ಅ. 17 – ರಾಷ್ಟ್ರೀಯ ಆಯುರ್ವೇದ ದಿನಾಚರಣೆ
ನೋವು ನಿವಾರಣೆಯಲ್ಲಿ ಆಯುರ್ವೇದದ ಪಾತ್ರ
ನೋವು ಎನ್ನುವುದು ಯಾವುದೇ ತೆರನಾದ ಶಾರೀರಿಕ ಅಥವಾ ಮಾನಸಿಕ ಸ್ವಾಸ್ಥ್ಯದ ಅಸಮತೋಲನ ಅಥವಾ ಚಡಪಡಿಕೆ. ಈ ನೋವನ್ನು ತಡೆಯುವ ಅಥವಾ ಬಂದರೆ ನಿವಾರಿಸುವ ಅಮೃತ ಸದೃಶ ಅತ್ಯಂತ ವೈಜ್ಞಾನಿಕ ಪ್ರಾಚೀನ ಶಾಸ್ತ್ರವೇ ಆಯುರ್ವೇದ. ಆಯುರ್ವೇದ ಕೇವಲ ವದ್ಯಕೀಯ ಪದ್ದತಿಯಲ್ಲ,ಅದೊಂದು ಜೀವನ ಧರ್ಮವನ್ನು ಬೋಧಿಸುವ ಸಾರ. ಇದರಲ್ಲಿ ರೋಗ ನಿವಾರಿಸುವ ಜೊತೆಗೆ ತಡೆಗಟ್ಟಲು ಸಹ ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ನಮ್ಮ ಶರೀರವು ಪಂಚ ಮಹಾಭೂತಗಳು ಸಮ್ಮಿಲನಗೊಂಡು ವಾತ, ಪಿತ್ತ ಮತ್ತು ಕಫ ಎಂಬ 3 ಮೂಲ ಘಟಕಗಳಿಂದ ಮಾಡಲ್ಪಟ್ಟಿದೆ. ಇವು ಶರೀರದಲ್ಲಿ ರಕ್ತ ಎನ್ನುವ ಜೀವದ್ರವ್ಯ ಮೂಲಕ ಇಡೀ ದೇಹದಲ್ಲಿ ಸಂಚರಿಸಿ ಶರೀರದ ಆರೋಗ್ಯವನ್ನು ಕಾಪಾಡುತ್ತವೆ. ಅಹಿತಕರವಾದ ಆಹಾರ ಮತ್ತು ವಿಹಾರಗಳಿಂದಾಗಿ ಇವುಗಳ ಸಮತೋಲನದಲ್ಲಿ ಏರುಪೇರಾಗಿ ಇವು ಶರೀರದಲ್ಲಿ ನಾನಾ ವಿಧವಾದ ರೋಗಗಳನ್ನು ಉತ್ಪತ್ತಿ ಮಾಡುತ್ತವೆ. ರೋಗಗಳು ಅಪರಿಸಂಖ್ಯೇಯವಾಗಿದ್ದು ಎಲ್ಲವುಗಳ ಸಾಮಾನ್ಯ ಲಕ್ಷಣವೇ ನೋವು. ಈ ನೋವಿನ ಪರಿಹಾರೋಪಾಯವೇ ಚಿಕಿತ್ಸೆ.
ಆಯುರ್ವೇದದಲ್ಲಿ ದರ್ಶನ ಸ್ಪರ್ಶನ ಮತ್ತು ಪ್ರಶ್ನೆಗಳ ಮೂಲಕ ರೋಗಿಯನ್ನು ಕೂಲಂಕುಶವಾಗಿ ಪರಿಶೀಲಿಸಿ, ಅಷ್ಟಸ್ಥಾನ ಮತ್ತು ದಶವಿಧ ಪರೀಕ್ಷೆಗಳ ಮೂಲಕ ವ್ಯಾಧಿಯನ್ನು ನಿರ್ಣಯಿಸಿ ಸೂಕ್ತ ಚಿಕಿತ್ಸೆಯನ್ನು ನೀಡುವುದರ ಮೂಲಕ ಅಸಮತೋಲನದಲ್ಲಿರುವ ಮೂಲ ಘಟಕಗಳನ್ನು ಸಮಸ್ಥಿತಿಗೆ ತರಲು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.
