ಉಜಿರೆ : ಸುತ್ತಲೂ ಜನಸಂದಣಿ. ನೆಲದಲ್ಲಿ ಕೂತು ಹಾಳೆಟೋಪಿ [ಮುಟ್ಟಾಲೆ] ಯನ್ನು ಹೆಣೆಯುತ್ತಾ ಕೂತ ಹಿರಿ ವಯಸ್ಸಿನ ವ್ಯಕ್ತಿ. ಅದರ ಕಡೆಗೆ ಕುತೂಹಲದ ಕಣ್ಣುಗಳನ್ನು ನೆಟ್ಟು ಆ ಬಗ್ಗೆ ವಿಚಾರಿಸುತ್ತಿರುವವರು. ಅವರಲ್ಲೊಂದಷ್ಟು ಜನ ಕೊಳ್ಳುವ ಇರಾದೆ ವ್ಯಕ್ತಪಡಿಸುವವರು.
ಈ ಚಿತ್ರಣಕಂಡು ಬಂದದ್ದು ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತು ಪ್ರದರ್ಶನದಲ್ಲಿ. ಅಡಿಕೆ ಹಾಳೆಯನ್ನು ಕಚ್ಚಾವಸ್ತುವನ್ನಾಗಿ ಬಳಸಿ ರೂಪುಗೊಂಡ ಹಾಳೆ ಟೋಪಿಗಳು ಅಲ್ಲಿದ್ದವು. ಕೃಷಿ ಕೆಲಸದಲ್ಲಿ ನಿರತರಾದವರು, ಶ್ರಮವಹಿಸಿ ದುಡಿಯುವವರು ತಮ್ಮ ದುಡಿಮೆಯ ಅವಧಿಯಲ್ಲಿ ಹಾಕಿಕೊಳ್ಳಬಹುದಾದ ಟೋಪಿಗಳಿವು. ಇವುಗಳನ್ನು ಮಾರಾಟಕ್ಕಿಟ್ಟು ಕುಳಿತಿದ್ದವರು ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶಿರ್ಲಾಲು ನಿವಾಸಿಯಾಗಿರುವ ಅರವತ್ತು ವರ್ಷದ ಬಾಬು ನಲಿಕೆ.
ಟೋಪಿಯನ್ನು ಸಿದ್ಧಪಡಿಸಿ ಅದರಿಂದಲೇ ಆದಾಯ ತಂದುಕೊಳ್ಳುವ ಅವರ ಉತ್ಸಾಹ ಯುವಕರನ್ನೂ ನಾಚಿಸುವಂತಿದೆ. ಸುಮಾರು 6 ವರ್ಷಗಳಿಂದ ಲಕ್ಷದೀಪೋತ್ಸವದಲ್ಲಿ ಹಾಳೆಟೋಪಿಯನ್ನು ಮಾರುತ್ತಾ ಬಂದಿದ್ದಾರೆ. ಸ್ವಂತವಾಗಿ ಅವರೇ ಈ ಹಾಳೆಟೋಪಿ ಸಿದ್ಧಪಡಿಸುತ್ತಾರೆ. ಲಕ್ಷದೀಪೋತ್ಸವದ ಕಾರಣಕ್ಕಾಗಿ 300 ಕ್ಕೂ ಹೆಚ್ಚಿನ ಹಾಳೆ ಟೋಪಿಗಳನ್ನು ಸಿದ್ಧಪಡಿಸುತ್ತಾರೆ. ಸಿದ್ಧವಾದವುಗಳನ್ನು ಲಕ್ಷದೀಪೋತ್ಸವದ ವಸ್ತುಪ್ರದರ್ಶನ ಮಳಿಗೆಯಲ್ಲಿ ತಂದು ಮಾರುತ್ತಾರೆ.
ಅಡಿಕೆ ಹಾಳೆಯಲ್ಲಿ ತಯಾರು ಮಾಡುವ ಅಡಿಕೆ ಹಾಳೆಯ ಕಚ್ಚಾವಸ್ತುಗಳ ಅಲಭ್ಯತೆಯಿಂದಾಗಿ ಹಾಳೆ ಟೋಪಿಯ ತಯಾರಿಕೆ ಮತ್ತು ಮಾರಾಟದ ಪ್ರಮಾಣವೂ ಕಡಿಮೆಯಾಗಿದೆ. ಆದರೇನಂತೆ. ಟೋಪಿ ಸಿದ್ಧಪಡಿಸುವ ಉತ್ಸಾಹವನ್ನಂತೂ ಬಾಬು ನಲಿಕೆಯವರು ಕಳೆದುಕೊಂಡಿಲ್ಲ. ನಗುನಗುತ್ತಲೇ ಈ ವ್ಯಾಪಾರ ವಹಿವಾಟಿನೊಂದಿಗೆ ಗುರುತಿಸಿಕೊಂಡಿದ್ದಾರೆ.
