫಲಿತಾಂಶಗಳನ್ನು ಹೊಂದುವುದಕ್ಕೆ ಸಾಧ್ಯವಾಗಿದೆ. ಹಗ್ಗದ ಓಟ, ಅಡ್ಡಹಲಗೆ, ನೇಗಿಲ ಓಟ ಹೀಗೆ ವಿವಿಧ ವಿಭಾಗಗಳಲ್ಲಿ ಈ ಕ್ರೀಡೆ ಮನೋರಂಜನೆಯನ್ನು ನೀಡುತ್ತಾ ಬಂದಿದೆ. ಕಣೆಹಲಗೆಯಲ್ಲಿ ಆರೂವರೆ ಅಥವಾ ಏಳೂವರೆ ಕೋಲು ಎತ್ತರದ ನಿಶಾನಿಗೆ ಕೆಸರನ್ನು ಚಿಮ್ಮಿಸುವ ರೋಮಾಂಚನಕಾರಿ ಕ್ಷಣಗಳನ್ನು ಕಂಬಳ ಹೊಂದಿದೆ. ಗೆಲುವಿನ ನಗು ಬೀರುತ್ತಾ ಮಂಜೊಟ್ಟಿ ಹತ್ತುವ ಕೋಣಗಳಿಗೆ ಬೆಲೆ ಬಾಳುವ ಬಹುಮಾನಗಳು ದೊರಕಿ, ಸಾಕಿದ, ಓಡಿಸಿದ, ಬೆಂಬಲಿಸಿದ ಎಲ್ಲರೂ ಸಂಭ್ರಮಪಡುವ ಕ್ಷಣಗಳು ನಿರ್ಮಾಣಗೊಳ್ಳುತ್ತದೆ.
ಇಂತಹ ಕಂಬಳಕ್ಕೆ ಇತ್ತೀಚೆಗೆ ಪ್ರಾಣಿದಯಾ ಸಂಘದವರು ಪ್ರಾಣಿಹಿಂಸೆಯ ನೆಪವೊಡ್ಡಿ ನಿಷೇಧದ ತೂಗುಕತ್ತಿಯಲ್ಲಿ ನೇತಾಡಿಸಿದಾಗ ಇಡೀ ಕರಾವಳಿ ನೊಂದಿತ್ತು. ಕುದುರೆ ರೇಸಿನಲ್ಲಿ ಜೂಜಾಡುವ ಶ್ರೀಮಂತರ ಆಟದ ಪ್ರಾಣಿಹಿಂಸೆ, ಆನೆಯ ಮೇಲೋ, ಕುದುರೆಯ ಮೇಲೋ ಕುಳಿತು ಸವಾರಿ ಮಾಡುತ್ತಾ ಮೋಜಿನ ಸೆಲ್ಫಿಗಳಲ್ಲಿ ಜನ ತೊಡಗಿರುವಾಗ ಆ ಪ್ರಾಣಿಗಳಿಗೆ ನೀಡುವ ನಿತ್ಯ ಹಿಂಸೆ ಇದಾವುದೂ ಕಾಣದ ಸಂಘದವರಿಗೆ ವರ್ಷದಲ್ಲಿ ಯಾವತ್ತೋ ಒಂದು ದಿನ ಕಂಬಳದಲ್ಲಿ ಓಡಿಸುವಾಗ ಬಡಿಯುವ ನಾಲ್ಕು ಪೆಟ್ಟು ಗಂಭೀರ ಹಿಂಸೆಯಾಗಿ ಕಂಡಿರುವುದು ವಿಚಿತ್ರವೇ ಸರಿ.
ಈ ಸವಾಲೇ ಬಹುಷ: ಹೊಸತಲೆಮಾರನ್ನು ಕಂಬಳದ ಕಡೆಗೆ ಯೋಚಿಸುವಂತೆ ಮಾಡಿದೆ. ಆಧುನಿಕತೆಯಿಂದ ಕ್ಷಿಪ್ರವಾಗಿ ಬದಲಾಗುತ್ತಿರುವ ಮಾಯಾನಗರಿ ಮಂಗಳೂರಲ್ಲಿ ಬದುಕಿನಿಂದ ದೂರವಾಗುತ್ತಿರುವ ತುಳುನಾಡಿನ ಸಂಸ್ಕೃತಿ ಕಲೆಗಳ ಬಗೆಗೆ ಯುವಕರಲ್ಲಿ ಹೊಸ ಎಚ್ಚರ ಕಾಣಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದಕ್ಕೆ ಕ್ಯಾಪ್ಟನ್ ಬೃಜೇಶ್ ಚೌಟ ಅವರು ನೇತೃತ್ವ ನೀಡುತ್ತಿರುವುದು ಸಂತೋಷ. ಈತಂಡ ಮಂಗಳೂರಲ್ಲಿ ರಾಮ ಲಕ್ಷ್ಮಣ ಎಂಬ ಜೋಡುಕೆರೆ ಕಂಬಳವನ್ನು ಆಯೋಜಿಸುತ್ತಿರುವುದು ಆಧುನಿಕತೆ ಮತ್ತು ಪರಂಪರೆಯನ್ನು ಗೌರವದಿಂದ ಕಾಣಬೇಕೆಂಬ ಆಶಯದ ದ್ಯೋತಕ. ಜಾತೀಯ ಅನಿಷ್ಟ, ಕುಡಿತ ಜೂಜು, ಯಾಜಮಾನ್ಯ ಸ್ಪರ್ಧೆಗಳಿಂದ ಮುಕ್ತವಾದ ಶುದ್ಧ ಸಾಂಸ್ಕೃತಿಕ ಹಾಗೂ ಕ್ರೀಡಾ ಮನಸ್ಥಿತಿಯಿಂದ ಈ ಕಂಬಳ ಬೆಳೆದು ನಿಲ್ಲಲಿ. ಅಂತಹ ಹೊಸಬಗೆಯ ಕಂಬಳದ ವಿನ್ಯಾಸವನ್ನು ಈ ರಾಮ ಲಕ್ಷ್ಮಣ ಒದಗಿಸಲಿ ಎಂದು ಹಾರೈಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.