ಪಂಚಕರ್ಮ (ವಮನ, ವಿರೇಚನ, ಬಸ್ತಿ, ನಸ್ಯ, ರಕ್ತಮೋಕ್ಷಣ) ಎನ್ನುವುದು ಆಯುರ್ವೇದದ ಪ್ರಮುಖ ಚಿಕಿತ್ಸಾ ಅಂಗ. ಇದರೊಂದಿಗೆ ಅಭ್ಯಂಗ ಹಾಗು ಸ್ವೇದನ ಕೂಡಾ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ಇವು ದೇಹದಲ್ಲಿ ಕಲುಷಿತವಾದ ದೋಷಗಳನ್ನು ಹೊರಗೆ ಹಾಕಿ ದೇಹದ ಸ್ವಾಸ್ಥ್ಯವನ್ನು ಪುನಃ ಸ್ಥಾಪಿಸಲು ಸಹಕರಿಸುತ್ತವೆ. ಯಾವ ರೋಗಗಳು ಔಷಧದ ಮೂಲಕ ವಾಸಿಯಾಗಲಾರವೋ ಅಂಥ ಸಂದರ್ಭಗಳಲ್ಲಿ ಹಲವಾರು ಶಸ್ತ್ರಕರ್ಮಗಳನ್ನು ಸಹ ಆಯರ್ವೇದದಲ್ಲಿ ಸವಿವರವಾಗಿ ವ್ಯಾಖ್ಯಾನಿಸಲಾಗಿದೆ.
ಸಾಮಾನ್ಯವಾಗಿ ನೋವನ್ನು ದೇಹದ ಹೊರಗಿನ (ಮಾಂಸ, ಮೂಳೆ, ಸಂಧು, ಸ್ನಾಯು) ಮತ್ತು ಒಳಗಿನ (ಜಠರ, ಕರುಳು, ಮೂತ್ರಕೋಶ, ಪಿತ್ತಾಶಯ, ಹೃದಯ ಇತ್ಯಾದಿ) ಹಾಗು ಕತ್ತಿನ ಮೇಲ್ಭಾಗದ (ಕಿವಿ, ಮೂಗು, ಗಂಟಲು, ತಲೆ) ಎಂದು ವಿಂಗಡಿಸಲಾಗುತ್ತದೆ. ಆ ಸ್ಥಳಗಳ ನೋವುಗಳ/ವ್ಯಾಧಿಗಳ ಶೀಘ್ರ ನಿವಾರಣೆಗಾಗಿ ಔಷಧಸಾಧ್ಯ, ಪಂಚಕರ್ಮ ಸಾಧ್ಯ ಅಥವಾ ಶಸ್ತ್ರಕರ್ಮ ಸಾಧ್ಯ ಎಂದು ವರ್ಗೀಕರಿಸಿ ಆ ಪ್ರಕಾರವಾಗಿ ಚಿಕಿತ್ಸೆ ನೀಡಲಾಗುತ್ತದೆ.
ಇಲ್ಲಿ ಕೆಲವೊಂದು ಬಾಹ್ಯ ಹಾಗು ಆಭ್ಯಂತರ ವ್ಯಾಧಿಗಳಲ್ಲಿ ಶೀಘ್ರ ನೋವು ಹಾಗು ವ್ಯಾಧಿನಿವಾರಕ ಪ್ರಭಾವೀ ಆಯುರ್ವೇದ ಚಿಕಿತ್ಸೆಯನ್ನು ಉಲ್ಲೇಖಿಸಲಾಗಿದೆ.