ಈ ಹಾಳೆಟೋಪಿಯನ್ನು 2 ಗಾತ್ರದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಒಂದು ಗೇಣುವಿನ ಸಣ್ಣ ಪ್ರಮಾಣದಟೋಪಿಯು 50 ರೂ ಹಾಗೂ ಒಂದುವರೆ ಗೇಣುವಿನ ದೊಡ್ಡ ಪ್ರಮಾಣದಟೋಪಿಯು 60 ರೂ ಗಳಿಗೆ ಮಾರಾಟವಾಗುತ್ತಿದೆ.
ಹಾಳೆಟೋಪಿ ಸಿದ್ಧಪಡಿಸುವಿಕೆ ಮಾತ್ರವಲ್ಲದೆ ಭೂತಕಟ್ಟುವ ಕಾರ್ಯದಲ್ಲೂ ಇವರು ತೊಡಗಿಕೊಂಡಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ದಿನಕ್ಕೆ ಸುಮಾರು 20 ಟೋಪಿಗಳನ್ನು ಸಿದ್ಧಪಡಿಸುತ್ತಾರೆ. ಒಂದು ಟೋಪಿ ಸಿದ್ಧಪಡಿಸುವ ಹಂತ ವಿಶೇಷತೆಯನ್ನು ಹೊಂದಿದೆ. ಅಡಿಕೆ ಹಾಳೆಯನ್ನು ಸಂಗ್ರಹಿಸಿ ಅದನ್ನು ನೀರಿನಲ್ಲಿ ನೆನೆ ಹಾಕಿಡುತ್ತಾರೆ. ಬಳಿಕ ಆಯಾ ಅಳತೆಗಳಿಗೆ ಕತ್ತರಿಸಿ ಹದವನ್ನು ಮಾಡಲಾಗುತ್ತದೆ.
ಅಳದಂಗಡಿ ಸುತ್ತಮುತ್ತಲಿನ ಅಡಿಕೆ ತೋಟದಿಂದ ಖರೀದಿಸುವ ಒಂದು ಹಾಳೆಯ ಬೆಲೆ 1.5 ರೂಪಾಯಿ. ನಷ್ಟವನ್ನು ಉಂಟುಮಾಡದೇ ಕೇವಲ ಲಾಭವನ್ನು ನೀಡುವ ಈ ಹಾಳೆ ಟೋಪಿ ಸಿದ್ಧಪಡಿಸುವಿಕೆಯು ಗ್ರಾಮೀಣ ಸೊಗಡಿಗೆ ನಿದರ್ಶನವಾಗುತ್ತದೆ.
ವರ್ಷದಿಂದ ವರ್ಷ ಕ್ಕೆಗ್ರಾಹಕರ ಸಂಖ್ಯೆಯು ಹೆಚ್ಚುತ್ತಿದ್ದು, ಹಾಳೆಟೋಪಿಯ ಬೇಡಿಕೆ ಹೆಚ್ಚಿರುವುದು ಸಂತೋಷದ ವಿಷಯವಾಗಿದೆ. ನವಜೀವನ ಸಂಸ್ಥೆ ಹಾಗೂ ಸ್ವಸಹಾಯ ಸಂಘದ ವತಿಯಿಂದ ಲಕ್ಷದೀಪೋತ್ಸವದಲ್ಲಿ ಹಾಳೆಟೋಪಿಗಳನ್ನು ಮಾರಾಟ ಮಾಡಲಾಗುತ್ತದೆ. ಆಧುನಿಕ ದಿನಗಳಲ್ಲಿ ಬಣ್ಣ-ಬಣ್ಣದ ಟೋಪಿಗಳ ನಡುವೆ ಇದು ಗ್ರಾಮೀಣ ಸೊಗಡನ್ನು ನೆನಪಿಸುತ್ತಿದೆ.
ವರದಿ-ಚಿತ್ರ: ಪಲ್ಲವಿ ಜೋಶಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಎಸ್ಡಿಎಂ ಕಾಲೇಜು, ಉಜಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.