ಗುರು ಬ್ರಹ್ಮ, ಗುರು ವಿಷ್ಣು | ಗುರು ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈಶ್ರೀ ಗುರುವೇ ನಮಃ ||
ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಇಲ್ಲಿ ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ ಪವಿತ್ರವಾದದ್ದು, ಜವಾಬ್ದಾರಿಯುತವಾದದ್ದು. ಈ ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುವ ಸೃಷ್ಟಿಕರ್ತರು. ಮನುಷ್ಯನಾದ ಮೇಲೆ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದುಕೊಂಡಿರುತ್ತಾರೆ ಈ ಸಾಧನೆಗೆ ಸೇತುವೆ ನಿರ್ಮಿಸುವವರು ಈ ನಮ್ಮ ಶಿಕ್ಷಕರು. ವಿದ್ಯಾರ್ಥಿಗಳಿಗೆ ಗುರಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದವರು ಗುರು. ‘ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು’ ಅನ್ನೋ ಗಾದೆಮಾತು ತುಂಬಾ ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಬೇಕೆಂದರೆ ಗುರುವಿನ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ಇರಲೇಬೇಕು. ಶಿಕ್ಷಕರ ಸಹಾಯದಿಂದ ಮಾತ್ರ ನಾವು ಅಂದುಕೊಂಡ ಗುರಿ ತಲುಪಬಹುದು, ನಮ್ಮ ಕಡಲನ್ನು ಸೇರಬಹುದು.
ಈ ಗುರುವನ್ನು ನಾವು ಶಿಕ್ಷಣದ ವಿವಿಧ ಹಂತಗಳಲ್ಲಿ ವಿವಿಧ ರೀತಿಯಲ್ಲಿ ಸಂಭೋಧಿಸುತ್ತೇವೆ. ದೇವನೊಬ್ಬ ನಾಮ ಹಲವು ಎಂಬಂತೆ ಕಲಿಸುವ ಶಿಕ್ಷಕರು ಒಬ್ಬರೇ ಆದರೆ ಅವರು ಕಲಿಸುವ ರೀತಿ ವಿಭಿನ್ನ. ಹಾಗಾಗಿ ಅವರಿಗೆ ನಾನಾ ಹೆಸರಲ್ಲಿ ಕರೆಯುತ್ತೇವೆ. ನರ್ಸರಿಯಲ್ಲಿ ಮಿಸ್, ಪ್ರೈಮರಿ-ಹೈಸ್ಕೂಲ್ನಲ್ಲಿ ಟೀಚರ್, ಕಾಲೇಜ್ಲ್ಲಿ ಮೇಡಂ, ಪದವಿ-ಪಿಜಿಯಲ್ಲಿ ಲೆಕ್ಚರರ್, ಪಿಎಚ್ಡಿಯಲ್ಲಿ ಗೈಡ್ ಹೀಗೆ ಸಾಕಷ್ಟು ಹೆಸರುಗಳು ಅವರಿಗೆ. ಅವರು ಬಯಸುವುದು ಈ ಮಕ್ಕಳು ನನಗಿಂತಲೂ ಎತ್ತರದ ಸ್ಥಾನಕ್ಕೆ ಬರಲಿ, ಬೆಳೆಯಲಿ ಎಂದು.
ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆ ಎಂದು ಸಂತಸ, ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತದ ಎರಡನೇ ರಾಷ್ಟ್ರಪತಿ, ಒಬ್ಬ ಅದ್ಭುತ ಶಿಕ್ಷಕರಾದ ಡಾ|| ಸರ್ವಪಲ್ಲಿ ರಾಧಾಕೃಷ್ಣ್ರ ಜನ್ಮದಿನಾಚರಣೆ ನಿಮಿತ್ತ ಇದನ್ನು ಆಚರಿಸಲಾಗುತ್ತದೆ. 1962ರ ಸೆಪ್ಟೆಂಬರ್ 5 ರಂದು ರಾಧಾಕೃಷ್ಣರು ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವಂತೆ ಹೇಳಿದರು. ಅಂದಿನಿಂದ ಪ್ರತಿವರ್ಷ ಇದನ್ನು ಆಚರಿಸುವುದು ರೂಢಿ. ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗೆ ವಂದನೆ ಹೇಳುವ ಸಮಯವಿದು.
