ಕಾರ್ಕಳ : ಕೇಂದ್ರ ಸರಕಾರವು ಕಳೆದ ಒಂದು ವರ್ಷದ ಆಡಳಿತ ಅವಧಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ವಿಶ್ವವೇ ಭಾರತವನ್ನು ದಿಟ್ಟಿಸಿ ನೋಡುವಂತೆ ಮಾಡಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಅವರು ಮಂಜುನಾಥ ಪೈ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರವು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮಾವೇಶವನ್ನು ಆಯೋಜಿಸಿತ್ತು. ಆದರೆ ಸಮಾವೇಶವನ್ನು ಪ್ರತಿಪಕ್ಷಗಳ ಟೀಕೆಗೆ ಉಪಯೋಗಿಸಿತ್ತು. ಆದರೆ ಕೇಂದ್ರದಲ್ಲಿ ಎನ್ಡಿಎ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ನಡೆಸಿದ ಸಾಧನೆ, ದೇಶದ ಚಿತ್ರಣವನ್ನೇ ಬದಲಾಯಿಸಿದೆ. ದೇಶದ ಮೂಲೆಮೂಲೆಗಳಲ್ಲೂ ನರೇಂದ್ರ ಮೋದಿ ಅವರ ಭ್ರಷ್ಟಚಾರ ರಹಿತ ಆಡಳಿತ ಹೆಮ್ಮೆ ತಂದಿದೆ. ರಾಜ್ಯ ಸರಕಾರದ ಸಾಧನೆ ಹಾಗೂ ಕೇಂದ್ರ ಸಾಧನೆಗಳನ್ನು ತುಲನೆ ಮಾಡಲು ರಾಜ್ಯ ಸರಕಾರವು ಅವಕಾಶ ಒದಗಿಸಿದ್ದಲ್ಲಿ ನಾನು ಬಹೀರಂಗ ಚರ್ಚೆಗೆ ಸಿದ್ದನಿದ್ದೇನೆ ಎಂದರು.
ದೇಶದ ಭವಿಷ್ಯ ಆರ್ಥಿಕ ಶಿಸ್ತಿನ ಮೇಲೆ ನಿಂತಿದೆ. ಯುಪಿಎ ಸರಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತು ಮತ್ತು ಸಹಭಾಗಿತ್ವ ಅಧಃಪತನದ ಹಾದಿ ಹಿಡಿದಿತ್ತು. ಆದರೆ ನಮ್ಮ ಸರಕಾರ ಆರ್ಥಿಕ ಶಿಸ್ತಿಗೆ ಮೊದಲ ಆಧ್ಯತೆ ನೀಡುವುದರ ಜತೆಗೆ ವಿದೇಶಗಳ ಜತೆಯೂ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಮೂಲಕ ಆರ್ಥಿಕ ಮಟ್ಟವನ್ನು ಹೆಚ್ಚಿಸಿದೆ ಎಂದರು. ಗ್ರಾ.ಪಂ.ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರವು ರಾಜ್ಯದಲ್ಲಿಯೇ ವಿಶೇಷ ಫಲಿತಾಂಶ ನೀಡಲಿದೆ. ಜನಪ್ರತಿನಿಧಿ ಸಾಮಾನ್ಯ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಬಲಪಡಿಸಿತ್ತು. 2500 ಪಿಡಿಒ ನೇಮಕಾತಿ, 2000 ಕಾರ್ಯದರ್ಶಿಗಳ ನೇಮಕಾತಿ, 1800 ಲೆಕ್ಕ ಸಹಾಕರ ನೇಮಕಾತಿ ಮೂಲಕ ವಿಕೇಂದ್ರೀಕರಣ ವ್ಯವಸ್ಥೆಗೆ ಸ್ಪಷ್ಟ ರೂಪವನ್ನು ಕೊಟ್ಟಿತ್ತು. ಅಲ್ಲದೆ ಮೂರನೇ ಹಣಕಾಸು ಆಯೋಗದ ವರದಿಯಂತೆ ಜಿ.ಪಂ.ಗೆ 2 ಕೋಟಿ.ರೂ, ತಾ.ಪಂ.ಗೆ 1 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಿತ್ತು. ವಾರ್ಷೀಕ 6 ಲಕ್ಷ ರೂ. ಗ್ರಾ.ಪಂ.ನ ಅನುದಾನವನ್ನು 12 ಲಕ್ಷದವರೆಗೆ ಏರಿಸಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ಗ್ರಾ.ಪಂ.ಗೆ ಬಂದಂತಹ ಅನುದಾನದಲ್ಲಿ ಶೇ.60ರಷ್ಟು ವಿದ್ಯುತ್ ಬಿಲ್ಲು ಹಾಗೂ ಶೇ.40ರಷ್ಟು ಅನುದಾನವನ್ನು ಸಿಬ್ಬಂದಿ ವೇತನಕ್ಕೆ ಮೀಸಲಿಡುವಂತೆ ಆದೇಶ ಹೊರಡಿಸಿತ್ತು ಎಂದು ಟೀಕಿಸಿದರು.
ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್, ಹಿರಿಯ ನಾಯಕರಾದ ಬೋಳ ಪ್ರಭಾಕರ ಕಾಮತ್, ನ್ಯಾಯವಾದಿ ಎಂ.ಕೆ.ವಿಜಯ ಕುಮಾರ್, ಜಿ.ಪಂ.ಅಧ್ಯಕ್ಷೆ ಸವಿತಾ ಕೋಟ್ಯಾನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಉದಯಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಜಿ.ಪಂ.ಸದಸ್ಯ ಉದಯ ಎಸ್.ಕೋಟ್ಯಾನ್, ಬಿಜೆಪಿ ಪ್ರಮುಖರಾದ ಶ್ಯಾಮಲ ಕುಂದರ್, ಪ್ರದೀಪ್ ಕೋಟ್ಯಾನ್, ಮುಟ್ಲುಪಾಡಿ ಸತೀಶ್ ಶೆಟ್ಟಿ, ಸೋಜನ್ ಜೇಮ್ಸ್, ಆರೀಫ್ ಕಲ್ಲೊಟ್ಟೆ, ರವೀಂದ್ರ ಮಡಿವಾಳ, ಸುರೇಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ನವೀನ್ ನಾಯಕ್ ಸ್ವಾಗತಿಸಿದರು. ಮಣಿರಾಜ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ವಿಖ್ಯಾತ್.ವಿ.ಶೆಟ್ಟಿ ವಂದಿಸಿದರು.
ಜನರಲ್ ಸೇಲ್ಸ್ ಟ್ಯಾಕ್ಸ್ : ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆಯಲ್ಲಿ ಸಮಾನತೆ ಕಾಪಾಡಲು ಹೊಸ ಕಾನೂನನ್ನು ಕೇಂದ್ರ ಸರಕಾರ ರೂಪಿಸಲಿದೆ. ಪರಿಣಾಮ ಒಂದೇ ಸ್ವರೂಪದ ವಸ್ತುಗಳ ಬೆಲೆಯು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತಿರುವುದು ತಪ್ಪಲಿದೆ ಎಂದು ಡಿ.ವಿ.ಸದಾನಂದ ಗೌಡ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.