• ಕತ್ತು ನೋವು (cervical spondylosis )-ಅಭ್ಯಂಗ, ಸ್ವೇದ ಗ್ರೀವಾ ಬಸ್ತಿ, ನಸ್ಯಕರ್ಮ ಮತ್ತು ಮಾತ್ರಾಬಸ್ತಿ
• ಸೊಂಟ ನೋವು (Disc problems ) ಕಟಿ ಬಸ್ತಿ, ಶೃಂಗಾವಚರಣ, ಅಗ್ನಿಕರ್ಮ ಯೋಗಬಸ್ತಿ
• ಮಂಡಿ ನೋವು (O.A ) ಅಭ್ಯಂಗ, ಸ್ವೇದ ಜಾನುಬಸ್ತಿ, ಅಗ್ನಿಕರ್ಮ, ಜಲೌಕಾವಚರಣ ಹಾಗು ಬಸ್ತಿ ಚಿಕಿತ್ಸೆ
• ಮಾಂಸ ಹಾಗು ಸ್ನಾಯುಗಳ ಸೆಳೆತ (Sciatica) ಸಿರಾವ್ಯಧನ, ಅಗ್ನಿಕರ್ಮ ಹಾಗು ಬಸ್ತಿ ಚಿಕಿತ್ಸೆ
• ಮಣಿ ಗಂಟಿನ ನೋವು (Carpel tunnel syndrome )-ಅಗ್ನಿಕರ್ಮ
• ತಲೆನೋವು-ಅಗ್ನಿಕರ್ಮ, ರಕ್ತಮೊಕ್ಷಣ ಹಾಗು ನಸ್ಯಕರ್ಮ
• ಕಾಲಿನ ಹಿಮ್ಮಡಿ ನೋವು –ಅಗ್ನಿಕರ್ಮ
• ಆಮವಾತ /ವಾತರಕ್ತ – ಜಲೌಕಾವಚರಣ, ಬಸ್ತಿ
• ನೋವುಭರಿತವಾದ ಬಾವು- ಜಲೌಕಾವಚರಣ
• ಶೀತ, ಮೂಗು ಕಟ್ಟುವುದು, ತಲೆನೋವು-ನಸ್ಯಕರ್ಮ
• ಕಣ್ಣು ಉರಿ ಹಾಗು ನೋವು-ಅಕ್ಷಿ ತರ್ಪಣ
• ಹಲ್ಲು, ವಸಡು, ಗಂಟಲು ನೋವು-ಕವಲ, ಗಂಡೂಷ
• ಮೂಲವ್ಯಾಧಿ,ಭಗಂಧರ -ಕ್ಷಾರಕರ್ಮ, ಕ್ಷಾರಸೂತ್ರ ಚಿಕಿತ್ಸೆ
• ಮುಟ್ಟಿನ ಹೊಟ್ಟೆನೋವು –ಮಾತ್ರಾ ಬಸ್ತಿ, ಅವಗಾಹ ಸ್ವೇದ
• ಗ್ಯಾಸ್ಟ್ರಿಕ್ ಸಮಸ್ಯೆ –ವಮನ, ವಿರೇಚನ
ಮೇಲೆ ಹೇಳಿದ ಎಲ್ಲಾ ಸಂದರ್ಭಗಳಲ್ಲಿ ರೋಗಿಯನ್ನು ಕೂಲಂಕುಷವಾಗಿ ಪರೀಕ್ಷಿಸಿ ಅವನ ದೇಹ ಪ್ರಕೃತಿ ಮತ್ತು ವ್ಯಾಧಿಯ ಸ್ವಭಾವ ಹಾಗು ಲಕ್ಷಣಗಳನ್ನು ಗ್ರಹಿಸಿ ವಿವಿಧ ಔಷಧಿಗಳ ಮೂಲಕ ಉಪಚರಿಸಲಾಗುತ್ತದೆ.ಇದರಿಂದ ರೋಗಿಯು ಶೀಘ್ರವಾಗಿ ನೋವಿನಿಂದ ಮುಕ್ತನಾಗಿ, ವ್ಯಾಧಿ ನಿವಾರಣೆಯಾಗಿ ಮುಖದಲ್ಲಿ ಮಂದಹಾಸ ಮೂಡುತ್ತದೆ.
-ಡಾ. ರವಿಶಂಕರ.ಎ.ಜಿ
ಪ್ರಾಧ್ಯಾಪಕರು, ಶಲ್ಯ ತಂತ್ರ, ಸ್ನಾತಕೋತ್ತರ ವಿಭಾಗ
ಆಳ್ವಾಸ್ ಆಯರ್ವೇದ ಮೆಡಿಕಲ್ ಕಾಲೇಜ್ -ಮೂಡಬಿದ್ರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.