ಶಿಕ್ಷಕರು ಎಲ್ಲಾ ಕಾಲದಲ್ಲೂ ಇರುವಂತಹವರು. ಗುರುವಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ. ಬಡವ-ಶ್ರೀಮಂತ ಎಂಬ ಬೇಧವಿರುವುದಿಲ್ಲ. ಅವರಿಗೆ ಕಲಿಯುವ ಮಕ್ಕಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ, ಆಸಕ್ತಿ. ಎಷ್ಟೋ ಕಲಿಯಬೇಕೆನ್ನುವ ಆಸಕ್ತಿಯಿರುವ ಮಕ್ಕಳ ಮನೆಪರಿಸ್ಥಿತಿ ಸರಿಯಿಲ್ಲದಿದ್ದ ಪ್ರಸಂಗದಲ್ಲಿ ತಾವೇ ಮುಂದೆ ನಿಂತು ಅವರನ್ನು ಓದಿಸಿದ ಶಿಕ್ಷಕರೂ ಇದ್ದಾರೆ. ಶಿಕ್ಷಕರು ಅಮ್ಮನಂತೆ ಮುದ್ದಿಸುತ್ತಾರೆ, ಅಪ್ಪನಂತೆ ಶಿಕ್ಷಿಸುತ್ತಾರೆ. ತಪ್ಪು ಮಾಡಿದಾಗ ಬುದ್ಧಿ ಹೇಳಿ ಸರಿದಾರಿ ತೋರಿಸುತ್ತಾರೆ. ತಮಗಿಂತ ಯಾವಾಗಲೂ ತಮ್ಮ ಶಿಷ್ಯಂದಿರು ಮುಂದೆ ಬರಬೇಕೆನ್ನುವುದು ಪ್ರತಿಯೊಬ್ಬ ಶಿಕ್ಷಕನ ಹಾರೈಕೆಯಾಗಿರುತ್ತದೆ. ಕಲ್ಲುಬಂಡೆಯಾದ ನಮ್ಮನ್ನು ಪ್ರತಿ ಹಂತದಲ್ಲಿ ತಿದ್ದಿತೀಡಿ ಪೂಜಿಸುವ ಮೂರ್ತಿಯನ್ನಾಗಿ ಮಾಡುವವರು ಈ ಶಿಕ್ಷಕರೆಂಬ ಶಿಲ್ಪಿಗಳು. ಇಂದು ಅನೇಕ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸಿದವರು ಈ ಸುಂದರ ಶಿಲ್ಪಿಗಳು.
ಇದಕ್ಕೆ ಒಂದು ಉದಾಹರಣೆ- ಬಾಲ್ಯದಲ್ಲಿ ವಿಮಾನ ಹಾರಾಡುವುದನ್ನು ಕಂಡು ತಾನು ಮುಂದೊಂದು ದಿನ ಅದನ್ನು ತಯಾರಿಸುವವನಾಗಬೇಕೆಂಬ ಕನಸು ಕಟ್ಟಿದ ಬಾಲಕ ಗುರುಗಳ ಸಹಾಯದಿಂದ ಅದನ್ನು ನನಸಾಗಿಸಿದ. ಇವರು ಕಾಲೇಜ್ನಲ್ಲಿ ಕಲಿಯುತ್ತಿರುವಾಗ ಶಿಕ್ಷಕರು ವಿಮಾನದ ಮಾದರಿ ತಯಾರಿಸಲು ಹೇಳಿದ್ದರು ಅದರಂತೆ ಇವರು ತಯಾರಿಸಿದರೂ ಅದು ಅಷ್ಟೊಂದು ಸರಿಯಾಗಿ ಮೂಡಿಬಂದಿರಲಿಲ್ಲ. ಇದನ್ನು ಕಂಡು ಗದರಿದ ಅವರ ಶಿಕ್ಷಕರು, ಇನ್ನು 48 ಗಂಟೆ ಕಾಲಾವಕಾಶ ಕೊಡುವೆ ಅದನ್ನು ಸರಿಯಾಗಿ ಮಾಡಿಕೊಂಡು ಬಾ ಎಂದು ಹೇಳಿದರು. ಇವರ ಮಾತನ್ನು ಗಂಭೀರವಾಗಿ ತೆಗೆದುಕೊಂಡ ವಿದ್ಯಾರ್ಥಿ ಬಿಟ್ಟುಬಿಡದೇ ಕಣ್ ರೆಪ್ಪೆ ಮುಚ್ಚದೆ ಸತತವಾಗಿ ಈ ಪ್ರಯತ್ನದಲ್ಲಿ ಕ್ರಿಯಾಶೀಲರಾಗಿ ಶಿಕ್ಷಕರಿಗೆ ಕೊಟ್ಟ ಮಾತು ಉಳಿಸಿಕೊಡುವ ತವಕದಲ್ಲಿದ್ದರು. ಅವರ ಕಾರ್ಯ ಪೂರ್ತಿಗೊಂಡಾಗ ಅವರು ನಿಟ್ಟುಸಿರು ಬಿಟ್ಟು ಹಿಂತಿರುಗಿ ನೋಡಿದಾಗ ಅವರ ಶಿಕ್ಷಕರು ಅವರಿಂದೆ ನಿಂತಿದ್ದರು. ಶಿಷ್ಯನ ಈ ಕೆಲಸಕ್ಕೆ ಪ್ರೀತಿಯಿಂದ ಶಹಬ್ಬಾಶ್ ಗಿರಿ ಕೊಟ್ಟರು. ಅಬ್ಬಾ! ಎಂತಹ ಶಿಕ್ಷಕರು ಶಿಷ್ಯನಿಗೆ ಬೆನ್ನೆಲುಬಾಗಿ ನಿಂತವರು. ಶಿಷ್ಯನ ಕನಸು ಮುಂದೊಂದು ದಿನ ಈಡೇರಿತು. ಅವರೇ ಅಪಾರ ಖ್ಯಾತಿ ಗಳಿಸಿದ ವಿಜ್ಞಾನಿಯಾದವರು, ಭಾರತದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದವರು ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರು. ಅವರ ಕನಸಿಗೆ ರೆಕ್ಕೆ ಮೂಡಿಸಿದವರು ಅವರ ಶಿಕ್ಷಕರೇ.
ಗುರುಗಳ ಗುಣಗಾನ ವರ್ಣನೆಗೂ ಮೀರಿದ್ದು, ಪದಗಳಿಗೂ ನಿಲುಕದ್ದು, ಕವಿಯ ಕಲ್ಪನೆಯೂ ಸಾಲದು, ಕಲಾವಿದನ ಕುಂಚಕ್ಕೂ ಅಳಕು ತರುವಂತದ್ದು. ನಮ್ಮನ್ನು ಪ್ರತಿಹಂತದಲ್ಲೂ ತಿದ್ದಿತೀಡಿ ಪ್ರೋತ್ಸಾಹಿಸುವ ಶಿಕ್ಷಕರಿಗೆ ಇದು ನಮನ ಸಲ್ಲಿಸುವ ದಿನ, ಧನ್ಯವಾದ ಅರ್ಪಿಸುವ ಕ್ಷಣ. ನಮ್ಮೊಳಗಿನ ಪ್ರತಿಭೆಗೆ ನೀರೆರೆಯುವ ಇವರಿಗೆ ಧನ್ಯವಾಗಳು. ಬದುಕಿನ ಬಂಡಿಯಲ್ಲಿ ಬೆಳಕಿನ ಮಾರ್ಗ ತೋರಿಸಿದ ದಾರಿದೀಪ ಇವರು. ನಮ್ಮನ್ನು ನಮಗೆ ಪರಿಚಯಿಸಿದವರು. ಸಾಮಾಜಿಕ ಜವಾಬ್ದಾರಿ ತಿಳಿಸಿಕೊಟ್ಟವರು. ಇಂತಹ ಗುರುಗಳಿಗೆ ಹೃದಯಪೂರ್ವಕ ಧನ್ಯವಾದಗಳು. ವಿಶ್ವದ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಗುರುವಿನ ಗುಲಾಮನು ಆಗುವ ತನಕ ದೊರೆಯದಣ್ಣ ಮುಕುತಿ…..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.